Advertisement

Wayanad Landslide; ಕರುನಾಡಿಗೂ ಇದು ಎಚ್ಚರಿಕೆ ಘಂಟೆ: ಸಚಿವ ಈಶ್ವರ ಖಂಡ್ರೆ

11:47 PM Jul 30, 2024 | Team Udayavani |

ಬೆಂಗಳೂರು: ಕೇರಳದ ವಯನಾಡು ಭಾಗದಲ್ಲಿ ಗುಡ್ಡ ಕುಸಿತ ಉಂಟಾಗಿ 94ಕ್ಕೂ ಅಧಿಕ ಜನರು ಮೃತಪಟ್ಟಿರುವ ದುರ್ಘ‌ಟನೆಗೆ ಆಘಾತ ವ್ಯಕ್ತಪಡಿಸಿರುವ ಅರಣ್ಯ ಸಚಿವ ಈಶ್ವರ ಖಂಡ್ರೆ, ಇದು ಕರುನಾಡಿಗೂ ಎಚ್ಚರಿಕೆಯ ಘಂಟೆ ಎಂದು ತಿಳಿಸಿದ್ದಾರೆ.

Advertisement

ಪ್ರಕೃತಿದತ್ತವಾದ ಗುಡ್ಡಗಳ ತಲೆ ಕಡಿದು ತೋಟ, ಮನೆ, ರೆಸಾರ್ಟ್‌ ನಿರ್ಮಿಸುತ್ತಿರುವುದರಿಂದ ಇಂತಹ ದುರ್ಘ‌ಟನೆಗಳು ಹೆಚ್ಚಾಗುತ್ತಿವೆ. ತಮ್ಮ ಬೇರಿನಿಂದ ಗಟ್ಟಿಯಾಗಿ ಮಣ್ಣು ಹಿಡಿದಿಡುವ ಮರಗಳ ಅಕ್ರಮ ಕಡಿತ ಹಾಗೂ ಹುಲ್ಲುಗಾವಲಿನ (ಶೋಲಾ ಅರಣ್ಯ) ನಾಶವೂ ದುರಂತಕ್ಕೆ ಕಾರಣವಾಗುತ್ತಿದೆ. ಗಿರಿ ಮತ್ತು ಘಟ್ಟ ಪ್ರದೇಶದಲ್ಲಿ ವಿಪರೀತ ವಾಹನಗಳ ಸಂಚಾರದಿಂದಲೂ ಅಪಾಯ ಎದುರಾಗುತ್ತಿದೆ. ವಾರಾಂತ್ಯದಲ್ಲಿ ಪ್ರವಾಸ, ಚಾರಣದ ಹೆಸರಲ್ಲಿ ಗಿರಿ ಮತ್ತು ಕಾನನ ಪ್ರದೇಶಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜನರು ಬರುವುದಕ್ಕೆ ಕಡಿವಾಣ ಹಾಕುವ ಅಗತ್ಯವನ್ನು ಇದು ಮತ್ತೂಮ್ಮೆ ಒತ್ತಿ ಹೇಳಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಮುಂಜಾಗ್ರತಾ ಕ್ರಮಕ್ಕೆ ಸೂಚನೆ
ಉತ್ತರ ಕನ್ನಡದ ಶಿರೂರು ಮತ್ತು ಕೇರಳದ ವಯನಾಡಿನಲ್ಲಿ ಸಂಭವಿಸಿರುವ ಭೀಕರ ದುರ್ಘ‌ಟನೆಯ ಹಿನ್ನೆಲೆಯಲ್ಲಿ ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಕೊಡಗು, ಹಾಸನ ಸೇರಿದಂತೆ ರಾಜ್ಯದ ಹಲವು ಗಿರಿ ಪ್ರದೇಶಗಳಲ್ಲಿ ಅನಧಿಕೃತವಾಗಿ ತಲೆ ಎತ್ತುತ್ತಿರುವ ವಸತಿ ಪ್ರದೇಶ, ಹೋಂಸ್ಟೇ ಮತ್ತು ರೆಸಾರ್ಟ್‌ ಗಳಿಗೆ ಕಡಿವಾಣ ಹಾಕುವ ಅಗತ್ಯವಿದೆ. ಈ ಬಗ್ಗೆ ಅರಣ್ಯ ಅಧಿಕಾರಿಗಳು ಮತ್ತು ಸಿಬಂದಿ ಕಟ್ಟುನಿಟ್ಟಿನ ಹಾಗೂ ಮುಂಜಾಗರೂಕತಾ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿರುವುದಾಗಿ ಈಶ್ವರ ಖಂಡ್ರೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next