ಪಾಟೀಲರ ಕೈಗೆ 25 ಕ್ವಿಂಟಾಲ್ ಕಡಲೆ ಸೇರಿದೆ. ಹೆಚ್ಚಾ ಕಡಿಮೆ ಎರಡು ಲಕ್ಷಕ್ಕೂ ಹೆಚ್ಚೆ ಬೆಲೆ ಸಿಕ್ಕಿದೆ. ಅಂದರೆ ಬರ ಇವರಿಗೆ ತಟ್ಟಿಲ್ಲ. ತಟ್ಟದೇ ಇರುವುದಕ್ಕೆ ಇವರು ಏನೇನೆಲ್ಲಾ ಹರಸಾಹಸ ಮಾಡಿದ್ದಾರೆ ಗೊತ್ತಾ?
ವಿಜಯಪುರವನ್ನು ಬರಪೀಡಿತ ಜಿಲ್ಲೆ ಎಂದು ಘೋಣೆ ಮಾಡಿದ್ದಾರೆ. ಇದರಿಂದ ಎಲ್ಲಾ ರೈತರು ಭೀಕರ ಬರಗಾಲವನ್ನು ಎದುರಿಸಲು ಸಿದ್ಧರಾಗಿದ್ದಾರೆ. ಇವ್ಯಾವುದಕ್ಕೂ ಕ್ಯಾರೇ ಅನ್ನದೇ ಕಡಲೆ ಬೆಳೆ ತೆಗೆದಿರುವುದು ಬಸವನಬಾಗೇವಾಡಿ ತಾಲೂಕಿನ ಹೂನಪ್ಪರಗಿ ಪಟ್ಟಣದ ಗೌಡಪ್ಪ ಕೃಷ್ಣಪ್ಪ ಪಾಟೀಲ.
ಈಗಾಗಲೇ 25 ಕ್ವಿಂಟಾಲ್ ಕಡಲೆ ಕೈಗೆ ಸೇರಿದೆ. ಹೆಚ್ಚಾ ಕಡಿಮೆ ಎರಡು ಲಕ್ಷಕ್ಕೂ ಮೇಲ್ಪಟ್ಟ ಬೆಲೆ. ಬರ ಇವರಿಗೆ ತಟ್ಟಿಲ್ಲ. ತಟ್ಟದೇ ಇರುವುದಕ್ಕೆ ಇವರು ಏನೇನೆಲ್ಲಾ ಹರಸಾಹಸ ಮಾಡಿದ್ದಾರೆ ಗೊತ್ತಾ?
ಗೌಡಪ್ಪ ಮೂಲತ: ರಾಜಕೀಯ ಕುಟುಂಬದವರು, ಇವರು ಗ್ರಾಪಂ ಸದಸ್ಯ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸದಸ್ಯರಾಗಿದ್ದರೂ ಕೃಷಿಯನ್ನು ಮಾತ್ರ ಮರೆತಿಲ್ಲ. ತಮ್ಮೂರಿನಲ್ಲಿರುವ ರೈತ ಸಂಪರ್ಕ ಕೇಂದ್ರದಿಂದ 2 ಕ್ವಿಂಟಾಲ್ ಕಡಲೆ ಬೀಜವನ್ನು ಸಬ್ಸಿಡಿ ಮೂಲಕ ಖರೀದಿಸಿದರು. ಟ್ರಾಕ್ಟರ್ ಕೂರಿಗೆ ಮೂಲಕ 3 ಕ್ವಿಂಟಾಲ್ ಡಿಎಪಿ ರಸಗೊಬ್ಬರ ನೀಡುವುದರ ಮೂಲಕ ಬಿತ್ತನೆ ಮಾಡಿ, ಒಂದು ಬಾರಿ ಕಳೆ ತೆಗೆಸಿ ಹಾಗೂ ಎಡಿ ಹೊಡೆದು ಬಿಟ್ಟರು. ಬಿತ್ತನೆ ಸಮಯದಲ್ಲಿ ಒಂದಿಷ್ಟು ಮಳೆ ಬಿಟ್ಟರೆ ನಂತರ ಮಳೆ ಇಲ್ಲವಾಯ್ತು. ಬಿತ್ತನೆಯಾದ 15 ದಿನಗಳ ನಂತರ ಮುನ್ನಚ್ಚೆರಿಕೆ ಕ್ರಮವಾಗಿ 1 ಲೀಟರ್ ನ್ಯೂಟ್ರಾನ್ ಕ್ರುನಾಶಕ ಸಿಂಪಡಿಸಿರುವೆ ಎನ್ನುತ್ತಾರೆ ಗೌಡಪ್ಪ.
