Advertisement

ಇದು ಚಿಣ್ಣರ ಕೌತುಕ ಲೋಕ

12:39 AM Jan 05, 2020 | Lakshmi GovindaRaj |

ನಗರದ ದಿಢೀರ್‌ ನೆರೆಗೊಂದು ರೆಡಿಮೇಡ್‌ ಫ‌ುಟ್‌ಪಾತ್‌, ಕುಳಿತಲ್ಲೇ ಕಲುಷಿತ ನೀರಿನ ಬಗ್ಗೆ ಮಾಹಿತಿ ನೀಡುವ ಸೆನ್ಸರ್‌ ಚಿಪ್‌ಗಳು, ಸೈಕಲ್‌ ತುಳಿದು ಬಾವಿಯ ನೀರೆತ್ತುವ ತಂತ್ರಜ್ಞಾನ, ಆಂಬುಲನ್ಸ್‌ ಬಂದರೆ ಸಿಗ್ನಲ್‌ನಲ್ಲಿ ಮುನ್ಸೂಚನೆ ನೀಡುವ ಅಲಾರ್ಮ್, ಅಂಧರಿಗೆ ಮಾರ್ಗದರ್ಶನ ಮಾಡುವ ಊರುಗೋಲು… ಇಂತಹ ಹತ್ತಾರು ಕೌತುಕಗಳ ಕೇಂದ್ರಬಿಂದು ಆಗಿದೆ ಭಾರತೀಯ ಚಿಣ್ಣರ ವಿಜ್ಞಾನ ಸಮ್ಮೇಳನ. ದೇಶದ ನಾನಾ ಭಾಗಗಳಿಂದ ಬಂದ ಶಾಲಾ ಮಕ್ಕಳು ಪ್ರದರ್ಶಿಸಿದ ವಿಜ್ಞಾನ ಮಾದರಿಗಳು ಒಂದಕ್ಕಿಂತ ಮತ್ತೂಂದು ಗಮನಸೆಳೆಯುವಂತಿದ್ದವು. ಅದರಲ್ಲಿ ಇನ್ನೂ ಕೆಲವು ಪ್ರಾತ್ಯಕ್ಷಿಕೆಗಳು ಪಕ್ಕದ ಮಳಿಗೆಗಳಲ್ಲಿ ಹಿರಿಯರು ಪ್ರದರ್ಶಿಸಿದ ತಂತ್ರಜ್ಞಾನಗಳಿಗೆ ಸ್ಪರ್ಧೆವೊಡ್ಡುವ ರೀತಿಯಲ್ಲಿದ್ದವು. ಅವುಗಳ ವೀಕ್ಷಣೆಗೆ ಬಂದ ವಿಜ್ಞಾನಿಗಳು ಮತ್ತು ವಿಜ್ಞಾನ ಆಸಕ್ತರು ಮಕ್ಕಳ ಪ್ರಯತ್ನಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಚಿಣ್ಣರ ವಿಜ್ಞಾನ ಲೋಕದಲ್ಲಿ ಗಮನಸೆಳೆದ ಕೆಲವು ವಿಜ್ಞಾನ ಮಾದರಿಗಳು ಹೀಗಿವೆ.

