Advertisement

ಇದು ದಿಲ್ಲಿಯ ಸಮಾಚಾರವಷ್ಟೇ ಅಲ್ಲ ; ನಮ್ಮೂರಿನದ್ದೂ ಸಹ

06:00 AM Dec 30, 2017 | Team Udayavani |

ನಮ್ಮ ನಗರಗಳು ಹೊಗೆ ಗೂಡುಗಳಾಗುತ್ತಿವೆ. ಏಕೆಂದರೆ ವಾಯು ಮಾಲಿನ್ಯ ನಿಯಂತ್ರಣಕ್ಕೆ ಕೈಗೊಳ್ಳುತ್ತಿರುವ ಕ್ರಮಗಳು ಮತ್ತು ಅದರ ಗಂಭೀರತೆ ಇಂಥದೊಂದು ಪ್ರಶ್ನೆಗೆ ಕಾರಣವಾಗಿವೆ. ರಿಯಲ್‌ ಟೈಮ್‌ ಕೇಂದ್ರಗಳಿದ್ದ ಮಾತ್ರಕ್ಕೆ ಸಮಸ್ಯೆ ಬಗೆಹರಿಯುತ್ತದೆಯೇ ? ಖಂಡಿತಾ ಇಲ್ಲ. ಹಲವು ಬಾರಿ ಈ ರಿಯಲ್‌ ಟೈಮ್‌ ಕೇಂದ್ರಗಳೂ ನಿತ್ಯವೂ ವಾಯು ಮಾಲಿನ್ಯದ ಪ್ರಮಾಣವನ್ನು ಪ್ರಕಟಿಸುವುದೇ ಇಲ್ಲ. ಇಂಥ ಅಭ್ಯಾಸವನ್ನು ರೂಢಿಸಿಕೊಂಡಿಲ್ಲ.

Advertisement

ನಮ್ಮ ಯೋಚನಾ ಕ್ರಮವೇ ಬದಲಾಗಬೇಕಾದ ಹೊತ್ತಿದು. ಇತಿಹಾಸದಿಂದ ಲಾಭವೇನಿದೆ ಎಂದು ಹಲವರು ಕೇಳುವುದಿದೆ. ಅದರಿಂದ ಬಹಳಷ್ಟು ಲಾಭವಿದೆ. ಅದರಲ್ಲೂ ಪ್ರತಿ ಊರುಗಳೂ ನಗರಗಳಾಗಿ ಮಾರ್ಪಡುತ್ತಿರುವ ಹೊತ್ತಿನಲ್ಲಿ ಇತಿಹಾಸದಿಂದ ಪಾಠವನ್ನು ಕಲಿಯದಿದ್ದರೆ ತೆರಬೇಕಾದ ಬೆಲೆ ದೊಡ್ಡದಾದೀತು. ಯಾಕೆಂದರೆ, ನಾವೀಗ ಹಲವು ನಗರಗಳಲ್ಲಿ ತೆರುತ್ತಿದ್ದೇವೆ. ಬಹಳ ದೊಡ್ಡ ಉದಾಹರಣೆಯೆಂದರೆ ನಮ್ಮ ಬೆಂಗಳೂರನ್ನೇ ನೋಡಿ. ಮುಂಬಯಿಯಲ್ಲಿ ಆದ ಅವಘಡಗಳಿಂದಲೂ ಪಾಠ ಕಲಿಯಲಿಲ್ಲ. ಕೋಲ್ಕತ್ತಾದಿಂದಲೂ ಕಲಿತದ್ದು ಅಷ್ಟೇ ಇದೆ. ನಾನು ದೂರದ ಪಶ್ಚಿಮದ ಊರುಗಳ ಬಗ್ಗೆ ಹೇಳುತ್ತಿಲ್ಲ.
 
