ಹುಬ್ಬಳ್ಳಿ: ಮಕ್ಕಳಿಗೆ ಆಸ್ತಿ ಮಾಡುವಂತೆ ಮುಂದಿನ ಪೀಳಿಗೆಗೆ ನೀರು ಕಾಯ್ದಿರಿಸುವುದು ಕೂಡ ಅಷ್ಟೇ ಮುಖ್ಯ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಮಿತವಾಗಿ ನೀರು ಬಳಕೆಗೆ ಚಿಂತಿಸಬೇಕೆಂದು ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ ಹೇಳಿದರು.
ಇಲ್ಲಿನ ಗೋಕುಲ ಗಾರ್ಡನ್‌ನಲ್ಲಿ ಕ್ಷಮತಾ ಬಹು ಉದ್ದೇಶಿತ ಸೇವಾ ಸಂಸ್ಥೆ, ಅದಮ್ಯ ಚೇತನ ಫೌಂಡೇಶನ್ ಹಾಗೂ ಮಂಗಲ ಭಾರತಿ ಸಂಸ್ಥೆ ಆಶ್ರಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ “ಸಾಮಾಜಿಕ ಕಳಕಳಿ ಹಾಗೂ ನೀರು’ ಜಾಗೃತಿ ಕಾರ್ಯಕ್ರಮದಲ್ಲಿ ಹಾಸ್ಯದ ಮೂಲಕ ಜನರ ಮನ ಮುಟ್ಟುವಂತೆ ಮಾತನಾಡಿದರು.
ಜೀವನದಲ್ಲಿ ಏನೆಲ್ಲಾ ಗಳಿಸಲು ಪ್ರಯತ್ನಿಸುತ್ತೇವೆ. ಆದರೆ ಜೀವನಕ್ಕೆ ಬಹುಮುಖ್ಯವಾದ ನೀರಿನ ಬಗ್ಗೆ ಎಲ್ಲರಲ್ಲೂ ತಾತ್ಸಾರ ಭಾವನೆಯಿದೆ. ಈ ಮನಸ್ಥಿತಿಯಿಂದ ನಾವು ಹೊರಬಂದು ಮುಂದಿನ ಸಂತತಿಗೆ ಬೇಕಾಗುವಷ್ಟು ನೀರನ್ನು ಉಳಿಸಿಕೊಡುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ಅಭಿಪ್ರಾಯಪಟ್ಟರು.
ಕೆಲವೊಂದು ಗ್ರಾಮಗಳಲ್ಲಿ ಕುಡಿಯುವುದಕ್ಕೂ ನೀರಿನ ಹಾಹಾಕಾರವಿದೆ. ಈ ವಿಚಾರದಲ್ಲಿ ಪ್ರತಿಯೊಬ್ಬರಲ್ಲೂ ಸಾಮಾಜಿಕ ಕಳಕಳಿಯಿರಲಿ. ಈ ಕಳಕಳಿ ಕೇವಲ ಮಾತಿಗೆ ಸೀಮಿತವಾಗದೆ ಕೃತಿಯಲ್ಲಿ ಬರಬೇಕು. ಕೆರೆ ಕಟ್ಟೆಗಳನ್ನು ನಾಶ ಮಾಡಿ ಮನೆ ನಿರ್ಮಿಸಿಕೊಳ್ಳುತ್ತಿದ್ದೇವೆ. ಮಳೆ ಬಂದಾಗ ಮನೆಯಲ್ಲಿ ನೀರು ನುಗ್ಗಿತು ಎಂದು ಬಾಯಿ ಬಡೆದುಕೊಳ್ಳುವುದು ಸ್ವಯಂಕೃತ ಅಪರಾಧವಾಗಿದೆ.
ನಮ್ಮ ಸುತ್ತಲಿನ ಕೆರೆಗಳನ್ನು ರಕ್ಷಣೆಯಾದರೆ ಮಾತ್ರ ಜಲಮೂಲ ವೃದ್ಧಿಯಾಗುತ್ತದೆ ಎಂದರು. ಪ್ರೊ| ಎಂ.ಕೃಷ್ಣೇಗೌಡ ಮಾತನಾಡಿ, ನಮ್ಮ ದೇಶದಲ್ಲಿ ಹುಟ್ಟಿದ ತ್ಯಾಗ ಹಾಗೂ ಸೇವೆಯ ಉದಾತ್ತ ಗ್ರಂಥಗಳು ಬೇರಾವ ದೇಶದಲ್ಲೂ ಓದಲು ಸಾಧ್ಯವಿಲ್ಲ. ಮಾನವೀಯತೆಯ ಕಳಕಳಿಯಿಂದ ಮಾಡುವುದು ಸೇವೆಯೇ ಹೊರತು ವೋಟಿಗಾಗಿ ಅಥವಾ ಸಂಬಳಕ್ಕಾಗಿ ಮಾಡುವುದು ಸೇವೆಯಲ್ಲ ಅದು ಕರ್ತವ್ಯ ಎನಿಸಿಕೊಳ್ಳುತ್ತದೆ.
ಸಂಸದ ಪ್ರಹ್ಲಾದ ಜೋಶಿ ಕಾರ್ಯಕ್ರಮ ಕುರಿತು ಮಾತನಾಡಿ, ನಾವು ಮಾಡುವ ಸಣ್ಣ ಒಳ್ಳೆಯ ಕೆಲಸಗಳು ದೊಡ್ಡ ಪರಿಣಾಮ ಬೀರುತ್ತವೆ. ನಾನು ಒಳ್ಳೆಯನಾದರೆ ಬದಲಾವಣೆ ಸಾಧ್ಯವೇ ಎಂದು ಯೋಚಿಸುವ ಬದಲು ಕಾರ್ಯ ರೂಪಕ್ಕೆ ತಂದರೆ ನಮ್ಮಿಂದ ಇನ್ನೊಬ್ಬರು ಜಾಗೃತರಾಗುತ್ತಾರೆ.
ಪ್ರತಿಯೊಬ್ಬರಲ್ಲೂ ಸಾಮಾಜಿಕ ಕಳಕಳಿ ಇದ್ದರೆ ಮಾತ್ರ ಬದಲಾವಣೆ ಸಾಧ್ಯ ಎಂದು ಹೇಳಿದರು. ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ, ಮೇಯರ್ ಡಿ.ಕೆ. ಚವ್ಹಾಣ, ಶಾಸಕ ಅರವಿಂದ ಬೆಲ್ಲದ, ಜಿಪಂ ಅಧ್ಯಕ್ಷೆ ಚೈತ್ರಾ ಶಿರೂರ, ಮಾಜಿ ಶಾಸಕರಾದ ಶಂಕರಪಾಟೀಲ ಮುನೇನಕೊಪ್ಪ, ಸೀಮಾ ಮಸೂತಿ, ನಂದಕುಮಾರ, ಗೋವಿಂದ ಜೋಶಿ ಇದ್ದರು.