Advertisement

ಅವರವರ ಬದುಕು ಅವರಿಗೆ

02:19 PM Jan 26, 2018 | |

ಗೀತಾ, ಸಂಜೆಯೊಳಗೆ ಈ ಎಲ್ಲ ಕೆಲಸ ಮುಗಿಸಬೇಕು” ಎಂದು ಆದೇಶ ನೀಡಿದನು ಗೀತಾಳ ಮ್ಯಾನೇಜರ್‌ ಆನಂದ. ಸೋಮವಾರವೇ ಪ್ರಾಜೆಕ್ಟ್ ನ ಡೆಡ್‌ಲೈನ್‌ ಎಂದು ಗೀತಾಳಿಗೂ ತಿಳಿದ ವಿಷಯವೇ. ಇಂದು ಕೆಲಸ ಮುಗಿಸದಿದ್ದರೆ ಶನಿವಾರ-ಭಾನುವಾರವೂ ಕಚೇರಿ ಕೆಲಸ ಮಾಡಬೇಕು. ನನ್ನ ಪಾಡಿಗೆ ನಾನು ಕೆಲಸ ಮಾಡಿ ಬೇಗ ಮುಗಿಸೋಣವೆಂದು ಅಮಿತ್‌ಗೆ, “”ಬೇಗ ಕೋಡ್‌ ಕಳುಹಿಸಿ ಕೊಡಪ್ಪ” ಎಂದರೆ, “”ಗೀತಾ, ಐ ನೀಡ್‌ ಸಮ… ಮೋರ್‌ ಟೈಮ…” ಎನ್ನುತ್ತಾನೆ. ಅವನಿಗೋ ತಾನು ಸಮಯಕ್ಕಿಂತ ಜಾಸ್ತಿ ಎಕ್ಸಟೆಂಡ್‌ ಮಾಡಿ ಮ್ಯಾನೇಜರ್‌ ಬಳಿ ಹೊಗಳಿಸಿಕೊಳ್ಳಬೇಕೆಂಬ ಹಂಬಲ.

Advertisement

 ಅಂತೂ ಅವನನ್ನು ಕಾಡಿಬೇಡಿ ಬೇಗ ಕೋಡ್‌ ಮುಗಿಸಿ ಕೊಡುವಂತೆ ಮಾಡಲು ಸಂಜೆ ಐದು ಗಂಟೆಯಾಯಿತು. “”ಮಮ್ಮಿ ಬೇಗ ಬಾ, ಎಲ್ಲರ ಮಮ್ಮಿನೂ ಐದಕ್ಕೆ ಬರುತ್ತಾರೆ, ನೀನೇ ಲೇಟು” ಎಂದು ನನಗಾಗಿ ಕಾಯುವ ಮೂರು ವರ್ಷದ ಮಗಳು ಸಾನ್ವಿ. ಆರು ಗಂಟೆಗೆ ಸರಿಯಾಗಿ ಬರಬೇಕು, ಆರರ‌ ನಂತರ ಒಂದು ನಿಮಿಷವೂ ಕಾಯಲಾರೆ ಎಂದು ಡೇಕೇರ್‌ನ ಬಾಗಿಲಿಗೆ ಕೀಲಿ ಹಾಕಿ ನನ್ನ ಬರವನ್ನೇ ಕಾಯುತ್ತಿರುವ ಮೇಡಮ….

