Advertisement

ಪುಟ್ಟ ದೇಶದ ಈ ಇಂಟೆಲಿಜೆನ್ಸ್‌ ಏಜೆನ್ಸಿ ಭಾರತದ ʻರಾʼ ಗಿಂತಲೂ ಪವರ್‌ಫುಲ್‌..!

08:17 PM Oct 07, 2023 | Team Udayavani |

ವಿಶ್ವದ ಪುಟ್ಟ ದೇಶದ ಈ ಇಂಟೆಲಿಜೆನ್ಸ್‌ ಏಜೆನ್ಸಿಯ ಹೆಸರು ಕೇಳಿದಾಕ್ಷಣ ಇಡೀ ವಿಶ್ವವೇ ಒಂದು ಬಾರಿ ಅಬ್ಬಾ ಎಂದು ಬಿಡುತ್ತದೆ. ಕಾರಣ ಅಷ್ಟೊಂದು ಪವರ್‌ಫುಲ್‌ ಈ ಇಂಟೆಲಿಜೆನ್ಸ್‌ ಏಜೆನ್ಸಿ. ಇನ್ನೂ ಹೇಳಬೇಕೆಂದರೆ, ಭಾರತದ ಇಂಟೆಲಿಜೆನ್ಸ್‌ ಸಂಸ್ಥೆ ʻರಾʼ ಗಿಂತಲೂ ಪವರ್‌ಫುಲ್‌ ಈ ಮೊಸಾದ್‌…

Advertisement

ಕೇವಲ 94 ಲಕ್ಷ ಜನಸಂಖ್ಯೆಯನ್ನು ಹೊಂದಿರುವ ಪಶ್ಚಿಮ ಏಷ್ಯಾದ ಪುಟ್ಟ ದೇಶ ಇಸ್ರೇಲ್‌ನ ಇಂಟೆಲಿಜೆನ್ಸ್‌ ಏಜೆನ್ಸಿ ವಿಶ್ವದ ಎರಡನೇ ಪವರ್‌ಫುಲ್‌ ಇಂಟೆಲಿಜೆನ್ಸ್‌ ಏಜೆನ್ಸಿ ಎಂದರೆ ನೀವು ನಂಬಲೇಬೇಕು. ಇಸ್ರೇಲ್‌ನಲ್ಲಿ ʻಮೊಸಾದ್, ʻಶಿನ್ ಬೆಟ್ʼ, ʻಅಮಾನ್ʼ ಎಂಬ ಮೂರು ಪ್ರಮುಖ ಗುಪ್ತಚರ ಸಂಸ್ಥೆಗಳಿವೆ. ʻಅಮಾನ್ʼ ಮಿಲಿಟರಿ ಗುಪ್ತಚರದ ಕುರಿತಾದ ವಿಚಾರಗಳ ಬಗ್ಗೆ ಗಮನ ಹರಿಸುತ್ತದೆ. ʻಶಿನ್ ಬೆಟ್ʼ ಇಸ್ರೇಲ್‌ನ ಆಂತರಿಕ ಭದ್ರತೆಯನ್ನು ಕೇಂದ್ರೀಕರಿಸುತ್ತದೆ. ʻಮೊಸಾದ್ʼ ವಿದೇಶಿ ಗುಪ್ತಚರ ಸಂಗ್ರಹಣೆ, ಗುಪ್ತಚರ ವಿಶ್ಲೇಷಣೆ ಮತ್ತು ರಹಸ್ಯ ಕಾರ್ಯಾಚರಣೆಗಳಿಗೆ ಸಂಬಂಧಿಸಿದ ವಿಚಾರಗಳಿಂದಾಗಿ ವೈರಿಗಳಿಗೆ ಸಿಂಹಸ್ವಪ್ನವೆನಿಸಿದೆ.

