Advertisement

ಈ ಬಾರಿಯೂ ಕರಾವಳಿಯಲ್ಲಿ  ಮಳೆ ಕೊರತೆ

09:40 AM Sep 07, 2017 | |

ಮಂಗಳೂರು: ಕರಾವಳಿಯಲ್ಲಿ ವರ್ಷದಿಂದ ವರ್ಷಕ್ಕೆ ಮಳೆ ಪ್ರಮಾಣ ಕಡಿಮೆಯಾಗುತ್ತಿದೆ. ಹವಾಮಾನ ಇಲಾಖೆಯ ಅಂಕಿ-ಅಂಶ ಪ್ರಕಾರ ವಾಡಿಕೆಯಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇನ್ನೂ ಶೇ. 25ರಷ್ಟು ಮಳೆ ಕೊರತೆ ಇದೆ. ಉಡುಪಿ ಜಿಲ್ಲೆಯಲ್ಲೂ ಶೇ. 10ರಷ್ಟು ಮಳೆ ಕೊರತೆ ಇದ್ದು, ಒಟ್ಟಾರೆ ಕರಾವಳಿ ಪ್ರದೇಶದಲ್ಲಿ ಶೇ. 19ರಷ್ಟು ಮಳೆ ಕೊರತೆ ಎದ್ದು ಕಾಣುತ್ತಿದೆ.

Advertisement

ಜೂನ್‌ ತಿಂಗಳಿನಿಂದ ಆಗಸ್ಟ್‌ ತಿಂಗಳವರೆಗೆ ವಾಡಿಕೆಯಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 3,116 ಮಿ.ಮೀ. ಮಳೆಯಾಗಬೇಕಿತ್ತು. ಆದರೆ ಇಲ್ಲಿಯವರೆಗೆ ದಾಖಲಾದದ್ದು ಕೇವಲ 2,387 ಮಿ.ಮೀ. ಮಾತ್ರ. ಕಳೆದ ವರ್ಷ 3,351 ಮಿ.ಮೀ. ಮಳೆ ಬೀಳಬೇಕಿತ್ತು. ಆದರೆ ದಾಖಲಾಗಿರುವುದು  2,550 ಮಿ.ಮೀ. ಮಾತ್ರ. ಇದುವರೆಗಿನ ಅಂಕಿ – ಅಂಶ ಪ್ರಕಾರ ಈ ಬಾರಿಯೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಕಡಿಮೆಯಾಗಿದೆ.

ಉಡುಪಿ ಜಿಲ್ಲೆಯಲ್ಲಿ ಜೂನ್‌ ತಿಂಗಳಿನಿಂದ ಆಗಸ್ಟ್‌ ತಿಂಗಳ ವರೆಗೆ ಕಳೆದ ವರ್ಷಕ್ಕಿಂತ ಈ ವರ್ಷ ಮಳೆ ಕಡಿಮೆಯಾಗಿದೆ. ಕಳೆದ ವರ್ಷ 3,405 ಮಿ.ಮೀ. ಮಳೆಯಾಗಿತ್ತು. ಆದರೆ ಈ ವರ್ಷ ದಾಖಲಾದದ್ದು 2,627 ಮಿ.ಮೀ. ಮಾತ್ರ. ಆದರೆ ವಾಡಿಕೆ ಮಳೆಗಿಂತ ಸ್ವಲ್ಪ ಜಾಸ್ತಿ ಮಳೆಯಾಗಿದೆ. ವಾಡಿಕೆಯಂತೆ 2,401 ಮಿ.ಮೀ. ಮಳೆಯಾಗಬೇಕಿತ್ತು. ಆದರೆ 3,405 ಮಿ.ಮೀ. ಮಳೆಯಾಗಿರುವುದು ತುಸು ಸಂತಸ ಮೂಡಿಸಿದೆ.

ಮಳೆ ಕೊರತೆಗೇನು ಕಾರಣ?
ಈ ಬಾರಿ ರಾಜ್ಯದಲ್ಲಿಯೇ ಮಳೆಯ ಪರಿಣಾಮ ಕಡಿಮೆ ಯಾಗಿದೆ. ರಾಜ್ಯದಲ್ಲಿ ಆಗಸ್ಟ್‌ ತಿಂಗಳಿನಲ್ಲಿ ದಾಖಲಾದ ಮಳೆಯಲ್ಲಿ ಶೇ.40ರಷ್ಟು ಕೊರತೆ ಉಂಟಾಗಿದೆ. ಸಮುದ್ರದಲ್ಲಿನ ಹವಾಮಾನ ಬದಲಾವಣೆಯಾದಾಗ ತೇವಾಂಶದ ಮೋಡ ಹೆಚ್ಚಾಗಿ ಮಳೆಯಾಗುತ್ತದೆ. ಆದರೆ ಈ ಬಾರಿ ಇಂತಹ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ. ಇದರಿಂದಾಗಿ ಮೋಡಗಳು ಉತ್ತರದ ಭಾಗಕ್ಕೆ ಹೋದವು. ಯಾವಾಗಲೂ ಪಶ್ಚಿಮದಿಂದ ಪೂರ್ವಕ್ಕೆ ಮೋಡಗಳು ಹೋದಾಗ ಮಳೆಯ ಪ್ರಮಾಣ ಹೆಚ್ಚಾಗುತ್ತದೆ.

