Advertisement

ಇವರು ನಡೆದಿರುವುದು ಬರೋಬ್ಬರಿ 4.5 ಲಕ್ಷ ಕಿ,ಮೀ. ; ಇದು ಪೇಪರ್ ರಾಧಣ್ಣನ ಕಥೆ

08:56 PM Sep 04, 2020 | Karthik A |

‘ಬರಿಗಾಲಲ್ಲಿ ನಡೆದದ್ದು ನಾಲ್ಕು 4.5 ಲಕ್ಷ ಕಿ.ಮೀ. ಇದುವರೆಗೆ ಆಸ್ಪತ್ರೆ ಮೆಟ್ಟಿಲೇ ಏರಿಲ್ಲ. ಗೋಕಳ್ಳರ ದಾಳಿಗೂ ಬಗ್ಗದ ಧೀರ’

Advertisement

ಪೇಪರ್‌ ರಾಧಾಕೃಷ್ಣರ ನಾನ್‌ ಸ್ಟಾಪ್‌ ನಡಿಗೆಗೆ ಅರ್ಧಶತಕ. ಮೌನ ಸಾಧನೆಯ ಸಾಧಕ ಇವರು. ಪೇಪರ್‌ ರಾಧಾ ಎಂದರೆ ಡಿ.ವಿ.ಯವರಿಗೂ ಇಷ್ಟ.

ತಳಮಟ್ಟದಿಂದ ಬಂದು ಸಾಧನೆಯ ಕಥೆ ನಮ್ಮ ಮುಂದಿದೆ. ಬರಿಗಾಲಲ್ಲೆ ಪೇಪರ್‌ ಹಂಚುತ್ತ ಸುಮಾರು ನಾಲ್ಕುವರೆ ಲಕ್ಷ ಕಿ.ಮೀ. ದೂರ ನಡೆದು ಸಾಧನೆಯ ಹಾದಿಯಲ್ಲಿ ಮೌನ ಸಾಧಕರೊಬ್ಬರು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿ ಇದ್ದಾರೆ. ಅವರೇ ಪೇಪರ್‌ ರಾಧಾಣ್ಣ.

ಹೆಸರು ರಾಧಾಕೃಷ್ಣ ನಾಯಕ್‌. ಸುಳ್ಯದ ಜಯನಗರ ನಿವಾಸಿ. ದಿ| ವಾಸುದೇವ ನಾಯಕ್‌ ಕಸ್ತೂರಿ ದಂಪತಿಗಳ ಪುತ್ರ. ಈಗ ಇವರ ವಯಸ್ಸು 65. 1976ರಿಂದ ಪತ್ರಿಕೆ ಹಂಚುವ ಕೆಲಸದಲ್ಲಿ ತೊಡಗಿಸಿಕೊಂಡಿರುವರು. ಇವರು ಮೆಟ್ರಿಕ್‌ ತನಕ ಓದಿದ್ದಾರೆ. ಮನೆಯಲ್ಲಿ ಬಡತನ ಇತ್ತು. ಹಾಗಾಗಿ ಇತರೆ ಕೆಲಸಗಳಿಗೆ ಗುಡ್‌ಬೈ ಹೇಳಿ ಪತ್ರಿಕೆ ಹಂಚುವ ವೃತ್ತಿ ಆರಂಭಿಸಿದರು.

ಅರ್ಧ ಎಕ್ರೆ ಜಮೀನಿನಲ್ಲಿ ಜೀವನ. ಪತ್ನಿ ಹಾಗೂ ಐವರು ಮಕ್ಕಳಿರುವ ಸುಂದರ ಕುಟುಂಬ ಇವರದು. ಮೂರು ಮಂದಿ ಹೆಣ್ಣು ಮಕ್ಕಳಿಗೆ ವಿವಾಹ ಮಾಡಿಸಿದ್ದಾರೆ. ಪುತ್ರರಿಬ್ಬರು ಸ್ಥಳೀಯವಾಗಿ ಉದ್ಯೋಗದಲ್ಲಿದ್ದಾರೆ.

