ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಗುಂಡಿ ಮುಚ್ಚಲು ಕೊಟ್ಟಿದ್ದ ಗಡುವು ಇಂದಿಗೆ ಅಂತ್ಯವಾಗಿದ್ದು, ಬೆಂಗಳೂರು ತುಂಬಾ ಮೃತ್ಯು ಸ್ವರೂಪಿ ಗುಂಡಿ ಗಟಾರಗಳು ರಾಚುತ್ತಿವೆ ಎಂದು ವಿಧಾನ ಪರಿಷತ್ ಸದಸ್ಯ ಟಿ. ಎ. ಶರವಣ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಇದೊಂದು ಸುಳ್ಳು ಹೇಳುವ ಸರಕಾರ, ಅಪ್ಪಟ ದಪ್ಪ ಚರ್ಮದ ಜನದ್ರೋಹಿ ಪಾಲಿಕೆ ಎಂದು ವಾಗ್ದಾಳಿ ನಡೆಸಿದ್ದಾರೆ.
ನಿಗದಿತ ಅವಧಿಯಲ್ಲಿ ಕೊಟ್ಟ ಗಡುವಿನ ಅನುಸಾರ ಕಾರ್ಯನಿರ್ವಹಿಸದೆ ಗುಂಡಿಗಳನ್ನು ಮುಚ್ಚದೆ ಹಾಗೆ ಬಿಟ್ಟ ಅಧಿಕಾರಿಗಳನ್ನು ಪಟ್ಟಿ ಮಾಡಿ, ಸಮಗ್ರ ವಿವರಗಳನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಿ ಎಂದು ಶರವಣ ಒತ್ತಾಯಿಸಿದ್ದಾರೆ.
ಪಾಲಿಕೆಯ ಬೇಜವಾಬ್ದಾರಿತನಕ್ಕೆ ನಿನ್ನೆ ಇನ್ನೊಂದು ಬಲಿಯಾಗಿದೆ. ಗುಂಡಿಗಳಿಂದಾಗಿ ಸರಣಿ ಅಪಘಾತಗಳು ಸಂಭವಿಸುತ್ತಿವೆ. ಇವು ಅಪಘಾತಗಳಲ್ಲ. ಸರಕಾರ, ಪಾಲಿಕೆಯ ನಿರ್ಲಕ್ಷದ ಕಾರಣಕ್ಕೆ ನಡೆಯುತ್ತಿರುವ ರಸ್ತೆ ಹತ್ಯೆಗಳಾಗಿವೆ ಎಂದು ಕಿಡಿಕಾರಿದ್ದಾರೆ.
Related Articles
ಗಡುವಿಗೆ ಬದ್ದವಾಗಿ ಕಾರ್ಯನಿರ್ವಹಿಸದ ಆಧಿಕಾರಿಗಳನ್ನು ಅಮಾನತು ಮಾಡಿ ಎಂದು ಶರವಣ ಆಗ್ರಹ ಪಡಿಸಿದ್ದಾರೆ.
ಏಳು ಮಂದಿ ಮಂತ್ರಿಗಳು ಇಲ್ಲಿನವರಾಗಿದ್ದು, ಖುದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಬೆಂಗಳೂರು ಉಸ್ತುವಾರಿ ಆಗಿದ್ದರೂ, ಹೇಳುವವರು, ಕೇಳುವವರು ಗತಿ ಇಲ್ಲದಂತೆ ದಿಕ್ಕು ತಪ್ಪಿರುವ ಬೆಂಗಳೂರು ರಸ್ತೆಗಳಲ್ಲಿ ಸಂಭವಿಸಿರುವ ಈ ಸಾವುಗಳಿಗೆ ಮುಖ್ಯಮಂತ್ರಿಯೇ ಹೊಣೆ ಎಂದು ಟೀಕಿಸಿದ್ದಾರೆ.
ಮುಖ್ಯಮಂತ್ರಿ ತಕ್ಷಣ ಚುನಾಯಿತ ಪ್ರತಿನಿಧಿಗಳ ಸಭೆ ಕರೆಯಬೇಕು. ಬೆಂಗಳೂರಿನ ಎಲ್ಲ ವಿಧಾನಸಭೆ ಕ್ಷೇತ್ರಗಳ ಶಾಸಕರ ಸಭೆ ಕರೆಯಬೇಕು ಎಂದು ಶರವಣ ಟೀಕಿಸಿದ್ದಾರೆ.