Advertisement

ಮಾರ್ಗದರ್ಶಿ ಊರುಗೋಲು: ಈ ಊರುಗೋಲು ಅಂಧರಿಗೆ ಮಾರ್ಗದರ್ಶನ ಮಾಡುತ್ತದೆ! ಊರುಗೋಲಿಗೆ ಸೆನ್ಸರ್‌ ಆಧಾರಿತ ಡಿವೈಸ್‌ಗಳನ್ನು ಅಳವಡಿಸಿದ್ದು, ಯಾರಾದರೂ ವ್ಯಕ್ತಿ ಎದುರಿಗೆ ಬಂದರೆ ಅಥವಾ ಯಾವುದೇ ಅಡತಡೆಗಳು ಎದುರಾದರೆ ಯಂತ್ರದಿಂದ ಎಚ್ಚರಿಕೆ ಗಂಟೆ ಕೇಳಿಬರುತ್ತದೆ. ಹಾಗಾಗಿ, ಅಂಧರು ಯಾರ ನೆರವಿಲ್ಲದೆ ನಿರ್ಭೀತಿಯಿಂದ ಓಡಾಡಬಹುದು. ಮೈಸೂರಿನ ಶಾಲೆಯೊಂದರ ವಿದ್ಯಾರ್ಥಿಗಳು ಇದನ್ನು ಅಭಿವೃದ್ಧಿಪಡಿಸಿದ್ದಾರೆ. ಸದ್ಯಕ್ಕೆ ಊರುಗೋಲಿನಿಂದ ಒಂದು ಮೀ. ಅಂತರದಲ್ಲಿ ಯಾವುದೇ ವಸ್ತು ಕಾಣಿಸಿಕೊಂಡರೂ ಎಚ್ಚರಿಕೆ ನೀಡುವ ವ್ಯವಸ್ಥೆ ಇದರಲ್ಲಿದೆ. ಮೂರು ಹಂತಗಳಲ್ಲಿ ಈ ಎಚ್ಚರಿಕೆ ನೀಡುತ್ತದೆ. ವಸ್ತುವಿನ ಹತ್ತಿರ ಹೋದಾಗ ಜೋರಾಗಿ ಕೇಳಿಸುತ್ತದೆ. ಇದಲ್ಲದೆ, ಕೊರಳಿಗೆ ಹಾಗೂ ತೋಳುಗಳಿಗೆ ಹಾಕಿಕೊಂಡು ಓಡಾಡುವ ತಂತ್ರಜ್ಞಾನವನ್ನೂ ಅಭಿವೃದ್ಧಿಪಡಿಸಲಾಗಿದೆ. ಇದನ್ನು ಹಾಕಿಕೊಂಡು ಓಡಾಡುವಾಗ, ಯಾವುದಾದರೂ ವಸ್ತು ಅಥವಾ ವ್ಯಕ್ತಿ ಹತ್ತಿರದಲ್ಲಿದ್ದರೆ, ಕಂಪನದ ಮೂಲಕ ಸೂಚನೆ ನೀಡುತ್ತದೆ. ಈಗಾಗಲೇ ಇರುವ ಉಪಕರಣಗಳು ದುಬಾರಿಯಾಗಿದ್ದು, ಇದು ಅತ್ಯಂತ ಅಗ್ಗ ಅಂದರೆ 1,500 ರೂ.ಗಳಲ್ಲಿ ಇದನ್ನು ಪಡೆಯಬಹುದು. ಈಗಾಗಲೇ ಮೂರ್‍ನಾಲ್ಕು ಅಂಧ ಮಕ್ಕಳ ಶಾಲೆಗೂ ಭೇಟಿ ನೀಡಿ, ಪ್ರಾತ್ಯಕ್ಷಿಕೆ ನೀಡಲಾಗಿದೆ ಎಂದು ವಿದ್ಯಾರ್ಥಿ ಇಶಾಂತ್‌ ಮಾಹಿತಿ ನೀಡಿದರು.

ಪ್ರವಾಹದಿಂದ ರಕ್ಷಿಸೋ ರಸ್ತೆ: ಗುವಾಹಟಿ ಮೂಲದ ಶಾಲಾ ಬಾಲಕಿಯೊಬ್ಬಳು “ಹೈಡ್ರೋಲಿಕ್‌ ತಂತ್ರಜ್ಞಾನ’ ಅಭಿವೃದ್ಧಿಪಡಿಸಿದ್ದಾಳೆ. ಇದರಿಂದ ದಿಢೀರ್‌ ಪ್ರವಾಹ ಬಂದ ಸಂದರ್ಭದಲ್ಲಿ ಪಾದಚಾರಿ ಮಾರ್ಗವನ್ನೇ ತಾತ್ಕಾಲಿಕವಾಗಿ ಎತ್ತರಿಸಿ, ಸಂಚಾರ ಸುಗಮಗೊಳಿಸಬಹುದು. ರಸ್ತೆ ನಿರ್ಮಿಸಿವ ಸಂದರ್ಭದಲ್ಲಿಯೇ ಹೈಡ್ರೋಲಿಕ್‌ ತಂತ್ರಜ್ಞಾನ ಬಳಿಸಿದರೆ, ಪ್ರವಾಹ ಸಂದರ್ಭದಲ್ಲಿ ರಸ್ತೆ ಪಕ್ಕದ ಪಾದಾಚಾರಿ ಮಾರ್ಗವನ್ನು ಮೇಲೆತ್ತಬಹುದು. ಆ ಮೂಲಕ ಜನರ ರಕ್ಷಣೆ ಮಾಡಬಹುದು ಎಂದು ಗುವಾಹಟಿಯ ಕೆವಿಎಸ್‌ ಶಾಲಾ ವಿದ್ಯಾರ್ಥಿನಿ ಸ್ವಾತಿಕಾ ಮೂರ್ತಿ ಮಾಹಿತಿ ನೀಡಿದರು. ಜತೆಗೆ ಒಳಚರಂಡಿ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ನಿರ್ಮಿಸಿ, ನೀರು ನಿಲ್ಲದಂತೆ ಹಾಗೂ ಸರಳ ಸಂಸ್ಕರಣಾ ಸಾಧನಗಳನ್ನು ನೀರನ್ನು ಒಂದಿಷ್ಟು ಶುದ್ಧೀಕರಿಸುವುದರೊಂದಿಗೆ ರೋಗಾಣು ಹರಡದಂತೆ ತಡೆಯಬಹುದು. “ಇದು ಪ್ರವಾಹ ಹೆಚ್ಚು ಕಾಣಿಸಿಕೊಳ್ಳುವ ನಗರದ ತಗ್ಗು ಪ್ರದೇಶಕ್ಕೆ ಸೂಕ್ತವಾಗಿದ್ದು, 200 ಮೀ ದೂರ ರಸ್ತೆ ನಿರ್ಮಾಣಕ್ಕೆ ಹೆಚ್ಚುವರಿ 50 ಲಕ್ಷ ರೂ. ಖರ್ಚಾಗುತ್ತದೆ ಎಂದು ಹೇಳಿದರು.

