Advertisement

ಇದು ಐತಿಹಾಸಿಕ ಅವಿಸ್ಮರಣಿಯ ದಿನ: ಎಂ.ಬಿ.ಪಾಟೀಲ್‌

06:55 AM Mar 20, 2018 | Team Udayavani |

ಬೆಂಗಳೂರು: “900 ವರ್ಷಗಳ ಇತಿಹಾಸ ಇರುವ ಧರ್ಮಕ್ಕೆ ಮಾನ್ಯತೆ ನೀಡಬೇಕೆಂದು ನಾವು ಹೋರಾಟ ನಡೆಸಿದ್ದೆವು. ನಮ್ಮ ಹೋರಾಟಕ್ಕೆ ಐತಿಹಾಸಿಕ ಜಯ ಸಿಕ್ಕಿದೆ. ಇದರಿಂದ ನಮಗೆಲ್ಲರಿಗೂ ಖುಷಿ ಕೊಟ್ಟಿದೆ’

Advertisement

-ಇದು, ಪ್ರತ್ಯೇಕ ಧರ್ಮ ವಿಚಾರದಲ್ಲಿ ಹೋರಾಟ ಮಾಡಿದ್ದ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್‌ ಅವರ ನುಡಿ. ಈ ಕುರಿತು “ಉದಯವಾಣಿ’ ಜತೆ ಮಾತನಾಡಿದ ಅವರು, ಇದೊಂದು ಐತಿಹಾಸಿಕ ದಿನ. ನಮ್ಮ ಹೋರಾಟಕ್ಕೆ ಜಯ ಸಿಕ್ಕಿದೆ. ಬಹುಜನರ ಆಶಯ ಮತ್ತು ಹೋರಾಟಕ್ಕೆ ಬೆಲೆ ನೀಡಿದ ಸಿಎಂ ಸಿದ್ದರಾಮಯ್ಯ ಅವರಿಗೆ ಅಭಿನಂದನೆ ಸಲ್ಲಿಸುತ್ತೇವೆ ಎಂದು ಹೇಳಿದರು. ಸಂದರ್ಶನ ಸಾರಾಂಶ:

ಲಿಂಗಾಯತ ಅಲ್ಪ ಸಂಖ್ಯಾತ ಮಾನ್ಯತೆಗೆ ಹೋರಾಡಿದ್ದೀರಿ ಸಂಪುಟದ ತೀರ್ಮಾನ ನಿಮಗೆ ಖುಷಿ ಕೊಟ್ಟಿದಿಯಾ ?
         ಸಂತೋಷವಾಗಿದೆ. ಲಿಂಗಾಯತ 1881ರ ವರೆಗೂ ಸ್ವತಂತ್ರ ಧರ್ಮವಾಗಿಯೇ ಇತ್ತು. ಮೈಸೂರಿನ ದಿವಾನರಾಗಿದ್ದ ಸಿ. ರಂಗಾಚಾರುಲು ಅವರು, ಈ ಧರ್ಮವನ್ನು ಹಿಂದೂ ಧರ್ಮದಲ್ಲಿ ಸೇರಿಸಿ ಶೂದ್ರರ ಪಟ್ಟಿಯಲ್ಲಿ ಸೇರಿಸಿದ್ದರು. ಲಿಂಗಾಯತ ಧರ್ಮಕ್ಕೆ ಮಾನ್ಯತೆ ಕೊಡಬೇಕು ಎಂಬುದು ನಮ್ಮ ಬೇಡಿಕೆಯಾಗಿತ್ತು. ಇದೀಗ ಈಡೇರಿದಂತಾಗಿದೆ.

ವೀರಶೈವರನ್ನು ಬಿಟ್ಟು ಪ್ರತ್ಯೇಕ ಧರ್ಮದ ಮಾನ್ಯತೆಗೆ ಹೋರಾಟ ಮಾಡಿದ್ದೀರಿ, ಈಗ ವೀರಶೈವ ಸೇರಿಸಿದ್ದರಿಂದ
ನಿಮಗೇನು ಪ್ರಯೋಜನ ಆಯ್ತು ?

