Advertisement
ನಗರದಲ್ಲಿ ಶನಿವಾರ ಜಿಎಸ್‌ಟಿ ಸಚಿವರ ತಂಡದ 9ನೇ ಸಭೆ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಳ್ಳು ಮಾಹಿತಿ ನೀಡುವವರು ಇಂದಲ್ಲ, ನಾಳೆ ಸಿಕ್ಕಿ ಬೀಳುತ್ತಾರೆ. ಯಾರೊಬ್ಬರು ವಂಚಿಸಲು ಸಾಧ್ಯವಾಗದಂತೆ ಬಿಜಿನೆಸ್ ಇಂಟೆಲಿಜೆನ್ಸ್ ತಂತ್ರಜ್ಞಾನ ಬಳಸಲಾಗುತ್ತಿದ್ದು, ಇದು ಮೂರನೇ ಕಣ್ಣಿನಂತೆ ಕಾರ್ಯ ನಿರ್ವಹಿಸುತ್ತದೆ ಎಂದು ತಿಳಿಸಿದರು.
Related Articles
ಬೃಹತ್ ಕಾಮಗಾರಿ ಕೈಗೊಳ್ಳುವ ಗುತ್ತಿಗೆದಾರರಿಗೆ ಮಾಸಿಕವಾರು ಬಿಡುಗಡೆಯಾಗುವ ಬಿಲ್ ಮೊತ್ತದಿಂದ ಟಿಡಿಎಸ್ ಕಡಿತ ಪ್ರಕ್ರಿಯೆ ಅ.1ರಿಂದ ಆರಂಭವಾಗಲಿದೆ. ಆ ಹಿನ್ನೆಲೆಯಲ್ಲಿ ಸೂಕ್ತ ಸಾಫ್ಟ್ವೇರ್ ಸಿದ್ಧಪಡಿಸುವಂತೆ ಇನ್ಫೋಸಿಸ್ ಸಂಸ್ಥೆಗೆ ಸೂಚಿಸಲಾಗಿದೆ. ಪ್ರಧಾನವಾಗಿ ರಸ್ತೆ, ಮೂಲಸೌಕರ್ಯ ಇಲಾಖೆ, ಭಾರಿ ನೀರಾವರಿ ಇಲಾಖೆಗಳು ಪಾವತಿಸುವ ಮಾಸಿಕ ಬಿಲ್ ಮೊತ್ತದಲ್ಲಿ ಟಿಡಿಎಸ್ ಕಡಿತಕ್ಕೆ ಕ್ರಮ ವಹಿಸಲಾಗುವುದು ಎಂದು ಹೇಳಿದರು.
Advertisement
ರಿಟರ್ನ್ಸ್ ಸಲ್ಲಿಕೆ ಪ್ರಕ್ರಿಯೆಯನ್ನು ಸಾಧ್ಯವಾದಷ್ಟು ಸರಳಗೊಳಿಸಲು ಆದ್ಯತೆ ನೀಡಲಾಗಿದೆ. ಸದ್ಯ ವ್ಯಾಪಾರ- ವ್ಯವಹಾರಸ್ಥರು ತಿಂಗಳಿಗೆ ಮೂರರಂತೆ ವರ್ಷಕ್ಕೆ 37 ರಿಟರ್ನ್ಸ್ಗಳನ್ನು ಸಲ್ಲಿಸಬೇಕಿದೆ. ಇದನ್ನು ಮಾಸಿಕ ಒಂದು ಹಾಗೂ ವಾರ್ಷಿಕ ಒಂದರಂತೆ ಒಟ್ಟು 13 ರಿಟರ್ನ್ಸ್ಗೆ ಸೀಮಿತಗೊಳಿಸಲಾಗುತ್ತಿದೆ. ರಿಟರ್ನ್ಸ್ ಸಲ್ಲಿಕೆ ಅರ್ಜಿ ಸಹ ವಾಸ್ತವಿಕವಾಗಿ ಒಂದು ಪುಟದಷ್ಟು ಮಾತ್ರ ಇರಲಿದೆ. ಜತೆಗೆ ಶೇ.80ರಷ್ಟು ವ್ಯವಹಾರವು ಡೀಲರ್ ಹಾಗೂ ಗ್ರಾಹಕರ ನಡುವಿನದ್ದಾಗಿದ್ದು, ಈ ರಿಟರ್ನ್ಸ್ ಅರ್ಜಿಯೂ ಮೂರು ಸಾಲಿನದ್ದಾಗಿರಲಿದೆ ಎಂದು ಮಾಹಿತಿ ನೀಡಿದರು.