Advertisement

ಇಳಿವಯಸ್ಸಿನಲ್ಲೂ ನಸುಕಿನಲ್ಲಿ 2ರ ವೇಳೆಗೆ ಎದ್ದೇಳುತ್ತಾರೆ. ಮನೆಯಿಂದ ಕೆಲವು ಕಿ.ಮೀ. ನಡೆದು ಸುಳ್ಯ ಪೇಟೆ ತಲುಪುತ್ತಾರೆ. ಬಳಿಕ ಪೇಪರ್‌ ಜೋಡಣೆ ನಡೆಸಿ ವಿತರಣೆ, ಮಾರಾಟ ಕಾರ್ಯ ಆರಂಭಿಸುತ್ತಾರೆ. ಸಣ್ಣ ವಯಸ್ಸಿನಿಂದಲೇ ಇವರು ಕಾಲಿಗೆ ಚಪ್ಪಲಿ ಧರಿಸುವ ಅಭ್ಯಾಸ ರೂಢಿಸಿಕೊಂಡಿಲ್ಲ. ನಿತ್ಯವೂ 15-20 ಕಿ.ಮೀ. ನಷ್ಟೂ ದೂರ ಬರಿ ಕಾಲ್ನಡಿಗೆಯಲ್ಲಿ ತೆರಳಿ ಪತ್ರಿಕೆ ಹಂಚುತ್ತಾರೆ. ದಿನವೊಂದಕ್ಕೆ 20 ಕಿ.ಮೀ.ನಂತೆ ವರ್ಷಕ್ಕೆ 7,500 ಕಿ.ಮೀ. ನಷ್ಟೂ ನಡೆಯುತ್ತಾರೆ.

ಇವರ ಬಳಿಗೆ ಇದುವರೆಗೆ ಯಾವುದೇ ಕಾಯಿಲೆಗಳು ಸುಳಿದಿಲ್ಲವಂತೆ. ಯಾವುದೇ ದುಶ್ಚಟಗಳು ಇವರಿಗಿಲ್ಲ. ಇದುವರೆಗೆ ಆಸ್ಪತ್ರೆ ಮೆಟ್ಟಿಲೂ ಹತ್ತಿಲ್ಲವಂತೆ. ನಾನು ಆರೋಗ್ಯವಂತನಾಗಿರುವೆ ಎಂದು ಹೇಳುವ ಇವರ ಆರೋಗ್ಯದ ಹಿಂದಿನ ಗುಟ್ಟೇನು ಎಂದು ಕೇಳಿದರೆ ನಡಿಗೆ ಅಂತಾರೆ ರಾಧಾಕೃಷ್ಣರು. ನಿರಂತರ ಬರಿಗಾಲ ನಡಿಗೆಯಿಂದ ದೈಹಿಕ ವ್ಯಾಯಾಮ ಸಿಗುತ್ತದೆ ಅನ್ನುವ ಇವರು ಇನ್ನೂ ಹತ್ತು ವರ್ಷಗಳ ಕಾಲ ಪತ್ರಿಕೆ ಹಂಚುವೆ ಅಂತ ವಿಶ್ವಾಸ ವ್ಯಕ್ತಪಡಿಸುತ್ತಾರೆ.

ಇದು ರಾಧಣ್ಣನ ಡ್ರೆಸ್‌ ಕೋಡ್‌
ಕೇಸರಿ ಪಂಚೆ. ಖಾಕಿ ಅಂಗಿ ತೊಟ್ಟು ನಗರದ ಬಸ್ಟೇಂಡ್‌, ಅಂಗಡಿ-ಮುಂಗಟ್ಟುಗಳ ಮುಂದೆ ಪತ್ರಿಕೆ ಹಾಕುವ ಕಾಯಕದಲ್ಲಿ ತೊಡಗಿದ್ದರು ಪೇಪರ್‌ ರಾಧಾಣ್ಣ. ನಸುಕಿನಲ್ಲಿ ಎದ್ದು ನಗರದಲ್ಲಿ ಪೇಪರ್‌ ಹಾಕುತ್ತಿರುವ ವೇಳೆ ಅನೇಕ ಬಾರಿ ಗೋ ಕಳ್ಳರ ದಾಳಿಗೂ ಅವರು ಒಳಗಾಗಿದ್ದಾರಂತೆ. ಗೋ ಕಳ್ಳರು ಇವರ ಮೇಲೆ ದಾಳಿ ನಡೆಸಲು ಮುಂದಾಗಿದ್ದ ವೇಳೆ ಅಪಾಯದಿಂದ ಪಾರಾಗಿದ್ದಾರಂತೆ. ಅವರ ಯಾವ ಬೆದರಿಕೆ, ದಾಳಿಗೆ ಬಗ್ಗದೆ ಕೆಲಸ ದಿಟ್ಟತನದಿಂದ ಮುಂದುವರೆಸಿಕೊಂಡು ಬಂದಿದ್ದಾರೆ.

