Advertisement

ಈ ಬಾರಿ ಯಶ್‌ಪಾಲ್‌ ಗೆಲುವಿಗೆ ಮಹಿಳೆಯರೆಲ್ಲರೂ ಸಾಕ್ಷಿಯಾಗಲಿದ್ದಾರೆ : ತಾರಾ

07:00 PM May 04, 2023 | Team Udayavani |

ಬ್ರಹ್ಮಾವರ: ಮಹಿಳೆಯರು ಮನಸ್ಸು ಮಾಡಿದರೆ ಏನನ್ನೂ ಬೇಕಾದರೂ ಸಾಧಿಸಬಹುದು. ಎಲ್ಲ ಕ್ಷೇತ್ರದಲ್ಲಿ ಮಹಿಳೆಯರೇ ಮೇಲುಗೈ ಸಾಧಿಸುತ್ತಿರುವ ಇಂದಿನ ಯುಗದಲ್ಲಿ, ಈ ಬಾರಿ ಬಿಜೆಪಿಯ ಯಶ್‌ಪಾಲ್‌ ಸುವರ್ಣ ಅವರ ಗೆಲುವಿಗೂ ಮಹಿಳೆಯರೆಲ್ಲರೂ ಸಾಕ್ಷಿಯಾಗಲಿದ್ದಾರೆ. ಬಿಜೆಪಿಯ ಹಿರಿಯರೆಲ್ಲ ಹೊಸ ಮುಖಗಳಿಗೆ ಅವಕಾಶ ಮಾಡಿಕೊಟ್ಟಿದ್ದು ಈ ಬಾರಿ ಬಿಜೆಪಿ ಬಹುಮತ ಸಾಧಿಸಿ ಆಡಳಿತ ಮಾಡಲಿದೆ ಎಂದು ವಿಧಾನಪರಿಷತ್‌ ಸದಸ್ಯೆ, ಚಲನಚಿತ್ರ ನಟಿ ತಾರಾ ಹೇಳಿದರು.ಬ್ರಹ್ಮಾವರದಲ್ಲಿ ಮಂಗಳವಾರ ನಡೆದ ಬಿಜೆಪಿ ಬೃಹತ್‌ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.

Advertisement

ಶಾಸಕ ರಘುಪತಿ ಭಟ್‌ ಮಾತನಾಡಿ, ಬ್ರಹ್ಮಾವರ ಭಾಗದಲ್ಲಿ ಬಿಜೆಪಿ ವರ್ಷದಿಂದ ವರ್ಷಕ್ಕೆ ಹೆಚ್ಚು ಹೆಚ್ಚು ಲೀಡ್‌ ಪಡೆಯುತ್ತಾ ಬರಲಾಗಿದೆ. ಈ ಬಾರಿ 15ಸಾವಿರಕ್ಕೂ ಹೆಚ್ಚು ಮುನ್ನಡೆ ದೊರಕಲಿದೆ. ಈ ಚುನಾವಣೆ ಲೋಕಸಭಾ ಚುನಾವಣೆಗೆ ಮುನ್ನುಡಿಯಾಗಲಿದೆ. ಸಂವಿಧಾನದಲ್ಲಿ ಧರ್ಮಾಧಾರಿತ ಮೀಸಲಾತಿಗೆ ಅವಕಾಶ ಇಲ್ಲ. ಆದರೆ ಈ ಹಿಂದಿನ ಸರಕಾರಗಳು ಅದನ್ನು ನೀಡಿದ್ದವು. ಈಗ ಸಂವಿಧಾನಾತ್ಮಕವಾಗಿ ಧರ್ಮಾಧಾರಿತ ಮೀಸಲಾತಿಗಳನ್ನು ರದ್ದುಗೊಳಿಸಲಾಗಿದೆ. ಕ್ಷೇತ್ರದಲ್ಲಿ ಅಪಾರ ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಅದನ್ನು ಮುಂದುವರಿಸಲು ಯಶ್‌ಪಾಲ್‌ ಸುವರ್ಣ ಅವರನ್ನು ಉಡುಪಿ ಕ್ಷೇತ್ರದ ಜನತೆ ಗೆಲ್ಲಿಸಬೇಕು ಎಂದು ರಘುಪತಿ ಭಟ್‌ ತಿಳಿಸಿದರು.

