Advertisement
2023ರ ಏಷ್ಯಾ ಕಪ್ ಪಂದ್ಯಾ ವಳಿಗೆ ಪಾಕಿಸ್ಥಾನವೊಂದೇ ಆತಿಥ್ಯ ವಹಿಸಬೇಕಿತ್ತು. ಆದರೆ ಭಾರತ ತಂಡ ಪಾಕಿಸ್ಥಾನಕ್ಕೆ ಕಾಲಿಡದ ಕಾರಣ ಹೆಚ್ಚಿನ ಸಂಖ್ಯೆಯ ಪಂದ್ಯ ಗಳನ್ನು ಶ್ರೀಲಂಕಾದಲ್ಲೂ ನಡೆಸಲು ತೀರ್ಮಾನಿಸಲಾಯಿತು. ಪಾಕಿಸ್ಥಾನ ದಲ್ಲಿ ನಡೆಯುವುದು 4 ಪಂದ್ಯ ಮಾತ್ರ. ಫೈನಲ್ ಸೇರಿದಂತೆ ಉಳಿದ 9 ಪಂದ್ಯಗಳ ಆತಿಥ್ಯ ಶ್ರೀಲಂಕಾ ಪಾಲಾಗಿದೆ.
ಎಂದಿನಂತೆ ಭಾರತ-ಪಾಕಿಸ್ಥಾನ ನಡುವಿನ ಹೈ ವೋಲ್ಟೆಜ್ ಮುಖಾ ಮುಖೀ ಈ ಬಾರಿಯ ಆಕರ್ಷಣೆ. ಆದರೆ ಇಲ್ಲಿ ಒಂದು ಸಲ ಮಾತ್ರವಲ್ಲ, ಈ ಬದ್ಧ ಎದುರಾಳಿಗಳು 3 ಸಲ ಎದುರಾಗುವ ಸಾಧ್ಯತೆ ಇದೆ! ಇದಕ್ಕೆ ಪಂದ್ಯಾವಳಿಯ ಮಾದರಿಯೇ ಕಾರಣ. 6 ತಂಡಗಳನ್ನು 2 ಗುಂಪುಗಳಾಗಿ ವಿಭಜಿಸಲಾಗಿದೆ. ಭಾರತ ಮತ್ತು ಪಾಕಿಸ್ಥಾನ ಒಂದೇ ಬಣದಲ್ಲಿವೆ. ಸೆ. 2ರಂದು ಇತ್ತಂಡಗಳು ಲೀಗ್ ಹಂತದಲ್ಲಿ ಎದುರಾಗಲಿವೆ. ಇಲ್ಲಿನ ಮತ್ತೂಂದು ತಂಡ ದುರ್ಬಲ ನೇಪಾಲ. ಹೀಗಾಗಿ ಸೂಪರ್-4 ಹಂತಕ್ಕೆ ಭಾರತ, ಪಾಕಿಸ್ಥಾನ ಲಗ್ಗೆಯಿಡುವುದು ಖಚಿತ. ಇಲ್ಲಿನ ನಾಲ್ಕೂ ತಂಡಗಳು ಮತ್ತೂಂದು ಸುತ್ತಿನಲ್ಲಿ ಸೆಣಸಲಿವೆ. ಆಗ ಭಾರತ-ಪಾಕಿಸ್ಥಾನ ಮತ್ತೆ ಎದುರಾಗಲಿವೆ. ಅಕಸ್ಮಾತ್ ಇತ್ತಂಡಗಳು ಫೈನಲ್ ತಲುಪಿದ್ದೇ ಆದಲ್ಲಿ 3ನೇ ಮುಖಾಮುಖೀಗೆ ವೇದಿಕೆ ಸಜ್ಜಾಗಲಿದೆ. ಕೂಟದ ರೋಮಾಂಚನಕ್ಕೆ ಇನ್ನೇನು ಬೇಕು!
