Advertisement
ಕಳಲೆಯನ್ನು ಮಿಕ್ಕ ತರಕಾರಿಗಳ ಥರ ಮನೆಗೆ ತಂದು ಬೇಕೆನಿಸಿದಾಗ ಪದಾರ್ಥ ಮಾಡಲಾಗುವುದಿಲ್ಲ. ಪದಾರ್ಥ ಅಥವಾ ಯಾವುದೇ ಖಾದ್ಯ ಮಾಡುವ ಮುನ್ನ ಕಳಲೆಯನ್ನು ಕಟ್ ಮಾಡಿ ಮೂರು ಅಥವಾ ನಾಲ್ಕು ದಿನ ನೀರಲ್ಲಿ ನೆನೆಸಿಡಬೇಕು. ಅಲ್ಲದೆ, ಪ್ರತಿ ದಿನ ನೀರನ್ನು ಬದಲಾಯಿಸಬೇಕು. ಇದು ಬಹು ಮುಖ್ಯ. ಕಳಲೆಯನ್ನು ಸಂಸ್ಕರಿಸದೆ ಉಪಯೋಗಿಸಬಾರದು.
ಬೇಕಾಗುವ ಸಾಮಗ್ರಿ:
ಸಂಸ್ಕರಿಸಿ ಕತ್ತರಿಸಿದ ಕಳಲೆ(ವೃತ್ತಾಕಾರದಲ್ಲಿ ಕಟ್ ಮಾಡಿದರೆ ಚೆನ್ನಾಗಿರುತ್ತೆ), ತೊಗರಿಬೇಳೆ - ಅರ್ಧ ಕಪ್, ತೆಂಗಿನ ತುರಿ- ಕಾಲು ಕಪ್, ಸಾಸಿವೆ- ಅರ್ಧ ಚಮಚ, ಜೀರಿಗೆ- ಅರ್ಧ ಚಮಚ, ಮೆಂತ್ಯೆ- ಕಾಲು ಚಮಚ, ಉದ್ದಿನಬೇಳೆ- ಅರ್ಧ ಚಮಚ, ಕೊತ್ತಂಬರಿ ಬೀಜ- ಅರ್ಧ ಚಮಚ, ಎಳ್ಳು- ಅರ್ಧ ಚಮಚ, ಬ್ಯಾಡಗಿ ಮೆಣಸು- 5 ರಿಂದ 6, ಕರಿಬೇವಿನ ಸೊಪ್ಪು- 8 ರಿಂದ 10 ಎಸಳು, ಹುಣಸೆ ಹಣ್ಣು- ಸ್ವಲ್ಪ, ರುಚಿಗೆ ತಕ್ಕಷ್ಟು ಉಪ್ಪು, ಇಂಗು, ಸ್ವಲ್ಪ ಬೆಲ್ಲ, ಅರಿಶಿನ, ಎಣ್ಣೆ. ತಯಾರಿಸುವ ವಿಧಾನ:
ಮೊದಲು ಕುಕ್ಕರ್‌ನಲ್ಲಿ ತೊಗರಿಬೇಳೆ ಮತ್ತು ಕಳಲೆಯನ್ನು ಬೇರೆ ಬೇರೆಯಾಗಿ ಬೇಯಿಸಿಟ್ಟುಕೊಳ್ಳಿ. ಅದು ಬೇಯುವಷ್ಟರಲ್ಲಿ ರುಬ್ಬಲು ಮಸಾಲಾ ರೆಡಿ ಮಾಡಿಕೊಳ್ಳಿ. ಸ್ವಲ್ಪ ಎಣ್ಣೆಗೆ ಬ್ಯಾಡಗಿ ಮೆಣಸು, ಮೇಲೆ ಹೇಳಿದ ಮಸಾಲೆ ಪದಾರ್ಥಗಳು ಇಂಗು, ಜೀರಿಗೆ, ಕೊತ್ತಂಬರಿ, ಮೆಂತ್ಯೆ, ಉದ್ದಿನಬೇಳೆ, ಎಳ್ಳು, ಸಾಸಿವೆ ಇವನ್ನೆಲ್ಲ ಸ್ವಲ್ಪ ಫ್ರೈ ಮಾಡಿ. ತೆಂಗಿನತುರಿಗೆ ಸ್ವಲ್ಪ ಅರಿಶಿನ, ಹುಣಸೆಹಣ್ಣು, ಮೇಲೆ ಹುರಿದಿಟ್ಟ ಪದಾರ್ಥಗಳನ್ನು ಮಿಕ್ಸಿಗೆ ಹಾಕಿ ಸ್ವಲ್ಪ ನೀರು ಹಾಕಿ ರುಬ್ಬಿಕೊಳ್ಳಿ. ಬೇಯಿಸಿಟ್ಟುಕೊಂಡಿರುವ ಕಳಲೆ ಮತ್ತು ತೊಗರಿಬೇಳೆಯನ್ನು ಒಂದು ಪಾತ್ರೆಗೆ ಹಾಕಿ ಮಿಕ್ಸ್ ಮಾಡಿ. ಇದಕ್ಕೆ ಮಿಕ್ಸಿಯಲ್ಲಿ ರುಬ್ಬಿಟ್ಟುಕೊಂಡ ಪದಾರ್ಥಗಳನ್ನು ಹಾಕಿ. ಈಗ ಎಲ್ಲವನ್ನೂ ಸೇರಿಸಿ ಕುದಿಯಲು ಬಿಡಿ. ಕುದಿಯುವಾಗ ರುಚಿಗೆ ತಕ್ಕಷ್ಟು ಉಪ್ಪು, ಸ್ವಲ್ಪ ಬೆಲ್ಲ, ಕರಿಬೇವು ಹಾಕಿ. ಚೆನ್ನಾಗಿ ಕುದಿ ಬಂದ ಮೇಲೆ ಸ್ಟವ್ ಆರಿಸಿ. ಇದು ಅನ್ನದ ಜೊತೆ ತಿನ್ನೋಕೆ ಚೆನ್ನಾಗಿರುತ್ತೆ. ಸಾಂಬಾರಿನಲ್ಲಿ ಬೆಂದ ಕಳಲೆ ಹೋಳುಗಳನ್ನು ತಿನ್ನಲು ಬಲು ರುಚಿ.
Related Articles
ಬೇಕಾಗುವ ಸಾಮಗ್ರಿಗಳು:
ಸಂಸ್ಕರಿಸಿದ ಕಳಲೆ ತುಂಡುಗಳು- ಅರ್ಧ ಕಪ್(ಚಿಕ್ಕದಾಗಿ ಹೆಚ್ಚಿರಿ), ಈರುಳ್ಳಿ- ಕಾಲು ಕಪ್, ಹಸಿಮೆಣಸು- ಎರಡು, ಕರಿಬೇವು- ನಾಲ್ಕರಿಂದ ಐದು, ಒಗ್ಗರಣೆಗೆ ಎಣ್ಣೆ, ಉದ್ದಿನಬೇಳೆ, ಸಾಸಿವೆ, ಇಂಗು, ಮೊಸರು.
Advertisement
ತಯಾರಿಸುವ ವಿಧಾನ:ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಹಸಿಮೆಣಸು ಹಾಕಿ. ಮೆಣಸು ಫ್ರೈ ಆಗ್ತಾ ಇದ್ದಂತೆ ಇಂಗು, ಉದ್ದಿನಬೇಳೆ, ಸಾಸಿವೆ ಹಾಕಿ. ನಂತರ, ಹೆಚ್ಚಿದ ಈರುಳ್ಳಿ ಹಾಕಿ ಫ್ರೈ ಮಾಡಿ. ಈರುಳ್ಳಿ ಹೊಂಬಣ್ಣಕ್ಕೆ ತಿರುಗಿದ ನಂತರ, ಹೆಚ್ಚಿದ ಕಳಲೆ ಮತ್ತು ಉಪ್ಪು ಹಾಕಿ ಫ್ರೈ ಮಾಡಿ. ಎಣ್ಣೆ ಸ್ವಲ್ಪ ಜಾಸ್ತಿ ಇರಲಿ. ಕಳಲೆ ಬೆಂದ ನಂತರ ಒಲೆಯಿಂದ ಕೆಳಗಿಳಿಸಿ. ಕಳಲೆ ತಣ್ಣಗಾದ ನಂತರ ಬೇಕಾದಷ್ಟು ಮೊಸರು ಹಾಕಿ ಕಲಸಿ. ಇದನ್ನು ಅನ್ನದ ಜೊತೆ ತಿಂದರೆ ರುಚಿಕರವಾಗಿರುತ್ತೆ. ಕಳಲೆ ಪಲ್ಯ(ಡ್ರೈ)
ಬೇಕಾಗುವ ಸಾಮಗ್ರಿ:
ಸಂಸ್ಕರಿಸಿದ ಕಳಲೆ ತುಂಡುಗಳು (ಸಣ್ಣಗೆ ಹೆಚ್ಚಿರಲಿ), ಈರುಳ್ಳಿ, ಕರಿಬೇವು, ಉದ್ದಿನ ಬೇಳೆ, ಸಾಸಿವೆ, ಎಣ್ಣೆ
ಮಸಾಲೆಗೆ: ಎಣ್ಣೆ, ಕಡ್ಲೆಬೇಳೆ ಎರಡು ಚಮಚ, ಬ್ಯಾಡಗಿ ಮೆಣಸು 5ರಿಂದ 6, ಇಂಗು, ಕೊತ್ತಂಬರಿ 2 ಚಮಚ, ಎಳ್ಳು 2 ಚಮಚ, ಮೆಂತ್ಯೆ 1 ಚಮಚ, ಸಾಸಿವೆ 1 ಚಮಚ. ತಯಾರಿಸುವ ವಿಧಾನ:
ಒಂದು ಬಾಣಲೆಗೆ ಸ್ವಲ್ಪ ಜಾಸ್ತಿ ಎಣ್ಣೆ ಹಾಕಿ. ಇದಕ್ಕೆ ಉದ್ದಿನಬೇಳೆ, ಸಾಸಿವೆ ಹಾಕಿ. ಸಾಸಿವೆ ಸಿಡಿದ ಮೇಲೆ ಈರುಳ್ಳಿ ಹಾಕಿ ಫ್ರೈ ಮಾಡಿ. ಈಗ ಹೆಚ್ಚಿದ ಕಳಲೆ ಹಾಕಿ ಎಣ್ಣೆಯಲ್ಲಿ ಚೆನ್ನಾಗಿ ಫ್ರೈ ಮಾಡಿ.