ಧರ್ಮ -ಅಧರ್ಮದ ನಡುವಿನ ಚುನಾವಣೆ
ಅಭ್ಯರ್ಥಿ ಯಶ್‌ಪಾಲ್‌ ಸುವರ್ಣ ಮಾತನಾಡಿ, ಈ ಚುನಾವಣೆ ಧರ್ಮ ಮತ್ತು ಅಧರ್ಮದ ನಡುವೆ ನಡೆಯುತ್ತಿರುವ ಚುನಾವಣೆ. ಧರ್ಮ ಗೆಲ್ಲಬೇಕಾದಲ್ಲಿ ಮುಂದೆ ನಡೆಯುವ ಚುನಾವಣೆಯಲ್ಲಿ ಬಿಜೆಪಿಗೆ ಗೆಲುವು ಒದಗಿಸುವ ಮೂಲಕ ನಮ್ಮ ಶಕ್ತಿಯನ್ನು ತೋರಿಸಬೇಕು ಎಂದರು. ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಡಿಕೆಶಿ ಬಜರಂಗದಳ ನಿಷೇಧಿಸುತ್ತೇನೆ ಎಂದು ಹೇಳಿದ್ದಾರೆ, ಅದು ಡಿಕೆಶಿಯವರಿಗೆ ಕನಸಾಗಿಯೇ ಉಳಿಯಲಿದೆ. ತಾಕತ್ತಿದ್ರೆ ಭಜರಂಗದಳವನ್ನು ಮುಟ್ಟಿನೋಡಿ ಉತ್ತರ ಕೊಡಲಿಕ್ಕೆ ನಮ್ಮ ಕಾರ್ಯಕರ್ತರು ಸಿದ್ಧವಾಗಿದ್ದಾರೆ. ಮತದಾರರು ಗೆಲ್ಲಿಸಿದರೆ ರಘುಪತಿ ಭಟ್ಟರು ಕ್ಷೇತ್ರದಲ್ಲಿ ಮಾಡಿಸಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸಿಕೊಂಡು 5ವರ್ಷ ಪ್ರಾಮಾಣಿಕವಾಗಿ ಇನ್ನಷ್ಟು ಅನುದಾನ ತಂದು ಕೆಲಸ ಮಾಡುತ್ತೇನೆ ಎಂದರು.

ತಾಕತ್‌ ಇದ್ದರೆ ಬಂದ್‌ ಮಾಡಿಸಿ
ಹಿಂದುತ್ವ, ದೇಶಾಭಿಮಾನ, ದೇಶಕ್ಕೋಸ್ಕರ ಇರುವ ಹಿಂದೂ ಸಂಘಟನೆಯ ಭಜರಂಗದಳವನ್ನು ಬಂದ್‌ ಮಾಡುವ ಬಗ್ಗೆ ಹೇಳಿಕೆ ಕೊಟ್ಟಿರುವ ಕಾಂಗ್ರೆಸಿಗರು ತಾಕತ್‌ ಇದ್ದರೆ ಬಂದ್‌ ಮಾಡಿಸಿ ತೋರಿಸಲಿ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಸವಾಲು ನೀಡಿದರು. ಚುನಾವಣೆ ಸಂದರ್ಭ ಭರವಸೆ ನೀಡುವುದು ಸಹಜ. ಆದರೆ ಜನರಿಗೆ ತಪ್ಪು ಮಾಹಿತಿ ನೀಡುವುದು ಸರಿಯಲ್ಲ. 75 ವರ್ಷ ಕಾಂಗ್ರೆಸಿಗರ ಆಡಳಿತ ಸಮಯದಲ್ಲಿ ಏನು ಗ್ಯಾರಂಟಿ ನೀಡಿದ್ದಾರೆ. ಈಗ ಗ್ಯಾರಂಟಿ ಕಾರ್ಡ್‌ ನೀಡಿ ಮತದಾರರರನ್ನು ಸೆಳೆಯುವ ಪ್ರಯತ್ನ ಮಾಡುತ್ತಿರುವುದು ಕಾಂಗ್ರೆಸಿಗರ ಪೊಳ್ಳು ಭರವಸೆ ಎಂದರು. ನಾರಾಯಣಗುರು ನಿಗಮ, ನಾರಾಯಣಗುರು ವಸತಿ ಶಾಲೆ, ಸಂಗೀತ ತರಬೇತಿ ಕೇಂದ್ರ ಸ್ಥಾಪನೆ ಮೂಲಲಕ ಬಿಜೆಪಿ ಸರಕಾರ ಹಿಂದುಳಿದ ವರ್ಗಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಿದೆ ಎಂದರು.