        ನೋಡಿ ನಾವು ಮೊದಲಿನಿಂದಲೂ ಬಸವ ತತ್ವ ಅನುಸರಿಸುವವರೆಲ್ಲರೂ ಲಿಂಗಾಯತರು ಅಂತ ಹೇಳಿಕೊಂಡು ಬಂದಿದ್ದೇವೆ. ಬಸವಣ್ಣನನ್ನು ಒಪ್ಪಿಕೊಳ್ಳುವ ವೀರಶೈವರೂ ಲಿಂಗಾಯತರ ಒಂದು ಭಾಗ ಅಂತ ಹೇಳಿದ್ದೇವೆ. ನ್ಯಾ. ನಾಗಮೋಹನ್‌ ದಾಸ್‌ ಸಮಿತಿ ಕೂಡ ಬಸವ ತತ್ವ ಅನುಸರಿಸುವ ವೀರಶೈವರನ್ನೂ ಲಿಂಗಾಯತಕ್ಕೆ ಸೇರಿಸಿಕೊಳ್ಳಬಹುದು ಎಂದು ಶಿಫಾರಸ್ಸು ಮಾಡಿದೆ. ತಜ್ಞರ ಸಮಿತಿ ವರದಿಯನ್ನೇ ಸಂಪುಟ ಸರ್ವಾನುಮತದಿಂದ ಒಪ್ಪಿದೆ.

ಅಲ್ಪ ಸಂಖ್ಯಾತರ ಮಾನ್ಯತೆಯಿಂದ ಯಾವ ರೀತಿ ಮೀಸಲಾತಿ ಸೌಲಭ್ಯ ಸಿಗುತ್ತದೆ ?
        ನಮಗೆ ಯಾವುದೇ ಮೀಸಲಾತಿ ಸೌಲಭ್ಯಕ್ಕಾಗಿ ನಾವು ಹೋರಾಟ ಮಾಡಿಲ್ಲ. ನಾವು ಬಸವಣ್ಣನ ತತ್ವ ವಿಶ್ವ ಮಟ್ಟಕ್ಕೆ ಬೆಳೆಯಬೇಕೆಂದು ಬಯಸುತ್ತೇವೆ. ಅದಕ್ಕಾಗಿ ನಮ್ಮ ಧರ್ಮಕ್ಕೆ ಮಾನ್ಯತೆ ನೀಡುವಂತೆ ಮನವಿ ಮಾಡಿಕೊಂಡಿದ್ದೆವು. ಇನ್ನು ಮುಂದೆ ಲಿಂಗಾಯತ ಧರ್ಮ ಬೌದಟಛಿ ಧರ್ಮದಂತೆ ಜಾಗತಿಕ ಧರ್ಮವಾಗಿ ಬೆಳೆದು ವಿಶ್ವಕ್ಕೆ ಬಸವಣ್ಣನ ತತ್ವಗಳನ್ನು ತಿಳಿಸುವ ಪ್ರಯತ್ನ ಮಾಡಲಾಗುತ್ತದೆ.

Advertisement

ಲಿಂಗಾಯತರಿಗೆ ಅಲ್ಪ ಸಂಖ್ಯಾತ ಮಾನ್ಯತೆ ದೊರೆತರೆ, ಅಲ್ಪ ಸಂಖ್ಯಾತರ ಮೀಸಲಾತಿಗೆ ತೊಂದರೆ ಆಗುವುದಿಲ್ಲವೇ ?
        ನಾವು ಸ್ವಷ್ಟವಾಗಿ ಹೇಳುತ್ತೇವೆ. ಈಗಿರುವ ಅಲ್ಪ ಸಂಖ್ಯಾತರ ಮೀಸಲಾತಿಯಲ್ಲಿ ಸಾಸಿವೆ ಕಾಳಿನಷ್ಟು ಮೀಸಲಾತಿಯನ್ನು ಪಡೆದುಕೊಳ್ಳುವುದಿಲ್ಲ. ಈಗ ಲಿಂಗಾಯತರು ಪ್ರವರ್ಗ 3ಬಿ ಯಲ್ಲಿದ್ದಾರೆ. ಅದೇ ವರ್ಗದಲ್ಲಿ ಮುಂದುವರಿಯಲಿದ್ದಾರೆ. ಕೇಂದ್ರ ಸರ್ಕಾರ ಅಲ್ಪ ಸಂಖ್ಯಾತರ ಮಾನ್ಯತೆ ನೀಡಿದ ಮೇಲೆ ಅದೆಲ್ಲ. ನಮಗೆ ಬಸವ ತತ್ವ ವಿಶ್ವ ಮಟ್ಟದಲ್ಲಿ ಪ್ರಚಾರ ಆಗಬೇಕು ಅನ್ನುವುದಷ್ಟೇ ಮುಖ್ಯ.