ಮಸಾಲೆಗೆ: ಸ್ವಲ್ಪ ಎಣ್ಣೆಗೆ ಕಡ್ಲೆಬೇಳೆ, ಬ್ಯಾಡಗಿ ಮೆಣಸು ಹಾಕಿ ಫ್ರೈ ಮಾಡಿ. ಇದಕ್ಕೆ ಮಸಾಲೆಗೆ ಹೇಳಿದ ಎಲ್ಲಾ ಪದಾರ್ಥಗಳನ್ನು ಹಾಕಿ ಮತ್ತೆ ಫ್ರೈ ಮಾಡಿ. ಈಗ ಮಿಕ್ಸಿಯಲ್ಲಿ ಡ್ರೈಯಾಗಿ ಪುಡಿ ಮಾಡಿ. ಈ ಪುಡಿಯನ್ನು ಮೇಲೆ ಫ್ರೈ ಆದ ಕಳಲೆಗೆ ಮಿಕ್ಸ್ ಮಾಡಿ. ಬಿಸಿಬಿಸಿ ಅನ್ನದ ಜೊತೆ ಚೆನ್ನಾಗಿರುತ್ತೆ. ಕಳಲೆ ಪಕೋಡ
ಬೇಕಾಗುವ ಸಾಮಗ್ರಿ:
ಸಂಸ್ಕರಿಸಿದ ಕಳಲೆ ತುಂಡು, ಕಡಲೆ ಹಿಟ್ಟು- ಅರ್ಧ ಬಟ್ಟಲು, ಅಕ್ಕಿ ಹಿಟ್ಟು- ಕಾಲು ಬಟ್ಟಲು, ಉಪ್ಪು, ಅಚ್ಚ ಖಾರದ ಪುಡಿ, ಸೋಡ, ಕರಿಯಲು ಎಣ್ಣೆ ತಯಾರಿಸುವ ವಿಧಾನ:
ಚಿಕ್ಕದಾಗಿ ಹೆಚ್ಚಿದ ಕಳಲೆಗೆ ರುಚಿಗೆ ತಕ್ಕಷ್ಟು ಉಪ್ಪು, ಅರ್ಧ ಬಟ್ಟಲು ಕಡಲೆ ಹಿಟ್ಟು, ಕಾಲು ಬಟ್ಟಲು ಅಕ್ಕಿ ಹಿಟ್ಟು, ರುಚಿಗೆ ತಕ್ಕಷ್ಟು ಅಚ್ಚ ಖಾರದ ಪುಡಿ, ಸ್ವಲ್ಪ ಸೋಡ ಹಾಕಿ ಸ್ವಲ್ಪ ನೀರು ಮಿಕ್ಸ್ ಮಾಡುತ್ತಾ ಪಕೋಡ ಹಿಟ್ಟಿನ ಹದಕ್ಕೆ ಕಲಸಿ. ಇದನ್ನು ಅರ್ಧ ಗಂಟೆ ಹಾಗೇ ಬಿಡಿ. ನಂತರ ಎಣ್ಣೆಯಲ್ಲಿ ಹೊಂಬಣ್ಣ ಬರುವವರೆಗೆ ಕರಿಯಿರಿ. ಇದು ಸಂಜೆ ಟೀ- ಕಾಫಿ ಜೊತೆ ತಿನ್ನಲು ಚೆನ್ನಾಗಿರುತ್ತೆ. ಪ್ರೇಮಾ ಲಿಂಗದಕೋಣ