ನಾಯಿ…
ಕೋತಿ…
ಎಮ್ಮೆ…
ಕೋಣ…
ರಾಕ್ಷಸಿ…
ರಾಕ್ಷಸ…
ನಾನು ಕೇಳುತ್ತಲೇ ಇ¨ªೆ. ಒಂದಾದರೊಂದರ ಮೇಲೆ ಬೈಗುಳದ ಬಾಣಗಳು ಆ ಕಡೆಯಿಂದ ಈ ಕಡೆಗೆ, ಈ ಕಡೆಯಿಂದ ಆ ಕಡೆಗೆ ಚಿಮ್ಮುತ್ತಿದ್ದವು. ಯಾರಿಗೆ ಯಾರೂ ಕಡಿಮೆ ಇಲ್ಲ ಎನ್ನುವಂತೆ ಒಂದು ಅಸ್ತ್ರಕ್ಕೆ ಇನ್ನೊಂದು ಪ್ರತ್ಯಾಸ್ತ್ರ . ನಾನೂ ಕಿವಿಗೊಟ್ಟು ಅವರ ಬೈಗುಳಗಳ ಎರಚಾಟವನ್ನು ಕೇಳುತ್ತ ಕುಳಿತಿ¨ªೆ. ಆಗ ಆತ, “ನೀನೊಂದು ಕತ್ತೆ’ ಎಂದ. ಅಲ್ಲಿಯವರೆಗೆ ತನ್ನ ಅಣ್ಣನಿಗೆ ಏಟಿಗೆ ಎದುರೇಟು ಕೊಡುತ್ತಿದ್ದ ಆ ತಂಗಿಗೆ ತನ್ನ ಬಳಿ ಇದ್ದ ಅಸ್ತ್ರಗಳೆಲ್ಲ ಖಾಲಿಯಾಗಿ ಹೋಯಿತು ಎಂದು ಗೊತ್ತಾಗಿ ಹೋಯಿತು. ಅವಳು ಕಕ್ಕಾಬಿಕ್ಕಿಯಾದಳು. ಅರೆ! ನನ್ನ ಬಳಿ ಬೈಗುಳವೇ ಇಲ್ಲ ಎಂದರೆ ಹೇಗೆ, ತಾನು ಸೋಲೊಪ್ಪಿಕೊಂಡಂತೆ ಎಂದು ಒ¨ªಾಡಿಹೋದಳು. ಸ್ವಲ್ಪ ಹೊತ್ತು ಅಷ್ಟೇ… ಮರುನಿಮಿಷ ಸಾವರಿಸಿಕೊಂಡವಳೇ-
Advertisement
“ನೀನೊಂದು ಅನಕ್ಷರಸ್ಥ ಕತ್ತೆ’ ಎಂದು ಬೈದಳು. ಅಲ್ಲಿಗೆ ನೋಡಿ ಆ ಬೈಗುಳದಾಟ ಮುಗಿದೇ ಹೋಯಿತು. “ಅನಕ್ಷರಸ್ಥ ಕತ್ತೆ’ ಎಂದು ಬೈಸಿಕೊಂಡ ಅಣ್ಣ ಸುಮ್ಮನಾಗಿ ಹೋದ. ಮತ್ತೆ ಒಂದು ಬಾಣವನ್ನೂ ಎತ್ತುವ ಸಾಹಸಕ್ಕೆ ಹೋಗಲಿಲ್ಲ. ಆತ ತಬ್ಬಿಬ್ಟಾಗಿ ಕುಳಿತಿದ್ದ. ಅನಕ್ಷರಸ್ಥ ಎನ್ನುವುದು ಕೇವಲ ಬೈಗುಳವಾಗಿರಲಿಲ್ಲ. ಅದು ಬೈಗುಳಗಳ ಬೈಗುಳವಾಗಿತ್ತು.