ಅಮಿತ್‌ ಕಳುಹಿಸಿದ ಕೋಡನ್ನು ಟೆಸ್ಟ್‌ ಮಾಡಲಿಕ್ಕಿಟ್ಟು ರಿಪೋರ್ಟ್‌ ಮನೆಯಿಂದ ಕಳುಹಿಸಿದರಾಯಿತೆಂದು ಸಾನ್ವಿಯನ್ನು ಡೇಕೇರಿನಿಂದ ಕರೆದುಕೊಂಡು, ಸಾನ್ವಿಗೆ ತಿನ್ನಲು ಬೇಕರಿ ತಿನಿಸೋ, ಹಣ್ಣೋ ಕೊಂಡು ಮನೆಗೆ ಬಂದು ಚಂಪಾಳಿಗೆ ಫೋನಾಯಿಸಬೇಕು. ಚಂಪಾ ಮನೆಯನ್ನು ಸ್ವತ್ಛಗೊಳಿಸಿ ಪಾತ್ರೆ ತೊಳೆಯಲು ಬರುವಷ್ಟರಲ್ಲಿ ಸಾನ್ವಿಗೆ ಆಟಿಕೆಗಳನ್ನು ನೀಡಿ ಅಡಿಗೆಗೆ ತಯಾರಿಮಾಡಿಕೊಂಡು ನಾಳಿನ ಅಡುಗೆಗೆ ತರಕಾರಿ ಹೆಚ್ಚಿಟ್ಟುಕೊಳ್ಳಬೇಕು. ಚಂಪಾ ಕಲಸಿಕೊಟ್ಟ ಚಪಾತಿ ಹಿಟ್ಟಿನಿಂದ ಚಪಾತಿ ಮಾಡಿಕೊಳ್ಳಬೇಕು. ಸಾನ್ವಿಗೆ  ಚಂದಮಾಮ ಕಥೆ, ಮೊಬೈಲ… ವಿಡಿಯೋ ತೋರಿಸಿ ಊಟ ಮಾಡುವಷ್ಟರಲ್ಲಿ ಸುಸ್ತೋ ಸುಸ್ತೋ. ಇನ್ನು ಹಾಲು ಕುಡಿಸಿ ಮಲಗಿಸುವಷ್ಟರಲ್ಲಿ ನನಗೂ ಅರ್ಧ ನಿದ್ರೆ ಬಂದಿರುತ್ತದೆ. ಸತೀಶ್‌ ಮನೆಗೆ ಬರುವಾಗ ಬರೋಬ್ಬರಿ ಗಂಟೆ 10.30. ಮ್ಯಾನೇಜರ್‌ಗೆ ಟೆಸ್ಟಿಂಗ್‌ ರಿಪೋರ್ಟ್‌ ಕಳುಹಿಸಿ ಪತಿಯ ಬರುವಿಗಾಗಿ ಕಾದು ಕುಳಿತು, ಅವನೊಡನೆ ಊಟ ಮಾಡಿ ನಿದ್ರೆ ಮಾಡಿದ್ದೇ ತಿಳಿಯಲಿಲ್ಲ.

ಬೆಳಿಗ್ಗೆ  5.30ಕ್ಕೆೆ ಅಲಾರಾಮ… ಕೇಳುತ್ತಲೇ ಎದ್ದು ಅಡಿಗೆ ಮುಗಿಸಿ, ಸಾನ್ವಿಯ ಸ್ನಾನ-ತಿಂಡಿ-ತಿನಿಸು ಮಾಡಿಸಿ, ಎಲ್ಲರಿಗೂ ಊಟದ ಬಾಕ್ಸ್‌ ತಯಾರಿಸಿ, ನಾನು ಕಚೇರಿಗೆ ತಯಾರಾಗುವಷ್ಟರಲ್ಲಿ ಎಷ್ಟು ಬೇಗ ಸಮಯ ಓಡಿ ಒಂಬತ್ತು ಆಗಿರುತ್ತದೋ ದೇವರೇ ಬಲ್ಲ. ಸಾನ್ವಿಯನ್ನು ಪ್ಲೇಸ್ಕೂಲ್‌ಗೆ ಕಳುಹಿಸಿ ಆಫೀಸಿನತ್ತ ಹೋಗಲು ಬಸ್ಸು ಹತ್ತಿದರೆ ಟ್ರಾಫಿಕ್‌ ಜಾಮ…. ಸಿಲ್ಕ್ಬೋರ್ಡ್‌ ಸ್ಟಾಪ್‌ ದಾಟಿ ಕಚೇರಿ ತಲುಪುವಷ್ಟರಲ್ಲಿ ಹತ್ತೂವರೆಯಿಂದ ಹನ್ನೊಂದು ಗಂಟೆ. ಬೇಗ ತಲುಪಿದರೆ ತಿನ್ನೋಣವೆಂದು ತಂದ ಬೆಳಗಿನ ಉಪಹಾರದ ಡಬ್ಬಿ ಬ್ಯಾಗಿನಲ್ಲಿ ಭದ್ರ. “”ಎಷ್ಟು ತಡವಾಗಿ ಬರ್ತೀರಾ, ಯಾವಾಗಲೂ ಇದೇ ಕಥೆ” ಎನ್ನುವ ಮ್ಯಾನೇಜರ್‌. 

