Advertisement
ಅಮವಾಸ್ಯೆಗೆ ಎರಡು ದಿನ ಮೊದಲೇ ಆರಂಭವಾಗುವ ಜಾತ್ರೆಯ ಸಾಂಪ್ರದಾಯಿಕ ಆಚರಣಾ ವಿಧಿಗಳು ಮುಗಿಯುವುದು ಐದನೇಯ ದಿನದ ತೆಪ್ಪೋತ್ಸವ ಅಥವಾ ಓಕಳಿಯ ಕಾರ್ಯಕ್ರಮದಲ್ಲಿ. ಜನರಿಗೆ ಜಾತ್ರೆ ಎಂದರೆ ಮೂರು ದಿನಗಳದ್ದಾದರೂ ಕಾರ್ಯಕ್ರಮ ವ್ಯವಸ್ಥಾಪಕರು ಮತ್ತು ಪುರೋಹಿತ ವರ್ಗದವರಿಗೆ ಐದು ದಿನಗಳು ಕಾರ್ಯಕ್ರಮ ನೆಡೆಯಲಿದೆ.
Related Articles
Advertisement
ಹಿಂದೂ ಕ್ಯಾಲೆಂಡರಿನ ಪ್ರಕಾರ ಮಾರ್ಗಶಿರ ಮಾಸದ ಅಮವಾಸ್ಯೆಯಂದು ಆಚರಿಸಲಾಗುವ ಎಳ್ಳಮ್ಮಾವಾಸ್ಯೆಯನ್ನು ಅತಿ ವಿಶಿಷ್ಟ ಹಾಗೂ ಸಡಗರದಿಂದ ಆಚರಿಸಲಾಗುತ್ತದೆ.
ತೀರ್ಥಹಳ್ಳಿಯ ಪುರಾಣ ಪ್ರಸಿದ್ದ ದೇವಾಲಯವಾಗಿರುವ ಶ್ರೀ ರಾಮೇಶ್ವರ ದೇವಸ್ಥಾನದಿಂದ ಆರಂಭಗೊಳ್ಳುವ ಜಾತ್ರೆಯು ಸಾಕ್ಷಾತ್ ಹಳ್ಳಿಗಳಲ್ಲಿ ಕಂಡು ಬರುವ ಜಾತ್ರೆಗಳ ಕಳೆಯನ್ನೇ ನೆರೆದವರಿಗೆ ಉಣಬಡಿಸುತ್ತದೆ. ಅಪಾರ ಜನಜಂಗುಳಿ, ಬಾಯಲ್ಲಿ ನೀರೂರಿಸುವ ವಿವಿಧ ಭಕ್ಷ್ಯಗಳು, ಮನರಂಜನಾ ಚಟುವಟಿಕೆಗಳು, ಮಕ್ಕಳಿಗೋಸ್ಕರ ಸಿಗುವ ಆಟಿಕೆಗಳು, ಹಿರಿಯರು ಕೊಳ್ಳಲು ಉಡುಗೆ ತೊಡುಗೆಗಳು ಹೀಗೆ ಹಲವಾರು ಅಂಶಗಳು ಒಟ್ಟಾಗಿ ಸೇರಿ ಜಾತ್ರೆಯ ಕಳೆಯನ್ನು ರಂಗೇರಿಸುತ್ತವೆ.
ಶ್ರೀ ರಾಮೇಶ್ವರ ದೇವಸ್ಥಾನದ ಇತಿಹಾಸ ಮತ್ತು ವಾಸ್ತುಶಿಲ್ಪ:
ತುಂಗಾ ನದಿ ತೀರದ ಪಕ್ಕದಲ್ಲಿ ಎತ್ತರದ ಭೂಮಿಯಲ್ಲಿ ನಿಂತಿರುವ ಈ ದೇವಾಲಯವು ತೀರ್ಥಹಳ್ಳಿ ತಾಲೂಕಿನ ಪ್ರಮುಖ ಮುಜರಾಯಿ ದೇವಾಲಯದಲ್ಲಿ ಒಂದಾಗಿದೆ . ಈ ದೇವಾಲಯದಲ್ಲಿ ಋಷಿ ಪರಶುರಾಮನು ಸ್ಥಾಪಿಸಿದ ಶಿವಲಿಂಗವಿದೆ. ಗರ್ಭಗುಡಿಯ ಹೊರಗೆ ದುರ್ಗಾ ಮತ್ತು ಗಣಪತಿಯ ವಿಗ್ರಹಗಳಿವೆ. ರಾಮತೀರ್ಥ, ಋಷಿ ಪರಶುರಾಮನು ತನ್ನ ಪರಶುವನ್ನು ತೊಳೆದ ಪವಿತ್ರ ಸ್ಥಳವು ನದಿಯ ದಡದಲ್ಲಿರುವ ದೇವಾಲಯದ ಪಕ್ಕದಲ್ಲಿ ಅಲಂಕರಿಸಲ್ಪಟ್ಟಿದೆ.
