Advertisement

ಕಿಡ್ಸ್‌  ಈಜುಕೊಳ ನಿರ್ಮಾಣಕ್ಕೆ ಚಿಂತನೆ 

10:06 AM Sep 17, 2018 | |

ಮಹಾನಗರ: ಮಹಾನಗರ ಪಾಲಿಕೆಯ ಮಂಗಳ ಈಜುಕೊಳ ಮೇಲ್ದರ್ಜೆಗೇರಲಿದ್ದು, ಈಗಾಗಲೇ ಕಾಮಗಾರಿ ಪ್ರಾರಂಭವಾಗಿದೆ. ಅದೇ ರೀತಿ ನಗರದಲ್ಲಿ ಚಿಕ್ಕ ಮಕ್ಕಳು ಕೂಡ ಈಜು ಕಲಿಯಲು ಆಸಕ್ತಿ ವಹಿಸುತ್ತಿದ್ದು, ಅವರಿಗಾಗಿ ಪ್ರತ್ಯೇಕ ಕಿಡ್ಸ್‌ ಈಜುಕೊಳ ನಿರ್ಮಿಸುವತ್ತ ಪಾಲಿಕೆ ಚಿಂತಿಸುತ್ತಿದೆ.

Advertisement

ಮಂಗಳ ಈಜುಕೊಳದಲ್ಲಿ ಸದ್ಯ ಇರುವಂತಹ ನೀರು ಶುದ್ಧೀಕರಣ ಘಟಕ ಸುಮಾರು 28 ವರ್ಷ ಹಳೆಯದಾಗಿದ್ದು, ಹೊಸ ತಂತ್ರಜ್ಞಾನ ವ್ಯವಸ್ಥೆಯನ್ನು ಹೊಂದಿಲ್ಲ. ಈಗ ಸುಮಾರು ಒಂದು ಕೋಟಿ ರೂ. ವೆಚ್ಚದಲ್ಲಿ ನವೀಕರಣ ಪ್ರಾರಂಭವಾಗಿದೆ. ಈಜುಕೊಳದ ನೀರನ್ನು ಓಝೋನ್‌ ಘಟಕದಲ್ಲಿ ಸಂಸ್ಕರಿಸುವ ನೂತನ ತಂತ್ರಜ್ಞಾನ ಪರಿಚಯಿಸಲಾಗುತ್ತಿದ್ದು, ಈ ಮೂಲಕ ಈಜುಕೊಳ ಹೈಟೆಕ್‌ ಆಗುತ್ತಿದೆ. 

ಹಿಂದಿದ್ದ ಶುದ್ಧೀಕರಣ ಘಟಕದಲ್ಲಿ ಮಾನವ ಶ್ರಮದಿಂದಲೇ ಯಂತ್ರಗಳ ಕೆಲಸ ನಡೆಯುತ್ತಿತ್ತು. ಆದರೆ ಈ ನೂತನ ಘಟಕದಲ್ಲಿ ಸ್ವಯಂಚಾಲಿತ ಕಾರ್ಯದಿಂದ ಕೆಲಸಗಳು ನಡೆಯಲಿದೆ. ಈ ಹಿಂದೆ 10 ಎಚ್‌.ಪಿ.ಯ 2 ಪಂಪ್‌ ಗಳಿತ್ತು. ಈಗ 4 ಪಂಪ್‌ ಗಳನ್ನು ಅಳವಡಿಸಲಾಗುತ್ತಿದೆ.