Related Articles
Advertisement
ನನ್ನ ಮನಸ್ಸು ಆ ಕ್ಷಣ ಅಲ್ಲಿರಲಿಲ್ಲ. ದೂರದ, ಬಹುದೂರದ ಕ್ಯೂಬಾಗೆ ಹಾರಿ ಹೋಗಿತ್ತು. ಅಲ್ಲಿ ಸಹಾ ಅನ್‌ಪಡ್- ಅನಕ್ಷರಸ್ಥ ಎನ್ನುವುದನ್ನು ದೊಡ್ಡ ಬೈಗುಳ ಎಂದು ಭಾವಿಸಿಕೊಂಡವರು ಇದ್ದರು. ಬರೀ ಒಬ್ಬಿಬ್ಬರಲ್ಲ, ಇಡೀ ದೇಶಕ್ಕೆ ದೇಶವೇ ಹಾಗೆ ಭಾವಿಸಿತ್ತು. ಹಾಗಾಗಿಯೇ ಕ್ರಾಂತಿಯಾದ ತತ್‌ಕ್ಷಣವೇ ಫಿಡೆಲ್ ಕ್ಯಾಸ್ಟ್ರೊ ಸರ್ಕಾರ ಮೊದಲು ಕೈಗೆತ್ತಿಕೊಂಡಿದ್ದು ಈ ಕಳಂಕ ತೊಳೆಯುವ ಕೆಲಸವನ್ನು. ಅನ್‌ಪಡ್ ಎನ್ನುವ ಪದವನ್ನೇ ತಮ್ಮ ದೇಶದ ಕಪ್ಪು ಬೋರ್ಡ್‌ನಿಂದ ಅಳಿಸಿಹಾಕಲು ಮುಂದಾಗಿಬಿಟ್ಟರು. “ನೆಲವನ್ನಲ್ಲ, ಮೊದಲು ನಿಮ್ಮನ್ನು ಉತ್ತುಕೊಳ್ಳಿ’ ಎಂದು ಕ್ಯಾಸ್ಟ್ರೊ ಕರೆ ನೀಡಿದರು. ಅದುವರೆಗೂ ಕ್ಯೂಬಾ ಎನ್ನುವುದು ಅಂಧಕಾರದ ಲೋಕ. ಬರೀ ಜೀತಗಾರರು. ಇಲ್ಲಾ , ಹಸಿವಿನಿಂದ ನರಳುತ್ತಿರುವವರು. ಹವಾನಾ ಎನ್ನುವ ರಾಜಧಾನಿ ಅಮೆರಿಕದ ಸಕ್ಕರೆ ಹಾಗೂ ಸಿಗಾರ್ ಕಂಪೆನಿಗಳ ಒಬ್ಬಿಬ್ಬರು ಮಾಲೀಕರ ಕೈನಲ್ಲಿತ್ತು. ಹಾಗಾಗಿಯೇ, ಮೊದಲು ನಮ್ಮನ್ನು ಉತ್ತುಕೊಳ್ಳಬೇಕು ಎಂದು ನಿರ್ಧರಿಸಿಬಿಟ್ಟರು. ಅಕ್ಷರ ಕಲಿಸುವುದು ಹೇಗೆ? ಆಗಲೇ ಶಾಲೆ ಕಲಿತ ಒಂದಿಷ್ಟು ಮಕ್ಕಳು ತಮ್ಮ ಅಪ್ಪ ಅಮ್ಮನಿಗೆ “ಆ ಆ ಈ ಈ’ ಕಲಿಸಲು ಆರಂಭಿಸಿದ್ದು. ಅಪ್ಪ-ಅಮ್ಮನೇ ಮಕ್ಕಳಿಗೆ ಶರಣಾಗಿದ್ದರು. ಅಪ್ಪ-ಅಮ್ಮ ಇಬ್ಬರೂ ಮಕ್ಕಳಿಗೆ ವಿದ್ಯಾರ್ಥಿಗಳಾಗಿದ್ದರು. ಅಕ್ಷರ ಎನ್ನುವುದು ಮ್ಯಾಜಿಕ್ ಮಾಡಿತ್ತು. ಅಲ್ಲಿಂದ ಶುರುವಾಯಿತು “ಒಂದು ದೀಪ, ನೂರು ಪುಸ್ತಕ’ ಯೋಜನೆ. ಒಂದು ಚಿಮಣಿ ದೀಪ ಹಿಡಿದ ಒಬ್ಬ ಶಾಲಾ ವಿದ್ಯಾರ್ಥಿ ಹಳ್ಳಿಗಳತ್ತ ಹೋಗಿ ನೂರಾರು ಜನರಿಗೆ ಅಕ್ಷರ ಕಲಿಸುತ್ತ¤ ಹೋದರು. “ಅಕ್ಷರವೆಂದರೆ ಅಕ್ಷರವಲ್ಲ , ಅರಿವಿನ ಗೂಡು ಚಿಲಿಪಿಲಿ’ ಎನ್ನುತ್ತ “ಮೇಲಕ್ಕೆ ಹಾರುವ ಹಕ್ಕಿನ ಹಾಡು ಕೇಳು’ ನಾನು ದಕ್ಷಿಣಕನ್ನಡಕ್ಕೆ ಕಾಲಿಡಲು ಇನ್ನು ಕೆಲವೇ ದಿನಗಳಿದ್ದವು. ದಕ್ಷಿಣಕನ್ನಡದ ಮೂಲೆ ಮೂಲೆಗೂ ಸಾಕ್ಷರತಾ ಸೈನಿಕರು ನುಗ್ಗುತ್ತಿದ್ದರು. ಆಗಲೇ ರಬ್ಬರ್ ತೋಟದಲ್ಲಿ ಕೆಲಸ ಮಾಡುತ್ತಿದ್ದ ಹುಡುಗಿ ನೇರ 10ನೆಯ ತರಗತಿ ಪರೀಕ್ಷೆ ಬರೆದು ಎಲ್ಲರೂ ನೋಡನೋಡುತ್ತಿದ್ದಂತೆಯೇ ಫರ್ಸ್ಡ್ಕ್ಲಾಸ್‌ನಲ್ಲಿ ಪಾಸಾಗಿದ್ದಳು. ಆಗ ನಾನು ಹೌದಲ್ಲ , ಅಕ್ಷರ ಎಂದರೆ ಕೂಲಿಕಾರರಿಗೂ ವಿಮೋಚನೆ ಎಂದುಕೊಳ್ಳುತ್ತಿರುವಾಗಲೇ ಪಕ್ಕದ ಕೇರಳದ ಕೊಟ್ಟಾಯಂ ನಿಂದ ಅಮೀನಾಬಿ ಮಾತನಾಡಿದ್ದು. ಆಕೆಗೆ ವೇದಿಕೆ ಎಂದರೆ ಏನು ಎಂದೇ ಗೊತ್ತಿರಲಿಲ್ಲ. ನಾಕು ಜನ ಇ¨ªೆಡೆ ಇದ್ದೂ ಗೊತ್ತಿರಲಿಲ್ಲ. ಅಂಥ ಅಮೀನಾಬಿ ಈಗ ಮೈಕ್ ಮುಂದೆ ನಿಂತಿದ್ದಳು. 60 ದಾಟಿತ್ತು. ಆಕೆ ಹೇಳುತ್ತಿದ್ದಳು- “ನಾನು ಯಾವಾಗಲೂ ಇವರ ಹಿಂದೆ ಹೋಗುತ್ತಿ¨ªೆ. ಅವರು 10 ಹೆಜ್ಜೆ ಮುಂದೆ ಹೋದರೆ ಹಿಂದೆ ನಾನು ಕುರಿಯಂತೆ ಹಿಂಬಾಲಿಸುತ್ತಿ¨ªೆ. ಆದರೆ, ಈಗ ಹಾಗಲ್ಲ ನಾನು ಮುಂದೆ ಇರುತ್ತೇನೆ, ಇವರು ನನ್ನ ಹಿಂದೆ ಹಿಂದೆ ಬರುತ್ತಾರೆ’ ಎಂದಳು. “ಕುರಿಯಂತೆ’ ಎಂದು ಮಾತ್ರ ಹೇಳಲಿಲ್ಲ. ಎಲ್ಲರಿಗೂ ಅಚ್ಚರಿ- ಹೇಗಪ್ಪಾ? ಎಂದು. ಅದು ಆಕೆಗೂ ಗೊತ್ತಾಯಿತೇನೋ ಬಿಡಿಸಿಡುತ್ತ ಹೋದಳು. “ಗಂಡನ ಹಿಂದೆ ಹೆಂಡತಿ ಹೋಗಬೇಕು ಇದು ನೆಲದ ಕಾನೂನು. ಆದರೆ, ಅದು ಬದಲಾಗಬಹುದು ಅಕ್ಷರದಿಂದ ಎನ್ನುವುದು ನನಗೆ ಗೊತ್ತೇ ಇರಲಿಲ್ಲ. ನಾನು ಬೀಡಿ ಕಟ್ಟುವಾಗ ಅಕ್ಷರ ಕಲಿಸುತ್ತ ಹೋದರು. ನಾನು ಅಕ್ಷರವನ್ನೂ ಕಲಿತೆ. ಅಂಕಿ ಗುರುತಿಸುವುದನ್ನೂ ಕಲಿತೆ. ಹಾಗಾಗಿ, ನನಗೆ ಈಗ ದೂರದಿಂದ ಬರುವ ಬಸ್ ಯಾವುದು ಎಲ್ಲಿ ಹೋಗುತ್ತೆ ಗೊತ್ತಾಗುತ್ತೆ. ಹೊರಗಡೆ ಹೋದಾಗ ನಾವು ಇರುವುದು ಎಲ್ಲಿ, ಎಲ್ಲಿಗೆ ಹೋಗಬೇಕು ಎಂದು ತಿಳಿಯುತ್ತೆ. ಇಷ್ಟು ದಿನ ಇವರು ಮುಂದಿದ್ದರೂ ಅವರನ್ನು ನಿಲ್ಲಿಸಿ ಇವರನ್ನು ನಿಲ್ಲಿಸಿ ದಾರಿ ಎಲ್ಲಿಗೆ ಹೋಗುತ್ತೆ ಎಂದು ಕೇಳುತ್ತ ಹೋಗುತ್ತಿದ್ದರು. ಈಗ ನನಗೆ ಗೊತ್ತು, ಕೇಳುವ ಪ್ರಶ್ನೆಯೇ ಇಲ್ಲ. ಹಾಗಾಗಿ, ಇವರೇ ನನ್ನನ್ನು ಮುಂದೆ ಹೋಗಲು ಬಿಡುತ್ತಾರೆ. ನನಗೆ ಗೊತ್ತೇ ಇರಲಿಲ್ಲ. ಅಕ್ಷರ ಕಲಿತರೆ ಹೆಣ್ಣು ಗಂಡಸಿಗಿಂತ ಮುಂದೆ ಇರಬಹುದು. ಅಕ್ಷರಕ್ಕೆ “ನಮಸ್ಕಾರ’ ಎಂದಳು.
ದಿ ಟೆಲಿಗ್ರಾಫ್ ನನಗೆ ತುಂಬಾ ಇಷ್ಟದ ಪೇಪರ್. ಯಾಕೆಂದರೆ, ಅವರು ಎಂಟು ಕಾಲಮ್‌ನಷ್ಟು ಅಗಲದ ಫೋಟೋ ಬೇಕಾದರೂ ಹಾಕುತ್ತಾರೆ. ಒಂದು ದಿನ ಅದರ ಪುಟ ಬಿಡಿಸಿದೆ. ಪೇಪರ್‌ನ ಅಷ್ಟೂ ಅಗಲ ಒಂದು ಫೋಟೋ ಕಂಡಿತು.
ಏನೆಂದು ನೋಡಿದರೆ, ಸಮುದ್ರ ತೀರದಲ್ಲಿ ನೂರಾರು ದೋಣಿಗಳು ನಿಂತಿವೆ. ಅದರಲ್ಲಿ ಮೀನುಗಾರರು ಮಾತ್ರ ಪತ್ತೆ ಇಲ್ಲ. ಎಲ್ಲಿ ಎಂದು ನೋಡಿದರೆ ಅಗೋ ಆ ದೂರದಲ್ಲಿ ಅವರು ಮರಳ ಮೇಲೆ ಅಕ್ಷರ ತಿದ್ದುತ್ತಿ¨ªಾರೆ. “ದೇವರು ರುಜು ಮಾಡಿದನು…’ ಎನ್ನುವುದು ಆಕಾಶದಲ್ಲಿ ಹಾರುವ ಹಕ್ಕಿಗೆ ಮಾತ್ರ ಸೀಮಿತವೇನು? ಇಲ್ಲಿ ಈ ಮರಳ ದಂಡೆಯಲ್ಲೂ ಮರಳನ್ನೇ ಸ್ಲೇಟ್ ಮಾಡಿಕೊಂಡ ಅಷ್ಟೂ ಮೀನುಗಾರರು ಅಕ್ಷರ ತಿದ್ದಿದ್ದರು. ಅಲ್ಲೂ… “ದೇವರು ರುಜು ಮಾಡಿದನು’. ಹೀಗೆ ಒಂದು ದಿನ ಮಂಗಳೂರಿನ ಬಂದರ್‌ನಲ್ಲಿ ನನ್ನಿಷ್ಟದ ಎಗ್‌ಬುರ್ಜಿ ತಿಂದು ಕೈ ಒರೆಸಲು ಹೋದೆ. ಒಂದು ಕ್ಷಣ ಅಲ್ಲಿದ್ದ ಹುಡುಗಿಯ ಫೋಟೋ ನೋಡಿ ಕೈ ತಡೆಯಿತು. ಕಣ್ಣಿಗೆ ಕೆಲಸ ಕೊಟ್ಟೆ. ಅರೆ! ಆ ಹುಡುಗಿ… ಅದೇ ಹುಡುಗಿ.
