Advertisement

ಬಡ ಲಿಂಗಾಯತ ಮಕ್ಕಳ ಶಾಲಾ ಶುಲ್ಕ ಭರ್ತಿಗೆ ಚಿಂತನೆ

04:23 PM Sep 09, 2018 | Team Udayavani |

ಧಾರವಾಡ: ಬಡ ಪ್ರತಿಭಾವಂತ ಲಿಂಗಾಯತ ಸಮುದಾಯದ ಶಾಲಾ ಮಕ್ಕಳ ಸಂಪೂರ್ಣ ಶುಲ್ಕ ಭರಿಸುವ ಕುರಿತು ಚಿಂತನೆ ನಡೆದಿದೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಹೇಳಿದರು.

Advertisement

ನಗರದ ಲಿಂಗಾಯತ ಭವನದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದಿಂದ ಹಮ್ಮಿಕೊಂಡಿದ್ದ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು. ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಮಹಾಸಭಾದಿಂದ ವಿದ್ಯಾರ್ಥಿಗಳಿಗೆ 1500 ರೂ. ನೀಡಲಾಗುತ್ತಿದೆ. ಆದರೆ ಇಷ್ಟು ಕಡಿಮೆ ಹಣದಿಂದ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲವಾಗುವುದಿಲ್ಲ ಎಂಬುದು ತಿಳಿದಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಕೆಲ ಮಕ್ಕಳಿಗಾದರೂ ಅನುಕೂಲ ಕಲ್ಪಿಸಲು ಅವರ ಶಾಲೆಯ ಪೂರ್ಣ ಶುಲ್ಕವನ್ನು ಮಹಾಸಭೆ ಭರಿಸುವ ಮೂಲಕ ಅವರಿಗೆ ಉತ್ತಮ ಶಿಕ್ಷಣ ನೀಡಲು ಚಿಂತಿಸಿದೆ ಎಂದರು.

ಮಠಗಳಿಂದ ತ್ರಿವಿಧ ದಾಸೋಹ: ಕೆಪಿಸಿಸಿ
ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಮಾತನಾಡಿ, ನಮ್ಮ ಸಮಾಜದ ಮಠ ಮಾನ್ಯಗಳು ಲಿಂಗಾಯತ ವೀರಶೈವರಿಗಷ್ಟೇ ಅಲ್ಲ ಎಲ್ಲ ಜಾತಿಯವರಿಗೂ ವಿದ್ಯೆ, ಅನ್ನ, ಆಶ್ರಯ ಕಲ್ಪಿಸಿ ಕೊಟ್ಟಿವೆ ಎಂದು ಹೇಳಿದರು. ಆಧುನಿಕತೆ ಈಗ ನಮ್ಮ ನಿದ್ದೆಗೆಡಿಸಿದೆ. ನಾವೆಲ್ಲ ಇಂದು ಭೌತಿಕ ಸುಖದತ್ತ ಹೊರಟಿದ್ದೇವೆ. ಹಣ, ಆಸ್ತಿಯ ಬೆನ್ನು ಹತ್ತಿರುವ ನಮ್ಮ ಯುವ ಪೀಳಿಗೆ ದುಶ್ಚಟಗಳಿಗೆ ಬಲಿಯಾಗುತ್ತಿದೆ. ಬೆಂಗಳೂರು ಮಹಾನಗರದಲ್ಲಂತೂ ಮಾದಕ ವಸ್ತುಗಳ ಹಾವಳಿ ಹೆಚ್ಚಾಗುತ್ತಿದೆ ಎಂದರು.

ಇಂದು ಧರ್ಮದ ಹೆಸರಿನಲ್ಲಿ ಭಯೋತ್ಪಾದನೆ ಹೆಚ್ಚುತ್ತಿದೆ. ಬಸವಾದಿ ಶರಣರ ವಚನಗಳನ್ನು ಹೇಳುವುದು ಬಹಳ ಸುಲಭ. ಅದರಲ್ಲೂ ವಚನಗಳ ಬಗ್ಗೆ ಮಾತನಾಡುವವರು ಬಹಳ ಜನ ಇದ್ದು, ಗಂಟೆಗಟ್ಟಲೇ ಮಾತನಾಡಿ ತಮ್ಮ ಲಾಭ ಪಡೆಯುವವರೂ ಇದ್ದಾರೆ. ಜೀವನದಲ್ಲಿ ವಚನ ಸಾಹಿತ್ಯದ ನೈತಿಕತೆ ಅಳವಡಿಸಿಕೊಳ್ಳಬೇಕು ಎಂದು ಖಂಡ್ರೆ ಹೇಳಿದರು.

ವಿ.ಸಿ. ಸವಡಿ ಪ್ರಾಸ್ತಾವಿಕ ಮಾತನಾಡಿ, ಸಾಕಷ್ಟು ಮಹನೀಯರು ವೀರಶೈವ ಮಹಾಸಭಾ ಕಟ್ಟಿದ್ದಾರೆ. ವೀರಶೈವ ಲಿಂಗಾಯತರೆಲ್ಲರೂ ಒಂದೇ ಎಂದು ಶಾಮನೂರ ಅವರು ಗಟ್ಟಿ ನಿಂತು ಸಮಾಜದ ಏಳ್ಗೆಗೆ ಶ್ರಮಿಸಿದ್ದಾರೆ. ಲಿಂಗಾಯತ ಭವನದ ಸ್ಥಾಪನೆ ಆಗಿದ್ದು, ಈಗ ವಿದ್ಯಾರ್ಥಿ ನಿಲಯ ಕಟ್ಟಲು ಸಹಕರಿಸಬೇಕು ಎಂದರು.

