Advertisement

ಸಹಕಾರಿ ಕಾಯ್ದೆ ತಿದ್ದುಪಡಿಗೆ ಚಿಂತನೆ

03:22 PM Nov 12, 2020 | Suhan S |

ಬೀದರ: ಸಹಕಾರ ಕ್ಷೇತ್ರದಲ್ಲಿ ಪಾರದರ್ಶಕತೆ ಮತ್ತು ಸುಧಾರಣೆ ತಂದು ಮತ್ತಷ್ಟು ಬಲಪಡಿಸುವ ದಿಸೆಯಲ್ಲಿ ಸಹಕಾರ ಕಾಯ್ದೆಗೆ ಬಿಗಿಗೊಳಿಸುವ, ತಿದ್ದುಪಡಿ ತರಲು ಚಿಂತನೆ ನಡೆದಿದೆ ಎಂದು ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ ಹೇಳಿದರು.

Advertisement

ನಗರದ ರಂಗ ಮಂದಿರದಲ್ಲಿ ಬುಧವಾರ ಕಲ್ಬುರ್ಗಿ ವಿಭಾಗ ಮಟ್ಟದ ಆರ್ಥಿಕ ಸ್ಪಂದನ ಹಾಗೂ ಸ್ವ ಸಹಾಯ ಗುಂಪುಗಳ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಸಹಕಾರ ಬ್ಯಾಂಕ್‌ಗಳಿಗೆ ಅನುಕೂಲವಾಗುವಂತೆ ಕಾನೂನುಗಳಲ್ಲಿ ಬದಲಾವಣೆ ತರಲಾಗುವುದು. “ಸಹಕಾರ’ದಲ್ಲಿಯೂ ಸಾರ್ವಜನಿಕ ಹಣ ದುರುಪಯೋಗ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಂಥವುಗಳಿಗೆ ಕಡಿವಾಣ ಹಾಕಲು ಕಠಿಣ ನಿಯಮ ಜಾರಿಗೊಳಿಸುವುದು ಅನಿವಾರ್ಯ ಆಗಿದೆ ಎಂದರು.

ಸಹಕಾರ ಕ್ಷೇತ್ರ ಪ್ರತಿಯೊಂದು ಕ್ಷೇತ್ರಗಳಲ್ಲಿ ತನ್ನ ಹಿಡಿತ ಸಾಧಿ ಸುತ್ತಿದ್ದು, ಜನರು ನಂಬಿಕೆ ಮತ್ತು ವಿಶ್ವಾಸದೊಂದಿಗೆ ಸಾವಿರಾರು ಕೋಟಿ ರೂ. ವ್ಯವಹಾರ ಮಾಡುತ್ತಿದ್ದಾರೆ. ಬರುವ ಮಾರ್ಚ್-ಏಪ್ರಿಲ್‌ ತಿಂಗಳಲ್ಲಿ ಗುಜರಾತ- ಮಹಾರಾಷ್ಟ್ರ ರಾಜ್ಯಗಳನ್ನುಹಿಂದಿಕ್ಕಿ ಕರ್ನಾಟಕವನ್ನು ದೇಶದಲ್ಲಿಯೇ ಸಹಕಾರ ರಂಗದಲ್ಲಿ ನಂಬರ್‌ ಒನ್‌ ರಾಜ್ಯ ಮಾಡುವ ಗುರಿ ಸಹಕಾರ ಇಲಾಖೆ ಹೊಂದಿದೆ ಎಂದರು.