ಸುಳ್ಯದ ರಬ್ಬರ್ ತೋಟದಲ್ಲಿ ಇದ್ದ ಕೂಲಿಗಾರರ ಮಗಳು. ತಾನೂ ರಬ್ಬರ್ ಹಾಲು ಇಳಿಸಲು ಮರದಿಂದ ಮರ ಸುತ್ತುತ್ತಿದ್ದವಳು. ಒಂದೇ ಏಟಿಗೆ 10ನೇ ತರಗತಿ ಪಾಸಾದವಳು. ಕರಿಕೋಟು ತೊಟ್ಟು ನಿಂತಿ¨ªಾಳೆ. ಏನೆಂದು ಮತ್ತೆ ಮತ್ತೆ ಓದಿದೆ. ಆ ಹುಡುಗಿ, ರಬ್ಬರ್ ತೋಟದ ಅದೇ ಹುಡುಗಿ ಉಡುಪಿಯ ಕಾನೂನು ಕಾಲೇಜಿನಲ್ಲಿ ಪದವಿ ಮುಗಿಸಿದ್ದಳು, ಚಿನ್ನದ ಪದಕಗಳೊಂದಿಗೆ. ಕವಿ ಸಿದ್ದಲಿಂಗಯ್ಯ ಸಿಕ್ಕಿದ್ದರು. ಪಾಠ ಮಾಡುತ್ತಿದ್ದರು. “ಬೆಂಗಳೂರು ವಿಶ್ವವಿದ್ಯಾಲಯದಲ್ಲ?’ ಎಂದು ನೀವು ಕೇಳಿದರೆ ತಪ್ಪು. ಖಂಡಿತ ತಪ್ಪು. ಅವರು ಸಿಕ್ಕಿದ್ದು ಸುಮಾರು ವರ್ಷಗಳ ಹಿಂದೆ. ಒಂದು ಕಾಲಕ್ಕೆ ಕೊಳಗೇರಿ ಎನಿಸಿಕೊಂಡಿದ್ದ ಶ್ರೀರಾಮಪುರದಲ್ಲಿ. ಅಲ್ಲಿ ಒಂದು ಪುಟ್ಟ ಕೊಠಡಿಯಲ್ಲಿ ನೂರಾರು ಜನರ ಮಧ್ಯೆ ಅವರು ಪಾಠ ಮಾಡುತ್ತಿದ್ದರು. ಅವರಲ್ಲಿ, ಹಾಗೆಯೇ ಆ ಪ್ರದೇಶದ ಹಲವರಲ್ಲಿ ಒಂದು ಛಲವಿತ್ತು. ನನ್ನ ನೆರೆಹೊರೆಯವರಿಗೆ, ಬಂಧುಬಾಂಧವರಿಗೆ, ಅಣ್ಣತಮ್ಮಂದಿರಿಗೆ, ಕೂಲಿಕಾರ್ಮಿಕರಿಗೆ ಅಕ್ಷರದ ಬೆಳಕು ನೀಡಬೇಕು ಎಂದು. ಮತ್ತೆ ಮತ್ತೆ ನಾನು ಅಲ್ಲಿಗೆ ಹೋಗುತ್ತಲೇ ಇ¨ªೆ. ಅದೇ ಆ ಹುಡುಗರ, ಅಪ್ಪಂದಿರ ಕಣ್ಣಲ್ಲಿ ಮಿಂಚು. ಅಕ್ಷರದ ಮಿಂಚು. ಎಷ್ಟೋ ಜನಕ್ಕೆ ಈಗ ತಾವು ಪಡೆಯುತ್ತಿರುವ ಕೂಲಿ ಎಷ್ಟು ಎಂದು