ನಂತರ ಬೆಳೆಗೆ ನೀರು ಇಲ್ಲದೇ ಒಣಗುವ ಸಂದರ್ಭದಲ್ಲಿ ಇವರಿಗೆ ಹೊಳೆದಿದ್ದು. ಏನಾದರೂ ಮಾಡಿ ಕಡಲೆ ಬೆಳೆಯನ್ನು ಉಳಿಸಿಕೊಳ್ಳಬೇಕು ಅನ್ನೋದು. ಮಳೆ ನೀರು ವ್ಯರ್ಥವಾಗದೇ ರೈತರಿಗೆ ನೆರವು ನೀಡುವ ಕೃಷಿ ಹೊಂಡವನ್ನು ಇಲಾಖೆಯ ಅಧಿಕಾರಿಗಳ ಸಲಹೆಯಂತೆ ನಿರ್ಮಿಸಿಕೊಂಡರು. ಡೀಸೆಲ್ ಮೋಟಾರ್ ಪಂಪ್ ಮೂಲಕ ಏನೇ ಪ್ರಯತ್ನ ಪಟ್ಟರು ಹೊಂಡ ತುಂಬಲೇ ಇಲ್ಲ. ಆಗ ಈ ರೈತರಿಗೆ ಹೊಳೆದಿದ್ದು. ಕೃಷಿ ಹೊಂಡದಿಂದ 3 ಕಿ.ಮೀ ಅಂತರದಲ್ಲಿರುವ ತಮ್ಮೂರಿನ ಶಿವಣ್ಣ ಚೌಧರಿ ಎನ್ನುವ ರೈತರ ಬಾವಿಯಿಂದ ಟ್ರಾಕ್ಟರ್ ಮೂಲಕ ತನ್ನ ಕಡಲೆ ಬೆಳೆಗೆ ತುಂತುರು ನೀರುಣಿಸುವ ಕಾರ್ಯಕ್ಕೆ ಮುಂದಾದರು.
9 ದಿನಗಳ ಕಾಲ 20 ಟ್ರಾಕ್ಟರ್ ಟ್ಯಾಂಕರ್ ಮೂಲಕ ಇಲ್ಲಿಯವರೆಗೆ ಒಟ್ಟು 180 ಟ್ಯಾಂಕರ್ ನೀರನ್ನು ನಿತ್ಯ ನಾಲ್ಕು ಗಂಟೆಗಳ ಕಾಲ ಕಡಲೆ ಬೆಳೆಗೆ ಹಾಯಿಸಿದ್ದಾರೆ. ಗೌಡಪ್ಪ ಹಾಗೂ ಅವರ ಪುತ್ರರಾದ ಸಿದ್ಧನಗೌಡ, ವೆಂಕನಗೌಡ ನೆರವಿಗೆ ನಿಂತಿದ್ದಾರೆ.
ಒಣಗುತ್ತಿರುವ ಕಡಲೆ ಬೆಳೆಯನ್ನು ಕಾಪಾಡಿಕೊಳ್ಳಲು ರೈತ ಗೌಡಪ್ಪ ಖರ್ಚು ಮಾಡುತ್ತಿರುವುದು ಸುಮಾರು 1 ಲಕ್ಷ ರೂ. ಒಟ್ಟು ಒಂಬತ್ತು ಎಕರೆಗೆ 25 ಕ್ವಿಂಟಾಲ್ ಕಡಲೆ ಫಸಲು ಬಂದಿದೆ. 2 ಲಕ್ಷ ರೂ ಸಿಕ್ಕರೂ ಒಂದು ಲಕ್ಷ ರೂ ಖರ್ಚು ತೆಗೆದು ಒಂದು ಲಕ್ಷ ರೂ ನಿವ್ವಳ ಲಾಭ ಎಂದು ಮನದಾಳದಿಂದ ಹೇಳುವ ಗೌಡಪ್ಪ ಸರ್ಕಾರದ ಕೃಷಿ ಭಾಗ್ಯ ಯೋಜನೆಯ ಸಂಪೂರ್ಣ ಲಾಭ ಪಡೆದುಕೊಂಡಿರುವ ಖಷಿ ನನಗಿದೆ ಎನ್ನುತ್ತಾರೆ.
ಹೆಚ್ಚಿನ ಮಾತಿಗೆ: 9900394963.
– ಗುರುರಾಜ.ಬ.ಕನ್ನೂರ.