Advertisement

ಐಷಾರಾಮಿ ಜೀವನ ಶೈಲಿಗೆ ವಿದ್ಯಾರ್ಥಿಗಳು ಹಣ ಹೊಂದಿಸಲು ಹೊಕ್ಕುವುದು ಈ ವಿಷ ವರ್ತುಲಕ್ಕೆ

01:11 AM Mar 04, 2023 | Team Udayavani |

ಡ್ರಗ್ಸ್‌ ಪೆಡ್ಲರ್‌ಗಳು ಬೆಳೆಯುತ್ತಿರುವುದು ಹೆಚ್ಚಾಗಿ ವಿದ್ಯಾರ್ಥಿಗಳ ಭವಿಷ್ಯವನ್ನು ಮಸುಕು ಮಾಡಿ. ಹೊರರಾಜ್ಯದ ಅಥವಾ ಮನೆಯಿಂದ ಹೊರಗಿರುವ ವಿದ್ಯಾರ್ಥಿಗಳನ್ನೇ ಹೆಚ್ಚಾಗಿ ಗುರಿಯಾಗಿಸಿಕೊಂಡು, ಐಷಾರಾಮಿ ಜೀವನ ಶೈಲಿಯ ಆಮಿಷವೊಡ್ಡಿ ತಮ್ಮ ಗ್ರಾಹಕರು ಹಾಗೂ ಪೂರೈಕೆದಾರ ಸರಪಳಿಯ ಸದಸ್ಯರ ನ್ನಾಗಿಸಿಕೊಳ್ಳುತ್ತಿದ್ದಾರೆ ಈ ದಂಧೆ ಕೋರರು. ಪೊಲೀಸರು, ಶಿಕ್ಷಣ ಸಂಸ್ಥೆಗಳೊಂದಿಗೆ ಹೆತ್ತವರೂ ಇದರತ್ತ ಗಮನಹರಿಸಬೇಕಿದೆ.

Advertisement

ಮಂಗಳೂರು: ಈ ಡ್ರಗ್ಸ್‌ ಪೆಡ್ಲರ್‌ಗಳ ಜಾಲ ವಿಸ್ತರಣೆಗೆ ವಿದ್ಯಾರ್ಥಿಗಳ ಹಣ ಗಳಿಕೆಯ ಆಸೆ ಹಾಗೂ ಮೋಜು ಮಸ್ತಿಯ ಆಸೆಯೂ ಕಾರಣವಾಗುತ್ತಿದೆಯೇ?

ಡ್ರಗ್ಸ್‌ ಪೆಡ್ಲರ್‌ ಜತೆಗೆ ಕೈ ಜೋಡಿಸಿದರೆ ಸುಲಭವಾಗಿ ಹಣ ಗಳಿಸಬಹುದು. ಅದರಲ್ಲಿ ಪಬ್‌, ಪಾರ್ಟಿ ಹಾಗೂ ಐಷಾ ರಾಮಿ ಜೀವನ ಶೈಲಿಯನ್ನು ನಡೆಸಬಹುದೆಂಬ ವಿದ್ಯಾರ್ಥಿಗಳ ಆಸೆಯೂ ಕಾರಣವಾಗಿದೆ. ಆದರೆ ಆ ಮೂಲಕ ವಿಷ ವರ್ತುಲದೊಳಗೆ ಸಿಲುಕಿ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿ ದ್ದಾರೆ. ಹಲವು ಪ್ರಕರಣಗಳಲ್ಲಿ ಸಿಕ್ಕಿ ಬಿದ್ದಿರುವ ವೈದ್ಯ ವಿದ್ಯಾರ್ಥಿಗಳನ್ನು ಗಮನಿಸಿದರೆ ಹೌದು ಎನಿಸುತ್ತದೆ. ಮಾದಕ ದ್ರವ್ಯ ಸೇವನೆ/ಮಾರಾಟ ಪ್ರಕರಣಗಳಲ್ಲಿ ಬಂಧಿತರಾದವರ ಪೈಕಿ ವಿದ್ಯಾರ್ಥಿ ಗಳ ಸಂಖ್ಯೆಯೇ ಹೆಚ್ಚು ಎಂಬುದು ಆತಂಕದ ಸಂಗತಿ.

