Advertisement

ಕೈಗೆ ಗುರುದಾಸ್‌ಪುರ ವರ; ಬಿಜೆಪಿ ಭದ್ರಕೋಟೆ ಛಿದ್ರ

06:50 AM Oct 16, 2017 | |

ಗುರುದಾಸ್‌ಪುರ/ತಿರುವನಂತಪುರಂ: ಪಂಜಾಬ್‌ ಜನತೆ ದೀಪಾವಳಿಗೆ ಮುನ್ನವೇ ಕಾಂಗ್ರೆಸ್‌ಗೆ ಭರ್ಜರಿ ಉಡುಗೊರೆ ನೀಡಿದ್ದಾರೆ. ಗುರುದಾಸ್‌ಪುರ ಲೋಕಸಭೆ ಉಪಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್‌ನ ಅಭ್ಯರ್ಥಿ ಸುನೀಲ್‌ ಜಾಖರ್‌ ಅವರು ಭಾರೀ ಮತಗಳ ಅಂತರದಿಂದ ಗೆಲುವು ಸಾಧಿಸುವ ಮೂಲಕ ಬಿಜೆಪಿಯ ಭದ್ರಕೋಟೆಯನ್ನು ಛಿದ್ರ ಮಾಡಿದ್ದಾರೆ.

Advertisement

ಬಿಜೆಪಿ ಅಭ್ಯರ್ಥಿ ಸ್ವರ್ಣ ಸಲಾರಿಯಾ ಅವರನ್ನು ಜಾಖರ್‌ ಅವರು ಬರೋಬ್ಬರಿ 1.93 ಲಕ್ಷ ಮತಗಳ ಅಂತರದಿಂದ ಸೋಲಿಸುವ ಮೂಲಕ ಹೊಸ ದಾಖಲೆ ಸೃಷ್ಟಿಸಿದ್ದಾರೆ. ಇನ್ನೊಂದೆಡೆ, ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದ ಆಮ್‌ ಆದ್ಮಿ ಪಕ್ಷಕ್ಕೆ ತೀವ್ರ ಮುಖಭಂಗ ಆಗಿದೆ. ಆಪ್‌ ಅಭ್ಯರ್ಥಿ ನಿವೃತ್ತ ಮೇಜರ್‌ ಜನರಲ್‌ ಸುರೇಶ್‌ ಖಜುರಿಯಾ ಅವರು ಠೇವಣಿಯನ್ನೇ ಕಳೆದುಕೊಂಡಿದ್ದಾರೆ. 

10 ವರ್ಷಗಳ ಬಳಿಕ ಫೆಬ್ರವರಿಯಲ್ಲಿ ನಡೆದ ಪಂಜಾಬ್‌ ಅಸೆಂಬ್ಲಿ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ಕಾಂಗ್ರೆಸ್‌, ಇದೀಗ ಗುರುದಾಸ್‌ಪುರ ಲೋಕಸಭೆ ಚುನಾವಣೆಯಲ್ಲಿ ಅತಿದೊಡ್ಡ ಜಯ ಗಳಿಸುವ ಮೂಲಕ ಬಿಜೆಪಿಯ ರಾಜಕೀಯ ಕಾರ್ಯತಂತ್ರವನ್ನು ವಿಫ‌ಲಗೊಳಿ ಸಲು ಸಾಧ್ಯವಿದೆ ಎಂಬುದನ್ನು ತೋರಿಸಿಕೊಟ್ಟಿದೆ.

