ಬೆಂಗಳೂರು: ಬರಪೀಡಿತ ತಾಲೂಕಿನ ಸರ್ಕಾರಿ ಶಾಲಾ ಮಕ್ಕಳಿಗೆ ಬೇಸಿಗೆ ರಜೆಯಲ್ಲೂ ಮಧ್ಯಾಹ್ನದ ಬಿಸಿಯೂಟ ಇರುತ್ತದೆ. ಜತೆಗೆ 150ಕ್ಕೂ ಅಧಿಕ ಮಕ್ಕಳಿರುವ ಶಾಲೆಗಳಲ್ಲಿ ಬೇಸಿಗೆ ಶಿಬಿರ-ಬೇಸಿಗೆ ಸಂಭ್ರಮ, ಸ್ವಲ್ಪ ಓದು- ಸ್ವಲ್ಪ ಮೋಜು ವಿಶೇಷ ಕಾರ್ಯಕ್ರಮ ಸಹ ಸಾರ್ವಜನಿಕ ಶಿಕ್ಷಣ ಇಲಾಖೆ
ರೂಪಿಸಿದೆ.
ಬರ ಪೀಡಿತ ತಾಲೂಕಿನ ಸರ್ಕಾರಿ ಶಾಲಾ ಮಕ್ಕಳಿಗೆ ಬೇಸಿಗೆ ರಜೆಯಲ್ಲಿ ಬಿಸಿಯೂಟ ನೀಡುವ ವ್ಯವಸ್ಥೆ ಕಳೆದ ಕೆಲವು ವರ್ಷದಿಂದ ನಡೆದುಕೊಂಡು ಬರುತ್ತಿದೆ. ಆದರೆ, ನಿರೀಕ್ಷಿತ ಪ್ರಮಾಣದಲ್ಲಿ ಮಕ್ಕಳು ಶಾಲೆಗೆ ಬರುವುದಿಲ್ಲ ಎಂಬ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ, ರಾಜ್ಯ ಶಿಕ್ಷಣ ಸಂಶೋಧನೆ ಮತ್ತು
ತರಬೇತಿ ಇಲಾಖೆ, ಸರ್ವಶಿಕ್ಷಾ ಅಭಿಯಾನ ಹಾಗೂ ಪ್ರಥಮ್ ಸಂಸ್ಥೆಯ ಜತೆ ಸೇರಿ ಬೇಸಿಗೆ ಶಿಬಿರ-ಬೇಸಿಗೆ ಸಂಭ್ರಮ ಕಾರ್ಯಕ್ರಮ ಸಿದ್ಧಪಡಿಸಿದೆ.
6 ವಾರಗಳ ಕಾರ್ಯಕ್ರಮ: ಬೇಸಿಗೆ ರಜೆಯಲ್ಲಿ ಮಕ್ಕಳಿಗೆ ಕಲಿಕೆಯ ಜತೆಗೆ ಮೋಜು ನೀಡಬೇಕು ಎಂಬ ಉದ್ದೇಶದಿಂದ ಇದೇ ಮೊದಲ ಬಾರಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಬೇಸಿಗೆ ಶಿಬಿರ-ಬೇಸಿಗೆ ಸಂಭ್ರಮ ಕಾರ್ಯಕ್ರಮವನ್ನು ರೂಪಿಸಿದೆ. 6 ವಾರಗಳ ಕಾಲ ಈ ಶಿಬಿರ ನಡೆಯಲಿದೆ. ಇದು ನಿತ್ಯದ ಶಾಲಾ ಅವಧಿಯಂತೆ ಇರುತ್ತದೆ. ಬೆಳಗ್ಗೆಯಿಂದ ಸಂಜೆಯ ತನಕವೂ ಸರಳ ಕಲಿಕೆಯ ಜತೆಗೆ ಮೋಜಿನ ಆಟ, ಹರಟೆ ಇತ್ಯಾದಿ ಯೋಜಿಸಲಾಗಿದೆ. ಏ.17ರಿಂದ ಮೇ 28ರ ತನಕ ಸ್ವಲ್ಪ ಓದು-ಸ್ವಲ್ಪ ಮೋಜು ಬೇಸಿಗೆ ಶಿಬಿರ ನಡೆಯಲಿದೆ.