Related Articles
“ಬಿ’ ವಿಭಾಗದಲ್ಲಿ ಪೈಪೋಟಿ ಜೋರಿದೆ. ಹಾಲಿ ಚಾಂಪಿಯನ್ ಹಾಗೂ ಆತಿಥೇಯ ಶ್ರೀಲಂಕಾ, ಅಪಾಯಕಾರಿ ಅಫ್ಘಾನಿಸ್ಥಾನ ಮತ್ತು ಬಾಂಗ್ಲಾದೇಶ ತಂಡಗಳು ಇಲ್ಲಿವೆ. ಮೂರೂ ಸಮಬಲದ ತಂಡಗಳಾದ ಕಾರಣ ಹೋರಾಟ ತೀವ್ರಗೊಳ್ಳುವುದು ಖಚಿತ. ಸೂಪರ್-4 ಹಂತದಲ್ಲಿ 6 ಪಂದ್ಯಗಳಿವೆ. ಇಲ್ಲಿ ಅಗ್ರಸ್ಥಾನ ಪಡೆದ ತಂಡಗಳೆರಡು ಸೆ. 17ರ ಫೈನಲ್‌ನಲ್ಲಿ ಎದುರಾಗಲಿವೆ.
Advertisement
ಭಾರತ ದಾಖಲೆಏಷ್ಯಾ ಕಪ್ ಕ್ರಿಕೆಟ್ ಪಂದ್ಯಾವಳಿ ಆರಂಭಗೊಂಡದ್ದು 1984ರಲ್ಲಿ. ಇದು 16ನೇ ಆವೃತ್ತಿ. ಈವರೆಗಿನ 15 ಕೂಟಗಳಲ್ಲಿ ಅತ್ಯಧಿಕ 7 ಸಲ ಚಾಂಪಿಯನ್ ಆದ ಹೆಗ್ಗಳಿಕೆ ಭಾರತದ್ದು. ಶ್ರೀಲಂಕಾ 6 ಸಲ ಹಾಗೂ ಪಾಕಿಸ್ಥಾನ 2 ಸಲ ಪ್ರಶಸ್ತಿ ಗೆದ್ದಿವೆ. ಭಾರತಕ್ಕೆ 8ನೇ ಏಷ್ಯಾ ಕಪ್ ಒಲಿದೀತೇ? ರೋಹಿತ್ ಪಡೆಯ ಮೇಲೆ ನಿರೀಕ್ಷೆಯಂತೂ ಇದೆ. ಆದರೆ ಕಳೆದ ಕೆಲವು ವರ್ಷಗಳಿಂದ ಟೀಮ್ ಇಂಡಿಯಾ ಯಾವುದೇ ದೊಡ್ಡ ಕಪ್ ಎತ್ತದಿದ್ದುದೊಂದು ಹಿನ್ನಡೆ. 2018ರಲ್ಲಿ ಏಷ್ಯಾ ಕಪ್ ಎತ್ತಿದ್ದೇ ಭಾರತದ ಕೊನೆಯ ಪ್ರಶಸ್ತಿ ಆಗಿದೆ. ಮೂಲತಃ ಇದು ಏಕದಿನ ಮಾದರಿಯ ಪಂದ್ಯಾವಳಿ. ಆದರೆ 2 ಸಲ ಇದನ್ನು ಟಿ20 ಮಾದರಿಯಲ್ಲಿ ಆಡಲಾಗಿತ್ತು. 2018ರ ಹಾಗೂ ಕಳೆದ 2022ರ ಆವೃತ್ತಿ ಟಿ20 ಮಾದರಿಯಲ್ಲಿತ್ತು. ಟಿ20 ವಿಶ್ವಕಪ್ ಹಿನ್ನೆಲೆಯಲ್ಲಿ ಈ ಪರಿವರ್ತನೆ ಮಾಡಲಾಗಿತ್ತು. ಪಾಕಿಸ್ಥಾನ ಅಪಾಯಕಾರಿ