ಕೇಂದ್ರ ಸರ್ಕಾರ ಒಪುತ್ತದೆ ಎನ್ನುವ ಭರವಸೆ ಇದೆಯಾ ?
        ರಾಜ್ಯ ಸರ್ಕಾರ ಅಲ್ಪ ಸಂಖ್ಯಾತರ ಮಾನ್ಯತೆ ನೀಡಿ ಕೇಂದ್ರಕ್ಕೆ ಶಿಫಾರಸು ಮಾಡುತ್ತಿದೆ. ಹೀಗಾಗಿ ಕೇಂದ್ರ ಸರ್ಕಾರವೂ ಒಪ್ಪುತ್ತದೆ ಎಂಬ ನಂಬಿಕೆ ಇದೆ. ಬಿಜೆಪಿಯವರೂ ಕೂಡ ಇದಕ್ಕೆ ಯಾವುದೇ ಕಾರಣಕ್ಕೂ ವಿರೋಧ ಮಾಡುವುದಿಲ್ಲ ಎಂದು ನಂಬಿದ್ದೇವೆ.

ವೀರಶೈವ ಸ್ವಾಮೀಜಿಗಳು ಸರ್ಕಾರದ ತೀರ್ಮಾನವನ್ನು ವಿರೋಧಿಸುತ್ತಿದ್ದಾರಲ್ಲ?
       ನಮ್ಮಲ್ಲಿ ಸಣ್ಣಪುಟ್ಟ ಸೈದ್ದಾಂತಿಕ ಭಿನ್ನಾಭಿಪ್ರಾಯಗಳಿದ್ದವು. ನಾವು ಎಲ್ಲರನ್ನೂ ಜತೆಗೆ ಕರೆದುಕೊಂಡು ಹೋಗುತ್ತೇವೆ. ವಿರೋಧ ಮಾಡುವವರಿಗೂ ಮನವರಿಕೆ ಮಾಡಿಕೊಡುತ್ತೇವೆ. ವೀರಶೈವ ಮಹಾಸಭೆಯ ಅಧ್ಯಕ್ಷ ಶಾಮನೂರು ಶೀವ ಶಂಕರಪ್ಪ ಸ್ವಾಗತಿಸಿದ್ದಾರೆ. ಅವರು ಸ್ವಾಗತಿಸಿದ ಮೇಲೆ ಯಡಿಯೂರಪ್ಪ, ಸಿದ್ದಗಂಗಾ ಶ್ರೀಗಳು ಎಲ್ಲರೂ ಒಪ್ಪುತ್ತಾರೆ ಎನ್ನುವ ವಿಶ್ವಾಸ ಇದೆ.

ಸರ್ಕಾರದ ತೀರ್ಮಾನ ರಾಜಕೀಯವಾಗಿ ಹೇಗೆ ಲಾಭ ಆಗುತ್ತೆ ?
      ನಮಗೆ ರಾಜಕೀಯ ಲಾಭ ನಷ್ಟದ ಪ್ರಶ್ನೆ ಇಲ್ಲ. ನಮ್ಮ ಹೋರಾಟ ಇದ್ದಿದ್ದು, ಪ್ರತ್ಯೇಕ ಧರ್ಮದ ಮಾನ್ಯತೆಗೆ . ನಾವು ರಾಜಕಿಯ ಲಾಭಕ್ಕಾಗಿ ಈ ಹೋರಾಟ ಮಾಡಿರಲಿಲ್ಲ.

ಚುನಾವಣೆ ಸಂದರ್ಭದಲ್ಲಿ ಮುಖ್ಯಮಂತ್ರಿ ಧರ್ಮ ಒಡೆಯುವ ಕೆಲಸ ಮಾಡಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ?
      ಆ ರೀತಿ ಏನೂ ಇಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲರ ಅಭಿಪ್ರಾಯ ಸಂಗ್ರಹಿಸಿಯೇ ಅಂತಿಮ ತೀಮಾನ
ತೆಗೆದುಕೊಂಡಿದ್ದಾರೆ. ಇದರಲ್ಲಿ ಯಾವುದೇ ಧರ್ಮ ಒಡೆಯುವ ಪ್ರಶ್ನೆ ಬರುವುದಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next