ಒಂದು ಫೋಟೋ ನೂರೆಂಟು ಕಥೆ ಹೇಳುತ್ತೆ ಎಂಬ ಮಾತು ಸತ್ಯ. ಈಗ ಕಲಾವಿದನೊಬ್ಬನ ಚಿತ್ರವೊಂದು ಹೊಸ ಕಥೆ ಹೇಳಲು ರೆಡಿಯಾಗಿದೆ. ಅಂದರೆ, ಚಿತ್ರವೊಂದರಲ್ಲಿ ಕಲಾವಿದನೊಬ್ಬನ ಕಥೆ ಕುರಿತ “ಚಿತ್ರಕಥಾ’ ಈ ವಾರ ತೆರೆಗೆ ಬರುತ್ತಿದೆ. ಹೌದು, ಇದು ಸಂಪೂರ್ಣ ಹೊಸಬರೇ ಸೇರಿ ಮಾಡಿರುವ ಸಿನಿಮಾ. ಈ ಚಿತ್ರದಲ್ಲೊಂದು ಚಿತ್ರವಿದೆ. ಆ ಚಿತ್ರದ ಕಥೆ ಏನೆಂಬುದು ಸಸ್ಪೆನ್ಸ್.
ಚಿತ್ರವನ್ನು ಯಶಸ್ವಿ ಬಾಲಾದಿತ್ಯ ನಿರ್ದೇಶಿಸಿದ್ದಾರೆ. ಕಥೆ, ಚಿತ್ರಕಥೆ ಜವಾಬ್ದಾರಿಯೂ ಇವರದೇ. ಯಶಸ್ವಿ ಬಾಲಾದಿತ್ಯ ಅವರಿಗೆ ಇದು ಮೊದಲ ಅನುಭವ ಆಗಿದ್ದರೂ, ಅನಿಮೇಶನ್‌ನಲ್ಲಿ ಸಾಕಷ್ಟು ಪರಿಣಿತಿ ಹೊಂದಿದ್ದಾರೆ. ಆ ಅನುಭವ ಕೂಡ “ಚಿತ್ರಕಥಾ’ ಚಿತ್ರಕ್ಕಿದೆ. “ಚಿತ್ರಕಥಾ’ ಕುರಿತು ಹೇಳುವುದಾದರೆ, ಚಿತ್ರದಲ್ಲಿ ಒಬ್ಬ ಕಲಾವಿದ ಸಾಕಷ್ಟು ಕಷ್ಟಪಟ್ಟು ಒಂದು ಹಂತ ದಾಟಿರುತ್ತಾನೆ.
ಅವನೊಳಗಿನ ಕಲೆಗೊಂದು ಸೂಕ್ತ ಸ್ಥಾನಮಾನ ಗಳಿಸಿಕೊಳ್ಳಲು ಹರಸಾಹಸ ಪಟ್ಟಿರುತ್ತಾನೆ. ಆದರೆ, ಬಣ್ಣದ ಲೋಕದ ಜರ್ನಿಯಲ್ಲಿ ಅವನು ಎದುರಾದ ಸಮಸ್ಯೆಗಳನ್ನು ಹೇಗೆಲ್ಲಾ ಎದುರಿಸಿ ನಿಲ್ಲುತ್ತಾನೆ. ಅವನು ನಡೆಯುವ ದಾರಿಯಲ್ಲಿ ಆಕಸ್ಮಿಕವಾಗಿ ಎರಗುವ ಎಡವಟ್ಟುಗಳನ್ನು ಹೇಗೆ ನಿಭಾಯಿಸುತ್ತಾನೆ ಎಂಬುದು ಚಿತ್ರದ ಕಥೆ.
ಚಿತ್ರಕ್ಕೆ ಸುಜಿತ್ ರಾಥೋಡ್ ಹೀರೋ. ಅವರಿಲ್ಲಿ ನಿರ್ದೇಶಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸುಧಾರಾಣಿ ಅವರು ವೈದ್ಯೆಯಾಗಿ ನಟಿಸಿದ್ದಾರೆ. ತಬಲನಾಣಿ ಅವರಿಲ್ಲಿ ಬದುಕಿನ ಅರ್ಥ ತಿಳಿಸುವ ವ್ಯಕ್ತಿಯ ಪಾತ್ರ ಮಾಡಿದ್ದಾರೆ. ದಿಲೀಪ್‌ರಾಜ್ ವಿಶೇಷ ಪಾತ್ರ ಮಾಡಿದರೆ, ಹಿರಿಯ ಕಲಾವಿದೆ ಬಿ.ಜಯಶ್ರೀ ಅವರು, ಕೊರವಂಜಿ ಪಾತ್ರದಲ್ಲಿ ಮಿಂಚಿದ್ದಾರೆ.
ಅಷ್ಟೇ ಅಲ್ಲ, ಚಿತ್ರದಲ್ಲಿ ಅವರೊಂದು ಹಾಡನ್ನೂ ಹಾಡಿದ್ದಾರೆ. ಇವರೊಂದಿಗೆ ಹೊಸ ಪ್ರತಿಭೆಗಳಾದ ಮೇಧಾ, ಆದರ್ಶ್.ಹಚ್.ಎಸ್., ಅನುಷಾರಾವ್. ಮಹಾಂತೇಶ್ ನಟಿಸಿದ್ದಾರೆ. ಬೆಂಗಳೂರು, ಕೇರಳ, ಮಂಗಳೂರು, ಮಡಿಕೇರಿ ಸೇರಿದಂತೆ ಇತರೆಡೆ ಚಿತ್ರೀಕರಣ ಮಾಡಲಾಗಿದೆ.
ಎರಡು ಹಾಡುಗಳಿಗೆ ಚೇತನ್‌ಕುಮಾರ್ ಸಂಗೀತ ನೀಡಿದರೆ, ತನ್ವಿಕ್ ಛಾಯಾಗ್ರಹಣ ಮಾಡಿದ್ದಾರೆ. ಮಧು ತುಂಬಕೆರೆ ಸಂಕಲನವಿದೆ. ರಘು ಪ್ರವೀಣ್ ಕಲಾ ನಿರ್ದೇಶನವಿದೆ. ಗೆಳೆಯ ನಾಯಕ ಆಗಿರುವುದರಿಂದ ಪ್ರಜ್ವಲ್.ಎಂ.ರಾಜ್ ನಿರ್ಮಾಣ ಮಾಡಿದ್ದಾರೆ.