ನಿಂತಲ್ಲೇ ನೀರಿನ ಶುದ್ಧತೆ ಹೇಳುತ್ತೆ: ಜಲಮಾಲಿನ್ಯ ಹೆಚ್ಚುತ್ತಿದ್ದು, ಅದರ ಶುದ್ಧತೆ ಪರೀಕ್ಷೆ ಅಗತ್ಯಗತ್ಯ. ಇದಕ್ಕಾಗಿ ಕೊಲ್ಕತ್ತ ಮೂಲದ ವಿದ್ಯಾರ್ಥಿಯೊಬ್ಬ ಇದ್ದ ಸ್ಥಳದಲ್ಲಿಯೇ ವೇಗವಾಗಿ, ಕಡಿಮೆ ಖರ್ಚಿನಲ್ಲಿ ಕೊಳ, ನದಿ ಸೇರಿದಂತೆ ಜಲಮೂಲಗಳ ನೀರಿನ ಶುದ್ಧತೆ ಪರೀಕ್ಷಿಸುವ ಸಾಧನವೊಂದನ್ನು ಸಿದ್ಧಪಡೆಸಿದ್ದಾನೆ. ಈ ಸಾಧನದಲ್ಲಿ ಅಲ್ಲಲ್ಲಿ ಮೈಕ್ರೋ ಚಿಪ್‌ ಇದ್ದು, ಇದನ್ನು ಕಂಪ್ಯೂಟರ್‌ನೊಂದಿಗೆ ಲಿಂಕ್‌ ಮಾಡಲಾಗಿರುತ್ತದೆ. ಕಂಪ್ಯೂಟರ್‌ನಲ್ಲಿರುವ ತಂತ್ರಾಂಶವು ಕೆಲ ಕ್ಷಣದಲ್ಲಿ ನೀರಿನ ಶುದ್ಧತೆ ಮಾಹಿತಿ ನೀಡುತ್ತದೆ. “ನೀರಿನಲ್ಲಿರುವ ಟಾಕ್ಸಿನ್‌ ಅಂಶ ಪತ್ತೆಹಚ್ಚುವ ಸಾಮಾರ್ಥ್ಯವನ್ನು ಈ ಚಿಪ್‌ ಹೊಂದಿದೆ. ಈ ವಿಧಾನವು ಶೇ. 60 ಹಣ ಮತ್ತು ಶೇ. 90ರಷ್ಟು ಮಾನವ ಶ್ರಮ ಹಾಗೂ ಶೇ.99 ಸಮಯ ಉಳಿತಾಯ ಮಾಡುತ್ತದೆ’ ಎಂದು ರಿತ್ರಿ ಮುಖರ್ಶ್‌ ಮಾಹಿತಿ ನೀಡಿದರು.

