Advertisement

ಈ ಬಾರಿ ಚುನಾವಣೆಯಲ್ಲಿ ಮತದಾರರ ಒಲವು ನನ್ನ ಕಡೆ: ಎಚ್.ಆಂಜನೇಯ

07:57 PM Apr 21, 2023 | Team Udayavani |

ಚಿಕ್ಕಜಾಜೂರು : ಶಾಸಕ ಎಂ.ಚಂದ್ರಪ್ಪನ ಮಿತಿಮೀರಿದ ಭ್ರಷ್ಟಾಚಾರ, ಅಧಿಕಾರದ ದುರಹಂಕಾರಕ್ಕೆ ವಿರುದ್ದವಾಗಿ ಈ ಬಾರಿಯ ಚುನಾವಣೆಯಲ್ಲಿ ಕ್ಷೇತ್ರದ ಎಲ್ಲೆಡೆ ನನಗೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು.

Advertisement

ತಾಲೂಕಿನ ಬಿ.ದುರ್ಗ ಹೋಬಳಿಯ ಅರಸಿನಘಟ್ಟ ಗ್ರಾಮದಲ್ಲಿ ಶುಕ್ರವಾರ ಮತಪ್ರಚಾರದಲ್ಲಿ ಮಾತನಾಡಿದ ಅವರು, ಕಳೆದ ಐದು ವರ್ಷಗಳಲ್ಲಿ ಕ್ಷೇತ್ರದ ಶಾಸಕ ಎಂ.ಚಂದ್ರಪ್ಪ ತನ್ನ ಕ್ಷೇತ್ರದ ಸರ್ವತೋಮುಖ ಅಭಿವೃದ್ದಿಗೆ ಮನ್ನಣೆ ನೀಡದೇ ತನ್ನ ಭ್ರಷ್ಟಾಚಾರದಲ್ಲಿ ಮುಳುಗಿದ್ದೆ ಅವರ ಬಹುದೊಡ್ಡ ಸಾಧನೆಯಾಗಿದೆ ಎಂದು ವ್ಯಂಗ್ಯವಾಡಿದರು.

ಕ್ಷೇತ್ರದ ಸರ್ವ ಸಮುದಾಯದವರು ಶಾಸಕ ಎಂ.ಚಂದ್ರಪ್ಪನ ದುರ್ವರ್ತನೆಗೆ ಬೇಸತ್ತಿದ್ದಾರೆ. ಇದರಿಂದ ಬಿಜೆಪಿಯ ಪಕ್ಷವನ್ನು ತಿರಸ್ಕರಿಸಿ ಸಾವಿರಾರು ಸಂಖ್ಯೆಯಲ್ಲಿ ಸ್ವಯಂಪ್ರೇರಿತ ನಮ್ಮ ಪಕ್ಷಕ್ಕೆ ಬೆಂಬಲ ಸೂಚಿಸಿ ನನ್ನ ಗೆಲುವಿಗೆ ಸಹಕರಿಸುತ್ತಿದ್ದಾರೆ ಎಂದರು.