ವಿನೋದ್‌ ಖನ್ನಾ ನಿಧನದಿಂದ ತೆರವಾಗಿತ್ತು: ಏಪ್ರಿಲ್‌ನಲ್ಲಿ ಬಿಜೆಪಿ ಸಂಸದ, ನಟ ವಿನೋದ್‌ ಖನ್ನಾ ಅವರ ನಿಧನದಿಂದಾಗಿ ಗುರುದಾಸ್‌ಪುರ ಕ್ಷೇತ್ರ ತೆರವಾಗಿತ್ತು. 2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಖನ್ನಾ ಅವರು ಸುಮಾರು 1.36 ಲಕ್ಷ ಮತಗಳ ಅಂತರ ದಿಂದ ಗುರುದಾಸ್‌ಪುರ ಕ್ಷೇತ್ರವನ್ನು ತಮ್ಮದಾಗಿಸಿಕೊಂಡಿ ದ್ದರು. ಅಷ್ಟೇ ಅಲ್ಲ, ಇದೇ ಕ್ಷೇತ್ರದಿಂದ 4 ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. 

ಖನ್ನಾ ಅವರ ನಿಧನದಿಂದ ತೆರವಾದ ಈ ಕ್ಷೇತ್ರವು ಕೇವಲ ಕೇಂದ್ರದ ಮೋದಿ ಸರ್ಕಾರಕ್ಕೆ ಮಾತ್ರವಲ್ಲ, 7 ತಿಂಗಳ ಅವಧಿಯ ಪಂಜಾಬ್‌ ಕಾಂಗ್ರೆಸ್‌ ಸರ್ಕಾರಕ್ಕೂ ಪರೀಕ್ಷೆಯಾಗಿತ್ತು. ಹೀಗಾಗಿ, ಉಪಚುನಾವಣೆ ಯನ್ನು ರಾಜಕೀಯ ಪಕ್ಷಗಳು ಪ್ರತಿಷ್ಠೆಯ ವಿಷಯವನ್ನಾಗಿ ಪರಿಗಣಿಸಿದ್ದವು. ಬಿಜೆಪಿಯು ಮುಂಬೈ ಮೂಲದ ಕೋಟ್ಯಧಿಪತಿ ಉದ್ಯಮಿ ಸ್ವರ್ಣ ಸಲಾರಿಯಾ ಅವರನ್ನು ಕಣಕ್ಕಿಳಿಸಿತ್ತು. ಖನ್ನಾ ಅನುಪಸ್ಥಿತಿಯಲ್ಲಿ ಕ್ಷೇತ್ರದಲ್ಲಿ ಕೆಲಸ ಮಾಡಿದ್ದ ಅವರ ಪತ್ನಿ ಕವಿತಾ ಖನ್ನಾ ಅವರನ್ನು ಅಭ್ಯರ್ಥಿಯಾಗಿ ಘೋಷಿಸಬೇಕು ಎಂಬ ಕೂಗು ಕೇಳಿಬಂದಿದ್ದರೂ, ಅದನ್ನು ಬಿಜೆಪಿ ನಿರಾಕರಿಸಿತ್ತು. 
ನನ್ನ ಗೆಲುವನ್ನು ಸಿಎಂ ಅಮರೀಂದರ್‌ ಸಿಂಗ್‌ಗೆ, ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರಿಗೆ ಹಾಗೂ ಜನರಿಗೆ ಅರ್ಪಿಸುತ್ತೇನೆ. ಅವರ ಅವಿರತ ಪರಿಶ್ರಮವೇ ಈ ಅಭೂತಪೂರ್ವ ಜಯಕ್ಕೆ ಕಾರಣ. ಪ್ರತಿಪಕ್ಷಗಳು ನನ್ನ ವಿರುದ್ಧ ಬಳಸಿದ “ಹೊರಗಿನವ’ ಎಂಬ ಕಾರ್ಡ್‌ ಅನ್ನೇ ಜನ ತಿರಸ್ಕರಿಸಿದರು. ಅವರ ನಂಬಿಕೆ, ಪ್ರೀತಿಗೆ ನಾನು ಆಭಾರಿ ಎಂದು ಜಾಖರ್‌ ತಿಳಿಸಿದ್ದಾರೆ.