6 ಮತ್ತು 7ನೇ ತರಗತಿ ವಿದ್ಯಾರ್ಥಿಗಳಿಗೆ ಮಾತ್ರ: ಸರ್ಕಾರಿ ರಜಾ ದಿನ ಹೊರತುಪಡಿಸಿ ಮಧ್ಯಾಹ್ನದ ಬಿಸಿಯೂಟ 1ರಿಂದ 8ನೇ ತರಗತಿ ಮಕ್ಕಳಿಗೆ ನಿತ್ಯ ಇರುತ್ತದೆ. ಆದರೆ, ಸ್ವಲ್ಪ ಓದು-ಸ್ವಲ್ಪ ಮೋಜು ಬೇಸಿಗೆ ಶಿಬಿರ ಐದು ಮತ್ತು ಆರನೇ ತರಗತಿ ಪಾಸಾದ, ಅಂದರೆ, 2017-18ನೇ ಸಾಲಿನಲ್ಲಿ 6 ಮತ್ತು 7ನೇ ತರಗತಿಯಲ್ಲಿ ಅಭ್ಯಾಸ ಮಾಡಲಿರುವ ವಿದ್ಯಾರ್ಥಿಗಳಿಗೆ ಮಾತ್ರ ಇರುತ್ತದೆ. ಬೇರೆ ಯಾವ ತರಗತಿಯ ಮಕ್ಕಳಿಗೂ ಇದು ಇರುವುದಿಲ್ಲ. ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ(ಡೈಸ್)ಯ ವರದಿ ಆಧರಿಸಿ 150ಕ್ಕಿಂತ ಅಧಿಕ ವಿದ್ಯಾರ್ಥಿಗಳು ಇರುವ 7049 ಶಾಲೆಗಳನ್ನು ಬೇಸಿಗೆ ಶಿಬಿರ-ಬೇಸಿಗೆ ಸಂಭ್ರಮ ಕಾರ್ಯಕ್ರಮಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ.
ಶಿಕ್ಷಕರಿಗೆ ತರಬೇತಿ: ಬೇಸಿಗೆ ರಜೆಯಲ್ಲಿ ನಡೆಸುವ ಬೇಸಿಗೆ ಶಿಬಿರಕ್ಕೆ ಬರುವ ವಿದ್ಯಾರ್ಥಿಗಳಿಗೆ ಯಾವುದೇ ಕಿರಿಕಿರಿ ಅಥವಾ ಒತ್ತಡ ಆಗದ ಮಾದರಿಯಲ್ಲಿ ಶಿಬಿರ ನಡೆಸಿಕೊಡಲು ಶಿಕ್ಷಕರಿಗೆ ತರಬೇತಿಯನ್ನು ನೀಡಲಾಗಿದೆ. 25 ವಿದ್ಯಾರ್ಥಿಗಳಿಗೆ ಒಬ್ಬ ಶಿಕ್ಷಕನನ್ನು ಗುರುತಿಸಲಾಗಿದೆ. ಸೇವಾ ನಿರತ ಶಿಕ್ಷಕರಿಗೆ ತರಬೇತಿ ನೀಡಲು ಈಗಾಗಲೇ ಬಿಡುಗಡೆಯಾಗಿರುವ ಸರ್ವಶಿಕ್ಷ ಅಭಿಯಾನದ ತರಬೇತಿ ಅನುದಾನದಲ್ಲಿ ಬೇಸಿಗೆ ಸಂಭ್ರಮಕ್ಕೆ ಆಯ್ಕೆಯಾದ ಶಿಕ್ಷಕರಿಗೆ ಒಂದು ದಿನದ ತರಬೇತಿ ನೀಡಲಾಗಿದೆ.
ವಿದ್ಯಾರ್ಥಿಗಳನ್ನು ಹುಡುಕುವುದೇ ಸವಾಲು
ಸರ್ಕಾರಿ ಶಾಲೆಯ ಬೇಸಿಗೆ ರಜೆ ಈಗಾಗಲೇ ಆರಂಭವಾಗಿರುವುದರಿಂದ ಮಕ್ಕಳು ಸಂಬಂಧಿಕರ ಮನೆಗೆ ಹೋಗಿರುತ್ತಾರೆ ಅಥವಾ ಇನ್ಯಾವುದೇ ಬೇಸಿಗೆ ಶಿಬಿರಕ್ಕೆ ಸೇರಿಕೊಂಡಿರುತ್ತಾರೆ. ಸರ್ಕಾರಿ ಶಾಲೆಗಳಲ್ಲಿ ಬೇಸಿಗೆ ಶಿಬಿರ ನಡೆಸುವ ಯಾವುದೇ ಸೂಚನೆ ವಿದ್ಯಾರ್ಥಿಗಳಿಗೆ ನೀಡದೆ ಇರುವುದರಿಂದ ಶಿಬಿರದ ಮೇಲ್ವಿಚಾರಣೆ ಹೊಂದಿರುವ ಅಧಿಕಾರಿಗಳಿಗೆ ಮಕ್ಕಳನ್ನು ಹುಡುಕಿ ತರವುದೇ ದೊಡ್ಡ ಸವಾಲಾಗಿದೆ. ಮಕ್ಕಳನ್ನು ಶಿಬಿರಕ್ಕೆ ಕಳುಹಿಸಿಕೊಡುವ ಮಾದರಿಯಲ್ಲಿ ಸಾರ್ವಜನಿಕ ಪ್ರಚಾರ ಕೈಗೊಳ್ಳುವಂತೆ ಶಿಕ್ಷಣ ಇಲಾಖೆಯಿಂದ ಸೂಚನೆ ನೀಡಲಾಗಿದೆ.