Advertisement

ಈ ಬಾರಿ ಸುತ್ತೂರು ಜಾತ್ರೆಗೆ ಹೊಸ ತೇರಿನ ಸಂಭ್ರಮ

12:27 PM Jan 04, 2018 | |

ನಂಜನಗೂಡು: ತಾಲೂಕಿನ ಪ್ರಸಿದ್ಧ ಶೈಕ್ಷಣಿಕ ಹಾಗೂ ಧಾರ್ಮಿಕ ಕ್ಷೇತ್ರವಾಗಿ ಹೊರಹೊಮ್ಮಿರುವ ಸುತ್ತೂರಿನಲ್ಲಿ ಈಗ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರೋತ್ಸವದ ಸಿದ್ಧತೆ ಭರದಿಂದ ಸಾಗಿದೆ. ಇದೇ ತಿಂಗಳ 13 ರಿಂದ 18 ರ ವರೆಗೆ ನಡೆಯುವ ಈ ಸಾಲಿನ ಜಾತ್ರೆಗೆ ಹೊಸಮೆರಗು ನೀಡಲು ಉದ್ದೇಶಿಸಿರುವುದೇ ಈ ಬಾರಿಯ ಜಾತ್ರೆಯ ವಿಷೇಷವಾಗಿದೆ.

Advertisement

ಗದ್ದುಗೆ ಮುಂಭಾಗ ಕಾರ್ಯ: ಹೊಸ ತೇರಿನಲ್ಲಿ ಈ ಬಾರಿ ಆದಿ ಜಗದ್ಗುರು ಶ್ರೀ ಶಿವರಾತ್ರೀ ಶಿವಯೋಗಿಗಳ ರಥೋತ್ಸವ ನಡೆಯಲಿದೆ .ಹಳೇ ರಥ  ಈಗಿನ ಅದ್ಧೂರಿ ಜಾತ್ರೋತ್ಸವಕ್ಕೆ ಚಿಕ್ಕದಾಗಿದ್ದು ಅದನ್ನು ಬದಲಾಯಿಸಬೇಕೆಂಬ ಭಕ್ತರ ಆಶಯಕ್ಕೆ ಸ್ಪಂದಿಸಿರುವ ಪೀಠಾಧ್ಯಕ್ಷ ಶ್ರೀ ಶಿವರಾತ್ರಿ ದೇಶಿಕೇಂದ್ರ ಶ್ರೀಗಳು, ಅದಕ್ಕಾಗಿ ಭವ್ಯವಾದ ನೂತನ ರಥ ನಿರ್ಮಾಣದ ಸಂಕಲ್ಪ ಮಾಡಿದ್ದರ ಫ‌ಲವಾಗಿ ಸುತ್ತೂರಿನ ತೇರಿನ ನಿರ್ಮಾಣ ಪ್ರಾರಂಭವಾಗಿದೆ.

ಈಗ ಅದು ಪೂರ್ಣಗೊಳ್ಳುವ ಹಂತ ತಲುಪಿದ್ದು, ಇದೇ ತಿಂಗಳ 15ರ ಸೋಮವಾರ ನಡೆಯಲಿರುವ ಆದಿ ಜಗದ್ಗುರುಗಳ ರಥಾ ರೋಹಣಕ್ಕೆ ಸಿದ್ಧವಾಗುತ್ತಿದೆ. ಸುಮಾರು 2.5 ಕೋಟಿ ರೂ ವೆಚ್ಚದ 55 ಅಡಿ ಎತ್ತರದ ಬೃಹತ್‌ ರಥದ ನಿರ್ಮಾಣ ಸುತ್ತೂರಿನ ಗದ್ದುಗೆಯ ಮುಂಭಾಗ ಸದ್ದಿಲ್ಲದೆ ಸಾಗಿದೆ.

55 ಅಡಿ ಎತ್ತರದ 17 ಅಡಿ ಅಗಲದ ಸುಂದರವಾದ ಕೆತ್ತನೆಗಳಿಂದ ಕೂಡಿದ ಭವ್ಯವಾದ ಈ ರಥದ  ಗಾಲಿಗಳೆ 7.5 ಅಡಿ ಅಗಲವಿದೆ.ಇಂತಹ ರಥವನ್ನು ನಿರ್ಮಿಸುತ್ತಿರುವವರು ಬೆಂಗಳೂರಿನ ವಾಸಿ ನಮ್ಮವರೇ ಆದ ರಥ ಶಿಲ್ಪಿ ಬಸವರಾಜ ಬಡಿಗೇರ್‌.

