Advertisement
ಮಹಾನಗರ : ಓದಿ ದೊಡ್ಡವನಾದ ಮೇಲೆ ಏನಾಗ್ತೀಯಾ..? ಅಂತ ಶಾಲೆಯಲ್ಲಿ ಮೇಷ್ಟ್ರು ಕೇಳಿದಾಗ ಒಬ್ಬೊಬ್ಬರು ಡಾಕ್ಟರ್, ಎಂಜಿನಿಯರ್ ಎಂದೆಲ್ಲ ಹೇಳುತ್ತಿದ್ದರೆ, ಆ ಹುಡುಗ ‘ನಾನು ಸೈನಿಕನಾಗ್ತೀನಿ’ ಅಂತ ಹೇಳಿದ್ದ. ಹೀಗೆ ಬಾಲ್ಯದಲ್ಲೇ ಮೂಡಿದ ದೇಶಸೇವೆ ಕನಸನ್ನು ನನಸು ಮಾಡಿದವರು ಬಂಟ್ವಾಳ ತಾಲೂಕು ಉಳಿ ಗ್ರಾಮದ ಮಲ್ಯೋಡಿ ಮನೆಯ ಹರ್ಷಿತ್ ಕೆ. ಅವರು. ಕಳೆದ 7 ವರ್ಷಗಳಿಂದ ಅವರು ದೇಶಸೇವೆಯಲ್ಲಿ ನಿರತರಾಗಿದ್ದಾರೆ.
ಹರ್ಷಿತ್ ದೇಶಪ್ರೇಮದ ತುಡಿತ ಅವರನ್ನು ಪಿಯುಸಿಯಲ್ಲಿದ್ದಾಗಲೇ ಸೇನೆಗೆ ಸೆಳೆಯಿತು. ಶಾಲಾ ದಿನಗಳಲ್ಲಿ ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಜಾವೆಲಿನ್ ತ್ರೋ, ಡಿಸ್ಕಸ್ ತ್ರೋ ಮುಂತಾದ ಕ್ರೀಡೆಗಳಲ್ಲಿ ಸದಾ ಮುಂದಿರುತ್ತಿದ್ದರು. ಮೊದಲ ಯತ್ನದಲ್ಲಿ ಅವರು ಸೇರ್ಪಡೆಯಾಗದಿದ್ದರೂ ಪಿಯುನಲ್ಲಿದ್ದಾಗ ಎರಡನೇ ಬಾರಿ ಪ್ರಯತ್ನಿಸಿ ಆಯ್ಕೆಯಾದರು. 2010 ಸೆ. 18ರಂದು ನೇಮಕಗೊಂಡಿದ್ದರು.
Related Articles
ಹರ್ಷಿತ್ ದೇಶಸೇವೆ ಮಾಡಲು ಹೋಗಿದ್ದರ ಹಿಂದಿರುವುದು ಅವರ ತಾಯಿ ಡೀನಾಕ್ಷಿ. ಏಕೈಕ ಪುತ್ರನನ್ನು ಸೇನೆಗೆ ಕಳುಹಿಸಬೇಡಿ ಎಂದು ಇತರರು ಹೇಳಿದರೂ ಮಗನನ್ನು ಅವರು ದೇಶಸೇವೆಗೆ ಅರ್ಪಿಸಿದ್ದರು. ‘ರಾಷ್ಟ್ರರಕ್ಷಣೆ ಮಾಡುವ ನನ್ನ ಕನಸಿನ ಹಿಂದೆ ಅಮ್ಮನ ಶ್ರಮವಿದೆ. ನನ್ನ ಇಡೀ ಬದುಕಿಗೆ ಅವರು ಸ್ಫೂರ್ತಿದಾತೆ’ ಎನ್ನುತ್ತಾರೆ ಹರ್ಷಿತ್.
Advertisement
ವಿವಿಧೆಡೆ ದೇಶಸೇವೆಸಿಪಾಯಿಯಾಗಿ ಉತ್ತರ ಪ್ರದೇಶದಲ್ಲಿ ನಿಯುಕ್ತಿಗೊಂಡ ಹರ್ಷಿತ್ ಅವರು ಬಳಿಕ 2 ವರ್ಷ ಸಿಯಾಚಿನ್, 2 ವರ್ಷ ಪಂಜಾಬ್‌ನಲ್ಲಿ ಸೇವೆ ಸಲ್ಲಿಸಿದ್ದಾರೆ. ಕಳೆದೆರಡು ವರ್ಷಗಳಿಂದ ಪೂನಾದಲ್ಲಿ ನಾಯಕ್ ಹುದ್ದೆಯಲ್ಲಿದ್ದಾರೆ. ಸೇವೆಯಲ್ಲಿರುವಾಗಲೇ ಖಾಸಗಿಯಾಗಿ ಪದವಿ ಶಿಕ್ಷಣವನ್ನೂ ಪಡೆಯುತ್ತಿದ್ದಾರೆ. ತುರ್ತು ಕರೆಗೆ ಹೋದೆ
ಪಂಜಾಬ್‌ನಲ್ಲಿದ್ದಾಗ ರಜೆ ಎಂದು ಊರಿಗೆ ಬಂದಿದ್ದರು. ಆದರೆ ಬಂದ ಕೆಲವೇ ದಿನಗಳಲ್ಲಿ ತುರ್ತು ಕರ್ತವ್ಯಕ್ಕೆ ಹಾಜರಾಗಲು ಹರ್ಷಿತ್ ಅವರಿಗೆ ಕರೆ ಬಂದಿತ್ತು. ಕೂಡಲೇ ಅವರು ಹೊರಟು ಹೋಗಿದ್ದರು. ತರಬೇತಿ ಅವಧಿಯಲ್ಲೇ ತುರ್ತು ಕರೆಯ ಮಹತ್ವದ ಬಗ್ಗೆ ಹೇಳಿದ್ದರಿಂದ ದೇಶಸೇವೆಗೆ ನಾವು ಯಾವುದೇ ಹೊತ್ತಿಗೂ ತಯಾರು ಎಂದು ಹರ್ಷಿತ್ ಹೇಳುತ್ತಾರೆ. ಸಿಯಾಚಿನ್‌ನಲ್ಲಿ ಕಾರ್ಯಾಚರಣೆ
ಸಿಯಾಚಿನ್‌ನ ನಡುಗುವ ಚಳಿಯಲ್ಲಿ ಕಾರ್ಯಾಚರಣೆಯ ರೋಚಕ ಅನುಭವವನ್ನು ಹರ್ಷಿತ್ ಬಿಚ್ಚಿಡುತ್ತಾರೆ. ಮೈನಸ್ ಡಿ. ಸೆ.ಗಿಂತ ಕಡಿಮೆಯ ಚಳಿ, ಮತ್ತೂಂದೆಡೆ ಆಮ್ಲಜನಕ ಕೊರತೆ, ಇಂತಹ ಸನ್ನಿವೇಶದಲ್ಲೂ ಸೇನಾ ಕಾರ್ಯಾಚರಣೆಗೆ ತಂಡ ಇಳಿದದ್ದು, ರಾಷ್ಟ್ರರಕ್ಷಣೆಯ ಉದ್ದೇಶವೇ ನಮಗಿತ್ತು. ಇದು ನಮ್ಮ ನರನಾಡಿಗಳಲ್ಲಿ ಭದ್ರವಾಗಿದ್ದುದರಿಂದ ಯಾವುದನ್ನೂ ಲೆಕ್ಕಿಸದೇ ಕೆಲಸ ಮಾಡಿ ಯಶಸ್ವಿಯಾದೆವು ಎಂದು ಹೇಳುತ್ತಾರೆ. ದೇಶಸೇವೆಗೆ ಕಳುಹಿಸಿದೆ
4ನೇ ತರಗತಿಯಲ್ಲಿರುವಾಗಲೇ ನನ್ನ ಮಗನಿಗೆ ಸೈನಿಕನಾಗಬೇಕೆಂಬ ಕನಸಿತ್ತು. ಒಬ್ಬನೇ ಮಗನಾದರೂ ನಾನೇ ಆತನನ್ನು ದೇಶಸೇವೆಗೆ ಕಳುಹಿಸಿಕೊಟ್ಟೆ. ಸೈನಿಕನಾಗಿರುವ ಮಗನ ಬಗ್ಗೆ ನನಗೆ ಸದಾ ಹೆಮ್ಮೆ.
-ಡೀನಾಕ್ಷಿ, ತಾಯಿ ಧನ್ಯತಾಭಾವ
ಯಾವ ಉದ್ಯೋಗದಿಂದಲೂ ಸಿಗದ ಧನ್ಯತಾಭಾವ ರಾಷ್ಟ್ರ ರಕ್ಷಣೆಯ ಕಾಯಕದಲ್ಲಿ ಸಿಗುತ್ತದೆ. ದೇಶ ಸೇವೆಯ ಬಗ್ಗೆ ಎಳವೆಯಿಂದಲೇ ಮಕ್ಕಳಿಗೆ ಹೇಳಿಕೊಡಬೇಕು.
– ನಾ| ಹರ್ಷಿತ್ ಕೆ. ಧನ್ಯಾ ಬಾಳೆಕಜೆ