ಪ್ರಸ್ತುತ ಮಂಗಳೂರು, ಮಣಿಪಾಲ ಸೇರಿ ದಂತೆ ಉಭಯ ಜಿಲ್ಲೆಗಳ ಪ್ರಮುಖ ನಗರಗಳಲ್ಲಿ ವಿದ್ಯಾರ್ಥಿಗಳಿಗೆ ಎಲ್ಲೆಂದರಲ್ಲಿ, ಯಾವಾಗ ಎಂದರೆ ಆವಾಗ ಹಾಗೂ ಯಾವುದು ಬೇಕೋ ಆ ಮಾದಕ ವಸ್ತುಗಳನ್ನು ಅತ್ಯಂತ ಸುಲಭ ವಾಗಿ, ಕ್ಷಿಪ್ರವಾಗಿ ಪೂರೈಸುವಷ್ಟು ಈ ಮಾದಕ ವಸ್ತುಗಳ ಮಾರಾಟ ಜಾಲ ಬೆಳೆದಿದೆ. ಆನ್‌ಲೈನ್‌ ಹಾದಿಯಲ್ಲಿಯೂ ಮಂಗಳೂರು ಮತ್ತು ಸುತ್ತಲಿನ ಪ್ರದೇಶಗಳಿಗೆ ಡ್ರಗ್ಸ್‌ ಪೂರೈಕೆಯಾಗು ತ್ತಿರುವುದನ್ನೂ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಕಾಲೇಜುಗಳಲ್ಲಿ ಆ್ಯಂಟಿ ಡ್ರಗ್ಸ್‌ ಸಮಿತಿ ರಚನೆ, ಪೊಲೀಸರ ಕಾರ್ಯಾ ಚರಣೆ ಮಧ್ಯೆಯೂ ಡ್ರಗ್ಸ್‌ ಮಾರಾಟ ಪ್ರಕರಣಗಳು ಹೆಚ್ಚುತ್ತಿರುವುದು ಕಂಡರೆೆ ಡ್ರಗ್ಸ್‌ ಪೆಡ್ಲರ್‌ಗಳ ಜತೆ ವಿದ್ಯಾರ್ಥಿಗಳಲ್ಲದೇ ಕಾಣದ ಹತ್ತಾರು ಎಳೆಗಳು ಇವೆ ಎನ್ನುವುದರಲ್ಲಿ ಸಂಶಯವಿಲ್ಲ. ಈ ಚಟುವಟಿಕೆ ನಗರವನ್ನು ತುಸು ಹೆಚ್ಚಾಗಿ ಕೇಂದ್ರೀಕರಿಸಿ ದ್ದರೂ ಗ್ರಾಮೀಣ ಭಾಗದವರೂ ಇದರಲ್ಲಿ ಭಾಗಿಯಾಗುತ್ತಿರುವುದು ಮತ್ತಷ್ಟು ಆತಂಕ ಸೃಷ್ಟಿಸಿದೆ. ಹತ್ತಾರು ಮಾದರಿಯ ಮಾದಕ ವಸ್ತುಗಳು ಹೊರ ರಾಜ್ಯಗಳಿಂದ ಹೇರಳ ಪ್ರಮಾಣದಲ್ಲಿ ಪೂರೈಕೆಯಾಗುತ್ತಿದ್ದು, ಉಭಯ ಜಿಲ್ಲೆಗಳಲ್ಲಿ ಮೂಲ ಬೆಲೆಯ ಮೂರ್‍ನಾಲ್ಕು ಪಟ್ಟು ಹೆಚ್ಚು ಬೆಲೆಗೆ ಮಾರಾಟವಾಗುತ್ತಿದೆ.

