Advertisement

ರೈಲು “ಲೀಸ್‌’ಪಡೆಯಲು ಚಿಂತನೆ

12:26 AM Sep 28, 2019 | Team Udayavani |

ಬೆಂಗಳೂರು: “ನಮ್ಮ ಮೆಟ್ರೋ’ ಎರಡನೇ ಹಂತದ ಕಾರ್ಯಾಚರಣೆ ಮತ್ತು ನಿರ್ವಹಣೆ ವ್ಯವಸ್ಥೆಯನ್ನು ಸಂಪೂರ್ಣವಾಗಿ ಗುತ್ತಿಗೆ ನೀಡಲು ನಿರ್ಧರಿಸಿದ ಬೆನ್ನಲ್ಲೇ 2ಎ ಮತ್ತು 3ನೇ ಹಂತದಲ್ಲಿ ರೈಲುಗಳನ್ನೂ ಗುತ್ತಿಗೆ ರೂಪದಲ್ಲಿ ಪಡೆಯಲು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್‌) ಚಿಂತನೆ ನಡೆಸಿದೆ. ದೆಹಲಿ ಮೆಟ್ರೋ ರೈಲು ಯೋಜನೆಯಲ್ಲಿ 35 ವರ್ಷ ಲೀಸ್‌ನಲ್ಲಿ ಪಡೆಯಲು ಉದ್ದೇಶಿಸಲಾಗಿದೆ. ಇದೇ ಮಾದರಿಯನ್ನು ಇಲ್ಲಿ ಪರಿಚಯಿಸುವ ಚಿಂತನೆ ನಡೆದಿದೆ.

Advertisement

ಮೆಟ್ರೋ ರೈಲುಗಳ ಕಾರ್ಯಾಚರಣೆ ಮತ್ತು ನಿರ್ವಹಣೆ ವೆಚ್ಚವನ್ನು ಸಾಧ್ಯವಾದಷ್ಟು ತಗ್ಗಿಸುವ ಮೂಲ ಉದ್ದೇಶದಿಂದ ಗುತ್ತಿಗೆ ವ್ಯವಸ್ಥೆ ವಿಸ್ತರಣೆಗೆ ಮುಂದಾಗಿದ್ದು, ಇದರಿಂದಾಗುವ ಉಳಿತಾಯವನ್ನು ಯೋಜನಾ ನಿರ್ಮಾಣಕ್ಕೆ ವಿನಿಯೋಗಿಸುವ ಲೆಕ್ಕಾಚಾರ ಇದರ ಹಿಂದಿದೆ ಎನ್ನಲಾಗಿದೆ. 2ಎ ಕೆ.ಆರ್‌.ಪುರದಿಂದ ಸೆಂಟ್ರಲ್‌ ಸಿಲ್ಕ್ ಬೋರ್ಡ್‌ವರೆಗೆ ಇದ್ದು, ಸುಮಾರು 18 ಕಿ.ಮೀ. ಮಾರ್ಗ ನಿರ್ಮಿಸಲಾಗುತ್ತಿದೆ.

ಅದೇ ರೀತಿ, 3ನೇ ಹಂತದಲ್ಲಿ ಸುಮಾರು 83 ಕಿ.ಮೀ. ಉದ್ದದ ಮೆಟ್ರೋ ಜಾಲ ನಿರ್ಮಿಸಲು ಉದ್ದೇಶಿಸಿದ್ದು, ಇದು ಬಹುತೇಕ ನಗರದ ಹೊರವರ್ತುಲವನ್ನು ಸುತ್ತುವರಿಯಲಿದೆ. ಅದರಲ್ಲೂ ಮುಖ್ಯವಾಗಿ ನಾಗವಾರದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಕೋಗಿಲು ಕ್ರಾಸ್‌ನಿಂದ ರಾಜಾನುಕುಂಟೆ, ಹೆಬ್ಬಾಳದಿಂದ ಜೆ.ಪಿ.ನಗರ ಸೇರಿದಂತೆ ಹಲವು ಮಾರ್ಗಗಳಲ್ಲಿ ಇದು ಹಾದುಹೋಗಲಿದೆ.

ಆದರೆ, ಈ ಕುರಿತ ಸಮಗ್ರ ಯೋಜನಾ ವರದಿ ಇನ್ನೂ ಅಂತಿಮಗೊಂಡಿಲ್ಲ. ಹಾಗಾಗಿ, ರೈಲುಗಳ ನಿಯೋಜನೆಯೂ ಇನ್ನೂ ನಿರ್ಧಾರ ಆಗಿಲ್ಲ. ನಿಯೋಜನೆಗೊಂಡರೂ ಅವುಗಳನ್ನು “ಲೀಸ್‌’ ಪಡೆಯಬೇಕು ಎಂಬ ಚಿಂತನೆ ಇದೆ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿ “ಉದಯವಾಣಿ’ಗೆ ಮಾಹಿತಿ ನೀಡಿದರು. ಪ್ರಸ್ತುತ ಮೆಟ್ರೋ ಮೊದಲ ಹಂತದಲ್ಲಿ 51 ರೈಲುಗಳಿದ್ದು, ಈ ಪೈಕಿ ನಿತ್ಯ ನೇರಳೆ ಮತ್ತು ಹಸಿರು ಮಾರ್ಗಗಳ 42 ಕಿ.ಮೀ. ವ್ಯಾಪ್ತಿಯಲ್ಲಿ, 40 ರೈಲುಗಳು ಕಾರ್ಯಾಚರಣೆ ಮಾಡುತ್ತಿವೆ.

ಈ ಮಧ್ಯೆ ಪ್ರಯಾಣಿಕರ ಸಂಖ್ಯೆ ಹೆಚ್ಚಿದ ಹಿನ್ನೆಲೆಯಲ್ಲಿ ಮೂರು ಬೋಗಿಗಳಿದ್ದ ರೈಲಿನ ಸಾಮರ್ಥ್ಯವನ್ನು ದುಪ್ಪಟ್ಟು ಅಂದರೆ, ಆರು ಬೋಗಿಗಳಿಗೆ ಹೆಚ್ಚಿಸಲು ಕ್ರಮ ಕೈಗೊಂಡಿದ್ದು, ಮತ್ತೆ 150 ಬೋಗಿ ತಯಾರಿಸಿಕೊಡಲು ಭಾರತ್‌ ಅರ್ಥ್ ಮೂವರ್ ಲಿ., (ಬಿಇಎಂಎಲ್‌)ಗೆ ಬೇಡಿಕೆ ಇಡಲಾಗಿದೆ. ಇದರಲ್ಲಿ ಈಗಾಗಲೇ ನೂರು ಬೋಗಿಗಳ ಪೂರೈಕೆ ಆಗಿದ್ದು, 25ಕ್ಕೂ ಅಧಿಕ ರೈಲುಗಳು ಆರು ಬೋಗಿಗಳಾಗಿ ಮಾರ್ಪಟ್ಟಿವೆ. ಇನ್ನು ಎರಡನೇ ಹಂತದಲ್ಲಿ ಆರು ಬೋಗಿಗಳ 36 ರೈಲುಗಳ ಅವಶ್ಯಕತೆ ಇದ್ದು, ಇದಕ್ಕಾಗಿ ಟೆಂಡರ್‌ ಪ್ರಕ್ರಿಯೆ ನಡೆದಿದೆ. ಸಾಮಾನ್ಯವಾಗಿ ಆರು ಬೋಗಿಗಳ ಒಂದು ರೈಲಿಗೆ ಅಂದಾಜು 50ರಿಂದ 60 ಕೋಟಿ ರೂ. ಆಗುತ್ತದೆ ಎಂದು ಅಧಿಕಾರಿ ತಿಳಿಸಿದರು.