ಹಿನ್ನೆಲೆ
ಆರಂಭದಲ್ಲಿ 1949ರ ಡಿಸೆಂಬರ್ ನಲ್ಲಿ ಇನ್ಸ್ಟಿಟ್ಯೂಟ್ ಫಾರ್ ಕೋ ಆರ್ಡಿನೇಶನ್ ಎಂಬುದಾಗಿ ಮೊಸಾದ್‌ ಅನ್ನು ಸ್ಥಾಪಿಸಲಾಯಿತು. ಬ್ರಿಟಿಷರ ಆಳ್ವಿಕೆಯ ಅವಧಿಯಲ್ಲಿ ಪ್ಯಾಲೆಸ್ಟೈನಿನಲ್ಲಿ ಯಹೂದಿ ಮಿಲಿಟರಿ ಪಡೆಯಾಗಿದ್ದ ʻಮೊಸಾದ್‌ ಹಗಾನಾʼ ಗುಪ್ತಚರ ವಿಭಾಗದಂತೆ ಕಾರ್ಯಾಚರಿಸುತ್ತಿತ್ತು. ಅದೇ ಅವಧಿಯಲ್ಲಿ ವಿಶೇಷ ಕಾರ್ಯಾಚರಣೆಗಳು ಮತ್ತು ರಹಸ್ಯ ರಾಜತಾಂತ್ರಿಕತೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ರೂವೆನ್ ಶಿಲೋಹ್ ಎಂಬವರು ಮೊಸಾದ್‌ನ ಮೊದಲ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು.

ಆರಂಭದ ದಿನಗಳಲ್ಲಿ ಮೊಸಾದ್‌ ತನ್ನ ನೆಲೆ ಕಂಡುಕೊಳ್ಳಲು ಭಾರೀ ಚಡಪಡಿಸಿತು. ಅಧಿಕಾರಶಾಹಿ ಘರ್ಷಣೆಗಳು ಹೊಸ ಏಜೆನ್ಸಿಯನ್ನು ಅಡ್ಡಿಪಡಿಸಿದವು. ಹೀಗಾಗಿ ಮೊಸಾದ್‌ ಕಾರ್ಯರೂಪಕ್ಕೆ ಬರಲು ಒಂದು ವರ್ಷಕ್ಕೂ ಹೆಚ್ಚು ಸಮಯ ತೆಗೆದುಕೊಂಡಿತು. 1951 ರಲ್ಲಿ ಇರಾನ್‌ನ ರಾಜಧಾನಿ ಬಾಗ್ದಾದ್‌ನಲ್ಲಿ ಇಸ್ರೇಲಿ ಬೇಹುಗಾರಿಕಾ ರಿಂಗ್ ಅನ್ನು ಬಹಿರಂಗಪಡಿಸಲಾಯಿತು. ಆ ಬಳಿಕ ಅದರ ಗುಪ್ತಚರ ಅಧಿಕಾರಿಗಳನ್ನು ಬಂಧಿಸಿದಾಗ ಮೊಸಾದ್‌ ಆರಂಭಿಕ ಮುಜುಗರವನ್ನು ಅನುಭವಿಸಿತು.

Advertisement

ಮೊಸಾದ್‌ನ ಮೊದಲ ನಿರ್ದೇಶಕರಾಗಿದ್ದ ರೂವೆನ್ ಶಿಲೋಹ್ 1952 ರಲ್ಲಿ ನಿವೃತ್ತರಾದರು. ಆ ಬಳಿಕ ಹಿಂದೆ ಶಿನ್ ಬೆಟ್‌ನ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದ ಇಸ್ಸರ್ ಹರೆಲ್ ಅವರನ್ನು ಮೊಸಾದ್‌ನ ಮುಖ್ಯಸ್ಥರನ್ನಾಗಿ ನೇಮಿಸಲಾಯಿತು. ಇದು ಮೊಸಾದ್‌ನ ಬೆಳವಣಿಗೆಯ ಹೊಸ ಶಕೆಗೆ ಮುನ್ನುಡಿಯಿಟ್ಟಿತು.

ಬರೋಬ್ಬರಿ 11 ವರ್ಷಗಳ ಕಾಲ ಮೊಸಾದ್‌ನ ಚುಕ್ಕಾಣಿ ಹಿಡಿದಿದ್ದ ಹರೆಲ್ (1952 63) ಮೊಸ್ಸಾದ್ ಅನ್ನು ಹೆಚ್ಚು ವೃತ್ತಿಪರ ಸಂಸ್ಥೆಯಾಗಿಸಿದ ಕೀರ್ತಿಗೆ ಪಾತ್ರರಾದರು. ಪ್ರಪಂಚದಾದ್ಯಂತ ಕಾರ್ಯಾಚರಣೆಗಳನ್ನು ನಡೆಸುವ ಸಾಮರ್ಥ್ಯ ಮೊಸಾದ್‌ಗೆ ದೊರಕಿತು.

ಕಾರ್ಯಾಚರಣೆಗಳು
1960 ರಲ್ಲಿ ಅರ್ಜೆಂಟೀನಾದಲ್ಲಿ ಕ್ರೂರಿ ನಾಝಿ ಅಧಿಕಾರಿ, ಅಡಾಲ್ಫ್ ಐಚ್‌ಮನ್‌ನನ್ನು ಮೊಸ್ಸಾದ್ ತಂಡ ಸೆರೆಹಿಡಿಯಿತು. ಇದು ಆ ದಿನಗಳಲ್ಲಿ ಮೊಸಾದ್‌ನ ಅಪಾಯಕಾರಿ ಕಾರ್ಯಾಚರಣೆಗಳಲ್ಲಿ ಒಂದಾಗಿತ್ತು. ಇದು ಏಜೆನ್ಸಿಯ ಪ್ರಾವೀಣ್ಯತೆಯನ್ನು ವಿಶ್ವ ಮಟ್ಟಕ್ಕೆ ಪರಿಚಯಿಸಿತು.

ಹಲವಾರು ಆಪರೇಷನ್‌ಗಳಲ್ಲಿ ಮೊಸಾದ್‌ನ ರಹಸ್ಯ ಏಜೆಂಟ್‌ಗಳು ಮಾರುವೇಷದಲ್ಲಿ ಕಾರ್ಯಾಚರಿಸಿ ವೈರಿಗಳ  ಬಗೆಗಿನ ಮಾಹಿತಿಗಳನ್ನು ಕಲೆ ಹಾಕುವ ಅಪಾಯಕಾರಿ ತಂತ್ರಗಳಿಗೂ ಪ್ರಸಿದ್ದರಾಗಿದ್ದಾರೆ. ಎಲಿ ಕೊಹೆನ್‌ ಎಂಬ ಮೊಸಾದ್‌ನ ರಹಸ್ಯ ಏಜೆಂಟ್‌ ಸಿರಿಯನ್ ಉದ್ಯಮಿಯಂತೆ ನಟಿಸಿ ಸಿರಿಯನ್ ಸರ್ಕಾರದ ಉನ್ನತ ಇಲಾಖೆಗಳಲ್ಲಿ ನುಸುಳಿ ಅಲ್ಲಿನ ರಹಸ್ಯ ಮಾಹಿತಿಗಳನ್ನು ಮೊಸಾದ್‌ಗೆ ತಲುಪಿಸಿದ್ದರು. 1965 ರಲ್ಲಿ ಇವರನ್ನು ಪತ್ತೆಹಚ್ಚಿ ಮರಣದಂಡನೆಗೆ ಒಳಪಡಿಸಲಾಯಿತು.