Advertisement

ಇದೇ ವೇಳೆ, ಜಾಖರ್‌ ಅವರನ್ನು ಅಭಿನಂದಿಸಿರುವ ಸಿಎಂ ಅಮರೀಂದರ್‌ ಸಿಂಗ್‌, “ಇದು ಕಾಂಗ್ರೆಸ್‌ನ ಅಭಿವೃದ್ಧಿ ಅಜೆಂಡಾಗೆ ಸಿಕ್ಕ ಗೆಲುವು. ಬಿಜೆಪಿ ಮತ್ತು ಅಕಾಲಿ ದಳದ ಭ್ರಷ್ಟಾಚಾರ ಮತ್ತು ಅನೈತಿಕತೆಯನ್ನು ಜನ ಸಂಪೂರ್ಣವಾಗಿ ನಿರಾಕರಿಸಿದ್ದಾರೆ. ಜತೆಗೆ, ಆಪ್‌ನ ರಾಜಕೀಯ ಮಹತ್ವಾ ಕಾಂಕ್ಷೆ ಇಲ್ಲಿಗೆ ಕೊನೆಯಾಗಲಿದೆ’ ಎಂದಿದ್ದಾರೆ. 

ಕೇರಳದಲ್ಲಿ ಯುಡಿಎಫ್ಗೆ ಜಯ
ಕೇರಳದಲ್ಲೂ ಕಾಂಗ್ರೆಸ್‌ ನೇತೃತ್ವದ ಯುಡಿಎಫ್ ವೆಂಗಾರಾ ಕ್ಷೇತ್ರದ ಉಪಚುನಾವಣೆಯಲ್ಲಿ ಗೆದ್ದಿದೆ. ಇಂಡಿಯನ್‌ ಯೂನಿಯನ್‌ ಮುಸ್ಲಿಂ ಲೀಗ್‌(ಐಯುಎಂಎಲ್‌) ಅಭ್ಯರ್ಥಿ ಕೆ.ಎನ್‌.ಎ. ಖಾದರ್‌(65227) ಅವರು ಸಿಪಿಎಂನ ಪಿ.ಪಿ.ಬಶೀರ್‌(41,917)ರನ್ನು 23,310 ಮತಗಳ ಅಂತರದಿಂದ ಸೋಲಿಸಿದ್ದಾರೆ. ಎಸ್‌ಡಿಪಿಐ ಅಭ್ಯರ್ಥಿ ಕೆ.ಸಿ.ನಸೀರ್‌ 8.658 ಮತ ಪಡೆದು 3ನೇ ಸ್ಥಾನ ಗಳಿಸಿದರೆ, ಬಿಜೆಪಿ ಕೇವಲ 5,728 ಮತ ಪಡೆಯುವ ಮೂಲಕ 4ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ವಿಶೇಷವೆಂದರೆ, ಕಳೆದ ಚುನಾವಣೆಗೆ ಹೋಲಿಸಿದರೆ ಯುಡಿಎಫ್ ಮತ್ತು ಬಿಜೆಪಿ ಮತ ಹಂಚಿಕೆಯಲ್ಲಿ ಭಾರೀ ನಷ್ಟ ಅನುಭವಿಸಿವೆ. ಆದರೆ, ಎಡಪಕ್ಷದ ಅಭ್ಯರ್ಥಿಯು ಹಿಂದಿನ ಚುನಾವಣೆಗಿಂತ 7,793 ಅಧಿಕ ಮತಗಳನ್ನು ಪಡೆದಿದ್ದು, ಮತ ಹಂಚಿಕೆಯು ಹೆಚ್ಚಾಗಿದೆ. 