ರಾಮತೀರ್ಥದ ಸುತ್ತಲೂ ಅಷ್ಟೇ ಮುಖ್ಯವಾದ ಇತರ ತೀರ್ಥಗಳಿವೆ. ಚಕ್ರತೀರ್ಥ ಶಂಕತೀರ್ಥ ಗದಾತೀರ್ಥ ಮತ್ತು ಪದ್ಮತೀರ್ಥ ರಾಮತೀರ್ಥದ ಸಮೀಪದಲ್ಲಿ “ರಾಮ ಮಂಟಪ” ಎಂಬ ಕಲ್ಲಿನ ಮಂಟಪವಿದೆ ಮತ್ತು ಈ ಮಂಟಪದ ಮುಂಭಾಗದಲ್ಲಿ ಕಲ್ಲಿನ ತಳಪಾಯವಿದೆ. ಪಕ್ಕದ ಜೋಗಿಗುಡ್ಡದಲ್ಲಿ ಒಂದು ಗುಹೆಯನ್ನು ಹೊಂದಿದೆ. ಅಲ್ಲಿ ಜೋಗಿಗಳು ಅಲೆದಾಡುವ ತಪಸ್ವಿಗಳು ಕುಳಿತು ಧ್ಯಾನ ಮಾಡುತ್ತಿದ್ದರು. ಇದು ರಾಮತೀರ್ಥ ಮತ್ತು ಚಕ್ರತೀರ್ಥದ ನಡುವೆ ಇದೆ.
ಮಾತೃ ಹತ್ಯಾ ದೋಷ ಪರಿಹರಿಸಿದ ಕ್ಷೇತ್ರದ ಇತಿಹಾಸ ಏನು ?:
ಈ ಪ್ರದೇಶಕ್ಕೆ ಪರಶುರಾಮ ಕ್ಷೇತ್ರ ಎಂಬ ಹೆಸರಿದೆ. ಈ ಹೆಸರು ಬರಲು ಹಾಗೂ ಎಳ್ಳಮಾಸ್ಯೆಯನ್ನು ಅದ್ದೂರಿಯಾಗಿ ಆಚರಿಸುವ ಹಿಂದೆ ಬಲು ರೋಚಕವಾದ ಕಥೆಯೆ ಇದೆ. ಹಿಂದೆ ಜಮದಗ್ನಿ ಋಷಿಯ ಆದೇಶದಂತೆ ಅವರ ಮಗನಾದ ಪರಶುರಾಮನು ತನ್ನ ಕೊಡಲಿಯಿಂದ ತಾಯಿಯ ರುಂಡವನ್ನು ಕಡಿದು, ನಂತರ ಆ ಕೊಡಲಿಗೆ ತಾಕಿದ ರಕ್ತದ ಕಲೆಯನ್ನು ಅಳಿಸಲೆಂದು ಸಾಕಷ್ಟು ನದಿಗಳಲ್ಲಿ ಶುಚಿಗೊಳಿಸಿದರು ಆದರೂ ಎಳ್ಳಿನ ಗಾತ್ರದಷ್ಟು ಒಂದು ಹನಿ ರಕ್ತದ ಕಲೆಯು ಎಲ್ಲೂ ಹೋಗದಾಯಿತು. ಕೊನೆಗೆ ಈ ಕ್ಷೇತ್ರದಲ್ಲಿ ಹರಿಯುವ ತುಂಗಾ ನದಿಯಲ್ಲಿ ಪರಶುರಾಮನು ತನ್ನ ಕೊಡಲಿಯನ್ನು ಅದ್ದಿದಾಗ ಕೊಡಲಿಗೆ ತಾಕಿದ ಕೊನೆಯ ಒಂದು ಎಳ್ಳಿನ ಆಕಾರದ ಹನಿಯ ರಕ್ತದ ಕಲೆ ಹೊರಟು ಹೋಯಿತು.
ಈ ರೀತಿಯಾಗಿ ಪಾವಿತ್ರ್ಯತೆ ಹೊಂದಿರುವ ತುಂಗಾ ನದಿಯ ತೀರ್ಥಕ್ಕೆ ಸಮನಾಗಿರುವುದರಿಂದ ಇದಕ್ಕೆ ತೀರ್ಥರಾಜಾಪುರ ಎಂಬ ಹೆಸರು ಬಂದಿತು. ತದನಂತರದಲ್ಲಿ ತೀರ್ಥಹಳ್ಳಿ ಎಂದು ಹೆಸರಾಯಿತು. ಈ ಪವಿತ್ರ ತುಂಗಾ ನದಿಯ ರಾಮಕೊಂಡದಲ್ಲಿ ಮಿಂದರೆ ಅಥವಾ ಪುಣ್ಯ ದಿನಗಳಂದು ಸ್ನಾನ ಮಾಡಿದರೆ ಸರ್ವ ಪಾಪ ಕರ್ಮಗಳು ಅಳಿಸಿ ಹೋಗುತ್ತವೆ ಎಂಬ ಅಚಲವಾದ ನಂಬಿಕೆ ಇಂದಿಗೂ ಚಾಲ್ತಿಯಲ್ಲಿದೆ. ಆದ್ದರಿಂದ ಎಳ್ಳಮ್ಮಾವಾಸ್ಯೆಯ ದಿನದಂದು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಈ ಕ್ಷೇತ್ರಕ್ಕೆ ಭೇಟಿ ನೀಡಿ ತುಂಗೆಯಲ್ಲಿ ಮಿಂದು ಪುನಿತರಾಗುತ್ತಾರೆ.
-ವರದಿ :ಶ್ರೀಕಾಂತ್ ವಿ ನಾಯಕ್