ಇನ್ನೂ ವೀಕೆಂಡ್‌ ಬಂತೆಂಬ ಖುಶಿಯೂ ಪಡುವಂತಿಲ್ಲ. ಸಾನ್ವಿಗೂ ತಂದೆತಾಯಿಗೆ ರಜವೆಂದು ಮಾಲ…-ಪಾರ್ಕ್‌ ಸುತ್ತೋಣವೆಂಬ ಹಠ.ಸಮಾಧಾನಪಡಿಸಿ, ಮನೆಯೆಲ್ಲ ಹರಡಿದ ಬಟ್ಟೆ ಜೋಡಣೆ, ವಾಷಿಂಗ್‌ ಮೆಷಿನ್‌ನಲ್ಲಿ ಬಟ್ಟೆ ಹಾಕಿ, ದೋಸೆ ಹಿಟ್ಟು ರುಬ್ಬುವುದು ಹೀಗೆ ರವಿವಾರ ಬಂದು ಕಳೆದದ್ದೇ ತಿಳಿಯುವುದಿಲ್ಲ.

Advertisement

ನನ್ನ ತಾಯಿಗೆ ನನ್ನ ಕಷ್ಟವೇ ತಿಳಿಯುವುದಿಲ್ಲ. ನಮ್ಮೊಂದಿಗೆ ಬಂದಿದ್ದರೆ ಎಷ್ಟು ಚೆನ್ನಾಗಿತ್ತು. ಸತೀಶ್‌ ತಾಯಿಯೂ ನನ್ನ ಮಾತು ಕೇಳುವುದಿಲ್ಲ. ಊರು ಬಿಟ್ಟು ಬೆಂಗಳೂರಿಗೆ ಬರಲು ಯಾರೂ ತಯಾರಿಲ್ಲ. “”ಅಯ್ಯೋ, ಅಲ್ಲಿ ಇಲ್ಲಿನಂತೆ ಊರೆಲ್ಲ ಓಡಾಡೋಕ್ಕಾಗುತ್ತಾ? ಎಷ್ಟೋ ಸಮಾರಂಭಗಳು ನಮಗೆ ಮಿಸ್‌ ಆಗುತ್ತೆ” ಎನ್ನುತ್ತಾರೆ.

ಅದೇ ಪ್ರೀತಿಗೆ ನೋಡಿ ಎಷ್ಟು ಚಂದ ಅವಳ ಜೀವನ. ಅತ್ತೆ-ಮಾವ ತುಂಬು ಸಂಸಾರ. ನನ್ನಂತೆ ಮಗುವನ್ನು ಡೇಕೇರ್‌, ಪ್ಲೇಸ್ಕೂಲ… ಎಂದು ಅಡ್ಡಾಡುವ ಕೆಲಸವಿಲ್ಲ. ಅಡುಗೆ, ಮನೆಗೆಲಸದ ಜವಾಬ್ದಾರಿಯೇ ಇಲ್ಲ.

