ಬೆಂಗಳೂರು: ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯವನ್ನು ಬೆಂಗಳೂರು ನಗರದ ವಿಶ್ವವಿದ್ಯಾಲಯವನ್ನಾಗಿ ರೂಪಿಸಿ, ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ವಿವಿಯ ಕುಲಪತಿ ಹಾಗೂ ಅಧಿಕಾರಿಗಳು ಯೋಜನೆ ಸಿದ್ಧಪಡಿಸುತ್ತಿದ್ದಾರೆ.
ವಿಶ್ವದ ಅನೇಕ ವಿಶ್ವವಿದ್ಯಾಲಯಗಳು ಅವುಗಳು ಇರುವ ನಗರದೊಂದಿಗೆ ಅನ್ಯೋನ್ಯ ಸಂಬಂಧ ಹೊಂದಿದೆ ಮತ್ತು ಆ ಹೆಸರಿನಿಂದಲೇ ಖ್ಯಾತಿಯನ್ನು ಪಡೆದಿದೆ. ಇದೇ ಮಾದರಿಯಲ್ಲಿ ಬೆಂಗಳೂರು ಕೇಂದ್ರ ವಿವಿಯನ್ನು ಬೆಂಗಳೂರು ನಗರದ ವಿವಿಯಾಗಿ ರೂಪಿಸುವ ಚಿಂತನೆ ಹುಟ್ಟಿಕೊಂಡಿದೆ.
ರಾಜ್ಯದ ರಾಜಧಾನಿ ಬೆಂಗಳೂರಿನ ಹೃದಯಭಾಗದಲ್ಲಿ ಬೆಂಗಳೂರು ಕೇಂದ್ರ ವಿಶ್ವವಿದ್ಯಾಲದ ಆಡಳಿತ ಕಚೇರಿ ಇದೆ. ಸೆಂಟ್ರಲ್ ಕಾಲೇಜು ಆವರಣಕ್ಕೆ ಅದರದ್ದೇ ಆದ ವೈಶಿಷ್ಯವೂ ಇದೆ. ಅನೇಕ ಹೋರಾಟಗಳು, ಪ್ರಗತಿಪರ ಚಿಂತನೆಯ ಮೂಲ ಕೇಂದ್ರವಾಗಿದೆ. ಇದನ್ನೇ ಮುಖ್ಯವಾಗಿಟ್ಟುಕೊಂಡು ಅತ್ಯಂತ ಕ್ರಿಯಾಶೀಲ ಹಾಗೂ ಅತ್ಯಾಕರ್ಷಕ ಸಾರ್ವಜನಿಕ ವಿವಿಯಾಗಿ ರೂಪಿಸಲು ಬೇಕಾದ ನೀಲನಕ್ಷೆಯನ್ನು ಸಿದ್ಧಪಡಿಸಿಕೊಳ್ಳಲಾಗಿದೆ.
ಸುಮಾರು 43 ಎಕರೆ ಪ್ರದೇಶದಲ್ಲಿ ವಿಶ್ವವಿದ್ಯಾಲಯದ ಅಭಿವೃದ್ಧಿಗೆ 800 ರೂ.ಗಳ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಆದರೆ, ಸರ್ಕಾರದಿಂದ ಯಾವುದೇ ರೀತಿಯ ಹಣಕಾಸಿನ ಸೌಲಭ್ಯ ಇನ್ನು ಸಿಕ್ಕಿಲ್ಲ. ಬೆಂಗಳೂರಿನ ಚರಿತ್ರೆ, ಸಂಸ್ಕೃತಿ ಹಾಗೂ ವಿವಿಧ ವೈವಿಧ್ಯತೆಯನ್ನು ಬೆಸೆದುಕೊಂಡು, ನಗರಾಭಿವೃದ್ಧಿಯ ಅಧ್ಯಯನಕ್ಕೆ ವಿಶೇಷ ಒತ್ತು ನೀಡುವ ನೆಲೆಯಲ್ಲಿ ವಿವಿಯನ್ನು ಅಭಿವೃದ್ಧಿ ಪಡಿಸಲು ಇಂಗಿತವನ್ನು ಆಡಳಿತ ಮಂಡಳಿಯು ಹೊಂದಿದೆ.
ಬೆಂಗಳೂರು ಕೇಂದ್ರ ವಿವಿಯು ಶಾಂತಿನಗರ, ಬ್ಯಾಟರಾಯನಪುರ, ಯಲಹಂಕ, ಮಲ್ಲೇಶ್ವರ, ಹೆಬ್ಟಾಳ, ಶಿವಾಜಿನಗರ, ಗಾಂಧಿನಗರ, ಚಾಮರಾಜಪೇಟೆ, ಚಿಕ್ಕಪೇಟೆ, ಬಸವನಗುಡಿ, ಬಿಟಿಎಂ ಲೇಔಟ್, ಜಯನಗರ ಮತ್ತು ರಾಜಾಜಿನಗರ ಸೇರಿದಂತೆ 13 ವಿಧಾನಸಭಾ ಕ್ಷೇತ್ರ ವ್ಯಾಪ್ತಿ ಹೊಂದಿದೆ. ನಗರದ ಪ್ರತಿಷ್ಠಿತ ಕಾಲೇಜುಗಳು ಈ ವಿವಿ ವ್ಯಾಪ್ತಿಗೆ ಬರಲಿದೆ. ಖಾಸಗಿ ಸಾರ್ವಜನಿಕ ಸಹಭಾಗಿತ್ವದಲ್ಲೂ ಅಭಿವೃದ್ಧಿಗೆ ಬೇಕಾದ ಕಾರ್ಯತಂತ್ರವನ್ನು ರಚಿಸಿಕೊಂಡಿದ್ದೇವೆ ಎಂದು ವಿವಿಯ ಆಡಳಿತ ಮಂಡಳಿಯ ಹಿರಿಯ ಅಧಿಕಾರಿ ಉದಯವಾಣಿಗೆ ತಿಳಿಸಿದ್ದಾರೆ.