ಜೋಡನೆ ಕಾರ್ಯ: ನಯ ನಾಜೂಕಿನ ಸುಂದರವಾದ ಕೆತ್ತನೆ ಸೇರಿದಂತೆ ರಥದ ತಳಪಾಯದ ಆರಂಭಿಕ ಕೆಲಸಗಳನ್ನು ಬೆಂಗಳೂರಿನ ಕಾಮಾಕ್ಷಿ ಪಾಳ್ಯದ ಕಮಲಾ ಶಂಕರ ಗುರುಕುಲದಲ್ಲಿನ ಘಟಕದಲ್ಲಿ ಸಿದ್ಧಪಡಿಸಿಕೊಂಡ ಈ ಶಿಲ್ಪಿಗಳು ನಂತರ ಅವುಗಳನ್ನು  ಮೈಸೂರಿಗೆ ತಂದು ಈಗ ಸುತ್ತೂರಿನಲ್ಲಿ ಅವುಗಳ ಜೋಡಣೆಯ ಕಾರ್ಯ ಕೈಗೊಂಡಿದ್ದಾರೆ.

Advertisement

 ಬಸವರಾಜ್‌ ಬಡಿಗೇರ್‌ ಅವರ ಮಕ್ಕಳಾದ  ಬಸವರಾಜ್‌ ಹಾಗೂ ಶಿವಕುಮಾರ ಈ ರಥ ನಿರ್ಮಾಣದ ನೇತೃತ್ವ ವಹಿಸಿದ್ದು, ಎರಡು ವರ್ಷಗಳ ಕಾಲದಿಂದ ಈ ರಥ ನಿರ್ಮಾಣದ ಕಾರ್ಯ ಎಗ್ಗಿಲ್ಲದೆ ಸಾಗಿದ್ದು, ಈ ಬಾರಿಯ ರಥೋತ್ಸವಕ್ಕೆ ಅಣಿಯಾಗುತ್ತಿದೆ. ಅವರ ಪ್ರಕಾರ ಈ ರಥಕ್ಕೆ 35 ರಿಂದ 40 ಟನ್‌ ಮರ ಉಪಯೋಗಿಸಲಾಗಿದ್ದು, ಧಾರ್ಮಿಕ ಪರಂಪರೆಯಂತೆ ರಥದ ವಾಸ್ತು ಪ್ರಕಾರವೇ ಶ್ರೀಗಂಧ,

ತೇಗ ಮತ್ತಿ ಹೊನ್ನೆ ಹಾಗೂ ಬನ್ನಿ ಮರಗಳನ್ನು ಮಾತ್ರ ರಥದ ನಿರ್ಮಾಣಕ್ಕೆ ಬಳಸಲಾಗಿದ್ದು, ಕಾರವಾರ ಜಿಲ್ಲೆಯ ಕಿರುವತ್ತಿ ಅರಣ್ಯ ಡಿಪೋದಿಂದ ಆಯ್ದ ಮರಗಳನ್ನು  ಹುಡುಕಿ ತರಲಾಗಿದೆ ಎನ್ನುತ್ತಾರೆ ಶಿವಕುಮಾರ್‌. ತಮ್ಮ ಕುಟುಂಬವೇ ರಥ  ಶಿಲ್ಪಕ್ಕೆ ಹೆಸರಾಗಿದ್ದು, 5 ತಲೆಮಾರುಗಳಿಂದ ರಥ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡ ಅನುಭವ ತಮ್ಮ ಮನೆತನದ್ದಾಗಿದೆ ಎಂದರು.

ಹಂಪಿ ತಿರುಪತಿ ಸೇರಿದಂತೆ ರಾಷ್ಟ್ರದ ವಿವಿಧ ಭಾಗಗಳ ರಥಗಳ ನಿರ್ಮಾಣ ಮಾಡಿದ ಹೆಗ್ಗಳಿಕೆ  ತಮ್ಮ ಕುಟುಂಬದ ಸಾಧನೆ ಎನ್ನುವ ಶಿವಕುಮಾರ ರಥದ ಪೂರ್ಣ ಜೋಡಣೆಯಾದ ನಂತ ನೋಡಬನ್ನಿ ಈ ರಥ  ವೈಭವದ ಸೌಬಗನ್ನು ಎಂದು ಹೆಮ್ಮೆಯಿಂದ ನುಡಿಯುತ್ತಾರೆ.

* ಶ್ರೀಧರ ಆರ್‌.ಭಟ್‌ ನಂಜನಗೂಡು

Advertisement

Udayavani is now on Telegram. Click here to join our channel and stay updated with the latest news.

Next