ಬೆಂಗಳೂರು: ನನ್ನ ಕ್ಷೇತ್ರದ ಜನರೊಂದಿಗೆ ಚರ್ಚಿಸಿ ರಾಜಕೀಯ ನಿವೃತ್ತಿ ಘೋಷಿಸಬೇಕೆಂದಿದ್ದೇನೆ ಎಂದು ಅನರ್ಹ ಶಾಸಕ ಎಸ್ ಟಿ ಸೋಮಶೇಖರ್ ಹೇಳಿಕೆ ನೀಡಿದ್ದು, ಮತ್ತೊಂದೆಡೆ ಎಂಟಿಬಿ ನಾಗರಾಜ್ ಕೂಡಾ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಾವು ಮುಂಬೈಗೆ ಹೋಗಲು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಸಿದ್ದರಾಮಯ್ಯನವರೇ ಕಾರಣ ಎಂದು ಸೋಮವಾರ ಎಸ್ ಟಿ ಸೋಮಶೇಖರ್ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ.
ನಂಬಿಕೆ ದ್ರೋಹಕ್ಕೆ ಮತ್ತೊಂದು ಹೆಸರೇ ಕೃಷ್ಣಭೈರೇಗೌಡ, ಕಾಂಗ್ರೆಸ್ ಪಕ್ಷದಲ್ಲಿ ಕೃಷ್ಣಭೈರೇಗೌಡ ನಂಬಿಕೆಗೆ ಅರ್ಹವಾದ ವ್ಯಕ್ತಿಯಲ್ಲ ಎಂದು ದೂರಿದರು.ಕೃಷ್ಣಭೈರೇಗೌಡ ಸಾಚಾ ಅಲ್ಲ, ಜೆಡಿಎಸ್ ಬೆನ್ನಿಗೆ ಚೂರಿ ಹಾಕಿ ಕಾಂಗ್ರೆಸ್ ಗೆ ಬಂದಿದ್ದ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದರು. ಬಳ್ಳಾರಿ ಪಾದಯಾತ್ರೆ ಸಂದರ್ಭದಲ್ಲಿ ನಾವು ಕಾಂಗ್ರೆಸ್ ಪಕ್ಷಕ್ಕೆ ಸಹಾಯ ಮಾಡಿದ್ದೇವೆ ಎಂದರು.
ಕಾಂಗ್ರೆಸ್ ಪಕ್ಷದ ಋಣ ತೀರಿಸಲು ಸ್ಪೀಕರ್ ಶಾಸಕರನ್ನು ಅನರ್ಹಗೊಳಿಸಿದ್ದಾರೆ. ಇದನ್ನು ನಾವು ಮೊದಲೇ ಊಹೆ ಮಾಡಿದ್ದೇವು. ಇದೀಗ ನಾವು ಮತ್ತೆ ಕಾನೂನು ಹೋರಾಟ ಮಾಡುತ್ತೇವೆ ಎಂದರು.
ಐಟಿ, ಇಡಿ ದಾಳಿಗೆ ಹೆದರಿ ಹೋಗಿಲ್ಲ:
ನಾವು ಐಟಿ, ಇಡಿ ದಾಳಿಗೆ ಹೆದರಿ ಕಾಂಗ್ರೆಸ್ ಪಕ್ಷ ಬಿಟ್ಟು ಹೋಗಿಲ್ಲ. ನಮ್ಮ ಮೇಲಿನ ಎಲ್ಲಾ ಆರೋಪಗಳು ಸತ್ಯಕ್ಕೆ ದೂರವಾದದ್ದು, ನಾನೂ ಕೂಡಾ ರಾಜಕೀಯ ನಿವೃತ್ತಿ ಪಡೆಯಲು ಚಿಂತನೆ ನಡೆಸಿದ್ದೇನೆ ಎಂದು ಅನರ್ಹ ಶಾಸಕ ಎಂಟಿಬಿ ನಾಗರಾಜ್ ಪ್ರತಿಕ್ರಿಯೆ ನೀಡಿದ್ದಾರೆ.