Advertisement

ಈ ಬಾರಿ ಉಚಿತ ಬಸ್‌ಪಾಸ್‌ ಅನುಮಾನ

06:00 AM Jun 14, 2018 | |

ಬೆಂಗಳೂರು: ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್‌ ವಿತರಿಸುವುದಾಗಿ ಹಿಂದಿನ ಕಾಂಗ್ರೆಸ್‌ ಸರ್ಕಾರ
ತನ್ನ ಕೊನೆಯ ಬಜೆಟ್‌ನಲ್ಲಿ ಮಾಡಿದ ಘೋಷಣೆ ಕಾರ್ಯರೂಪಕ್ಕೆ ಬರುವುದು ಅನುಮಾನ.

Advertisement

ಬಜೆಟ್‌ ಘೋಷಣೆಯಂತೆ ಉಚಿತ ಬಸ್‌ಪಾಸ್‌ ವಿತರಣೆ ಕುರಿತು ಸಾರಿಗೆ ನಿಗಮ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಹಣಕಾಸು ಇಲಾಖೆ ತಿರಸ್ಕರಿಸಿದೆ. ಇನ್ನೊಂದೆಡೆ  ಹೊಸ ಸರ್ಕಾರ ಎಲ್ಲರಿಗೂ ಉಚಿತ ಬಸ್‌ಪಾಸ್‌ ವಿತರಿಸುವ ಕುರಿತು ಇನ್ನೂ ಸ್ಪಷ್ಟ ನಿರ್ಧಾರ ಕೈಗೊಂಡಿಲ್ಲ.

ಉಚಿತ ಬಸ್‌ಪಾಸ್‌ ವಿತರಿಸುವ ಕುರಿತಂತೆ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ, ಈಗಾಗಲೇ ಸಾರಿಗೆ ನಿಗಮಗಳು ಸುಮಾರು 500 ಕೋಟಿ ರೂ.ನಷ್ಟದಲ್ಲಿವೆ. ಉಚಿತ ಬಸ್‌ ಪಾಸ್‌ನಿಂದ 629 ಕೋಟಿ ರೂ. ಹೆಚ್ಚುವರಿ ಹೊರೆ ಬೀಳುತ್ತದೆ.

ಹೀಗಾಗಿ, ಈ ಯೋಜನೆಗೆ ಸರ್ಕಾರದ ಅನುದಾನ ಅಗತ್ಯ. ಇದರ ಸಾಧಕ-ಬಾಧಕ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು. ಮುಖ್ಯಮಂತ್ರಿಗಳು ಬಜೆಟ್‌ನಲ್ಲಿ ಈ ಕುರಿತು ಕ್ರಮ ಕೈಗೊಳ್ಳಬೇಕಾಗಿದೆ. ಈ ಹಿಂದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಉಚಿತ ಬಸ್‌ಪಾಸ್‌ ಕೊಡುವ ಘೋಷಣೆ ಮಾಡಿದ್ದರು. ಆದರೆ, ಹಣಕಾಸು ಇಲಾಖೆ ಅನುಮತಿ ಕೊಟ್ಟಿಲ್ಲ. ಈ ಕುರಿತು ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಪ್ರಸ್ತುತ ಎಸ್‌ಸಿ ಮತ್ತು ಎಸ್ಟಿ ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್‌ ವ್ಯವಸ್ಥೆ ಇದ್ದು, ಉಳಿದ ವಿದ್ಯಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ಪಾಸ್‌ ವಿತರಿಸಲಾಗುತ್ತಿದೆ. ಆದರೆ, ಬಸ್‌ಪಾಸ್‌ ವಿಚಾರದಲ್ಲಿ ತಾರತಮ್ಯ ಮಾಡುವುದು ಸರಿಯಲ್ಲ ಎಂಬ ಕಾರಣಕ್ಕೆ 2018-19ನೇ ಸಾಲಿನಿಂದ ಎಲ್ಲಾ ವಿದ್ಯಾರ್ಥಿಗಳಿಗೂ ಉಚಿತ ಬಸ್‌ಪಾಸ್‌ ವಿತರಿಸುವ ಬಗ್ಗೆ ಸಿದ್ದರಾಮಯ್ಯ ಅವರು ಕಳೆದ ಮಾರ್ಚ್‌ನಲ್ಲಿ ಮಂಡಿಸಿದ್ದ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದರು.

Advertisement

ಶಾಲೆಗಳಲ್ಲೇ ಬಸ್‌ಪಾಸ್‌ ವಿತರಣೆ: ಬಸ್‌ಪಾಸ್‌ಗಾಗಿ ವಿದ್ಯಾರ್ಥಿಗಳು ಸಾರಿಗೆ ಸಂಸ್ಥೆಗಳ ಕಚೇರಿಗೆ ಅಲೆಯುವು
ದನ್ನು ತಪ್ಪಿಸಲು ಶಾಲಾ ಕಾಲೇಜುಗಳಲ್ಲಿ ಬಸ್‌ಪಾಸ್‌ ವಿತರಿಸಲು ತೀರ್ಮಾನಿಸಲಾಗಿದೆ. ಪ್ರಸಕ್ತ ವರ್ಷದಿಂದಲೇ ಇದು ಜಾರಿಗೆ ಬರಲಿದೆ. ಇದರೊಂದಿಗ ಮೊಬೈಲ್‌ ಆ್ಯಪ್‌ ಮೂಲಕವೂ ವಿದ್ಯಾರ್ಥಿಗಳು ಬಸ್  ಪಾಸ್‌ಗೆ ಅರ್ಜಿ ಸಲ್ಲಿಸಬಹುದು. ದಾಖಲೆಗಳನ್ನು ಪರಿಶೀಲಿಸಿದ ಬಳಿಕ ವಿದ್ಯಾರ್ಥಿಗಳ ಮನೆ ಅಥವಾ ಕಾಲೇಜು ವಿಳಾಸಕ್ಕೆ ಪಾಸ್‌ಗಳನ್ನು ವಿತರಿಸಲಾಗುವುದು ಎಂದು ಹೇಳಿದರು.

ಪ್ರಸಕ್ತ ವರ್ಷ ಬಸ್‌ಪಾಸ್‌ ವಿತರಣೆ ವಿಳಂಬವಾಗುತ್ತಿರುವುದರಿಂದ ಈ ತಿಂಗಳ ಅಂತ್ಯದವರೆಗೆ ಹಳೆಯ ಬಸ್‌ಪಾಸ್‌ಗಳಲ್ಲೇ ವಿದ್ಯಾರ್ಥಿಗಳಿಗೆ ಓಡಾಡಲು ಅವಕಾಶ ಮಾಡಿಕೊಡಲಾಗುತ್ತಿದೆ ಎಂದು ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next