ಕೋವಿಡ್‌ ಸಮಯದಲ್ಲಿ ಸಹಕಾರ ಕ್ಷೇತ್ರದ ವಿವಿಧ ಯೋಜನೆಗಳಡಿ 39,300 ಕೋಟಿ ರೂ. ಸಾಲ ವಿತರಣೆಗೆ ಕೇಂದ್ರದ ಆತ್ಮ ನಿರ್ಭರ್‌ ಯೋಜನೆ ಭಾಗವಾಗಿ ರಾಜ್ಯದಲ್ಲಿ ಆರ್ಥಿಕ ಸ್ಪಂದನ ಯೋಜನೆ ಜಾರಿಗೊಳಿಸಲಾಗಿದೆ. ಬೆಂಗಳೂರು, ಮೈಸೂರು ನಂತರ ಕಲುºರ್ಗಿ ವಿಭಾಗದಲ್ಲಿ ಯಶಸ್ವಿಯಾಗಿ ಮಾಡಲಾಗಿದ್ದು, ಕೊನೆಯದಾಗಿ ನ. 11ರಂದು ಬೆಳಗಾವಿ ವಿಭಾಗದಲ್ಲಿ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದ ಪರಿಣಾಮಕಾರಿ ಅನುಷ್ಠಾನಕ್ಕಾಗಿ ನೋಡಲ್‌ ಅಧಿಕಾರಿಗಳನ್ನು ನೇಮಕ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಸಂಸದ ಭಗವಂತ ಖೂಬಾ ಡಿಸಿಸಿ ಬ್ಯಾಂಕ್‌ ಹೊರತಂದಿರುವ “ಬೆಳಕು’ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿ, ಉಮಾಕಾಂತ ನಾಗಮಾರಪಳ್ಳಿ ನೇತೃತ್ವದಲ್ಲಿ ಡಿಸಿಸಿ ಬ್ಯಾಂಕ್‌ ದೇಶದಲ್ಲಿಯೇ ನಂಬರ್‌ ಒನ್‌ ಬ್ಯಾಂಕ್‌ ಆಗಿ ಕಾರ್ಯನಿರ್ವಹಿಸುತ್ತಿದೆ. ಫಸಲ್‌ ಬೀಮಾ ಯೋಜನೆಯಡಿ ಫಲಾನುಭವಿ ರೈತರಿಗೆ ಬೆಳೆ ವಿಮೆ ಪರಿಹಾರ ನೀಡುವಲ್ಲಿ ರಾಷ್ಟ್ರದಲ್ಲೇ ಪ್ರಥಮ ಸ್ಥಾನದಲ್ಲಿದೆ. ತಂದೆ ಡಾ| ಗುರುಪಾದಪ್ಪ ಹಾಕಿಕೊಟ್ಟ ಮಾರ್ಗದಲ್ಲಿ ಇಬ್ಬರು ಮಕ್ಕಳು ನಡೆಯುವ ಮೂಲಕ ಮಾದರಿಯಾಗಿದ್ದಾರೆ ಎಂದರು.

Advertisement

ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಪ್ರಾಸ್ತಾವಿಕ ಮಾತನಾಡಿ, ಡಿಸಿಸಿ ಬ್ಯಾಂಕ್‌ ಜಿಲ್ಲೆಯ ರೈತರ ಏಳ್ಗೆಗೆ ಶ್ರಮಿಸುತ್ತಿದೆ. ಸ್ವ-ಸಹಾಯ ಗುಂಪುಗಳ ರಚನೆ ಮೂಲಕ ವಿಶ್ವದಲ್ಲಿ ಮೌನವಾಗಿ ಸಹಕಾರ ಕ್ರಾಂತಿ ಮಾಡುತ್ತಿದೆ. ಜಿಲ್ಲೆಯಲ್ಲಿ 28 ಸ್ವ-ಸಹಾಯ ಸಂಘಗಳಿದ್ದು, 4.14 ಲಕ್ಷ ಒಟ್ಟು ಸದಸ್ಯರಿದ್ದಾರೆ. ಎಸ್‌ಎಚ್‌ಜಿ ಪ್ರಾರಂಭದಿಂದ ಈವರೆಗೆ ಒಟ್ಟು 1 ಸಾವಿರ 42 ಕೋಟಿ ರೂ. ಸಾಲ ನೀಡಲಾಗಿದೆ. ಫಸಲ್‌ ಬೀಮಾ ಯೋಜನೆಯಡಿ ಬೀದರ ಡಿಸಿಸಿ ಬ್ಯಾಂಕ್‌ ಸತತ 5 ವರ್ಷಗಳಲ್ಲಿ ರೈತರ ಬೆಳೆ ವಿಮೆಯ 50 ಕೋಟಿ ಕಂತು ಕಟ್ಟಿ ರೈತರ 302 ಕೋಟಿ ರೂ. ಪರಿಹಾರ ರೈತರ ಖಾತೆಗೆ ಜಮೆ ಮಾಡಿದೆ ಎಂದು ತಿಳಿಸಿದರು. ಶಾಸಕ ರಹೀಮ ಖಾನ್‌ ಅಧ್ಯಕ್ಷತೆ ವಹಿಸಿ ಮಾತನಾಡಿ, ದಿ. ಗುರುಪಾದಪ್ಪ ಪುತ್ರರಾದ ಉಮಾಕಾಂತ ಮತ್ತು ಸೂರ್ಯಕಾಂತ ನಾಗಮಾರಪಳ್ಳಿ ಸಹೋದರರಿಗೆ ಎಲ್ಲ ರೀತಿಯ ಸಹಕಾರ ನೀಡುತ್ತೇನೆ ಎಂದರು.

