ಬೀದರ: ಬೇರೆ ರಾಜ್ಯ ಮತ್ತು ಜಿಲ್ಲೆಗಳಿಂದ ಬಂದಿರುವ ವಲಸೆ ಕುಟುಂಬಗಳಿಗೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಡಿ ಜೀವನಾಂಶ ಆಶ್ರಿತ ಉದ್ಯೋಗ ಕಲ್ಪಿಸುವ ಸಂಬಂಧ ಚರ್ಚಿಸಲು ಸ್ವ ಸಹಾಯ ಗುಂಪುಗಳ ಪ್ರತಿನಿಧಿಗಳು ಹಾಗೂ ಸ್ವಯಂ ಸೇವಾ ಮುಖ್ಯಸ್ಥರೊಂದಿಗೆ ಜಿಪಂ ಮುಖ್ಯ ಕಾರ್ಯನಿರ್ವಹಕ ಅಧಿಕಾರಿ ಗ್ಯಾನೇಂದ್ರಕುಮಾರ ಗಂಗವಾರ ಸಭೆ ನಡೆಸಿದರು.
ತೋಟಗಾರಿಕಾ ಇಲಾಖೆ ಉಪ ನಿರ್ದೇಶಕರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಸಿಇಒ, ಕೋವಿಡ್-19 ತುರ್ತು ಸಂದರ್ಭದಲ್ಲಿ ಬೇರೆ ರಾಜ್ಯ ಹಾಗೂ ಜಿಲ್ಲೆಗಳಿಂದ ವಲಸೆ ಬಂದಿರುವ ಕುಟುಂಬಗಳಿಗೆ ಜೀವನೋಪಾಯಕ್ಕಾಗಿ ಉದ್ಯೋಗ ನೀಡಬೇಕಾಗಿದೆ.
ಈ ಪ್ರಯುಕ್ತ ಮಹಿಳೆಯರ ಮತ್ತು ಮಕ್ಕಳಿಗೋಸ್ಕರ ಕಾರ್ಯನಿರ್ವಹಿಸುವ ಸ್ವ ಸಹಾಯ ಗುಂಪುಗಳು ಹಾಗೂ ಸ್ವಯಂ ಸೇವಾ ಸಂಸ್ಥೆಗಳಿಗೆ ಸಭೆ ಕರೆದಿದ್ದು, ವಲಸೆ ಕುಟುಂಬದವರಿಗೆ ತಮ್ಮ ಮೂಲಕ ಸಣ್ಣ ಕೆಲಸ ಸಂಕಷ್ಟದಿಂದ ಪಾರು ಮಾಡುವುದೇ ಸಭೆಯ ಉದ್ದೇಶವಾಗಿದೆ ಎಂದು ಹೇಳಿದರು.
ಭಾಲ್ಕಿಯ ಸರಸ್ವತಿ ಮಹಿಳಾ ಮಂಡಳ, ಆರ್ಬಿಟ್ ಸ್ವಯಂ ಸೇವಾ ಸಂಸ್ಥೆ ಹಾಗೂ ಮೈರಾಡ್ ಸ್ವಯಂ ಸೇವಾ ಸಂಸ್ಥೆ ಸೇರಿದಂತೆ 10ಕ್ಕೂ ಹೆಚ್ಚು ಸೇವಾ ಸಂಸ್ಥೆಗಳ ಪ್ರತಿನಿಧಿಗಳು ಮಾತನಾಡಿ, ಸ್ಯಾನಿಟರಿ ಪ್ಯಾಡ್, ಮಾಸ್ಕ್ ತಯಾರಿಕೆ, ಲಾಲಿಪಾಪ್, ರೊಟ್ಟಿ, ಉಪ್ಪಿನಕಾಯಿ, ನಾಯ್ಯಲ್, ತಯಾರಿಕೆ ಮಾಡಲಾಗುವುದು ಎಂದು ಸಭೆಗೆ ತಿಳಿಸಿದರು.
ಈ ಬಗ್ಗೆ ಸ್ವಯಂ ಸೇವಾ ಸಂಸ್ಥೆಗಳು ತುರ್ತಾಗಿ ಕ್ರಿಯಾ ಯೋಜನೆ ಸಿದ್ಧಪಡಿಸಿ ಸಲ್ಲಿಸಬೇಕು ಎಂದು ಸಿಇಒ ಸೂಚಿಸಿದರು. ಫಾದರ್ ಅನಿಲ್, ಚಿನ್ನಮ್ಮ ಬಾವಗೆ, ಲಕ್ಷ್ಮೀ, ಯಲ್ಲಮ್ಮ, ಗೌರಿಶಂಕರ ಪರ್ತಾಪುರೆ ಪಾಲ್ಗೊಂಡಿದ್ದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರು ಸ್ವಾಗತಿಸಿದರು.