Advertisement

ಟೂರಿಸ್ಟ್‌ ವೀಸಾ,
ವಿದ್ಯಾಭ್ಯಾಸ ನೆಪ
ಮಂಗಳೂರಿನಲ್ಲಿ 2021ರಲ್ಲಿ ಡ್ರಗ್ಸ್‌ ಮಾರಾಟ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಹೊಟೇಲ್‌ ಒಂದರಲ್ಲಿ ಒಮಾನ್‌ ರಾಷ್ಟ್ರದ ಮುಹಮ್ಮದ್‌ ಮುಸಾಬಾ ಎಂಬಾತನನ್ನು ಬಂಧಿಸಿದ್ದರು. ಆತ ಟೂರಿಸ್ಟ್‌ ವೀಸಾದಲ್ಲಿ ಗೋವಾಕ್ಕೆ ಬಂದು ಅಲ್ಲಿಂದ ಮಂಗಳೂರಿಗೆ ಆಗಮಿಸಿ ಮಾದಕ ವಸ್ತುಗಳನ್ನು ಮಾರುತ್ತಿದ್ದ. ಈ ವರ್ಷದ ಜನವರಿಯಲ್ಲಿ ವೈದ್ಯ ವಿದ್ಯಾರ್ಥಿಗಳು ಮತ್ತು ವೈದ್ಯರ ಡ್ರಗ್ಸ್‌ ಪ್ರಕರಣದ ಪ್ರಮುಖ ಆರೋಪಿ ಬಿಡಿಎಸ್‌ ವಿದ್ಯಾರ್ಥಿ ನೀಲ್‌ ಕಿಶೋರಿಲಾಲ್‌ ಬ್ರಿಟನ್‌ನ ಪ್ರಜೆಯಾಗಿದ್ದು, 15 ವರ್ಷಗಳಿಂದ ಮಂಗಳೂರಿನಲ್ಲಿ ನೆಲೆಸಿದ್ದ.
ಈತ ತನ್ನ ಬಿಡಿಎಸ್‌ ಕೋರ್ಸ್‌ ಪೂರ್ಣಗೊಳಿಸಿರಲಿಲ್ಲ ಎಂಬುದು ತನಿಖೆ ವೇಳೆ ಬಹಿರಂಗಗೊಂಡಿತ್ತು. ಕಳೆದ ವರ್ಷ ಮಂಗಳೂರು ವಿ.ವಿ. ಗೇಟ್‌ ಬಳಿಯಲ್ಲೇ ಸಿಂಥೆಟಿಕ್‌ ಡ್ರಗ್ಸ್‌ ಮಾರಾಟ ಪ್ರಕರಣ ಭೇದಿಸಲಾಗಿತ್ತು.

ಕೇರಳ ಸಂಪರ್ಕ
ಕೇರಳದಿಂದ ಮಾದಕ ವಸ್ತು ಗಳು ಹೆಚ್ಚಿನ ಪ್ರಮಾಣದಲ್ಲಿ ಪೂರೈಕೆಯಾಗುತ್ತಿದೆ. ಇದರ ಜತೆ ಆಂಧ್ರಪ್ರದೇಶ, ಒಡಿಶಾ, ಮುಂಬಯಿ ಯಿಂದಲೂ ಮಾದಕ ವಸ್ತುಗಳು ಬೆಂಗಳೂರು ಮಾರ್ಗವಾಗಿ ಮಂಗಳೂರನ್ನು ತಲುಪುತ್ತಿವೆ.
ಅಲ್ಲಿಂದ ಮಣಿಪಾಲ ಮತ್ತಿತರ ಕಡೆ ರವಾನೆ ಯಾಗುತ್ತವೆ. ಗಡಿಯಲ್ಲಿ ನಡೆಸುವ ಸಾಮಾನ್ಯ ತಪಾಸಣೆಯಲ್ಲಿ ಇದನ್ನು ಪತ್ತೆ ಹಚ್ಚದಿರುವುದು ಡ್ರಗ್ಸ್‌ ಪೆಡ್ಲರ್‌ಗಳಿಗೆ ಅನುಕೂಲವಾಗಿದೆ.