ದಿನೇ ದಿನೆ ಹೆಚ್ಚುತ್ತಿರುವ ವಾಹನ ಸಂದಣಿ, ಅದು ಉಗುಳುತ್ತಿರುವ ಹೊಗೆ ಎಲ್ಲವೂ ನಗರದ ಜೀವನವನ್ನು ಅಸಹನೀಯಗೊಳಿಸುತ್ತಿವೆ. ದಿಲ್ಲಿ ಸದಾ ನೆನಪಾಗುವುದೇ ಈ ದೃಷ್ಟಿಯಲ್ಲಿ. ಇಂದಿಗೂ ದಿಲ್ಲಿ ಆರೋಗ್ಯದ ದೃಷ್ಟಿಯಲ್ಲಿ ಕ್ಷೇಮವಲ್ಲ ಎನ್ನುತ್ತಿರುವುದೂ ಇದೇ ಕಾರಣದಿಂದಲೇ. ನಿಜ ಸಂಗತಿ ಏನೆಂದರೆ ವಾಯು ಮಾಲಿನ್ಯವೆಂಬುದು ನಿಧಾನವಾಗಿ ನಗರಗಳನ್ನು ಮುಚ್ಚುತ್ತಿವೆ. ಆದರೆ ನಮ್ಮನ್ನಾಳುವ ಮಂದಿ ಮತ್ತು ಅವರನ್ನು ಆವರಿಸಿಕೊಂಡಿರುವ ಲಾಬಿ ಅದನ್ನು ಒಪ್ಪಿಕೊಳ್ಳುತ್ತಿಲ್ಲ. 

ಇತ್ತೀಚೆಗಷ್ಟೇ ದಿಲ್ಲಿಯ ಸೆಂಟರ್‌ ಫಾರ್‌ ಸೈನ್ಸ್‌ ಆ್ಯಂಡ್‌ ಎನ್‌ವಾಯಿರ್‌°ಮೆಂಟ್‌ ದೇಶದ ನಗರಗಳಲ್ಲಿ ಆರಂಭವಾಗಿರುವ ವಾಯು ಮಾಲಿನ್ಯದ ದುರಂತವನ್ನು ವಿವರಿಸಿತು. ಈ ಸಂಬಂಧ ಸುದೀರ್ಘ‌ವಾದ ಪತ್ರಿಕಾ ಹೇಳಿಕೆಯನ್ನೂ ಬಿಡುಗಡೆ ಮಾಡಿದೆ. ದಿಲ್ಲಿಯ ಸಮಸ್ಯೆ ಕುರಿತು ಸವಿವರವಾಗಿ ಅಧ್ಯಯನ ಮಾಡಿರುವ ಸಂಸ್ಥೆಯ ವಿವರಗಳನ್ನು ಓದಿದರೆ ಭಯವಾಗಬಹುದು. ಈ ವರದಿಯನ್ನು ಸುಪ್ರೀಂ ಕೋರ್ಟ್‌ಗೂ ಸಲ್ಲಿಸಿದೆ. 

