ಕನ್ನಡದಲ್ಲಿ ಈಗಂತೂ ಪ್ರಯೋಗಾತ್ಮಕ ಚಿತ್ರಗಳದ್ದೇ ಕಾರುಬಾರು.ಅದರಲ್ಲೂ ಹೊಸತನಕ್ಕೆ ಹೆಚ್ಚು ಆದ್ಯತೆ ಇರುವಂತಹ ಚಿತ್ರಗಳೇ ಬರುತ್ತಿವೆ. ಆ ಸಾಲಿಗೆ ಹೀಗೊಂದು “ಭಿನ್ನ’ ಚಿತ್ರವೂ ಸೇರಿದೆ. ಹೌದು, ಈ ಹಿಂದೆ “ಶುದ್ಧಿ’ ಎಂಬ ವಿಭಿನ್ನ ಬಗೆಯ ಚಿತ್ರವನ್ನು ನಿರ್ದೇಶಿಸಿದ್ದ ಆದರ್ಶ ಈಶ್ವರಪ್ಪ, ಇದೀಗ “ಭಿನ್ನ’ ಚಿತ್ರದ ಮೂಲಕ ವಿಭಿನ್ನವಾದುದ್ದನ್ನು ಹೇಳಲು ಹೊರಟಿದ್ದಾರೆ. ಅಂದಹಾಗೆ, ನಿರ್ದೇಶಕರಿಗೆ “ಭಿನ್ನ’ ಚಿತ್ರಕ್ಕೆ ಸ್ಫೂರ್ತಿಯಾಗಿದ್ದು “ಶರಪಂಜರ’ ಚಿತ್ರದ ಕಾವೇರಿ ಪಾತ್ರವಂತೆ.
ಆ ಚಿತ್ರವನ್ನು ಸಾಕಷ್ಟು ಸಲ ವೀಕ್ಷಿಸಿರುವ ನಿರ್ದೇಶಕರಿಗೆ ಕಾವೇರಿ ಪಾತ್ರ ಸ್ಫೂರ್ತಿ. ಅದನ್ನೇ ಇಟ್ಟುಕೊಂಡು “ಭಿನ್ನ’ ಚಿತ್ರ ಮಾಡಿದ್ದಾರೆ ನಿರ್ದೇಶಕರು. ಹಾಗಾದರೆ, ಕಾವೇರಿ ಪಾತ್ರದ ರೀತಿಯೇ “ಭಿನ್ನ’ ಚಿತ್ರದ ಪಾತ್ರವೂ ಇರಲಿದೆಯಾ? ಆ ಯೋಚನೆಯಿಂದ ಹೊರಬಂದಿರುವ ನಿರ್ದೇಶಕರು “ಭಿನ್ನ’ ಚಿತ್ರದ ಮೂಲಕ ಹೊಸದ್ದನ್ನು ಹೇಳುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಅಂದಹಾಗೆ, “ಭಿನ್ನ’ ಮಹಿಳಾ ಪ್ರಧಾನ ಚಿತ್ರ.
ಹಾಗಾಗಿ, ಮಹಿಳಾ ದಿನದ ವಿಶೇಷವಾಗಿ ಚಿತ್ರದ ಫಸ್ಟ್‌ಲಕ್ ಬಿಡುಗಡೆ ಮಾಡುವ ಮೂಲಕ ಮಹಿಳಾ ದಿನಾಚರಣೆಗೊಂದು ವಿಶೇಷ ಕೊಡುಗೆ ನೀಡಿದ್ದಾರೆ ನಿರ್ದೇಶಕ ಆದರ್ಶ ಈಶ್ವರಪ್ಪ. ಅಷ್ಟಕ್ಕೂ ಮಹಿಳಾ ಪ್ರಧಾನ ಚಿತ್ರಗಳ ಹಿಂದೆಯೇ ನಿರ್ದೇಶಕರು ನಿಂತಿದ್ದಾರೆಯೇ ಎಂಬ ಪ್ರಶ್ನೆ ಎದುರಾದರೂ, ಅವರಿಗೆ “ಶುದ್ಧಿ’ ಕಥೆ ಕಾಡಿದ್ದರಿಂದ ಆ ಚಿತ್ರ ಕೈಗೆತ್ತಿಕೊಂಡು ಅಂತಾರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡರು.
ಈಗ “ಭಿನ್ನ’ ಕಥೆ ಕೂಡ ಹೊಸತನದಿಂದ ಕೂಡಿದ್ದು, ಅದೂ ಸಾಕಷ್ಟು ಕಾಡಿದ್ದರಿಂದ ಪುನಃ ಮಹಿಳಾ ಪ್ರಧಾನ ಚಿತ್ರ ಮಾಡಿದ್ದಾರೆ. ಈ ಚಿತ್ರದಲ್ಲಿ ನಿರ್ದೇಶಕರು ಮಹಿಳೆಯರ ಶಕ್ತಿ, ಯುಕ್ತ ಮತ್ತು ಅವರಲ್ಲಿರುವ ಉತ್ಸಾಹ ಕುರಿತಾದ ಅಂಶಗಳೊಂದಿಗೆ ಕಥೆ ಹೇಳುತ್ತಿದ್ದಾರಂತೆ. ಈ ಚಿತ್ರದಲ್ಲಿ ಪಾಯಲ್ ರಾಧಾಕೃಷ್ಣ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದು,ಅವರಿಲ್ಲಿ ಎರಡು ಶೇಡ್ ಇರುವಂತಹ ಪಾತ್ರ ಮಾಡಿದ್ದಾರಂತೆ.
ಪಾತ್ರವನ್ನು ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆಂಬ ಖುಷಿ ನಿರ್ದೇಶಕರದ್ದು. ಇನ್ನು, ಚಿತ್ರದಲ್ಲಿ ಶಶಾಂಕ್ ಪುರುಷೋತ್ತಮ್, ಸಿದ್ಧಾರ್ಥ , ಸೌಮ್ಯ ಸೇರಿದಂತೆ ಹಲವು ನಟ,ನಟಿಯರು ನಟಿಸಿದ್ದಾರೆ. ವಿಶೇಷವೆಂದರೆ, “ಭಿನ್ನ’ ಚಿತ್ರದಲ್ಲಿ ಸಿಂಕ್‌ಸೌಂಡ್ ಬಳಸಲಾಗಿದೆಯಂತೆ. ಇಲ್ಲಿ ಸಾಕಷ್ಟು ಪ್ರಯೋಗಗಳಿದ್ದು, ನಾಲ್ಕು ಪ್ರಮುಖ ಪಾತ್ರಗಳು ಚಿತ್ರದ ಹೈಲೈಟ್ ಆಗಿದೆ ಎಂಬುದು ಚಿತ್ರತಂಡದ ಮಾತು.