ದೇವನಹಳ್ಳಿ: ಸತತ ಎರಡನೇ ದಿನವೂ ದಟ್ಟ ಮಂಜು ಕವಿದ ಹಿನ್ನೆಲೆಯಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ
ನಿಲ್ದಾಣದಲ್ಲಿ ಸೋಮವಾರ ಬೆಳಗ್ಗೆ ಕೂಡ ವಿಮಾನಗಳ ಹಾರಾಟದ ಸಮಯದಲ್ಲಿ ವ್ಯತ್ಯಯವಾಯಿತು. ಸೋಮವಾರ ಬೆಳಗ್ಗೆ 6.45ರಿಂದ 7.23ರವರೆಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಒಂದೇ ಒಂದು ವಿಮಾನ ಹಾರಲಿಲ್ಲ. ಪರಿಣಾಮ 41 ವಿಮಾನಗಳ ಸಮಯದಲ್ಲಿ ವ್ಯತ್ಯಯ ಉಂಟಾಯಿತು. ವಿಮಾನ ನಿಲ್ದಾಣದ ರನ್‌ವೇನಿಂದ 200 ಮೀ.ವರೆಗೆ ಮಂಜು ಆವರಿಸಿದ್ದ ಪರಿಣಾಮ ದೆಹಲಿಯಿಂದ ಬಂದ ಇಂಡಿಗೋ ವಿಮಾನ ಹೈದರಾಬಾದ್‌ಗೆ ತೆರಳಿತು.
ವಿಮಾನ ನಿಲ್ದಾಣಕ್ಕೆ ಬರುವ ವಾಹನ ಚಾಲಕರಿಗೂ ರಸ್ತೆ ಕಾಣದಂತಾಗಿತ್ತು. ಬೆಳಗ್ಗೆ 8.45ರ ನಂತರ ವಿಮಾನಗಳ ಹಾರಾಟ ಎಂದಿನಂತೆ ಪ್ರಾರಂಭವಾಯಿತು. ಭಾನುವಾರ 38 ವಿಮಾನ ಹಾರಾಟದ ಸಮಯ ಬದಲಾವಣೆಯಾಗಿದ್ದು, ನಿಲ್ದಾಣಕ್ಕೆ 11 ವಿಮಾನಗಳು ತಡವಾಗಿ ಬಂದಿದ್ದವು.
ಮಂಜು ಕವಿದ ಹಿನ್ನೆಲೆಯಲ್ಲಿ ಬೆಂಗಳೂರು ಮೂಲಕ ಹಾದುಹೋಗ ಬೇಕಾಗಿದ್ದ ಅಹಮದಾಬಾದ್, ಚೆನ್ನೈ, ಹೈದರಾಬಾದ್, ದುಬೈ ವಿಮಾನಗಳ ಮಾರ್ಗ ಸಹ ಬದಲಾಗಿತ್ತು. ನಸುಕಿನ ಎರಡು ಗಂಟೆಯಿಂದಲೇ ನಿಲ್ದಾಣ ಹಾಗೂ ಸುತ್ತಮುತ್ತ ದಟ್ಟ ಮಂಜು ಕಾಣಿಸಿಕೊಂಡಿದ್ದರಿಂದ ವಿಮಾನ ಸಂಚಾರ ನಿಯಂತ್ರಣ ಸಿಬ್ಬಂದಿ ನಿಲ್ದಾಣದಿಂದ ಹೊರಡಬೇಕಿದ್ದ ವಿಮಾನಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ಪೈಲಟ್‌ಗಳಿಗೆ ಹೇಳಿದ್ದರು. ಬೇರೆ ನಿಲ್ದಾಣಗಳಿಂದ ಬರುತ್ತಿದ್ದ ವಿಮಾನಗಳ ಹಾರಾಟದ ವೇಗವನ್ನು ಕಡಿಮೆಗೊಳಿ ಸಲು ಪೈಲಟ್‌ಗಳಿಗೆ ಸೂಚಿಸಿದ್ದರು. ಡಿಸೆಂಬರ್-ಜನವರಿ ತಿಂಗಳಿನಲ್ಲಿ ದಟ್ಟ ಮಂಜಿನಿಂದ ಹಲವಾರು ಸಮಸ್ಯೆಗಳನ್ನು ಪ್ರಯಾಣೀಕರು ಎದುರಿಸ ಬೇಕಾಗುತ್ತದೆ.