ಮೊಸಾದ್ ಮತ್ತು ಅದರ ಕಾರ್ಯಕರ್ತರು ಇಸ್ರೇಲ್‌ನ ಶತ್ರುಗಳು ಮತ್ತು ವಿದೇಶದಲ್ಲಿ ವಾಸಿಸುವ ಮಾಜಿ ನಾಜಿ ಯುದ್ಧ ಅಪರಾಧಿಗಳ ವಿರುದ್ಧ ರಹಸ್ಯ ಕಾರ್ಯಾಚರಣೆಗಳನ್ನು ನಡೆಸಿದ್ದಾರೆ. 1972 ರ ಮ್ಯೂನಿಚ್ ಒಲಿಂಪಿಕ್ ಕ್ರೀಡಾಕೂಟದಲ್ಲಿ ಇಸ್ರೇಲಿ ಕ್ರೀಡಾಪಟುಗಳ ಹತ್ಯಾಕಾಂಡಕ್ಕೆ ಕಾರಣವಾದ ಅರಬ್ ಗೆರಿಲ್ಲಾ ನಾಯಕರನ್ನು ಮೊಸಾದ್ ಏಜೆಂಟ್‌ಗಳು ಪತ್ತೆ ಹಚ್ಚಿ ಹತ್ಯೆ ಮಾಡಿದ್ದರು.  ಯುರೋಪ್, ಮಧ್ಯಪ್ರಾಚ್ಯ ಮತ್ತು ಉತ್ತರ ಆಫ್ರಿಕಾದಲ್ಲಿ ಪ್ಯಾಲೇಸ್ಟಿನಿಯನ್ ನಾಯಕರ ಹಲವಾರು ಹತ್ಯೆಗಳಿಗೂ ಮೊಸಾದ್‌ಗೂ ಸಂಬಂಧವಿದೆ. ಪ್ಯಾಲೆಸ್ಟೈನ್‌ನ ಕಪ್ಪು ಸೆಪ್ಟೆಂಬರ್‌ನ ನಿರ್ಮೂಲನೆ, ಸಿರಿಯನ್ ಪರಮಾಣು ಕೊಂಡಿಗಳ ನಾಶ, ಇರಾನಿನ ಪ್ರಮುಖ ಪರಮಾಣು ವಿಜ್ಞಾನಿಗಳ ಹತ್ಯೆ ಹೀಗೆ ಜಗತ್ತಿನ ಹತ್ತು ಹಲವು ದೊಡ್ಡ ಮಟ್ಟದ ಕಾರ್ಯಾಚರಣೆಗಳಲ್ಲಿ ಮೊಸಾದ್‌ ಪ್ರಮುಖ ಪಾತ್ರ ವಹಿಸಿದೆ.

ಇಂದಿಗೂ ಮೊಸಾದ್‌, ಅರಬ್ ಮತ್ತು ಇತರ ರಾಷ್ಟ್ರಗಳಲ್ಲಿ ಹಲವಾರು ಇಸ್ರೇಲಿ ರಹಸ್ಯ ಏಜೆಂಟ್‌ಗಳನ್ನು ನಿರ್ವಹಿಸುತ್ತದೆ. ಇದರಲ್ಲಿ ಹಲವಾರು ಮುಖ್ಯ ವಿಭಾಗಗಳಿವೆ. ಈ ವಿಭಾಗಗಳೇ ಮೊಸಾದ್‌ನ್ನು ಪವರ್‌ಫುಲ್‌ ಇಂಟೆಲಿಜೆನ್ಸ್‌ ಏಜೆನ್ಸಿಯನ್ನಾಗಿಸಿವೆ.

ಟ್ಜೊಮೆಟ್: ಇದು ಮೊಸಾದ್‌ನ ಅತಿದೊಡ್ಡ ವಿಭಾಗವಾಗಿದ್ದು, ಕಾಟ್ಸಾಸ್ ಎಂಬ ಕೇಸ್ ಆಫೀಸರ್‌ಗಳನ್ನು ಹೊಂದಿದೆ. ಬೇರೆ ಬೇರೆ ದೇಶಗಳಲ್ಲಿ ಬೇಹುಗಾರಿಕೆ ನಡೆಸುವ ಸಿಬ್ಬಂದಿಗಳ, ಏಜೆಂಟ್‌ಗಳ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಟ್ಜೊಮೆಟ್ ರಾಜತಾಂತ್ರಿಕ ಬೇಹುಗಾರಿಕೆಯಲ್ಲೂ, ಅನಧಿಕೃತ ಬೇಹುಗಾರಿಕೆಯಲ್ಲೂ ಕಾರ್ಯನಿರ್ವಹಿಸುತ್ತದೆ.