ಇದು ದಿಲ್ಲಿಯ ಸಮಾಚಾರವಷ್ಟೇ ಅಲ್ಲ
ನಿಜ, ಇದು ದಿಲ್ಲಿಯ ಸಮಾಚಾರವಷ್ಟೇ ಅಲ್ಲ. ನಮ್ಮೂರಿನದ್ದೂ ಸಹ. ಏಕೆಂದರೆ ಈಗಾಗಲೇ ದಿಲ್ಲಿಯ ಕಷ್ಟವನ್ನು ನೋಡಿದ್ದೇವೆ, ಓದಿದ್ದೇವೆ ಮತ್ತು ಕೆಲವರು ಅನುಭವಿಸಿರಲೂಬಹುದು. ದೇಶದ ಉಳಿದ ಕೆಲವು ನಗರಗಳ ಕಥೆ ಕೇಳ್ಳೋಣ. ಲಭ್ಯ ಅಂಕಿ ಅಂಶಗಳ ಪ್ರಕಾರ, ದೇಶದ ಶೇ. 60ರಷ್ಟು ನಗರಗಳಲ್ಲಿ ವಾಯು ಮಾಲಿನ್ಯದ ಪರಿಣಾಮ (ಪಿಎಂ 10) ಹೆಚ್ಚಿತ್ತು. ಈ ವ್ಯಾಪ್ತಿ 2016 ರಲ್ಲಿ ಶೇ. 88 ರಷ್ಟು ನಗರಗಳಿಗೆ ವಿಸ್ತರಿಸಿದೆ. ಅಂದರೆ ಶೇ.28 ರಷ್ಟು ನಗರಗಳು ಒಂಬತ್ತೇ ವರ್ಷಗಳಲ್ಲಿ ಹೊಗೆಗೂಡುಗಳಾಗತೊಡಗಿವೆ ಎಂದು ಅರ್ಥ. ಇದರಲ್ಲೂ ಒಂದು ನಂಬಲಾಗದ ಸಂಗತಿಯಿದೆ. ಈ ಅಂಶವೂ ವಾಯು ಮಾಲಿನ್ಯ ಪರೀಕ್ಷಣಾ ವ್ಯವಸ್ಥೆ ಇರುವ ನಗರಗಳ ಕಥೆ. ಹಾಗಾದರೆ ನಮ್ಮ ಎಲ್ಲ ನಗರಗಳಲ್ಲಿ ಈ ವ್ಯವಸ್ಥೆ ಇದೆಯೇ ಎಂದು ಪ್ರಶ್ನೆ ಕೇಳಿದರೆ ಸಿಗುವ ಉತ್ತರ ಇನ್ನೂ ಆಘಾತ ಹುಟ್ಟಿಸುವಂಥದ್ದು.

ಯಾಕೆಂದರೆ ಜನಗಣತಿಯ ಲೆಕ್ಕಾಚಾರದಲ್ಲಿ ನಗರಗಳೆಂದು ವಿಂಗಡಿಸಲಾಗಿರುವ ಸುಮಾರು 6,166 ನಗರಗಳಲ್ಲಿ ಕೇವಲ 303 ನಗರಗಳಲ್ಲಿ ಈ ವ್ಯವಸ್ಥೆ ಇದೆ. ಅದರಲ್ಲೂ ಈ ಕ್ಷಣದ ವಾಯು ಮಾಲಿನ್ಯ ಪ್ರಮಾಣವನ್ನು ಪತ್ತೆ ಹಚ್ಚುವ (ರಿಯಲ್‌ ಟೈಮ್‌ ಏರ್‌ ಪೊಲ್ಯೂಷನ್‌ ಮಾನಿಟರಿಂಗ್‌ ಸ್ಟೇಷನ್‌) ಕೇಂದ್ರಗಳಿರುವುದು ಕೇವಲ 57 ನಗರಗಳಲ್ಲಿ. ಈ ಪೈಕಿಯೂ ದಿಲ್ಲಿಯಲ್ಲಿ ಅತಿ ಹೆಚ್ಚು 30 ಕೇಂದ್ರಗಳಿವೆ. ಬೆಂಗಳೂರಿನಲ್ಲಿ 5 ಕೇಂದ್ರಗಳಿವೆ. 19 ನಗರಗಳಲ್ಲಿ ಒಂದೇ ಒಂದು ರಿಯಲ್‌ ಟೈಮ್‌ ಕೇಂದ್ರಗಳಿದ್ದರೆ, 17 ನಗರಗಳಲ್ಲಿ ಒಂದೂ ರಿಯಲ್‌ ಟೈಮ್‌ ಕೇಂದ್ರಗಳಿಲ್ಲ. ಉಳಿದೆಲ್ಲವೂ ಮನುಷ್ಯ ಆಧಾರಿತ ಪರೀಕ್ಷಾ ಕೇಂದ್ರಗಳು(ಮ್ಯಾನ್ಯುಯಲ್‌). ಎಲ್ಲಿ ಮನುಷ್ಯನ ಹಸ್ತಕ್ಷೇಪ ಇರುತ್ತದೋ ಅಲ್ಲಿ ಲಭ್ಯವಾಗುವ ಅಂಕಿ ಅಂಶಗಳನ್ನು ತತ್‌ಕ್ಷಣ ನಂಬುವ ಸ್ಥಿತಿಯಲ್ಲಿರದು. ಕಾರಣ, ಆ ವ್ಯವಸ್ಥೆ ನಡೆಯುವ ಕ್ರಮವೇ ಅಂಥದೊಂದು ಅನುಮಾನವನ್ನು ಮೂಡಿಸುತ್ತದೆ. 

