ಕಾಪು: ಬಿಜೆಪಿ ಮಹಿಳಾ ಮೋರ್ಚಾದ ವತಿಯಿಂದ ಶನಿವಾರ ಕಾಪು ಪೇಟೆಯಲ್ಲಿ ಆಯೋಜಿಸಲಾಗಿದ್ದ ವಂದೇ ಮಾತರಂ ತಿರಂಗಾ ಕಾಲ್ನಡಿಗೆ ಜಾಥಾಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಚಾಲನೆ ನೀಡಿದರು.
ಈ ಸಂದರ್ಭ ಮಾತನಾಡಿದ ಅವರು, ಸ್ವಾತಂತ್ರ್ಯದ ಅಮೃತ ಮಹೋತ್ಸವ ವರ್ಷಾಚರಣೆಯ ಪ್ರಯುಕ್ತ ದೇಶದಾದ್ಯಂತ ಮೂರು ದಿನಗಳ ಕಾಲ ಘರ್ ಘರ್ ತಿರಂಗಾ – ಹರ್ ಘರ್ ತಿರಂಗಾ ಕಾರ್ಯಕ್ರಮ ನಡೆಯಲಿದ್ದು ಎಲ್ಲೆಡೆ ಹಬ್ಬದ ರೀತಿಯಲ್ಲಿ ಸಂಭ್ರಮ ಮತ್ತು ಸಡಗರದೊಂದಿಗೆ ಆಚರಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರ ಕರೆಗೆ ಓಗೊಟ್ಟು ದೇಶದ ಪ್ರತೀಯೊಬ್ಬ ನಾಗರಿಕರು, ಸಂಘ ಸಂಸ್ಥೆಗಳು ಉತ್ತಮ ಸ್ಪಂಧನೆ ನೀಡುತ್ತಿವೆ. ಈ ಮೂಲಕವಾಗಿ ಕೋಟ್ಯಾಂತರ ಜನರು ಜೊತೆಗೂಡಿ ಸ್ವಾತಂತ್ರ್ಯಕ್ಕಾಗಿ ಬಲಿದಾನಗೈದ ಯೋಧರು ಮತ್ತು ಹೋರಾಟಗಾರರಿಗೆ ಕೃತಜ್ಞತೆ ಸಲ್ಲಿಸಲಾಗುತ್ತಿದೆ ಎಂದ ಹೇಳಿದರು.
ತಿರಂಗಾಕ್ಕೆ ಪಕ್ಷವಿಲ್ಲ, ಪಕ್ಷ ರಾಜಕೀಯದ ಹೊರತಾಗಿ ಎಲ್ಲಾ ಕಡೆಗಳಲ್ಲೂ ಇಂದು ತಿರಂಗಾ ರಾರಾಜಿಸುತ್ತಿದೆ. ಪ್ರತೀಯೊಂದು ಪಕ್ಷಕ್ಕೂ ತನ್ನದೇ ಆದ ಚಿಹ್ನೆ, ಧ್ವಜವಿದೆ. ಆದರೆ ತಿರಂಗಾ ಎಲ್ಲದಕ್ಕೂ ಭಿನ್ನವಾಗಿದ್ದು, ಅದಕ್ಕಾಗಿ ತಿರಂಗಾವನ್ನು ಎಲ್ಲರೂ ಪ್ರೀತಿಸುತ್ತಾರೆ. ದೇಶ ಭಕ್ತಿ, ರಾಷ್ಟ್ರ ಭಕ್ತಿಯ ವಿಚಾರದಲ್ಲಿ ರಾಜಕೀಯವಿಲ್ಲದೇ ಎಲ್ಲರೂ ಜೊತೆಗೂಡಬೇಕಿದೆ. ಕಾಂಗ್ರೆಸ್ ಪಕ್ಷ ಕೂಡಾ ಎಲ್ಲಾ ಕಡೆಗಳಲ್ಲೂ ಸ್ವಾತಂತ್ರ್ಯದ ನಡಿಗೆ, ತಿರಂಗಾ ಯಾತ್ರೆಯನ್ನು ಕೈಗೊಳ್ಳುವ ಮೂಲಕ ಸ್ವಾತಂತ್ರ್ಯ ಅಮೃತ ಮಹೋತ್ಸವದ ಕಾರ್ಯಕ್ರಮವನ್ನು ಬೆಂಬಲಿಸುತ್ತಿರುವುದು ಸ್ವಾಗತಾರ್ಹವಾಗಿದೆ ಎಂದರು.
ಕಾಪು ಶಾಸಕ ಲಾಲಾಜಿ ಆರ್. ಮೆಂಡನ್, ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಕಾಪು ಕ್ಷೇತ್ರಾಧ್ಯಕ್ಷ ಶ್ರೀಕಾಂತ್ ನಾಯಕ್, ರಾಜ್ಯ ಉಪಾಧ್ಯಕ್ಷೆ ನಯನಾ ಗಣೇಶ್, ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್‌ಪಾಲ್ ಸುವರ್ಣ, ಮಹಿಳಾ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ. ಸುವರ್ಣ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ವೀಣಾ ಶೆಟ್ಟಿ, ಮಹಿಳಾ ಮೋರ್ಚಾ ಕ್ಷೇತ್ರಾಧ್ಯಕ್ಷೆ ಸುಮಾ ಯು. ಶೆಟ್ಟಿ, ಪಕ್ಷದ ಪ್ರಮುಖರಾದ ಗೀತಾಂಜಲಿ ಎಂ. ಸುವರ್ಣ, ಶ್ರೀಶ ನಾಯಕ್, ಕುತ್ಯಾರು ನವೀನ್ ಶೆಟ್ಟಿ, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಗೋಪಾಲಕೃಷ್ಣ ರಾವ್, ಅಭಿಯಾನದ ಜಿಲ್ಲಾ ಸಂಚಾಲಕ ಪ್ರವೀಣ್ ಕಪ್ಪೆಟ್ಟು, ಮಂಡಲ ಸಹ ಸಂಚಾಲಕ ಅರುಣ್ ಶೆಟ್ಟಿ ಪಾದೂರು, ಮಹಿಳಾ ಪ್ರಧಾನ ಕಾರ್ಯದರ್ಶಿಗಳಾದ ಸುರೇಖಾ ಶೈಲೇಶ್, ನೀತಾ ಗುರುರಾಜ್ ಹಾಗೂ ಪಕ್ಷದ ಜಿಲ್ಲೆ, ತಾಲೂಕು, ಮಂಡಲ ಹಾಗೂ ಶಕ್ತಿ ಕೇಂದ್ರಗಳ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.