ಕಾಂಗ್ರೆಸ್ ಪಕ್ಷವು ಕೇಂದ್ರದಲ್ಲಿ ಅಧಿಕಾರವಿದ್ದಾಗ ಬಡವರು, ದೀನ ದಲಿತರು, ಕಾರ್ಮಿಕ ವರ್ಗದವರಿಗಾಗಿ ಸಾಕಷ್ಟು ಕಲ್ಯಾಣ ಯೋಜನೆಗಳನ್ನು ರೂಪಿಸಿತ್ತು. ಮಾಜಿ ಪ್ರಧಾನಿ ರಾಜೀವಗಾಂಧಿ ಅವರ ಅಧಿಕಾರವಧಿಯಲ್ಲಿ ರಾಷ್ಟ್ರದ ಪ್ರತಿಯೊಬ್ಬ ತಳಹಂತದ ಜನರಿಗೂ ಅಧಿಕಾರ ಲಭಿಸಬೇಕು ಎಂಬ ಸದುದ್ದೇಶದಿಂದ ಪಂಚಾಯತ್ ರಾಜ್ ಕಾನೂನು ಜಾರಿಗೊಳಿಸುವ ಮೂಲಕ ಗ್ರಾಪಂಗಳಿಗೆ ಹೆಚ್ಚಿನ ಅಧಿಕಾರ ನೀಡಿತ್ತು. ಬಿಜೆಪಿಯೂ ಕೆಳಹಂತದ ಜನರಿಗೆ ಇಂತಹ ಯಾವುದಾದರೂ ಒಂದು ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸಲು ಮುಂದಾಗಿದೆಯೇ ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯನವರ ಆಡಳಿತದಲ್ಲಿ ಸರ್ವರ ಏಳಿಗೆಗೆ ಹೆಚ್ಚು ಒತ್ತು ನೀಡಲಾಗಿತ್ತು. ಇದೀಗ ನಡೆಯುತ್ತಿರುವ ಚುನಾವಣೆಯಲ್ಲಿ ಉತ್ತಮ ಆಡಳಿತ ನೀಡಿದ ಆಧಾರದಲ್ಲಿ ಮತಯಾಚಿಸುತ್ತಿದ್ದೇವೆ. ಇದಕ್ಕೆ ಮತದಾರರ ಒಲವು ಕಾಂಗ್ರೆಸ್ ನತ್ತ ಹೆಚ್ಚಿದೆ ಎಂದರು.

Advertisement

ಮಾಜಿ ಸಚಿವ ಹೆಚ್.ಆಂಜನೇಯ ಅವರು ಅರಸಿನಘಟ್ಟ ಗ್ರಾಮದಲ್ಲಿ ವಿವಿಧ ಬೀದಿಗಳಲ್ಲಿ ಸಂಚರಿಸಿ ಮನೆ ಮನೆ ಭೇಟಿ ನೀಡಿ ಮತಯಾಚಿಸಿ ಈ ಬಾರಿ ಎಲ್ಲರೂ ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡುವಂತೆ ಮನವಿ ಮಾಡಿದರು.

ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ನೂರಾರು ವೀರಶೈವ ಲಿಂಗಾಯತ ಮುಖಂಡರು

ಬಿಜೆಪಿಯ ವೀರಶೈವ ಸಮುದಾಯದ ಮುಖಂಡರಾದ ಬಸವರಾಜಪ್ಪ, ಎ.ಎಸ್.ಸುರೇಶ್, ಮಲ್ಲಿಕಾರ್ಜುನ, ರೇವಣ್ಣ, ಅಶೋಕ್, ಪೂಜಾರ್ ಕುಮಾರಪ್ಪ, ನಾಗಜ್ಜರ ಜಗದೀಶ್, ಲೋಕೇಶಪ್ಪ, ಏಕಾಂತಣ್ಣ, ಚನ್ನಪ್ಪರ ಜಯ್ಯಣ್ಣ, ಆಡನೂರು ಶಿವಮೂರ್ತಪ್ಪ, ಜಯ್ಯಣ್ಣ, ಶೇಖರಪ್ಪ, ಓಂಕಾರಮೂರ್ತಿ ಮುಂತಾದ ನೂರಾರು ಮುಖಂಡರು ಮಾಜಿ ಸಚಿವ ಎಚ್.ಆಂಜನೇಯ ಅವರ ಸಮ್ಮುಖದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಟಿ.ಹನುಮಂತಪ್ಪ, ಪಿಎಲ್‍ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಕಾಟೀಹಳ್ಳಿ ಶಿವಣ್ಣ, ರುದ್ರೇಗೌಡ, ತಾಪಂ ಮಾಜಿ ಉಪಾಧ್ಯಕ್ಷರಾದ ಓಂಕಾರಸ್ವಾಮಿ, ಆನಂದ್ ಮುಖಂಡರಾದ ಸಾಸಲು ರುದ್ರಣ್ಣ, ಸಾಸಲು ದೇವಣ್ಣ, ಬಾಣಗೆರೆ ಮಂಜಣ್ಣ, ದಿವಾಕರ್, ಪ್ರಭಾಕರ್, ಗಿರೀಶ್ ಮೋಹನ್, ಚೇತನ್, ಆನಂದ್ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next