ಎಣಿಸಲು ಗೊತ್ತು. ಇನ್ನು ಕೆಲವರಿಗೆ ತಾವು ಎಷ್ಟು ಗಂಟೆ ಕೆಲಸ ಮಾಡಿದ್ದೇವೆ ಎಂದು ಲೆಕ್ಕ ಹಾಕಲು ಗೊತ್ತು. ಅಷ್ಟೇ ಅಲ್ಲ, ಅದೇ ರಾತ್ರಿ ಪಾಠಶಾಲೆಯಿಂದ ಹೊರಬಿದ್ದ ಎಷ್ಟೊಂದು ಮಕ್ಕಳು ಈಗ ಹಲವು ಚಳವಳಿಗಳ ಚುಕ್ಕಾಣಿ ಹಿಡಿದಿ¨ªಾರೆ. ಸಮಾಜದ ನೋವುಗಳಿಗೆ ಕೀಲೆಣ್ಣೆಯಾಗಿ¨ªಾರೆ. ಅಕ್ಷರವೆಂದರೆ ಅಕ್ಷರವಲ್ಲ, ಅರಿವಿನ ಗೂಡು ಎಂದು ನನಗೆ ಅಲ್ಲಿಯೂ ಗೊತ್ತಾಗಿ ಹೋಯಿತು. ಗಧಾ- ಅನ್‌ಪಡ್ ಗಧಾ ಎನ್ನುವುದು ಮತ್ತೆ ನೆನಪಾಗಲು ಕಾರಣವಿದೆ. ಅಕ್ಷರ ಎನ್ನುವುದು ಅಕ್ಷರ ಮಾತ್ರವಲ್ಲ ಎಂದು ಕ್ಯಾಸ್ಟ್ರೊಗೆ ಗೊತ್ತಿತ್ತು. ಇಡೀ ಅಮೆರಿಕ ಕ್ಯೂಬಾವನ್ನು ನಾಶ ಮಾಡಲು ಪದೇ ಪದೇ ಎರಗುವಾಗ ತನ್ನ ದೇಶದ ಜನರಿಗೆ ಏನಾಗುತ್ತಿದೆ ಎನ್ನುವದು ಅರ್ಥವಾಗುವುದಾದರೂ ಹೇಗೆ? ಹಾಗಾಗಿಯೇ ಅವರು ಮೊದಲು ನಿರ್ಧರಿಸಿದರು- ಕತ್ತಲ ಕೋಣೆಯಿಂದ ಮಾತ್ರವಲ್ಲ, ಅಕ್ಷರ ಇಲ್ಲದ ಅಂಧಕಾರದಿಂದಲೂ ನನ್ನ ಜನರನ್ನು ಹೊರತರಬೇಕು ಎಂದು. ನಮ್ಮಿಂದ ಇನ್ನು ಒಂದು ಗುಲಗಂಜಿಯೂ ನಿಮ್ಮೆಡೆ ಬರುವುದಿಲ್ಲ ಎಂದು ಅಮೆರಿಕ ಘೋಷಿಸಿಬಿಟ್ಟಾಗ ಕ್ಯೂಬಾದಲ್ಲಿ ಪಯರು ಎದೆಮಟ್ಟಕ್ಕೆ ಬೆಳೆದು ನಿಂತಿತ್ತು. ಕಟಾವು ಮಾಡಲು ಕತ್ತಿಗಳಿಲ್ಲ, ಟ್ರಾಕ್ಟರ್‌ಗಳಿಲ್ಲ, ಇದ್ದದ್ದನ್ನು ರಿಪೇರಿ ಮಾಡಿಕೊಳ್ಳಲು ಬಿಡಿಭಾಗಗಳೂ ಇಲ್ಲ ಎಂದು.