ಕಿಡಾನ್: ಇವರನ್ನು ಮೊಸಾದ್‌ನ ಗಣ್ಯ ಹಂತಕರು ಎಂದು ಕರೆಯಲಾಗುತ್ತದೆ. ಇವರು ತಮ್ಮ ಶಾರ್ಪ್‌ ಶೂಟಿಂಗ್‌ಗೆ ಹೆಸರುವಾಸಿ. ವಿಶ್ವದಾದ್ಯಂತ ಹಲವಾರು ಹತ್ಯೆಗಳಲ್ಲಿ ಇವರ ಪಾತ್ರವಿದೆಯಾದರೂ ಎಷ್ಟೋ ಹತ್ಯೆಗಳಲ್ಲಿ ಇವರ ಕೈವಾಡದ ಬಗ್ಗೆ ಅಧಿಕೃತವಾಗಿ ಹೇಳಿಕೊಂಡಿಲ್ಲ. ಕಿಡಾನ್‌ಗೆ ನೇಮಕಗೊಂಡವರು ಹರ್ಜ್ಲಿಯಾ ಬಳಿಯ ಮೊಸಾದ್‌ನ ತರಬೇತಿ ನೆಲೆಯಲ್ಲಿ ಎರಡು ವರ್ಷಗಳ ತರಬೇತಿಯನ್ನು ಪಡೆಯುತ್ತಾರೆ.

ಸಯಾನಿಮ್: ಇವರು ಇಸ್ರೇಲ್‌ ದೇಶದ ಮೇಲಿನ ಅಭಿಮಾನದಿಂದ ಮೊಸಾದ್‌ಗೆ ಸಹಾಯ ಮಾಡುವ ಯಹೂದಿ ನಾಗರಿಕರು. ಇವರು ಯಾವುದೇ ಸಂಬಳವಿಲ್ಲದ ಮೊಸಾದ್‌ಗೆ ಸಹಾಯ ಮಾಡುತ್ತಾರೆ. ಅವರನ್ನು ಮೊಸಾದ್‌ನ ಫೀಲ್ಡ್ ಏಜೆಂಟ್‌ಗಳು, ಕಾರ್ಯಾಚರಣೆಗಳಿಗೆ ಸಣ್ಣ ಸಣ್ಣ ಸಹಾಯವನ್ನು ಒದಗಿಸಲು ನೇಮಿಸಿಕೊಳ್ಳುತ್ತಾರೆ. ಇವರಲ್ಲಿ ಸಾಯಾನಿಮ್‌ ಎಂಬ ವಿಭಾಗವಿದ್ದು ಇವರು ಮೊಸಾದ್ ಏಜೆಂಟ್‌ಗಳಿಗೆ ಸಾಮಾನ್ಯ ದಾಖಲೆಗಳಿಲ್ಲದೆಯೂ ಕಾರು, ಮನೆಗಳನ್ನು ಬಾಡಿಗೆಗೆ ನೀಡಲು ಸಹಾಯ ಮಾಡುತ್ತಾರೆ. ಸಯಾನಿಮ್‌ನ ಬಳಕೆಯು ಮೊಸಾದ್ ಕಡಿಮೆ ಬಜೆಟ್‌ನೊಂದಿಗೆ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುತ್ತದೆ. ಮೊಸಾದ್‌ ವಿಶ್ವದಾದ್ಯಂತ ಹಲವಾರು ರಹಸ್ಯ ಕಾರ್ಯಾಚರಣೆಗಳನ್ನು ನಡೆಸುವುದರಿಂದ ಹಲವು ಸಯಾನಿಮ್‌ಗಳು ಇಸ್ರೇಲಿ ಪ್ರಜೆಗಳಾಗಿರುವುದಿಲ್ಲ.