ಡಿ.ವಿ. ಎಸ್‌. ಜತೆ ಪ್ರಯಾಣ
ಕೇಂದ್ರದಲ್ಲಿ ಇಂದು ಸಚಿವರಾಗಿರುವ ಡಿ.ವಿ. ಸದಾನಂದ ಗೌಡರು ಸುಳ್ಯದಲ್ಲಿ ನ್ಯಾಯವಾಧಿಯಾಗಿದ್ದ ವೇಳೆ ಅವರಿಗೆ ಪತ್ರಿಕೆ ಜತೆಗೆ ಚಹಾ, ಕಾಫಿ ಕೂಡ ವಿತರಿಸುತ್ತಿದ್ದುದು ಇವರೆ. ಡಿ.ವಿ. ಯವರು ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ವೇಳೆ ಅವರು ಮಡಿಕೇರಿಯಿಂದ-ಸುಳ್ಯದ ಕಡೆಗೆ ಬರುತಿದ್ದ ಸಂದರ್ಭ ಸಂಪಾಜೆಯಲ್ಲಿ ನಿಂತಿದ್ದ ರಾಧಾಕೃಷ್ಣರನ್ನು ಕಂಡು ಡಿ.ವಿ. ತನ್ನ ಚಾಲಕನಿಗೆ ಕಾರು ನಿಲ್ಲಿಸಲು ಹೇಳಿ ರಾಧಾಕೃಷ್ಣರನ್ನು ಜತೆಗೆ ಕರೆತಂದಿದ್ದರಂತೆ.

ನಿನ್ನ ನೀ ತಿಳಿದುಕೊಂಡರೆ
“ನಿನ್ನ ನೀ ತಿಳಿದರೆ ನೀನೇ ದೇವರು’ ಎಂದವರು ಶಿಶುನಾಳ ಷರೀಪರು. ಇದೇ ನೆಲೆಯಲ್ಲಿ ಪರಿಶ್ರಮಕ್ಕೆ ಇಳಿದ ರಾಧಾಕೃಷ್ಣರದು “ದುಡಿದು ತಿನ್ನು ‘ ಎಂಬ ಘೋಷವಾಕ್ಯ. ಬದುಕಿನ ಪುನಾರುತ್ಥಾನದ ಇವರ ಯಾತ್ರೆಗೆ ಐವತ್ತು ವರ್ಷ ದಾಟಿ ಮುಂದೆ ಸಾಗಿದೆ. ಸದ್ಯ ಅವರು ವೃತ್ತಿ ಮುಂದುವರೆಸಿದ್ದಾರೆ. ಯಾವ ಪ್ರಶಸ್ತಿ, ದಾಖಲೆಗಳ ಮರ್ಜಿಯೂ ಇಲ್ಲದೆ ವೃತ್ತಿಯಲ್ಲಿ ನಡೆಯುತ್ತಲೇ ಇದ್ದಾರೆ. ಸುಖೀ ಜೀವನ ನಡೆಸುತ್ತಿದ್ದಾರೆ. ಅವರ ಜೀವನ ಹೀಗೆ ಮುಂದೆ ಸಾಗುತ್ತಿರಲಿ.

–  ಬಾಲಕೃಷ್ಣ ಭೀಮಗುಳಿ 

 

Advertisement

Udayavani is now on Telegram. Click here to join our channel and stay updated with the latest news.

Next