ಹಳೆ ತಂತ್ರಜ್ಞಾನದಲ್ಲಿ ನೀರು ಶುದ್ಧೀಕರಣಕ್ಕೆ 3 ಡ್ರಮ್‌ ಇತ್ತು. ಈಗ 4 ಡ್ರಮ್‌ ಅಳವಡಿಸಿ ನೀರು ಶುದ್ಧೀಕರಣ ನಡೆಸಲಾಗುವುದು. ಬಳಿಕ ಆ ನೀರು ಬರಲು ಈಜುಕೊಳದ ಒಳಗೆ ಎರಡೂ ಬದಿಗಳಲ್ಲಿ 25 ತೂತು ಮಾಡಿ ಪೈಪ್‌ ಅಳವಡಿಸಲಾಗುತ್ತಿದೆ. ಇದು ನಿರಂತರ ಪ್ರಕ್ರಿಯೆಯಾಗಿದೆ.

ಸದ್ಯ ಈಜುಕೊಳದ ಸುತ್ತಲೂ ಮಣ್ಣು ಅಗೆಯಲಾಗಿದ್ದು, ನೂತನ ಪೈಪ್‌ಲೈನ್‌ ಅಳವಡಿಸುವ ಕಾಮಗಾರಿ ನಡೆಯುತ್ತಿದೆ. ಹಿಂದಿದ್ದ ಪೈಪ್‌ನ ಗಾತ್ರ ಚಿಕ್ಕದಾಗಿತ್ತು. ಅಲ್ಲದೆ ಪೈಪ್‌ ಒಳಗೆ ಹಾವಸೆ ಹಿಡಿದು ನೀರಿನ ರಭಸ ಕಡಿಮೆಯಾಗಿತ್ತು. ನೂತನ ತಂತ್ರಜ್ಞಾನದಿಂದ ಶುದ್ಧೀಕರಣವಾದ ನೀರು ಪ್ರಬಲ ರೋಗ ನಿರೋಧಕ ಶಕ್ತಿ ಹೊಂದಿದೆ. ಇದರಿಂದ ಯಾವುದೇ ಅಂಟುರೋಗ ಹರಡುವುದಿಲ್ಲ. ನೀರಿನಲ್ಲಿರುವ ಕಲ್ಮಶ, ವೈರಸ್‌ ನಾಶವಾಗಲಿದ್ದು, ಈ ನೀರು ಅತ್ಯಂತ ಸುರಕ್ಷಿತವಾಗಿದೆ.

Advertisement

ರಜೆ ವೇಳೆ ತಯಾರಾಗಲ್ಲ
ಸಾಮಾನ್ಯವಾಗಿ ಶಾಲೆಗಳಿಗೆ ರಜೆ ಇರುವಾಗ ಮಕ್ಕಳು ಬೆಳಗ್ಗೆ- ಸಂಜೆ ಈಜು ತರಬೇತಿ ಪಡೆಯಲು ಇಲ್ಲಿಗೆ ಬರುತ್ತಾರೆ. ವಿದ್ಯಾರ್ಥಿಗಳಿಗೆ ಅಕ್ಟೋಬರ್‌ನಲ್ಲಿ ರಜೆ ಇದ್ದು, ಈ ವೇಳೆ ಕಾಮಗಾರಿ ಪೂರ್ಣಗೊಳ್ಳುವುದು ಕಷ್ಟಕರವಾದ ಹಿನ್ನೆಲೆಯಲ್ಲಿ ಈಜುಕೊಳ ಲಭ್ಯವಿರುವುದಿಲ್ಲ. ಸದ್ಯ ನಗರದ ವಿದ್ಯಾರ್ಥಿಗಳು ಸಂತ ಅಲೋಶಿಯಸ್‌ ಕಾಲೇಜಿನ ಅಥವಾ ಎನ್‌ಐಟಿಕೆ ಈಜು ಕೊಳದತ್ತ ತೆರಳುತ್ತಿದ್ದಾರೆ. 