ಉಡುಪಿ ಕ್ಷೇತ್ರದ ಅಭ್ಯರ್ಥಿಯಾಗಿ, ನಗರಸಭಾ ಸದಸ್ಯರಾಗಿ, ಸಹಕಾರಿ, ಶಿಕ್ಷಣ, ಧಾರ್ಮಿಕ ಕ್ಷೇತ್ರ, ಹಿಂದೂ ಸಂಘಟನೆಗಳಲ್ಲಿ ತಮ್ಮ ಕ್ರಿಯಾಶೀಲತೆಯ ಮೂಲಕ ಯುವ ನಾಯಕರಾಗಿ ಮೂಡಿಬಂದಿರುವ ಯಶ್‌ಪಾಲ್‌ ಸುವರ್ಣ ಅವರಿಗೆ ಪಕ್ಷ ಅವಕಾಶ ನೀಡಿದೆ. ಉಡುಪಿ ಕ್ಷೇತ್ರದ ಮತದಾರರು ಜನಪರ ಅಡಳಿತ ಹಾಗೂ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಯಶ್‌ಪಾಲ್‌ ಸುವರ್ಣ ಅವರನ್ನು ಗೆಲ್ಲಿಸುವ ಮೂಲಕ ಬಿಜೆಪಿ ಸರಕಾರಕ್ಕೆ ಮತ್ತೂಮ್ಮೆ ಅವಕಾಶ ನೀಡುವ ಪಣತೊಟ್ಟಿದ್ದಾರೆ.
ಮಟ್ಟಾರ್‌ ರತ್ನಾಕರ ಹೆಗ್ಡೆ, ನಿಕಟ ಪೂರ್ವ ಅಧ್ಯಕರು, ಕರಾವಳಿ ಅಭಿವೃದ್ಧಿ ಪ್ರಾಧಿಕಾರ

Advertisement

ಇದೇ ಸಂದರ್ಭದಲ್ಲಿ ಆಮ್‌ ಆದ್ಮಿ ಪಾರ್ಟಿ ಮತ್ತು ಕಾಂಗ್ರೆಸ್‌ನ ಹಲವು ಕಾರ್ಯಕರ್ತರು ಬಿಜೆಪಿ ಸೇರ್ಪಡೆಗೊಂಡರು. ಪಕ್ಷದ ಪ್ರಮುಖರಾದ ಸುಪ್ರಸಾದ್‌ ಶೆಟ್ಟಿ, ಜ್ಞಾನವಸಂತ ಶೆಟ್ಟಿ, ಪ್ರತಾಪ್‌ ಶೆಟ್ಟಿ ಮಾರಾಳಿ, ಶೀಲಾ ಕೆ. ಶೆಟ್ಟಿ, ಉದಯ ಕುಮಾರ್‌ ಶೆಟ್ಟಿ, ಸುರೇಶ ನಾಯಕ್‌ ಕುಯಿಲಾಡಿ, ಧನಂಜಯ ಅಮೀನ್‌, ವೀಣಾ ನಾಯ್ಕ, ರಾಜೇಶ ಶೆಟ್ಟಿ ಬಿರ್ತಿ, ಸುಧೀರ ಕುಮಾರ್‌ ಶೆಟ್ಟಿ, ಅಶ್ವಿ‌ನಿ, ಶಂಕರ ಪೂಜಾರಿ , ಮಟ್ಟಾರು ರತ್ನಾಕರ ಹೆಗ್ಡೆ, ವೀಣಾ ಶೆಟ್ಟಿ, ಬಿ. ಎನ್‌. ಶಂಕರ್‌ ಪೂಜಾರಿ, ಮಾರಾಳಿ ಪ್ರತಾಪ್‌ ಹೆಗ್ಡೆ, ನಳಿನಿ ಪ್ರದೀಪ್‌ ರಾವ್‌, ಹರಿಮಕ್ಕಿ ರತ್ನಾಕರ್‌ ಶೆಟ್ಟಿ, ಪಂಚಮಿ ಮೋಹನ್‌ ಶೆಟ್ಟಿ, ಅಶೋಕ್‌ ಹೇರೂರು ಉಪಸ್ಥಿತರಿದ್ದರು. ಅಪಾರ ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಸಭೆಯಲ್ಲಿ ಪಾಲ್ಗೊಂಡಿದ್ದರು.ಬಿಜೆಪಿ ಗ್ರಾಮಾಂತರ ಅಧ್ಯಕ್ಷೆ ವೀಣಾ ನಾಯ್ಕ ಸ್ವಾಗತಿಸಿದರು. ಮಂಡಲ ಕಾರ್ಯದರ್ಶಿ ಸಚಿನ್‌ ಪೂಜಾರಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next