ಅಫ್ಘಾನಿಸ್ಥಾನವನ್ನು ಕ್ಲೀನ್‌ಸ್ವೀಪ್ ಮಾಡಿ ಇತ್ತೀಚೆಗಷ್ಟೇ ನಂ.1 ಸ್ಥಾನ ಅಲಂಕರಿಸಿರುವ ಪಾಕಿಸ್ಥಾನ ಈ ಕೂಟದ ಅತ್ಯಂತ ಅಪಾಯಕಾರಿ ತಂಡ. ಬಾಬರ್ ಪಡೆ ಎಲ್ಲ ವಿಭಾಗಗ ಳಲ್ಲೂ ಇನ್‌ಫಾರ್ಮ್ ಆಟಗಾರರನ್ನೇ ಹೊಂದಿದೆ. ಸರಿಯಾದ ಹೊತ್ತಿನಲ್ಲಿ ಸಾಧನೆಯ ಉತ್ತುಂಗ ತಲುಪಿರುವ ಕಾರಣ ನೆಚ್ಚಿನ ತಂಡವಾಗಿಯೂ ಅಳೆಯಲಾಗುತ್ತಿದೆ. ಲಂಕಾ ಹಾದಿ ಸುಗಮವಲ್ಲ
ಶ್ರೀಲಂಕಾ ಹಾಲಿ ಚಾಂಪಿಯನ್. ಆದರೆ ಅದು ಕಳೆದ ಸಲ ಟ್ರೋಫಿ ಎತ್ತಿದ್ದು ಟಿ20 ಮಾದರಿಯಲ್ಲಿ. ಫೈನಲ್‌ನಲ್ಲಿ ಪಾಕಿಸ್ಥಾನವನ್ನು ಮಣಿಸಿತ್ತು. ಈ ಬಾರಿ “ಹೋಮ್ ಟೀಮ್’ ಎಂಬುದಷ್ಟೇ ಲಂಕಾ ಪಾಲಿನ ಹೆಗ್ಗಳಿಕೆ. ಪೂರ್ಣ ಸಾಮರ್ಥ್ಯದ ತಂಡವನ್ನು ಹೊಂದಿಲ್ಲದ ಕಾರಣ ಕಪ್ ಉಳಿಸಿಕೊಳ್ಳುವುದು ಸುಲಭವಲ್ಲ. ದುಷ್ಮಂತ ಚಮೀರ, ವನಿಂದು ಹಸರಂಗ, ಲಹಿರು ಕುಮಾರ, ದಿಲ್ಶನ್ ಮಧುಶಂಕ ಗಾಯಾಳಾಗಿ ಬೇರ್ಪಟ್ಟಿದ್ದಾರೆ. ಇದರಿಂದ ಒಂದು ಸಂಪೂರ್ಣ ಬೌಲಿಂಗ್ ಯೂನಿಟ್ ಲಂಕಾ ಪಾಲಿಗೆ ನಷ್ಟವಾಗಿದೆ. ಆರಂಭಕಾರ ಆವಿಷ್ಕ ಫೆರ್ನಾಂಡೊ ಮತ್ತು ಕೀಪರ್ ಕುಸಲ್ ಪೆರೆರ ಕೊರೊನಾ ಕ್ವಾರಂಟೈನ್‌ನಲ್ಲಿದ್ದಾರೆ. ಒಟ್ಟಾರೆ ಲಂಕಾ ಹಾದಿ ಸುಗಮವಲ್ಲ. 6 ವರ್ಷ ಬಳಿಕ ನಾಯಕ
ಬಾಂಗ್ಲಾದೇಶಕ್ಕೂ ಗಾಯಾಳುಗಳ ಸಮಸ್ಯೆ ತಪ್ಪಿಲ್ಲ. ತಮಿಮ್ ಇಕ್ಬಾಲ್, ಇಬಾದತ್ ಹುಸೇನ್ ಹೊರಬಿದ್ದಿದ್ದಾರೆ. ಸೀನಿಯರ್ ಕ್ರಿಕೆಟಿಗ ಶಕಿಬ್ ಅಲ್ ಹಸನ್ 6 ವರ್ಷಗಳ ಬಳಿಕ ಬಾಂಗ್ಲಾ ಏಕದಿನ ತಂಡವನ್ನು ಮುನ್ನಡೆಸುತ್ತಿದ್ದಾರೆ. ಮೊದಲ ಸಲ ಚಾಂಪಿಯನ್ ಆಗುವ ಸಾಧ್ಯತೆ ಖಂಡಿತ ಇಲ್ಲ ಎನ್ನಬಹುದು. ವಿಶ್ವಕಪ್‌ಗೆ ತಾಲೀಮು