ಇನ್ನು ದೊಡ್ಡ ಮಳೆಯಾಗೋದು ಸಂಶಯ
ಹವಾಮಾನ ಇಲಾಖೆಯೇ ಹೇಳುವ ಪ್ರಕಾರ ಕರಾವಳಿ ಪ್ರದೇಶದಲ್ಲಿನ್ನು ದೊಡ್ಡ ಮಟ್ಟಿನ ಮಳೆಯಾಗುವುದು ಸಂಶಯ. ಸಾಮಾನ್ಯವಾಗಿ ಈ ಭಾಗದಲ್ಲಿ ಬೀಳುವ ಶೇ. 80ರಷ್ಟು ಮಳೆ ಈಗಾಗಲೇ ಬಿದ್ದಿದೆ. ಹೆಚ್ಚಾಗಿ ಜೂನ್‌, ಜುಲೈ, ಆಗಸ್ಟ್‌ ತಿಂಗಳಿನಲ್ಲಿ ಮಳೆಯಾಗುತ್ತದೆ. ಮುಂದಿನ ತಿಂಗಳುಗಳಲ್ಲಿ ಮಳೆಯ ಪ್ರಮಾಣ ಇಳಿಮುಖವಾಗುತ್ತದೆ.

Advertisement

ತೋಟಕ್ಕೆ ಸಾಕು; ಭತ್ತಕ್ಕೆ ಸಾಕಾಗದು
ಕರಾವಳಿಯಲ್ಲಿ ಮಳೆಯ ಪರಿಣಾಮ ಕಡಿಮೆಯಾದರೂ ಇಲ್ಲಿ ಬೆಳೆಯುವ ತೋಟಗಾರಿಕಾ ಬೆಳೆಗಳಿಗೆ ಇದು ಪೂರಕವೇ ಆಗಿದೆ. ಆಗಾಗ ಕೆಲವು ದಿನಗಳ ವಿಶ್ರಾಂತಿ ಬಳಿಕ ಮಳೆ ಸುರಿದಿರುವುದರಿಂದ ಕೊಳೆರೋಗದಂತಹ ಸಮಸ್ಯೆ ಕಡಿಮೆಯಾಗಿದೆ. ಇನ್ನು ನವೆಂಬರ್‌-ಡಿಸೆಂಬರ್‌ ವೇಳೆ ಒಮ್ಮೆ ಜೋರಾಗಿ ಮಳೆ ಬಂದರೆ ಬೇಸಗೆ ಕಾಲದವರೆಗೂ ನೀರು ಸಾಕಾಗಬಹುದು. ಆದರೆ ಭತ್ತದ ಬೆಳೆಗೆ ಮಾತ್ರ ಇನ್ನೂ ಒಂದು ತಿಂಗಳ ಮಳೆ ಬೇಕು. ಸಾಧಾರಣವಾಗಿ ಸುರಿದರೂ ಭತ್ತ ಕೃಷಿಕರು ನಿಟ್ಟುಸಿರು ಬಿಡಲು ಸಾಧ್ಯ. ಇಲ್ಲವಾದರೆ ಒಣಗಿ ಫ‌ಸಲು ಬಾರದಿರುವ ಸಾಧ್ಯತೆ ಇದೆ.

ಕರಾವಳಿ ಪ್ರದೇಶದಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಮಾನ್ಸೂನ್‌ ದುರ್ಬಲವಾದ ಕಾರಣ ಮಳೆ ಪ್ರಮಾಣದಲ್ಲಿ ಇಳಿಮುಖ ಕಂಡು ಬಂದಿದೆ. ಮುಂದಿನ ದಿನಗಳಲ್ಲಿ ದೊಡ್ಡ ಪ್ರಮಾಣದ ಮಳೆ ಬರುವುದು ಸಂಶಯ.
ಡಾ| ಜಿ.ಎಸ್‌. ಶ್ರೀನಿವಾಸ ರೆಡ್ಡಿ, ಕೆಎಸ್‌ಎನ್‌ಡಿಎಂಸಿ ನಿರ್ದೇಶಕ

ಮಳೆ ಪ್ರಮಾಣದಲ್ಲಿ ಕಡಿಮೆ ಇದ್ದರೂ ಕರಾವಳಿಯಲ್ಲಿ ಬೆಳೆಯುವ ಬೆಳೆಗಳಿಗೆ ಯಾವುದೇ ರೀತಿಯ ಹಾನಿಯಾಗದು. ಮಳೆ ಪ್ರಮಾಣ ಕಡಿಮೆ ಇದೆ. ಅಡಿಕೆ ಬೆಳೆಯಲ್ಲಿನ ಕೊಳೆ ರೋಗ ಕಡಿಮೆಯಾಗಿದೆ.
ಎಚ್‌.ಆರ್‌. ನಾಯಕ್‌, ತೋಟಗಾರಿಕಾ ಇಲಾಖೆ ಉಪನಿರ್ದೇಶಕ

ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next