ವಿಶ್ವದರ್ಜೆಯ ತಂತ್ರಗಾರರ ತಂಡ, ಧೈರ್ಯಶಾಲಿ ರಹಸ್ಯ ಏಜೆಂಟ್‌ಗಳು, ತಂತ್ರಜ್ಞಾನದ ಸದ್ಬಳಕೆ, ನಿಪುಣ ಯೋಧರ ಶಕ್ತಿ, ವಿಶ್ವಾಸಾರ್ಹ ಸಿಬ್ಬಂದಿ ವರ್ಗ, ಅತಿ ಹೆಚ್ಚಿನ ಆರ್ಥಿಕ ನೆರವು ಹೀಗೆ ಹತ್ತು ಹಲವು ಸಂಗತಿಗಳು ಮೊಸಾದ್‌ನನ್ನು ವಿಶ್ವದ ಅಗ್ರಮಾನ್ಯ ಇಂಟೆಲಿಜೆನ್ಸ್‌ ಏಜೆನ್ಸಿಯಲ್ಲಿ ಒಂದಾಗಿಸಿದೆ. ಸುಮಾರು 2.73 ಬಿಲಿಯನ್‌ ಯು.ಎಸ್‌ ಡಾಲರ್‌ ಮೊಸಾದ್‌ನ ವಾರ್ಷಿಕ ಬಜೆಟ್‌. ಹೀಗಾಗಿ ಅಮೆರಿಕದ ಇಐಅ ಬಳಿಕ ವಿಶ್ವದ ಎರಡನೇ ಅತಿ ಪ್ರಾಬಲ್ಯದ ಇಂಟೆಲಿಜೆನ್ಸ್‌ ಏಜೆನ್ಸಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಇಸ್ರೇಲ್‌ ವಿಶ್ವದಲ್ಲೇ ಕಡಿಮೆ ಜನಸಂಖ್ಯೆಯನ್ನು ಹೊಂದಿರುವ ಪುಟ್ಟ ರಾಷ್ಟ್ರವಾದರೂ ಇವರ ಸಾಧನೆಗಳು ಜಗತ್ತನ್ನೇ ಹುಬ್ಬೇರಿಸುವಂತೆ ಮಾಡಿವೆ. ಕೇವಲ ಗುಪ್ತಚರ ವಿಭಾಗ ಮಾತ್ರವಲ್ಲದೆ ಇಲ್ಲಿನ ಕೃಷಿ ಪದ್ಧತಿ, ಹೈನುಗಾರಿಕೆ, ಶಿಕ್ಷಣ ವ್ಯವಸ್ಥೆ, ಯುದ್ಧೋಪಕರಣಗಳು, ಸೈನ್ಯ ವ್ಯವಸ್ಥೆ ಇತ್ಯಾದಿಗಳು ತಾವು ಯಾರಿಗೂ ಕಮ್ಮಿ ಇಲ್ಲ ಎಂಬುದನ್ನು ತೋರಿಸುವಂತಿದೆ.  ಯಹೂದಿಯರ ಈ ಪುಟ್ಟ ದೇಶದ ಒಳಗೆ ಇದೀಗ ಹಮಾಸ್‌ ಉಗ್ರರು ಲಗ್ಗೆಯಿಟ್ಟಿದ್ದಾರೆ. ʻಹಮಾಸ್‌ ಉಗ್ರರಿಗೆ ತಕ್ಕ ಪಾಠ ಕಲಿಸುವ ಸಮಯ ಬಂದಿದೆ. ನಮ್ಮ ಮೇಲೆ ದಾಳಿ ಮಾಡಿದ ಯಾರನ್ನೂ ಬಿಡುವುದಿಲ್ಲʼ ಎಂದು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೇತಾನ್ಯಾಹು ಆದಿಯಾಗಿ ಅಲ್ಲಿನ ಸೇನಾ ಅಧಿಕಾರಿಗಳೂ ಹೇಳಿಕೆಗಳನ್ನು ನೀಡಿದ್ದಾರೆ. ಪುಟ್ಟ ದೇಶವಾದರೂ ಸಾಮರ್ಥ್ಯಿಕೆಯಲ್ಲಿ ಭಾರೀ ಗಟ್ಟಿಗನಾಗಿರುವ ಇಸ್ರೇಲ್‌ ತಂಟೆಗೆ ಹೋದವರನ್ನು ಇಸ್ರೇಲ್‌ ಖಂಡಿತಾ ಬಿಡುವುದಿಲ್ಲ ಎಂಬುದಂತೂ ಸತ್ಯ…!

* ಪ್ರಣವ್‌ ಶಂಕರ್‌

Advertisement

Udayavani is now on Telegram. Click here to join our channel and stay updated with the latest news.

Next