Advertisement
1 ಸಾವಿರದಷ್ಟು ಮತದಾರರು, 300ರಷ್ಟು ಮನೆ ಗಳಿರುವ ಮಂಗಳೂರು ಟೈಲ್ ಫ್ಯಾಕ್ಟರಿ ರೋಡ್ ವಾರ್ಡ್‌ನಲ್ಲಿ ಮಂಗಳೂರು ಹೆಂಚಿನ ಕಾರ್ಖಾನೆಯೇ ಕೇಂದ್ರಬಿಂದು. ಚರ್ಚ್, ಕಾನ್ವೆಂಟ್, ಸಂತ ಜೋಸೆಫರ ಶಾಲೆ ಇವೆಲ್ಲ ಈ ವಾರ್ಡಿನಲ್ಲಿ ಗುರುತಿಸಲ್ಪಟ್ಟ ಪ್ರಮುಖ ಕೇಂದ್ರಗಳು.
ವಡೇರಹೋಬಳಿಯಿಂದ ಕುಂದಾಪುರ ಪೇಟೆ ಭಾಗಕ್ಕೆ, ಗಾಂಧಿ ಮೈದಾನ ಕಡೆಯಿಂದ, ಪೇಟೆಯ ಭಾಗದಿಂದ ಹರಿದು ಬರುವ ನೀರು ಸೇರುವುದು ಈ ವಾರ್ಡಿನಲ್ಲಿ ಇರುವ ತೋಡಿನಲ್ಲಿ. ಇದಕ್ಕೊಂದು ಸಮರ್ಥವಾದ ತಡೆಗೋಡೆ ಕಟ್ಟಿ ವ್ಯವಸ್ಥಿತ ರೀತಿಯಲ್ಲಿ ನಿರ್ವಹಣೆ ಮಾಡಲು ಪುರಸಭೆಗೆ ಅನುದಾನದ ಕೊರತೆ ಉಂಟಾಗಿದೆ. ಸಣ್ಣ ತಡೆಗೋಡೆ ಕಟ್ಟಲಾಗಿದೆಯಷ್ಟೇ. ಇದರಿಂದ ರಸ್ತೆ ಕೊರೆತದ ಭೀತಿಯಿದ್ದು, ಅದನ್ನು ನಿಲ್ಲಿಸಿ ಎನ್ನುವುದು ಸ್ಥಳೀಯರ ಬೇಡಿಕೆಯಾಗಿದೆ. ಇದಕ್ಕೆ ತಾಗಿಕೊಂಡಂತೆ ಒಂದು ಮಣ್ಣಿನ ರಸ್ತೆಯಿದೆ. ಸುಮಾರು 12 ಮನೆಗಳಿಗೆ ಇದು ಪ್ರಮುಖ ದಾರಿ. ಇದರ ನಂತರ ಡಾಮರು, ಇದಕ್ಕೆ ಮೊದಲು ಕಾಂಕ್ರಿಟ್ ರಸ್ತೆಯಿದೆ. ಆದರೆ ಇಷ್ಟು ಭಾಗ ಮಾತ್ರ ಯಾವುದೇ ಕಾಮಗಾರಿ ನಡೆಯದೇ ಬಾಕಿ ಆಗಿದೆ. ಕಿತ್ತು ಹೋದ ಕಾಂಕ್ರಿಟ್
ಕಾನ್ವೆಂಟ್ ರಸ್ತೆಯ ಕಾಮಗಾರಿ ಮಾಡಿ ಪೂರೈಸಿದ ಕೆಲವೇ ತಿಂಗಳಿನಲ್ಲಿ ಕಿತ್ತೆದ್ದಿದೆ. ಈಗಲೂ ಕಾಂಕ್ರೀಟ್ ರಸ್ತೆಯಲ್ಲಿ ಕಬ್ಬಿಣದ ಸರಳುಗಳೇ ಕಣ್ಣಿಗೆ ಕಾಣುತ್ತವೆ ವಿನಾ ಕಾಂಕ್ರೀಟ್ ಸಿಮೆಂಟ್ ಕಾಣುವುದಿಲ್ಲ. ಇಲ್ಲಿನ ಜನರೂ ಅದನ್ನೇ ಬೆಟ್ಟು ಮಾಡುತ್ತಾರೆ. ಕಳಪೆ ಕಾಮಗಾರಿಯ ಕುರಿತು ಯಾವುದೇ ಶಿಸ್ತುಕ್ರಮ ನಡೆದಿಲ್ಲ. ಪ್ರೌಢಶಾಲೆ ಆವರಣ ಗೋಡೆ ಪಕ್ಕ ರಸ್ತೆಗೆ ಚರಂಡಿಯೇ ಇಲ್ಲ.
Related Articles
ಎಎಸ್‌ಎಲ್ ರಸ್ತೆ ಬದಿಯ ಒಂದು ದೊಡ್ಡ ಗದ್ದೆಯಲ್ಲಿ ನೀರು ನಿಲ್ಲುತ್ತದೆ. ಇದರಿಂದಾಗಿ ಸೊಳ್ಳೆ ಕಾಟ ವಿಪರೀತ ಈ ಭಾಗದ ಮನೆಗಳ ಜನರಿಗೆ. ಆದರೆ ಗದ್ದೆಯ ನೀರು ಹರಿಯದಂತೆ ತೋಡು ಎತ್ತರವಾಗಿದೆ. ಗದ್ದೆ ನೀರು ತೋಡಿಗೆ ಹರಿಯಲು ಅವಕಾಶ ಮಾಡಿಕೊಡದ ಕಾರಣ ಮಳೆಗಾಲದಲ್ಲಿ ಇದೊಂದು ಶಾಶ್ವತ ಶಿಕ್ಷೆ. ಮಣ್ಣು ಹಾಕಿ ಗದ್ದೆ ಎತ್ತರಿಸುವ ಕಾರ್ಯವೂ ನಡೆದಿಲ್ಲ.