ಆಗಲೇ ಕ್ಯೂಬಾ ಮಕ್ಕಳತ್ತ ನೋಡಿದ್ದು. “ಮಕ್ಕಳು ಶಾಲೆ ಈಗ ಹೊಲದ ಬಳಿಗೆ’ ಎಂದು ಹೊರಟೇಬಿಟ್ಟರು. ಕಬ್ಬು ಕಟಾವು ಮಾಡುತ್ತಲೇ ಅಂಧಕಾರವನ್ನೂ ಕತ್ತರಿಸಿ ಕತ್ತರಿಸಿ ಹಾಕಿದರು. ಒಂದು ದಿನ ಹೀಗಾಯಿತು. ಅಮೆರಿಕದಿಂದ ಪೆಟ್ರೋಲ್-ಡೀಸಲ್ ನಿಂತು ಹೋಯಿತು. ಸೋವಿಯತ್ ದೇಶದಿಂದ ಬರಲಿ ಎಂದರೆ ಆ ದೇಶವೇ ಮಗುಚಿಬಿದ್ದಿತು. ಆಗ ರಾತ್ರೋರಾತ್ರಿ ಕ್ಯೂಬನ್ನರು ನಿರ್ಧರಿಸಿಬಿಟ್ಟರು. ನಾವು ಇನ್ನು ನಡೆದೇ ಸಿದ್ಧ. ತಮ್ಮ ಬಳಿ ಇದ್ದ ಕಾರು, ಸ್ಕೂಟರ್‌ಗಳೆಲ್ಲ ನಿಂತÇÉೇ ನಿಲ್ಲಿಸಿದರು. ಅಮೆರಿಕದ ಪತ್ರಿಕೆಗಳು ಗೇಲಿ ಮಾಡಿದವು. ಆಗ ಕ್ಯೂಬನ್ನರು ಮಾತನಾಡಿದರು. ಮಕ್ಕಳಿಗೆ ಶಾಲೆಗೆ ಹೋಗಲು ವಾಹನ ಬೇಕು. ಅವರ ವಾಹನಕ್ಕೆ ಬೇಕಾದ ಪೆಟ್ರೋಲ್ ಉಳಿಸಲು ನಾವು ಕಾಲ್ನಡಿಗೆಗೆ ಶರಣಾಗಿದ್ದೇವೆ. ಅವರು ಕಲಿಯುತ್ತಿರುವುದು ಅಕ್ಷರವನ್ನು. ಹೀಗೆ ಮಂಗಳೂರಿನಲ್ಲಿ ಇದ್ದವನಿಗೆ ಮಂಗಳೂರು ಕೇರಳ ಎಲ್ಲವೂ ಪಾಠ ಕಲಿಸುತ್ತ ಹೋದವು. ನಾನೂ ಸಹ ಇದನ್ನೆಲ್ಲ ಕೌತುಕದ ಕಣ್ಣಿನಿಂದ ನೋಡುತ್ತ ಗುಲ್ಬರ್ಗಾ ತಲುಪಿಕೊಂಡೆ. ಹಾಗೆ ಒಂದು ಪುಟ್ಟ ಹಳ್ಳಿ ಹೊಕ್ಕೆ, ಅವರಾಧ ಎಂಬ ಹಳ್ಳಿ . ಒಂದು ನೋವಿನ ರಾಗ ಕೇಳಿಸಿತು. ಏನು ಎಂದು ಕಿವಿಗೊಟ್ಟೆ. ಹಚ್ಚಬೇಡ ಹಚ್ಚಬೇಡವ್ವಾ / ಜೀತಕ್ಕ ನನ್ನನ್ನ/ ಎಳೆಬಾಳೆ ಸುಳಿ ನಾನವ್ವಾ / ಹಚ್ಚಬೇಕು ಹಚ್ಚಬೇಕವ್ವಾ / ಸಾಲೀಗಿ ನನ್ನನ್ನ… ಎನ್ನುವ ಹಾಡು. ಬೀದಿ ನಾಟಕದ ತಂಡ ಅಧೋ ರಾತ್ರಿಯಲ್ಲಿ ಶಾಲೆ ಮೆಟ್ಟಿಲು ಹತ್ತುವಂತೆ ಕರೆಯುತ್ತಿದ್ದರು. ಅÇÉೇ ಅನತಿ ದೂರದಲ್ಲಿ ಮೂರು ರಾಟೆಯ ಬಾವಿ. ಅದರ ಮರೆಯಲ್ಲಿ ಒಂದು ಜೋಡಿ ಕಣ್ಣು ಆ ಹಾಡುವವರನ್ನೇ ಇಣುಕಿ ನೋಡುತ್ತಿತ್ತು. ಇನ್ನು ಈ ಊರು ತನ್ನನ್ನು ಉತ್ತುಕೊಳ್ಳುವ ದಿನ ದೂರ ಇಲ್ಲ ಎನಿಸಿಹೋಯಿತು. – ಜಿ. ಎನ್. ಮೋಹನ್