ದರ ಹೆಚ್ಚಳಕ್ಕೆ ಚಿಂತನೆ
ಈಜುಕೊಳ ಪ್ರವೇಶಿಸಲು ಸಾರ್ವಜನಿಕರಿಗೆ ದಿನಕ್ಕೆ 20 ರೂ. ಶುಲ್ಕವಿದೆ. ಒಂದು ತಿಂಗಳ ಪಾಸ್‌ಗೆ 400 ರೂ.ನೀಡಬೇಕಾಗುತ್ತದೆ. ಮಕ್ಕಳಿಗೆ ಮತ್ತು ಹಿರಿಯ ನಾಗರಿಕರಿಗೆ ದಿನಕ್ಕೆ 10 ರೂ., ತಿಂಗಳಿಗೆ 200 ರೂ.ನಿಗದಿಪಡಿಲಾಗಿದೆ. ಮೂರು ತಿಂಗಳಿಗೆ ಸಾರ್ವಜನಿಕರಿಗೆ 750 ರೂ. ಶುಲ್ಕ ಇದ್ದರೆ ಮಕ್ಕಳಿಗೆ, ಹಿರಿಯ ನಾಗರಿಕರಿಗೆ 350 ರೂ., ಆರು ತಿಂಗಳಿಗೆ ಸಾರ್ವಜನಿಕರಿಗೆ 1,000 ರೂ., ಮಕ್ಕಳಿಗೆ, ಹಿರಿಯ ನಾಗರಿಕರಿಗೆ 600 ರೂ. ಶುಲ್ಕವಿದೆ. ಒಂದು ವರ್ಷಕ್ಕೆ ಸಾರ್ವಜನಿಕರಿಗೆ 1,500 ರೂ., ಮಕ್ಕಳು, ಸಾರ್ವಜನಿಕರಿಗೆ 1,000 ರೂ. ನಿಗದಿಪಡಿಸಲಾಗಿದೆ. ದರ ಪಟ್ಟಿಯಲ್ಲಿ 5 ವರ್ಷಗಳಿಂದ ಯಾವುದೇ ಪರಿಷ್ಕರಣೆ ನಡೆಸಲಿಲ್ಲ. ಮುಂದಿನ ದಿನಗಳಲ್ಲಿ ಅನಿವಾರ್ಯವಾಗಿ ಹೆಚ್ಚಳ ಮಾಡಬೇಕಾಗುತ್ತದೆ ಎಂದು ಅಧಿಕಾರಿಯೊಬ್ಬರು ‘ಸುದಿನ’ಕ್ಕೆ ಪ್ರತಿಕ್ರಿಯಿಸಿದ್ದಾರೆ.

4 ತಿಂಗಳೊಳಗೆ ಪೂರ್ಣ
ಈಗಾಗಲೇ ಈಜುಕೊಳ ಕಾಮಗಾರಿ ಪ್ರಾರಂಭವಾಗಿದ್ದು, 4 ತಿಂಗಳೊಗೆ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಈಜುಕೊಳದ ನೀರನ್ನು ಓಝೋನ್‌ ಘಟಕದಲ್ಲಿ ಸಂಸ್ಕರಿಸುವ ತಂತ್ರಜ್ಞಾನ ಇಲ್ಲಿ ಪರಿಚಯಿಸಲಾಗುತ್ತಿದೆ.
 - ರಾಜೇಶ್‌, ಎಂಜಿನಿಯರ್‌

ಈಜು ಸ್ಪರ್ಧೆಗೆ ಸಿದ್ಧತೆ
ಸಾರ್ವಜನಿಕರನ್ನು ಆಕರ್ಷಿಸಲು ಮಂಗಳ ಈಜುಕೊಳದಲ್ಲಿ ನೂತನ ತಂತ್ರಜ್ಞಾನ ಅಳವಡಿಸಲಾಗುತ್ತಿದೆ. ಮುಂದೆ ಇಲ್ಲಿ ಈಜು ಸ್ಪರ್ಧೆ ನಡೆಸಲು ಅನುಕೂಲವಾಗುವಂತೆ ತಯಾರು ಮಾಡಲಾಗುತ್ತಿದೆ.
– ಭಾಸ್ಕರ್‌ ಕೆ.,
ಪಾಲಿಕೆ ಮೇಯರ್‌

‡ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next