ಯಾರಿಗೆ ಎಷ್ಟೆಷ್ಟು?
ಜಾಖರ್‌ (ಕಾಂಗ್ರೆಸ್‌)
4,99,752
ಸಲಾರಿಯಾ(ಬಿಜೆಪಿ) 
3,06,533
ನಿವೃತ್ತ ಮೇಜರ್‌ ಜನರಲ್‌ ಸುರೇಶ್‌ ಖಜುರಿಯಾ(ಆಪ್‌)
23,579

ಮೋದಿ ಅವರ “ಮಾತೇ ಎಲ್ಲ-ಕ್ರಿಯೆ ಇಲ್ಲ’ ಎಂಬ ನೀತಿ ಬಗ್ಗೆ ಜನರು ಅಸಮಾಧಾನ ಗೊಂಡಿದ್ದಾರೆ ಎನ್ನುವುದಕ್ಕೆ ಈ ಫ‌ಲಿತಾಂಶವೇ ಸಾಕ್ಷಿ. ಕಾಂಗ್ರೆಸ್‌ ಮತ್ತು ರಾಜ್ಯ ಸರ್ಕಾರದ ನೀತಿಗಳು ಹಾಗೂ ಯೋಜನೆಗಳ ಮೇಲೆ ಜನ ನಂಬಿಕೆಯಿಟ್ಟಿರುವುದು ಸಾಬೀತಾಗಿದೆ.
– ರಣದೀಪ್‌ ಸುಜೇìವಾಲಾ, ಕಾಂಗ್ರೆಸ್‌ ವಕ್ತಾರ

ಗುರುದಾಸ್‌ಪುರದಲ್ಲಿ ಕಾಂಗ್ರೆಸ್‌ನ ಗೆಲುವು ಒಂದು ಇನ್ನಿಂಗ್ಸ್‌ನಿಂದಲೇ ಟೆಸ್ಟ್‌ ಕ್ರಿಕೆಟ್‌ ಪಂದ್ಯ ಗೆದ್ದಂತಾಗಿದೆ. ಈ ಜಯವು ಜೀಜಾ-ಸಾಲಾ(ಸುಖ್‌ಬೀರ್‌ ಬಾದಲ್‌-ಬಿಕ್ರಂ ಮಜೀತಿಯಾ) ಅವರಿಗೆ ಮಾಡಿದ ಕಪಾಳಮೋಕ್ಷದಂತಿದೆ.
– ನವಜೋತ್‌ ಸಿಂಗ್‌ ಸಿಧು, ಪಂಜಾಬ್‌ ಸಚಿವ

ಆಡಳಿತಾರೂಢ ಕಾಂಗ್ರೆಸ್‌ ಈ ಉಪಚುನಾವಣೆಯಲ್ಲಿ ಅಧಿಕಾರದ ದುರ್ಬಳಕೆ ಮಾಡಿಕೊಂಡಿದೆ. ಜನರೆಲ್ಲ ಹೆದರಿದ್ದರು, ಯುವಕರು ಚುನಾವಣೆ ವೇಳೆ ಕಾಣಿಸಲೇ ಇಲ್ಲ. ಇಲ್ಲಿ ಕಾಂಗ್ರೆಸ್‌ ಗೆದ್ದಿದೆಯೆಂದರೆ, ಅದು ಗೌರವಯುತ ಗೆಲುವಲ್ಲ.
– ಮೇ.ಜ. ಸುರೇಶ್‌ ಖಜುರಿಯಾ, ಆಪ್‌ ಅಭ್ಯರ್ಥಿ

ಇದು ಪ್ರಜಾಪ್ರಭುತ್ವಕ್ಕೆ ಸಂದ ಜಯವಂತೂ  ಖಂಡಿತಾ ಅಲ್ಲ. ಅಧಿಕಾರ ದುರ್ಬಳಕೆಗೆ ಸಂದ ಗೆಲುವು. ನಮಗೆ ಮತ ಹಾಕದಿದ್ರೆ ಸುಮ್ಮನೆ ಬಿಡಲ್ಲ ಎಂದು ಎಲ್ಲರನ್ನೂ ಹೆದರಿಸಲಾಗಿತ್ತು. ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೂ ಕಾಂಗ್ರೆಸ್‌ ಬೆದರಿಕೆ ಹಾಕಿತ್ತು.
– ವಿನೀತ್‌ ಜೋಷಿ, ಬಿಜೆಪಿ ಕಾರ್ಯದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next