ಪ್ರತಿಷ್ಠಿತ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಗೆ ಇನ್ನು ಕೆಲವೇ ವಾರ ಬಾಕಿ ಇರುವ ಕಾರಣ ಈ ಬಾರಿಯ ಏಷ್ಯಾ ಕಪ್ ಕೂಟಕ್ಕೆ ಮಹತ್ವ ಜಾಸ್ತಿ. ವಿಶ್ವಕಪ್ ಕೂಡ ಏಷ್ಯಾದಲ್ಲಿ, ಅದರಲ್ಲೂ ಭಾರತದ ನೆಲದಲ್ಲೇ ನಡೆಯುತ್ತಿದೆ. ಹೀಗಾಗಿ ಏಷ್ಯನ್ ತಂಡಗಳ ತಾಲೀಮಿಗೆ, ತಂಡದ ಸಂಯೋಜನೆಗೆ, ಆಟಗಾರರ ಫಾರ್ಮ್ ಹಾಗೂ ಫಿಟ್‌ನೆಸ್ ಅರಿಯಲು ಏಷ್ಯಾ ಕಪ್ ನಿರ್ವಹಣೆ ನಿರ್ಣಾಯಕವಾಗಲಿದೆ. ಮೊದಲೆರಡು ಪಂದ್ಯಗಳಿಗೆ ರಾಹುಲ್ ಗೈರು
ಗಾಯದ ಸಮಸ್ಯೆಯಿಂದ ಪೂರ್ತಿಯಾಗಿ ಚೇತರಿಸಿಕೊಳ್ಳದ ವಿಕೆಟ್ ಕೀಪರ್-ಬ್ಯಾಟರ್ ಕೆ.ಎಲ್. ರಾಹುಲ್ ಏಷ್ಯಾ ಕಪ್ ಕ್ರಿಕೆಟ್ ಪಂದ್ಯಾವಳಿಯ ಮೊದಲೆರಡು ಪಂದ್ಯಗಳಿಗೆ ಲಭ್ಯರಿರುವುದಿಲ್ಲ ಎಂಬುದಾಗಿ ಕೋಚ್ ರಾಹುಲ್ ದ್ರಾವಿಡ್ ಮಂಗಳವಾರ ತಿಳಿಸಿದ್ದಾರೆ. ತಂಡ ಶ್ರೀಲಂಕಾಕ್ಕೆ ತೆರಳುವ ಮೊದಲು ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ಮಾಹಿತಿಯಿತ್ತರು.
ಐಪಿಎಲ್ ಸಮಯದಿಂದ ಗಾಯಾಳಾಗಿದ್ದ ಕೆ.ಎಲ್. ರಾಹುಲ್, ಏಷ್ಯಾ ಕಪ್ ತಂಡದ ಆಯ್ಕೆಯ ವೇಳೆಯೂ ಚೇತರಿಸಿಕೊಂಡಿರಲಿಲ್ಲ. ಪೂರ್ತಿ ಫಿಟ್‌ನೆಸ್ ಹೊಂದಿದರಷ್ಟೇ ತಂಡದೊಂದಿಗೆ ತೆರಳಲಿದ್ದಾರೆ ಎಂದು ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ತಿಳಿಸಿದ್ದರು. ಹೀಗಾಗಿ ಸಂಜು ಸ್ಯಾಮ್ಸನ್ ಅವರನ್ನು ಮೀಸಲು ಆಟಗಾರನನ್ನಾಗಿ ತಂಡಕ್ಕೆ ಸೇರಿಸಿಕೊಳ್ಳಲಾಗಿತ್ತು.
ಐಪಿಎಲ್ ವೇಳೆ ತೊಡೆಯ ಸ್ನಾಯು ಸೆಳೆತಕ್ಕೆ ಸಿಲುಕಿದ ರಾಹುಲ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಏಷ್ಯಾ ಕಪ್ ಪಂದ್ಯಾವಳಿಗೂ ಮೊದಲು ಫಿಟ್‌ನೆಸ್ ಹೊಂದುವ ನಿರೀಕ್ಷೆ ಇರಿಸಲಾಗಿತ್ತು. ಆದರೆ ಏಷ್ಯಾ ಕಪ್‌ಗೆ ಸಿದ್ಧತೆ ನಡೆಸುತ್ತಿರುವಾಗ ಮತ್ತೆ ಗಾಯಾಳಾದರು.