ಹೆತ್ತವರಿಗೆ ತಿಳಿಯದು
ಡ್ರಗ್ಸ್‌ ಸೇವನೆ ಮತ್ತು ಅದನ್ನು ಮಾರುವುದು ಹಲವು ಸಂದರ್ಭಗಳಲ್ಲಿ ಹೆತ್ತವರ ಗಮನಕ್ಕೆ ಬರುವುದೇ ಇಲ್ಲ. ಮನೆಯಿಂದ ಹೊರಗುಳಿದು ಪಿಜಿ, ಹಾಸ್ಟೆಲ್‌, ಬಾಡಿಗೆ ಮನೆಯಲ್ಲಿರುವ ವಿದ್ಯಾರ್ಥಿಗಳು, ಉದ್ಯೋಗಕ್ಕೆಂದು ಬಂದಿರುವವರು ಈ ಜಾಲದಲ್ಲಿ ಸಿಲುಕುತ್ತಾರೆ. ಇಷ್ಟು ಮಾತ್ರವಲ್ಲ. ಇನ್ನೂ ದುರಂತವೆಂದರೆ ಮಾದಕ ವ್ಯಸನಿ ಕುಟುಂಬದೊಂದಿಗೆ ಇದ್ದರೂ ಎಲ್ಲರ ಗಮನಕ್ಕೆ ಬಾರದಂತೆ ಎಚ್ಚರ ವಹಿಸುತ್ತಾರೆ. ಇನ್ನು ಕೆಲವು ಸಂದರ್ಭಗಳಲ್ಲಿ ಹೆತ್ತವರು ಮನೆಯ ಮರ್ಯಾದೆ, ಪ್ರತಿಷ್ಠೆಗೆ ಅಂಜಿ ತಮ್ಮ ಮಕ್ಕಳ ಚಿಕಿತ್ಸೆಗೆ ಮುಂದಾಗುವುದಿಲ್ಲ. ಇದು ಅತ್ಯಂತ ಅಪಾಯಕಾರಿ ಎನ್ನುತ್ತಾರೆ ಸಮಾಲೋಚಕರು.

ಶೇ. 40ರಷ್ಟು ಯುವತಿಯರು
ಮಾದಕ ವ್ಯಸನಿಗಳಲ್ಲಿ ಶೇ. 40ರಷ್ಟು ಯುವತಿಯರು. 18 ವರ್ಷಕ್ಕಿಂತ ಕಡಿಮೆ ಪ್ರಾಯದವರೂ ಮಾದಕ ವ್ಯಸನಿಗಳಾಗುತ್ತಿದ್ದಾರೆ. ಪಾರ್ಟಿ ಡ್ರಗ್ಸ್‌ ಬಳಕೆಗಂತೂ ಕಡಿವಾಣವೇ ಇಲ್ಲ. ಪಾರ್ಟಿಗಳಿಗೆ ಹೋಗುವುದೇ ಡ್ರಗ್ಸ್‌ ಸೇವನೆಗೆ ಎಂಬಂತಾಗಿದೆ. ವಿದ್ಯಾರ್ಥಿ ಜೀವನದಲ್ಲೇ ಐಷಾರಾಮಿ ಜೀವನ ಶೈಲಿಯ ಆಕರ್ಷಣೆ, ಅದಕ್ಕಾಗಿ ಹಣ ಗಳಿಸುವ ಅನಿವಾರ್ಯಗಳು ಡ್ರಗ್ಸ್‌ ಜಾಲಕ್ಕೆ ಬೀಳಿಸುತ್ತಿವೆ ಎನ್ನುತ್ತಾರೆ ಮಂಗಳೂರಿನ ಡ್ರಗ್‌ ಡಿಎಡಿಕ್ಷನ್‌ ಸೆಂಟರ್‌ನ ಆಪ್ತಸಮಾಲೋಚಕರು.

-ಸಂತೋಷ್‌ ಬೊಳ್ಳೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next