ಹಂಚೆಲ್ಲ ಹೊಳೆಗೆ
ಕಾರ್ಖಾನೆ ಬಳಿ ಹರಿಯುವ ಹೊಳೆಗೆ ಹಂಚು ಕಾರ್ಖಾನೆಯ ಹೆಂಚಿನ ಚೂರುಗಳ ತ್ಯಾಜ್ಯ ಎಸೆಯುವ ಕಾರಣ ಇಲ್ಲಿ ಮೀನು ಹಿಡಿಯಲು, ದೋಣಿ ಹೋಗಲು ಕಷ್ಟವಾಗುತ್ತದೆ ಎನ್ನುತ್ತಾರೆ ಮೀನುಗಾರರಾದ ಸಂದೇಶ್ ಅವರು. ಮೀನುಗಳು ವಾಸ ಮಾಡುವ ಗುಂಡಿಯಲ್ಲಿ ಹೆಂಚಿನ ತ್ಯಾಜ್ಯ ಇರುವ ಕಾರಣ ಮೀನುಗಳೇ ಇರುವುದಿಲ್ಲ ಎನ್ನುತ್ತಾರೆ ಅವರು. ಅದನ್ನು ತೆರವು ಮಾಡಬೇಕೆಂಬ ಒತ್ತಾಯ ಇದೆ.
Advertisement
ಅನುದಾನ ಕಡಿಮೆಕಳೆದ ಅವಧಿಯಲ್ಲಿ 50 ಲಕ್ಷ ರೂ.ಗಿಂತ ಹೆಚ್ಚಿನ ಕಾಮಗಾರಿ ನಗರೋತ್ಥಾನದಲ್ಲಿಯೇ ನಡೆದಿದೆ. ಇತರ ಪ್ರತ್ಯೇಕ. ಈ ಬಾರಿ ಒಟ್ಟು 25 ಲಕ್ಷ ದಷ್ಟು ಅನುದಾನ ದೊರೆತಿರಬಹುದು. ಹಾಗಾಗಿ ಜನರ ಒಂದಷ್ಟು ಬೇಡಿಕೆಗಳು ಬಾಕಿಯಾಗಿವೆ. ದೊಡ್ಡ ಮೊತ್ತದ ಅನುದಾನ ಬೇಕಾಗುವ ಕಾಮಗಾರಿಗಳಿಗೆ ಶಾಸಕರ ಗಮನಕ್ಕೆ ತರಲಾಗಿದೆ. ಆಗುವ ಭರವಸೆ ಇದೆ.
– ವಿಜಯ್ ಎಸ್. ಪೂಜಾರಿ,
ಸದಸ್ಯರು, ಪುರಸಭೆ ರಸ್ತೆ ಸರಿಯಾಗಲಿ
ರಸ್ತೆ ಸಮಸ್ಯೆ ನಿವಾರಿಸಬೇಕು. ಜನರೇ ರಸ್ತೆಯಲ್ಲಿ ಓಡಾಡುವಂತಿಲ್ಲ. ವಾಹನಗಳ ಕಥೆ ಬಿಡಿ. ಅದನ್ನೊಂದು ಅತೀ ಶೀಘ್ರ ದುರಸ್ತಿ ಮಾಡಿದರೆ ಸಾಕಿತ್ತು.
– ಶರತ್ ಪೂಜಾರಿ, ಸ್ಥಳೀಯರು ಕೆಲಸ ಆಗಿಲ್ಲ
ಪುರಸಭೆ ವತಿಯಿಂದ ಈ ಅವಧಿಯಲ್ಲಿ ಗುರುತರ ವಾದ ಪ್ರಮುಖ ಅಭಿವೃದ್ಧಿ ಕಾರ್ಯಗಳು ಕಾಣಿಸುತ್ತಿಲ್ಲ. ಕೇಳಿದರೆ ಅನುದಾನದ ಕೊರತೆ ಎಂದು ಉತ್ತರಿಸುತ್ತಾರೆ.
– ರಂಜಿತ್ ಪೂಜಾರಿ, ಸ್ಥಳೀಯರು ರಸ್ತೆ ಅಭಿವೃದ್ಧಿಯಾಗಲಿ
ಮಂಗಳೂರು ಟೈಲ್ಸ್ ಫ್ಯಾಕ್ಟರಿ ಪಕ್ಕದ ರಸ್ತೆಯನ್ನು ಸಂಗಮ್‌ನಿಂದ ರಿಂಗ್ ರೋಡ್‌ಗೆ ಸಂಪರ್ಕ ಮಾಡುವಂತೆ ಅಭಿವೃದ್ಧಿ ಮಾಡಬೇಕು. ಎಲ್ಲರಿಗೂ ಅನುಕೂಲ.
– ಶ್ರೀಕಾಂತ್,ಸ್ಥಳೀಯರು ಸೊಳ್ಳೆ ಕಾಟ
ಎಎಸ್‌ಎಲ್ ರಸ್ತೆ ಬದಿಯ ಗದ್ದೆಯಲ್ಲಿ ನೀರು ನಿಂತು ಸೊಳ್ಳೆ ಕಾಟ ಇರುತ್ತದೆ. ಈ ನೀರು ತೋಡಿಗೆ ಹರಿಯುವಂತೆ ವ್ಯವಸ್ಥೆಯಾಗಬೇಕು.
– ಸುರೇಶ್ ಮೊಗವೀರ, ಸ್ಥಳೀಯರು