Advertisement
ಮಾಜಿ ಮುಖ್ಯಮಂತ್ರಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ರಾಮನಗರದ ಜೊತೆಗೆ ಚನ್ನಪಟ್ಟಣ ಕ್ಷೇತ್ರದಲ್ಲಿಯೂ ಸ್ಪರ್ಧೆ ಮಾಡಲು ತೀರ್ಮಾನಿಸಿದ್ದು, ಕಾಂಗ್ರೆಸ್ ತೊರೆದು ಬಿಜೆಪಿಗೆ ಹೋಗಿರುವ ಸಿ.ಪಿ.ಯೋಗೇಶ್ವರ್ ಅಲ್ಲಿ ಅಭ್ಯರ್ಥಿಯಾಗಿದ್ದು , ಇದೀಗ ಕಾಂಗ್ರೆಸ್ ಅಭ್ಯರ್ಥಿಯಾಗಿ ಎಚ್.ಎಂ.ರೇವಣ್ಣ ಅವರನ್ನು ಕಣಕ್ಕಿಳಿಸಿ ಇಬ್ಬರಿಗೂ ಎದಿರೇಟು ನೀಡಲು ಚಿಂತನೆ ನಡೆದಿದೆ.
Related Articles
Advertisement
ಎಚ್.ಡಿ.ಕುಮಾರಸ್ವಾಮಿ ಹಾಗೂ ಸಿ.ಪಿ. ಯೋಗೇಶ್ವರ್ ಒಕ್ಕಲಿಗ ಸಮುದಾಯದ ನಾಯಕರಾಗಿದ್ದು, ಇಬ್ಬರಿಗೂ ಒಂದೇ ಸಮುದಾಯದ ಮತಗಳು ಇಬ್ಟಾಗವಾಗುವುದರಿಂದ ಅಹಿಂದ ಮತಗಳು ಕಾಂಗ್ರೆಸ್ ಅಭ್ಯರ್ಥಿ ರೇವಣ್ಣಗೆ ಬಿದ್ದರೆ ಸುಲಭವಾಗಿ ಗೆಲ್ಲಬಹುದು ಎನ್ನುವ ಲೆಕ್ಕಾಚಾರ ಕಾಂಗ್ರೆಸ್ ನಾಯಕರದು.
ಈ ಕ್ಷೇತ್ರದಲ್ಲಿ ಕುರುಬ ಸಮುದಾಯದ ಮತಗಳು ಕಡಿಮೆ ಇದ್ದರೂ, ಕಾಂಗ್ರೆಸ್ ಪಕ್ಷದ ಗೆಲುವಿಗಿಂತ ಜೆಡಿಎಸ್‌ಗೆ ಬೀಳುವ ಅಲ್ಪ ಸಂಖ್ಯಾತರು ಮತ್ತು ಇತರ ಹಿಂದುಳಿದ ವರ್ಗಗಳ ಮತಗಳನ್ನು ಒಡೆದು ಕುಮಾರಸ್ವಾಮಿ ಹಾಗೂ ಯೋಗೇಶ್ವರ್ ಸೋಲಿಸುವುದು ಪ್ರಮುಖ ಉದ್ದೇಶ ಎನ್ನಲಾಗಿದೆ. ಈ ಬೆಳವಣಿಗೆ ಕುರಿತು ಮಾತನಾಡಿದ ಸಾರಿಗೆ ಸಚಿವ ಎಚ್.ಎಂ. ರೇವಣ್ಣ, ಚನ್ನಪಟ್ಟಣದಲ್ಲಿ ಸ್ಪರ್ಧೆ ಮಾಡುವ ಬಗ್ಗೆ ನನ್ನ ಬಳಿ ಯಾರೂ ಚರ್ಚೆ ಮಾಡಿಲ್ಲ. ಒಂದು ವೇಳೆ ಚನ್ನಪಟ್ಟಣದಲ್ಲಿ ಸ್ಪರ್ಧಿಸುವಂತೆ ಹೈ ಕಮಾಂಡ್ ಸೂಚಿಸಿದರೆ, ಪಕ್ಷದ ಆದೇಶದಂತೆ ಕೆಲಸ ಮಾಡುತ್ತೇನೆ. ಬಾದಾಮಿ ಕ್ಷೇತ್ರದ ಉಸ್ತುವಾರಿ ನೀಡಿದರೂ ನಿಷ್ಠಾವಂತ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದರು. ಈ ಮಧ್ಯೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಾದಾಮಿ ಕ್ಷೇತ್ರದಿಂದ ಸ್ಪರ್ಧೆ ಮಾಡಿದರೆ ಅಲ್ಲಿಯ ಉಸ್ತುವಾರಿ ಎಚ್.ಎಂ.ರೇವಣ್ಣ ಅವರದೇ. ರೇವಣ್ಣ ಅವರನ್ನು ಚನ್ನಪಟ್ಟಣ ಕ್ಷೇತ್ರದಿಂದ ಕಣಕ್ಕಿಳಿಸಿದರೆ ಬಾದಾಮಿ ಉಸ್ತುವಾರಿ ವಹಿಸುವವರು ಯಾರು ಎಂಬ ಪ್ರಶ್ನೆಯೂ ಇದೆ. ಹೀಗಾಗಿ, ಎಚ್.ಎಂ.ರೇವಣ್ಣ ಸ್ಪರ್ಧೆ ಇನ್ನೂ ಅಂತಿಮವಾಗಿಲ್ಲ ಎಂದು ಹೇಳಲಾಗಿದೆ.