ಹಲವು ಶಿಫಾರಸುಗಳ ಬಗ್ಗೆ ಚರ್ಚೆಕಾನೂನು ಸಮಿತಿಯು ಹಲವು ತಿದ್ದುಪಡಿಗೆ ಪ್ರಸ್ತಾವ ಸಲ್ಲಿಸಿದೆ. ಇದಕ್ಕೆ ಆಕ್ಷೇಪಣೆ ಸಲ್ಲಿಸಲು ಭಾನುವಾರ (ಜು.15) ಕೊನೆಯ ದಿನವಾಗಿದ್ದು, ಈವರೆಗೆ 600ಕ್ಕೂ ಹೆಚ್ಚು ಸಲಹೆಗಳು ಸ್ವೀಕೃತವಾಗಿವೆ. ತಿದ್ದುಪಡಿಗಳ ಪೈಕಿ ಮುಖ್ಯವಾಗಿ ರಾಜಿ ತೆರಿಗೆ (ಕಾಂಪೋಸಿಷನ್ ಸ್ಕೀಮ್) ಅಡಿ ಪ್ರಸ್ತುತ ನಿಗದಿಪಡಿಸಿರುವ ವಹಿವಾಟು ಮಿತಿಯನ್ನು 1 ಕೋಟಿ ರೂ.ನಿಂದ 1.50 ಕೋಟಿ ರೂ.ಗೆ ವಿಸ್ತರಿಸುವುದು. ರಾಜಿ ತೆರಿಗೆ ಸೌಲಭ್ಯ ಸೇವಾ ಸಂಸ್ಥೆಗಳಿಗೂ ವಿಸ್ತರಣೆ. ರಿವರ್ಸ್ ಚಾರ್ಜ್ ಮೆಕಾನಿಸಂ ವ್ಯವಸ್ಥೆಯನ್ನು ಆಯ್ದ ಡೀಲರ್‌ಗಳಿಗಷ್ಟೇ ಅನ್ವಯಿಸುವ ತಿದ್ದುಪಡಿಗಳಿವೆ. ಇದೇ 21ರಂದು ನಡೆಯುವ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಯಲಿದೆ ಎಂದು ಹೇಳಿದರು. ಐಜಿಎಸ್‌ಟಿಯಡಿ ಮಾರ್ಚ್ 31ರವರೆಗೆ 1.80 ಲಕ್ಷ ಕೋಟಿ ರೂ. ಆದಾಯ ಸಂಗ್ರಹವಾಗಿದೆ. ಮಾಸಿಕ 20 ಸಾವಿರ ಕೋಟಿ ರೂ. ಸೇರ್ಪಡೆಯಾಗುತ್ತಿದೆ. ಹಾಗಾಗಿ ಬಳಕೆಯಾಗದ ಐಜಿಎಸ್‌ಟಿ ಆದಾಯವನ್ನು ನಿಗದಿತ ಅನುಪಾತದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಂಚಿಕೆ ಮಾಡಿಕೊಳ್ಳುವ ವ್ಯವಸ್ಥೆ ತರಲಾಗುವುದು ಎಂದು ತಿಳಿಸಿದರು. ರಾಜ್ಯ ಹಣಕಾಸು ಇಲಾಖೆ (ಆಯವ್ಯಯ ಮತ್ತು ಸಂಪನ್ಮೂಲ) ಕಾರ್ಯದರ್ಶಿ ರಿತ್ವಿಕ್ ಪಾಂಡೆ, ಜಿಎಸ್‌ಟಿಎನ್ ಸಿಇಒ ಪ್ರಕಾಶ್ ಕುಮಾರ್ ಉಪಸ್ಥಿತರಿದ್ದರು. 1.12 ಕೋಟಿ ಮಂದಿ ನೋಂದಣಿ