ವಾಹನ ಮಾಲಿನ್ಯ ನಿಯಂತ್ರಿಸುವ ಯಂತ್ರ: ಬೆಂಗಳೂರಿನಂತಹ ನಗರ ಪ್ರದೇಶಗಳಲ್ಲಿ ಹೆಚ್ಚು-ಕಡಿಮೆ ಜನಸಂಖ್ಯೆ ವೇಗದಲ್ಲಿ ವಾಹನಗಳ ಸಂಖ್ಯೆ ಬೆಳೆಯುತ್ತಿದೆ. ಅವು ಉಗುಳುವ ಹೊಗೆಯಿಂದ ದಿನದಿಂದ ದಿನಕ್ಕೆ ವಾಯುಮಾಲಿನ್ಯ ಹೆಚ್ಚುತ್ತಿದೆ. ಪರಿಣಾಮ ನಾನಾ ಕಾಯಿಲೆಗಳಿಗೆ ಜನ ತುತ್ತಾಗುತ್ತಿದ್ದಾರೆ. ತಮಿಳುನಾಡಿನ ಶಿವಕಾಶಿ ಮೂಲದ ವಿದ್ಯಾರ್ಥಿಯೊಬ್ಬ ಇದಕ್ಕೊಂದು ಸರಳ ಪರಿಹಾರ ಪರಿಚಯಿಸಿದ್ದಾನೆ. ಅದರ ಹೆಸರು ವರ್ಲ್ಡ್ ಗ್ರೀನ್‌: ಕಾರ್ಬನ್‌ ಮೊನಾಕ್ಸೆ„ಡ್‌ ಡಿಕ್ರೀಸ್‌ ಟೂಲ್‌ (ಇಂಗಾಲ ಮೊನಾಕ್ಸೆಡ್‌ ತಗ್ಗಿಸುವ ಉಪಕರಣ) ಇದಾಗಿದ್ದು, ಸ್ಟೀಲ್‌ ನಾರು, ತೆಂಗಿನ ನಾರು, ಕಲ್ಲಿದ್ದಲನ್ನು ಇದರಲ್ಲಿ ತುಂಬಲಾಗಿದೆ. ಇದನ್ನು ವಾಹನದ ಸೈಲೆನ್ಸರ್‌ಗೆ ಅಳವಡಿಸುವುದರಿಂದ ವಾಹನದ ಹೊಗೆಯ ಇಂಗಾಲದ ಮೊನಕ್ಸೆ„ಡ್‌ ಪ್ರಮಾಣವನ್ನು ಅರ್ಧದಷ್ಟು ಕಡಿಮೆ ಮಾಡಬಹುದು ಎಂದು ಆ ವಿದ್ಯಾರ್ಥಿ ಮಾಹಿತಿ ನೀಡಿದನು. ಕಿ.ಮೀ.ಗೂ ಮೊದಲೇ ಸೂಚನೆ: ಈ ಆಂಬ್ಯುಲನ್ಸ್‌ ಕಿ.ಮೀ. ದೂರದಲ್ಲಿದ್ದಾಗಲೇ ಅದು ಹಾದುಹೋಗುವ ಮಾರ್ಗದಲ್ಲಿ ಬರುವ ಸಿಗ್ನಲ್‌ನಲ್ಲಿ ಗಂಟೆ ಬಾರಿಸುತ್ತದೆ. ಪಂಜಾಬ್‌ ಮೂಲದ ವಿದ್ಯಾರ್ಥಿಯೊಬ್ಬ ಸಂಚಾರದಟ್ಟಣೆಯ ನಡುವೆಯೂ ತುರ್ತುವಾಹನಗಳಾದ ಆಂಬ್ಯುಲನ್ಸ್‌, ಅಗ್ನಿ ಶಾಮಕಕ್ಕೆ ದಾರಿ ಮಾಡಿಕೊಡಲು ಸಹಕಾರಿಯಾದ ವ್ಯವಸ್ಥೆಯನ್ನು ಪರಿಚಯಿಸಿದ್ದಾನೆ.

Advertisement

ಇದರ ಹೆಸರು ಗ್ರೀನ್‌ ಕಾರಿಡಾರ್‌: ಈ ವ್ಯವಸ್ಥೆಯಲ್ಲಿ ರಸ್ತೆ ಬದಿಯ ಬೀದಿ ದೀಪಗಳಿಗೆ ಸೆನ್ಸಾರ್‌ ಅಳವಡಿಸಿದ್ದು, ತುರ್ತು ವಾಹನಗಳು ಬಂದ ಕೂಡಲೇ ಸಮೀಪದ ಸಂಚಾರಿ ದೀಪಕ್ಕೆ ಮಾಹಿತಿ ನೀಡುತ್ತದೆ. ಆಗ ರಸ್ತೆಯ ಒಂದು ಎಡಬದಿಯಲ್ಲಿ ಮಾತ್ರ ವಾಹನ ಚಲಾವಣೆಯಾಗಿ ಬಲ ಬದಿಯನ್ನು ಸಂಪೂರ್ಣ ಖಾಲಿ ಮಾಡುತ್ತವೆ. ಈ ಸೆನ್ಸಾರ್‌ ಒಂದು ಕಿ.ಮೀ.ವರೆಗೂ ಕಾರ್ಯ ನಿರ್ವಹಿಸಬಲ್ಲದು. ಜತೆಗೆ ಬೀದಿ ದೀಪಗಳು ಜನ ಓಡಾಟ ನಡೆಸುವಾಗ ಕಾರ್ಯನಿರ್ವಹಸಿ ವಿದ್ಯುತ್‌ ಉಳಿಸಲಿದೆ ಎಂದು ವಿದ್ಯಾರ್ಥಿಯೊಬ್ಬರು ಮಾಹಿತಿ ನೀಡಿದರು.

* ಜಯಪ್ರಕಾಶ್‌ ಬಿರಾದಾರ್‌

Advertisement

Udayavani is now on Telegram. Click here to join our channel and stay updated with the latest news.

Next