ಇದೇ ಸಂದರ್ಭದಲ್ಲಿ ಕಲಬುರಗಿ ವಿಭಾಗ ಮಟ್ಟದ ಡಿಸಿಸಿ

ಬ್ಯಾಂಕುಗಳು, ಜಿಲ್ಲಾ ಸಹಕಾರಿ ಹಾಲು ಒಕ್ಕೂಟಗಳು, ಪಟ್ಟಣ ಸಹಕಾರಿ ಬ್ಯಾಂಕುಗಳು- ಪತ್ತಿನ ಸಹಕಾರ ಸಂಘಗಳ ಮೂಲಕ ಬೀದರ, ಬಳ್ಳಾರಿ ಮತ್ತು ರಾಯಚೂರು ಜಿಲ್ಲೆಯ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸಹಕಾರ ಸಚಿವರು 10 ಸಾವಿರದಿಂದ 5, 8, 9 ಲಕ್ಷ ರೂ. ಸಾಲದ ಚೆಕ್‌ ವಿತರಿಸಿದರು.

ಈ ವೇಳೆ ಬ್ಯಾಂಕ್‌ ಉಪಾಧ್ಯಕ್ಷ ಭೀಮರಾವ್‌ ಪಾಟೀಲ, ಗುರುಪಾದಪ್ಪ ನಾಗಮಾರಪಳ್ಳಿ ಸಹಕಾರ ಆಸ್ಪತ್ರೆ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ, ಎಂಜಿಎಸ್‌ಎಸ್‌ಕೆ ಅಧ್ಯಕ್ಷಅಮರಕುಮಾರ ಖಂಡ್ರೆ, ಎನ್‌ಎಸ್‌ಎಸ್‌ಕೆ ಅಧ್ಯಕ್ಷ ಡಿ.ಕೆ. ಸಿದ್ರಾಮ, ಎಂಎಲ್‌ಸಿ ಅರವಿಂದಕುಮಾರ ಅರಳಿ, ಸಹಕಾರ ಇಲಾಖೆ ಪ್ರಧಾನ ಕಾರ್ಯದರ್ಶಿ ತುಷಾರ ಗಿರಿನಾಥ, ಸಹಕಾರ ಸಂಘಗಳ ನಿಬಂಧಕ ಎಸ್‌. ಜಿಯಾಉಲ್ಲಾ ಇದ್ದರು.

ಬೀದರ ಜಿಲ್ಲೆಯಲ್ಲಿ ಡಿಸಿಸಿ ಬ್ಯಾಂಕ್‌, ಎನ್‌ಎಸ್‌ ಎಸ್‌ಕೆ ಮತ್ತು ಸಹಕಾರಿ ಆಸ್ಪತ್ರೆ ನಿರ್ಮಾಣದ ಮೂಲಕ ರಾಜ್ಯದಲ್ಲಿ ಸಹಕಾರ ಕ್ಷೇತ್ರದಲ್ಲಿ ಅದ್ವಿತೀಯ ಕಾರ್ಯ ಮಾಡಿ ಹೋಗಿದ್ದಾರೆ. ಅವರ ದೂರದೃಷ್ಟಿಫಲದಿಂದ ಇಂದು ಲಕ್ಷಾಂತರ ಜನರಿಗೆ ಉದ್ಯೋಗ, ಕುಟುಂಬಗಳಿಗೆ ಆರ್ಥಿಕ ನೆರವು ಸಿಗುತ್ತಿದೆ. ಸಹಕಾರ ಕ್ಷೇತ್ರಕ್ಕೆ ಭದ್ರ ಬುನಾದಿ ಹಾಕಿಕೊಟ್ಟಿರುವ ದಿ. ಗುರುಪಾದಪ್ಪ ಸ್ಮರಿಸಲು ನ. 11ರಂದು ಸಹಕಾರ ಇಲಾಖೆಯಿಂದಲೇ ಅವರ ಜನ್ಮ ದಿನಆಚರಿಸಲು ನಿರ್ಧರಿಸಲಾಗಿದ್ದು, ಈ ಬಗ್ಗೆ ಸುತ್ತೋಲೆ ಹೊರಡಿಸಲಾಗುವುದು. –ಎಸ್‌.ಟಿ. ಸೋಮಶೇಖರ, ಸಹಕಾರ ಸಚಿವರು

Advertisement

Udayavani is now on Telegram. Click here to join our channel and stay updated with the latest news.

Next