Advertisement

ಮಹಾಸಭಾ ಹಿರಿಯ ಉಪಾಧ್ಯಕ್ಷ ಎನ್‌. ತಿಪ್ಪಣ್ಣ ಮಾತನಾಡಿ, ನಾವೆಲ್ಲರೂ ಶರಣರು ಹೇಳಿದಂತೆ ನಡೆಯಬೇಕು. ದ್ವೇಷ, ಅಸೂಯೆ ತುಂಬಿಕೊಂಡರೆ ನಾವು ವೀರಶೈವರೂ ಇಲ್ಲ, ಲಿಂಗಾಯತರೂ ಅಲ್ಲವಾಗುತ್ತೇವೆ. ಲಿಂಗಾಯತರು ಎನ್ನುವವರೆಷ್ಟು ಜನ ಲಿಂಗ ಧರಿಸಿದ್ದೀರಿ ಎಂದು ಪ್ರಶ್ನಿಸಿದರು. ಬೆಂಗಳೂರಿನಲ್ಲಿ ಮಹಾಸಭಾದಿಂದ ಒಂದು ಸಾವಿರ ವಿದ್ಯಾರ್ಥಿಗಳಿಗೆ ವಸತಿ ನಿಲಯ ನಿರ್ಮಾಣ ಮಾಡುತ್ತಿದ್ದು ದಾನಿಗಳು ದಾನ ನೀಡಬಹುದು ಎಂದರು.

ಮಹಾಸಭಾದ ಜಿಲ್ಲಾಧ್ಯಕ್ಷ ಶಿವಾನಂದ ಅಂಬಡಗಟ್ಟಿ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಉಪಾಧ್ಯಕ್ಷ ಗುರುರಾಜ ಹುಣಸಿಮರದ, ಪದಾಧಿಕಾರಿಗಳಾದ ಎ.ಎಸ್‌. ವೀರಣ್ಣ, ಸಚ್ಚಿದಾನಂದಮೂರ್ತಿ, ರೇಣುಕ ಪ್ರಸನ್ನ, ಮುಖಂಡರಾದ ವೀರಣ್ಣ ಮತ್ತೀಕಟ್ಟಿ, ಬಸವರಾಜ ಬಿಕ್ಕಣ್ಣವರ, ವಿ.ಎಸ್‌. ಪಾಟೀಲ, ಶಾಂತವೀರ ಬೆಟಗೇರಿ, ಶಂಕರ ಕುಂಬಿ, ಸದಾನಂದ ಶಿವಳ್ಳಿ, ಮಲ್ಲಪ್ಪ ಬಾವಿ, ಡಾ| ಎ.ಎಸ್‌.ಪ್ರಭಾಕರ, ಸಿದ್ದು ಕಂಬಾರ, ಮಲ್ಲನಗೌಡ ಪಾಟೀಲ, ಪರಶುರಾಮ ಹಕ್ಕರಕಿ, ಕರೆಪ್ಪ ಅಮ್ಮಿನಬಾವಿ ಇದ್ದರು.

ಮೇಘಾ ಹುಕ್ಕೇರಿ ಹಾಗೂ ಸಾಕ್ಷಿ ಹುಕ್ಕೇರಿ ವಚನ ಗಾಯನ ನಡೆಸಿಕೊಟ್ಟರು. ಡಾ| ನಳಿನಿ ಪ್ರಭಾಕರ ಸ್ವಾಗತಿಸಿದರು. ಸುರೇಖಾ ಸಂಕನಗೌಡರ ನಿರೂಪಿಸಿದರು. ಮೈಲಾರ ಉಪ್ಪಿನ ವಂದಿಸಿದರು.

ಬೆಲ್ಲದ ವಿರುದ್ಧ ಕಿಡಿ
ಸಮಾಜದ ಮುಖಂಡರು, ನಾಯಕರು ಹಾಗೂ ಜನರಿಂದ ಲಿಂಗಾಯತ ಭವನ ನಿರ್ಮಿಸಲಾಗಿದೆ. ಆದರೆ ಬೆಲ್ಲದ ಅವರು ತಮ್ಮ ಪ್ರತಿಷ್ಠೆಗಾಗಿ ಕುಟುಂಬದ ಹೆಸರು ಇಟ್ಟಿದ್ದರು. ಅನಿವಾರ್ಯವಾಗಿ ಮಹಾಸಭೆ ಮಧ್ಯ ಪ್ರವೇಶ ಮಾಡಿ ಬೆಲ್ಲದ ಅವರನ್ನು ಸಮಿತಿಯಿಂದ ಹೊರ ಹಾಕಿ ನೂತನ ಸಮಿತಿ ರಚಿಸಲಾಗಿದೆ. ಇದೀಗ ಎಲ್ಲವೂ ಉತ್ತಮವಾಗಿ ನಡೆದಿದೆ ಎಂದು ಶಾಮನೂರು ಶಿವಶಂಕರಪ್ಪ ಹೇಳಿದರು.

ನಾವು ವೀರಶೈವರು, ಲಿಂಗಾಯತರು ಎನ್ನದೇ ಒಗ್ಗಟ್ಟಾಗಿ ಮುನ್ನಡೆಯೋಣ. ಸತ್ಯ, ನ್ಯಾಯ ಇರಬೇಕಾದ ಈ ಧರ್ಮದಲ್ಲಿ ಅದರಿಂದಾಗಿಯೇ ಆತಂಕ ಹಾಗೂ ಜಾತಿಗಳ ಮಧ್ಯೆ ಕಲಹ ಬೇಡ.
. ಈಶ್ವರ ಖಂಡ್ರೆ, ಕೆಪಿಸಿಸಿ ಕಾರ್ಯಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next