Advertisement

ಮ್ಯಾನ್ಯುಯಲ್‌ ಕೇಂದ್ರಗಳಲ್ಲಿ ಮಾಲಿನ್ಯ ಪತ್ತೆ ಹಚ್ಚುವ ಯಂತ್ರಕ್ಕೆ ಒಂದು ಕಾಗದವನ್ನು ಇಡಲಾಗುತ್ತದೆ. ನಿತ್ಯವೂ ಅದನ್ನು ತೆಗೆದು ಹೊಸ ಕಾಗದವಿಟ್ಟು, ಹಳೆಯ ಕಾಗದವನ್ನು ಪ್ರಯೋಗಾಲಯಕ್ಕೆ ಕಳುಹಿಸಬೇಕು. ಬಳಿಕ ಅದನ್ನು ಪರಿಶೀಲಿಸಿ ಮಾಲಿನ್ಯ ಪ್ರಮಾಣವನ್ನು ದಾಖಲಿಸಬೇಕು. ಇದು ಸಂಬಂಧಪಟ್ಟ ಕಾರ್ಮಿಕ ಅಥವಾ ಅಧಿಕಾರಿಯ ಕಾರ್ಯ ನಿಷ್ಠತೆ, ಪ್ರಾಮಾಣಿಕತೆ ಮತ್ತು ಶಿಸ್ತನ್ನು ಅವಲಂಬಿಸಿರುವಂಥದ್ದು. ಎಷ್ಟೋ ಬಾರಿ ನಿತ್ಯವೂ ದಾಖಲು ಪುಸ್ತಕಗಳಲ್ಲಿ ಹಿಂದಿನ ದಿನದ ಅಂಕಿ ಅಂಶವನ್ನೇ ಒಂದು ಅಂಕಿ ಕಡಿಮೆ ಮಾಡಿಯೋ, ಜಾಸ್ತಿ ಮಾಡಿಯೋ ಬರೆಯುವ ಅಭ್ಯಾಸವೂ ಇರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. 

ಹಾಗೆಂದು ರಿಯಲ್‌ ಟೈಮ್‌ ಕೇಂದ್ರಗಳಿದ್ದ ಮಾತ್ರಕ್ಕೆ ಸಮಸ್ಯೆ ಬಗೆಹರಿಯುತ್ತದೆಯೇ ? ಖಂಡಿತಾ ಇಲ್ಲ. ಹಲವು ಬಾರಿ ಈ ರಿಯಲ್‌ ಟೈಮ್‌ ಕೇಂದ್ರಗಳೂ ನಿತ್ಯವೂ ವಾಯು ಮಾಲಿನ್ಯದ ಪ್ರಮಾಣವನ್ನು ಪ್ರಕಟಿಸುವುದೇ ಇಲ್ಲ. ಇಂಥ ಅಭ್ಯಾಸವನ್ನು ರೂಢಿಸಿಕೊಂಡಿಲ್ಲ. ವಾರಕ್ಕೊಮ್ಮೆಯೋ ಅಥವಾ ಹದಿನೈದು ದಿನಗಳಿಗೊಮ್ಮೆಯೋ, ಕೆಲವೊಮ್ಮೆ ವಾಯು ಮಾಲಿನ್ಯ ತೀರಾ ಹೆಚ್ಚಿದೆ ಎನಿಸಿದಾಗ, ಮಾಧ್ಯಮಗಳು ಈ ಬಗ್ಗೆ ಪ್ರಶ್ನಿಸಿದಾಗ ವಿವರವನ್ನು ಪ್ರಕಟಿಸುವ ಕೇಂದ್ರಗಳೂ ಇವೆ. ಈ ಬಗ್ಗೆಯೂ ಅಧ್ಯಯನ ನಡೆದಿದೆ. ಕಳೆದ ನವೆಂಬರ್‌ ತಿಂಗಳೊಂದರ ಅಧ್ಯಯನದ ಪ್ರಕಾರ ಚೆನ್ನೈ, ಹೈದರಾಬಾದ್‌, ಪುಣೆ, ಅಹಮದಾಬಾದ್‌, ಮುಂಬಯಿ, ದಿಲ್ಲಿ ಸೇರಿದಂತೆ ಹಲವು ನಗರಗಳು ಮೇಲಿನ ಮಾತನ್ನು ಸಾಬೀತುಪಡಿಸಿವೆ. ಕೆಲವು ಕೇಂದ್ರಗಳು ತಿಂಗಳಲ್ಲಿ ಹತ್ತು ದಿನ ಪ್ರಕಟಿಸಿಲ್ಲವಾದರೆ, ಇನ್ನು ಕೆಲವು ನಾಲ್ಕು ದಿನಗಳು ಪ್ರಕಟಿಸಿಲ್ಲ. ಮತ್ತೂ ಕೆಲವು ಸಮಯ ಸಿಕ್ಕಿದಾಗ ಪ್ರಕಟಿಸಿವೆ. 