ದೇಶಾದ್ಯಂತ ಜಿಎಸ್‌ಟಿಯಡಿ 1.12 ಕೋಟಿ ವ್ಯಾಪಾರ- ವ್ಯವಹಾರಸ್ಥರು ನೋಂದಾಯಿಸಿಕೊಂಡಿದ್ದಾರೆ. ಇದರಲ್ಲಿ 63.77 ಲಕ್ಷ ಮಂದಿ ಹಳೆಯ ವ್ಯಾಟ್ ಪದ್ಧತಿಯಿಂದ ವರ್ಗಾವಣೆಯಾಗಿದ್ದರೆ, 48.62 ಲಕ್ಷ ಮಂದಿ ಹೊಸದಾಗಿ ನೋಂದಣಿಯಾಗಿದ್ದಾರೆ. 2017-18ನೇ ಸಾಲಿನಲ್ಲಿ ಜಿಎಸ್‌ಟಿಯಡಿ ರಾಷ್ಟ್ರಾದ್ಯಂತ ಸರಾಸರಿ 89,885 ಕೋಟಿ ರೂ. ಸಂಗ್ರಹವಾಗುತ್ತಿದೆ. ಮೇ ತಿಂಗಳಲ್ಲಿ 94 ಸಾವಿರ ಕೋಟಿ ರೂ. ಸಂಗ್ರಹವಾಗಿದೆ. ಮಾಸಿಕ ಒಂದು ಲಕ್ಷ ಕೋಟಿ ರೂ. ತೆರಿಗೆ ಸಂಗ್ರಹ ಗುರಿ ಇದೆ ಎಂದು ಜಿಎಸ್‌ಟಿ ಸಚಿವರ ತಂಡದ ಮುಖ್ಯಸ್ಥ ಸುಶೀಲ್ ಮೋದಿ ಹೇಳಿದರು. ಜಿಎಸ್‌ಟಿ ಜಾರಿ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಗಳಿಗೆ ಉಂಟಾಗುವ ನಷ್ಟವನ್ನು ಐದು ವರ್ಷಗಳವರೆಗೆ ಭರಿಸುವುದಾಗಿ ಕೇಂದ್ರ ಸರ್ಕಾರ ಭರವಸೆ ನೀಡಿದೆ. ಆದರೆ ನನ್ನ ವೈಯಕ್ತಿಕ ಅಭಿಪ್ರಾಯದಲ್ಲಿ ಮೂರು ವರ್ಷಗಳಿಗೆ ಪರಿಹಾರ ಪಡೆಯುವ ಪ್ರಕ್ರಿಯೆ ಮುಕ್ತಾಯವಾಗಲಿದ್ದು, ರಾಜ್ಯ ಸರ್ಕಾರಗಳು ಹೆಚ್ಚು ತೆರಿಗೆ ಆದಾಯ ಗಳಿಸುವ ವಿಶ್ವಾಸವಿದೆ ಎಂದು ತಿಳಿಸಿದರು. ಮಹಾರಾಷ್ಟ್ರ, ಉತ್ತರ ಪ್ರದೇಶದಲ್ಲಿ ರಾಜ್ಯದ ಗಡಿ ಭಾಗಳಲ್ಲಿ ಸೆನ್ಸಾರ್ ಸಾಧನಗಳನ್ನು ಅಳವಡಿಸಿವೆ. ಇದರಿಂದ ಸರಕು ಸಾಗಣೆ ವಾಹನ ಸೆನ್ಸಾರ್ ವ್ಯಾಪ್ತಿಯಲ್ಲಿ ಹಾದು ಹೋದರೆ “ಇ- ವೇ ರಸೀದಿ’ ಪಡೆದಿದೆಯೇ ಇಲ್ಲವೇ ಎಂಬುದು ತಕ್ಷಣ ಗೊತ್ತಾಗಲಿದೆ. ಶೇ. 90ರಷ್ಟು ವ್ಯಾಪಾರ-ವ್ಯವಹಾರಸ್ಥರು ಪ್ರಾಮಾಣಿಕವಾಗಿ ತೆರಿಗೆ ಪಾವತಿಸುತ್ತಿದ್ದಾರೆ. ತೆರಿಗೆ ವಂಚಿಸುವ ಶೇ.10ರಷ್ಟು ಮಂದಿ ಪತ್ತೆಗೆ ಹಾಗೂ ತೆರಿಗೆ ಸಂಗ್ರಹಕ್ಕೆ ಸುಧಾರಿತ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಲಾಗುವುದು.
– ಸುಶೀಲ್ ಮೋದಿ, ಜಿಎಸ್‌ಟಿ ಸಚಿವರ ತಂಡದ ಮುಖ್ಯಸ್ಥ