Advertisement

ಪಾಲಿಕೆ ಆಸ್ತಿಗಳ ರಕ್ಷಣೆಗೆ ಸಮಿತಿ ರಚಿಸಲು ಚಿಂತನೆ

12:37 PM Jun 09, 2017 | |

ಬೆಂಗಳೂರು: ಬಿಬಿಎಂಪಿ ವತಿಯಿಂದ ಖಾಸಗಿ ಸಂಸ್ಥೆಗಳು, ವ್ಯಕ್ತಿಗಳಿಗೆ ನೀಡಲಾಗಿರುವ ಪಾಲಿಕೆಯ ಆಸ್ತಿಗಳ ಸಂರಕ್ಷಣೆ ಹಾಗೂ ವಶಕ್ಕೆ ಪಡೆಯುವ ಉದ್ದೇಶದಿಂದ ಪಾಲಿಕೆ ಹಿರಿಯ ಸದಸ್ಯರನ್ನೊಳಗೊಂಡ ಆಸ್ತಿ ಸಂರಕ್ಷಣಾ ಸಮಿತಿ ರಚಿಸುವ ಚಿಂತನೆಯಿದೆ ಎಂದು ಮೇಯರ್‌ ಜಿ.ಪದ್ಮಾವತಿ ತಿಳಿಸಿದ್ದಾರೆ. 

Advertisement

ಈ ಕುರಿತು ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಪಾಲಿಕೆಯ ಆಸ್ತಿಗಳನ್ನು ಲೆಕ್ಕ ಹಾಕಿ ಮಾಹಿತಿ ನೀಡುವಂತೆ ಈಗಾಗಲೇ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಜತೆಗೆ ನಗರದಲ್ಲಿರುವ ಆಸ್ತಿಗಳಿಗೆ ಪ್ರತ್ಯೇಕ ಗುರುತಿನ ಸಂಖ್ಯೆ (ಪಿಐಡಿ) ನೀಡಲಾಗುತ್ತಿದ್ದು, ಅಧಿಕಾರಿಗಳು ವರದಿ ನೀಡಿದ ನಂತರ, ಗುತ್ತಿಗೆ ಅವಧಿ ಮುಗಿದಿರುವ ಮತ್ತು ಖಾಸಗಿಯವರ ಪಾಲಾಗಿರುವ ಆಸ್ತಿಗಳನ್ನು ವಶಕ್ಕೆ ಪಡೆಯಲಾಗುವುದು,’ ಎಂದರು. 

“ನಗರದಲ್ಲಿ ಬಿಬಿಎಂಪಿಗೆ ಸೇರಿದ ಹತ್ತು ಸಾವಿರ ಕೋಟಿ ರೂ. ಗೂ ಮಿಗಿಲಾದ 5011 ಆಸ್ತಿಗಳಿವೆ. ಇದರಲ್ಲಿ ಉದ್ಯಾನ, ಖಾಲಿ ಜಾಗ, ಆಟದ ಮೈದಾನ ಮತ್ತು ಕಟ್ಟಡಗಳಿವೆ. ಪಾಲಿಕೆಯ ಹಲವಾರು ಕಟ್ಟಡಗಳನ್ನು ಭೋಗ್ಯಕ್ಕೆ ಪಡೆದಿರುವ ಖಾಸಗಿಯವರು ಈ ಹಿಂದೆ ನಿಗದಿ ಮಾಡಲಾದ ಬಾಡಿಗೆಯನ್ನೇ ಪಾವತಿಸುತ್ತಿದ್ದಾರೆ. ಇನ್ನು ಕೆಲವು ಕಡೆಗಳಲ್ಲಿ ಪಾಲಿಕೆಯ ಜಾಗಗಳಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಕಟ್ಟಡಗಳ ನಿರ್ಮಾಣ ಮಾಡಲಾಗುತ್ತಿದೆ,’ ಎಂದು ವಿವರಿಸಿದರು. 

ಹೀಗಾಗಿ ಪಾಲಿಕೆಯಲ್ಲಿರುವ ಎಲ್ಲ ಆಸ್ತಿಗಳ ಮಾಹಿತಿಯನ್ನು ಪಡೆದು, ಗುತ್ತಿಗೆ ಅವಧಿ ಮುಗಿದಿರುವ ಆಸ್ತಿಗಳನ್ನು ಕೂಡಲೇ ವಶಕ್ಕೆ ಪಡೆಯಲು ಉದ್ದೇಶಿಲಾಗಿದೆ. ಜತೆಗೆ ಬಾಡಿಗೆ ಹಣ ಹೆಚ್ಚಿಸುವುದು ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಪಾಲಿಕೆ ಆಸ್ತಿಗಳ ಸಂರಕ್ಷಣಾ ಸಮಿತಿ ರಚಿಸುವ ಕುರಿತಂತೆ ಚರ್ಚಿಸಲಾಗುತ್ತಿದೆ ಎಂದು ಮೇಯರ್‌ ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next