ದಿಲ್ಲಿಯಲ್ಲಿ ಆದದ್ದು ಗೊತ್ತಲ್ಲ
ಅಂದ ಹಾಗೆ ಎರಡು ವರ್ಷಗಳಿಂದ ದಿಲ್ಲಿಯು ಹೊಗೆಗೂಡಾಗಿ ವಿಶ್ವ ಕುಪ್ರಸಿದ್ಧವಾಗಿದ್ದು ಗೊತ್ತಿದೆಯಲ್ಲ. ಈ ಆರೋಪ ಬಹಳ ವರ್ಷಗಳಿಂದ ಇತ್ತು. ಆದರೂ ಸಾಬೀತಾಗಿದ್ದು ಕೆಲವು ವರ್ಷಗಳಿಂದ. ಅದರಲ್ಲೂ ಇತ್ತೀಚಿನ ಎರಡು ವರ್ಷಗಳಲ್ಲಿ ಸಮಸ್ಯೆಯ ವಿಶ್ವರೂಪ ಗೋಚರಿಸಿತು. 2016 ರಲ್ಲಿ ನವೆಂಬರ್‌-ಡಿಸೆಂಬರ್‌ ತಿಂಗಳಲ್ಲಿ ಕೆಲವು ದಿನಗಳ ಕಾಲ ಜನರು ಹೊರಗೆ ಬರಲಿಲ್ಲ. ಶಾಲೆಗಳು ಮುಚ್ಚಿದವು. ವಿಮಾನಗಳು ಕೆಳಗಿಳಿಯಲಿಲ್ಲ. ಸರಕಾರಿ ಕಚೇರಿಗಳ ವೇಳೆ ಬದಲಾಯಿತು. ಇದೇ ಹಿನ್ನೆಲೆಯಲ್ಲಿ ಸಮ-ಬೆಸ ಸಂಖ್ಯೆಗಳ ವಾಹನಗಳು ರಸ್ತೆಗಿಳಿಯುವ ಪದ್ಧತಿ ಬಂದಿತು. ಜನರು ಸರಕಾರಗಳನ್ನು ತರಾಟೆಗೆ ತೆಗೆದುಕೊಂಡರು. ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರ ಎರಡೂ ಇದ್ದರೂ ನಮ್ಮ ಪರಿಸ್ಥಿತಿ ಹೀಗಾಯಿತಲ್ಲ ಎಂದು ಹಲುಬಿದರು. ಇವೆರಡೂ ಸರಕಾರಗಳ ಮಧ್ಯೆ ಪರಸ್ಪರ ಕೆಸರೆರಚಾಟವೂ ನಡೆಯಿತು. ಸುಪ್ರೀಂ ಕೋರ್ಟ್‌ ಮಧ್ಯ ಪ್ರವೇಶಿಸಿ ಸರಕಾರಗಳ ನಿಷ್ಕ್ರಿಯತೆ ಕುರಿತು ಕಿಡಿ ಕಾರಿತು. ಸಿಎಸ್‌ಇ ಸೇರಿದಂತೆ ಹಲವು ಪರಿಣಿತರ ಮನವಿ ಹಿನ್ನೆಲೆಯಲ್ಲಿ ಎರಡೂ ಸರಕಾರಗಳ ಕಿವಿಯನ್ನು ಹಲವು ಬಾರಿ ಹಿಂಡಿತು. ಅದರ ಕೋಪ ಹೇಗಿತ್ತೆಂದರೆ, ನಮ್ಮ ನಗರಗಳನ್ನು ಮುಚ್ಚುತ್ತೀರಾ ಎಂಬ ಧಾಟಿಯಲ್ಲಿ ಪ್ರಶ್ನಿಸಿತ್ತು. ಕೂಡಲೇ ಕಠಿನ ಕ್ರಮಗಳನ್ನು ಕೈಗೊಳ್ಳಲು ಆದೇಶಿಸಿತು. ಅವುಗಳ ಮೇಲೆ ನಿಗಾ ಇಡಲು ಇಪಿಸಿಎ ಎಂಬ ಸಮಿತಿಯನ್ನೂ ರಚಿಸಲು ಸೂಚಿಸಿತು. ಇದೆಲ್ಲದರ ಹಿನ್ನೆಲೆಯಲ್ಲಿ ಈ ವರ್ಷ ಶಾಲೆಗೆ ರಜೆ ಕೊಡುವುದು ತಪ್ಪಲಿಲ್ಲ. ಆದರೆ ಒಟ್ಟೂ ಪರಿಸ್ಥಿತಿಯಲ್ಲಿ ಒಂದು ಗುಲಗಂಜಿಯಷ್ಟು ಸುಧಾರಿಸಿರುವುದು ನಿಜ. ಅಂದರೆ ಆಶಾವಾದ ಮೊಳಕೆಯೊಡೆದಿದೆ. ಹಾಗೆಂದು ಇದು ಬೆಳೆದು ಹೆಮ್ಮರವಾಗುತ್ತದೆಂಬ ನಂಬಿಕೆ ಖಂಡಿತಾ ಯಾರಿಗೂ ಇಲ್ಲ. ಇದನ್ನು ಸಿಎಸ್‌ಇ ಸಂಸ್ಥೆಯ ಸುನೀತಾ ನಾರಾಯಣ್‌ ಚೆನ್ನಾಗಿ ಹೇಳುತ್ತಾರೆ, “ಹತ್ತು ಹಲವು ಕ್ರಮಗಳಿಂದ ಸಾಧಿಸಿರುವುದು ಬಹಳ ಕಡಿಮೆ. ನಾವು ಅತಿ ಗಂಭೀರ ಸ್ಥಿತಿಯಲ್ಲಿದ್ದೆವು. ಈಗ ಗಂಭೀರಕ್ಕೆ ಬಂದಿದ್ದೇವೆ. ಅದರರ್ಥ ಸಮಾಧಾನ ಸ್ಥಿತಿಗಲ್ಲ’. 

ಅಂದರೆ ನಿಜದ ಸ್ಥಿತಿ ಹೇಗಿರಬಹುದು ಎಂದು ಅಂದಾಜಿಸಿಕೊಳ್ಳೋಣ. ನಮ್ಮ ಬೆಂಗಳೂರು ಅದೇ ದಿಕ್ಕಿನಲ್ಲಿ ಸಾಗುತ್ತಿದೆ ಎಂದರೆ ಖಂಡಿತಾ ನಂಬಲೇಬೇಕು. 

Advertisement

Udayavani is now on Telegram. Click here to join our channel and stay updated with the latest news.

Next