Advertisement

ಹೀಗೆ ಮಾಡದಿದ್ರೆ ವಿಸ್ತರಣೆ ಕಷ್ಟ: “ರೈಲುಗಳ ಕಾರ್ಯಾಚರಣೆ ಮತ್ತು ನಿರ್ವಹಣೆಗೇ ಖರ್ಚು ಮಾಡುತ್ತಿದ್ದರೆ, ನಿರೀಕ್ಷಿತ ವೇಗದಲ್ಲಿ ಮೆಟ್ರೋ ಜಾಲ ವಿಸ್ತರಿಸಲು ಸಾಧ್ಯವಾಗುವುದಿಲ್ಲ. ಈ ಮಾದರಿಗಳಿಗೆ ಸರ್ಕಾರ ಅನುದಾನವನ್ನು ಹೆಚ್ಚು ಅವಲಂಬಿಸಬೇಕಾಗುತ್ತದೆ ಅಥವಾ ವಿದೇಶಿ ಬ್ಯಾಂಕ್‌ಗಳಿಂದ ಸಾಲ ಪಡೆಯಬೇಕು. ಹೀಗೆ ಸಾಲ ಪಡೆದರೂ, ಪಾವತಿಸಲು ಹರಸಾಹಸ ಮಾಡಬೇಕಾಗುತ್ತದೆ. ಆದ್ದರಿಂದ “ಸಾಧ್ಯವಾದಷ್ಟು ಹೊರೆ ಕಡಿಮೆ ಮಾಡಿಕೊಳ್ಳಿ’ ಎಂಬ ಸೂಚನೆ ಇದೆ. ಅದರಂತೆ ಹಲವು ಪೂರಕ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಈಗಾಗಲೇ ಹೈದರಾಬಾದ್‌ ಮತ್ತು ಪುಣೆಯಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಮೆಟ್ರೋ ಸಾಗುತ್ತಿದೆ ಎಂದು ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಅಜಯ್‌ ಸೇಠ್ ತಿಳಿಸಿದರು. ಅಂದಹಾಗೆ ರೈಲುಗಳು ಮತ್ತು ನಿಲ್ದಾಣಗಳ ನಿರ್ವಹಣೆಗಾಗಿ ತಿಂಗಳಿಗೆ 25 ಕೋಟಿ ರೂ. ಖರ್ಚಾಗುತ್ತಿದೆ. ಅಂದರೆ ದಿನಕ್ಕೆ ಹೆಚ್ಚು-ಕಡಿಮೆ ಒಂದು ಕೋಟಿ ರೂ. ಆಗುತ್ತದೆ. ಇದರಲ್ಲಿ ರೈಲುಗಳ ವೆಚ್ಚ ಅಧಿಕವಾಗಿದೆ. ಒಂದು ಮೆಟ್ರೋ ರೈಲು ಕಾರ್ಯಾಚರಣೆ ಆರಂಭಿಸುವ ಮುನ್ನ ಸಿಗ್ನಲಿಂಗ್‌, ಬ್ರೇಕ್‌, ಸ್ವಚ್ಛತೆ, ವಿದ್ಯುತ್‌ ವ್ಯವಸ್ಥೆ ಸೇರಿದಂತೆ ಪ್ರತಿ ದಿನ ಆ ರೈಲಿನ ಅರ್ಹತಾ ಪ್ರಮಾಣಪತ್ರ ನೀಡಲಾಗುತ್ತದೆ.

ಹೀಗೆ ಪ್ರಮಾಣಪತ್ರ ನೀಡುವವರಿಂದ ಹಿಡಿದು, ಆ ವಿಭಾಗದಲ್ಲಿ ಕಾರ್ಯನಿರ್ವಹಿಸುವ ಎಂಜಿನಿಯರ್‌ಗಳ ವೇತನವೂ ಸೇರಿರುತ್ತದೆ. ಅದೆಲ್ಲವೂ ಲಕ್ಷಗಟ್ಟಲೆ ಆಗುತ್ತದೆ. ನಿತ್ಯ ಎಲ್ಲ ರೈಲುಗಳೂ ಕಾರ್ಯಾಚರಣೆ ಮಾಡುವುದಿಲ್ಲ, ನೇರಳೆಯಲ್ಲಿ ಸುಮಾರು 20 ಹಾಗೂ ಹಸಿರು ಮಾರ್ಗದಲ್ಲಿ 17ರಿಂದ 18 ರೈಲುಗಳು ಬಳಕೆ ಆಗುತ್ತವೆ ಎಂದು ಕಾರ್ಯಾಚರಣೆ ಮತ್ತು ನಿರ್ವಹಣೆ ವಿಭಾಗದ ಹಿರಿಯ ಅಧಿಕಾರಿ ಸ್ಪಷ್ಟಪಡಿಸಿದರು.

ಎರಡನೇ ಹಂತದಲ್ಲಿ ಲೀಸ್‌ನಲ್ಲಿ ಮೆಟ್ರೋ ಬೋಗಿಗಳನ್ನು ಪಡೆಯಲು ಸಾಧ್ಯವಿಲ್ಲ. ತದನಂತರದ 2ಎ, 3ನೇ ಹಂತಗಳಲ್ಲಿ ಈ ಮಾದರಿ ಅನುಸರಿಸಬಹುದು. ಈ ನಿಟ್ಟಿನಲ್ಲಿ ಚಿಂತನೆ ನಡೆದಿದೆ.
-ಅಜಯ್‌ ಸೇಠ್, ಬಿಎಂಆರ್‌ಸಿಎಲ್‌ ಎಂಡಿ

* ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next