ಪ್ರೀತಿಯ ದಿನಚರಿಯನ್ನು ನೋಡೋಣ. ಬೆಳಿಗ್ಗೆ  6.30- 7 ಗಂಟೆಗೆ ಎದ್ದು ಅತ್ತೆಯೊಂದಿಗೆ ಅಡಿಗೆ ಮಾಡಿ 8 ಗಂಟೆಗೆ ಮನೆಯವರೆಲ್ಲ ಒಟ್ಟಿಗೆ ಉಪಹಾರ ಸೇವಿಸಿ 9.30ಗೆ ಪತಿ ರಾಜುವಿನ ಕಾರಿನಲ್ಲಿ ಬಂದಿಳಿಯುತ್ತಾಳೆ. ಮಗ ರವಿಯನ್ನು ಸ್ನಾನ ಮಾಡಿಸಿ ಪಕ್ಕದ ಶಾಲೆಗೆ ಕರೆದುಕೊಂಡು ಹೋಗಿ ಮಧ್ಯಾಹ್ನದೊಳಗೆ ಮನೆಗೆ ತಂದು ಅವನ ಕಾಳಜಿ ವಹಿಸುವ ಅತ್ತೆ-ಮಾವ. ಗಂಟೆಗೆ ಸರಿಯಾಗಿ ಮಗುವಿಗೆ ಊಟ-ತಿಂಡಿ.

ಮಧ್ಯಾಹ್ನದ ಹೊತ್ತಿಗೆ ಪ್ರೀತಿಯ ಊಟಕ್ಕೆ ಹುಳಿಯನ್ನ, ಮೊಸರನ್ನ, ಪಲ್ಯದ ಡಬ್ಬಿಗಳು. ಸಂಜೆ ನಾಲ್ಕಕ್ಕೆ ತಿನ್ನಲು ದಾಳಿಂಬೆ, ದ್ರಾಕ್ಷಿ ಇತ್ಯಾದಿ ಹಣ್ಣುಗಳು. ಆರು ಗಂಟೆಗೆ ಕಚೇರಿಯಿಂದ ಮನೆಗೆ ಕರೆದೊಯ್ಯಲು ಬರುವ ಪತಿ, ಇದಕ್ಕಿಂತ ಇನ್ನೇನು ಬೇಕು ಪ್ರೀತಿಗೆ.

ಆದರೆ, ಪ್ರೀತಿಯ ಮನಸ್ಸು ಏನು ಹೇಳುತ್ತೆ? ಕೇಳ್ಳೋಣ. ಬೆಳಗ್ಗೆ ಬೇಗನೇ ಏಳದೇ ಇದ್ದರೆ, “ಎಷ್ಟು ತಡವಾಗಿ ಏಳುತ್ತೀಯಾ?’ ಎಂದು ಅತ್ತೆ ಕೇಳುವರೆಂದು ಬೇಗ ಏಳುತ್ತೇನೆ. ಎಲ್ಲರಂತೆ ವಾರಾಂತ್ಯದಲ್ಲಿ ಮಾಲು, ಥಿಯೇಟರ್‌ ಎಂದು ಸುತ್ತಲು ಅವಕಾಶವೇ ಇಲ್ಲ. ಕಚೇರಿಯಲ್ಲಿ ಎಲ್ಲರೂ ತೊಡುವಂತೆ ಮಾಡರ್ನ್ ಡ್ರೆಸ್‌ ಹಾಕಿದರಂತೂ ಮುಗಿಯಿತು ಕಥೆ. ಪತಿಯೊಡನೆ ಏಕಾಂತದಲ್ಲಿ ಮಾತನಾಡುವುದಕ್ಕೂ ಜಗಳ ಕಾಡುವುದಕ್ಕೂ ಅವಕಾಶವಿಲ್ಲ. ನನಗೆ ಗೀತಾಳ ಬದುಕೇ ಚೆಂದವೆನಿಸುವುದು.

“ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ’ ಎಂಬಂತೆ ನಮಗಿಂತ ಬೇರೆಯವರ ಬದುಕು ನಮಗೆ ಚಂದ ಕಾಣಿಸುತ್ತದೆ. ನಮ್ಮ ಬದುಕಿನಲ್ಲಿರುವ ಸ್ವಾರಸ್ಯವನ್ನು ಅನುಭವಿಸಿ ಖುಷಿ ಪಡುವ ಬದಲು ಬೇರೆಯವರೊಂದಿಗೆ ಹೋಲಿಸಿಕೊಳ್ಳುವುದರಲ್ಲಿ ಅರ್ಥವಿದೆಯೆ ! ಗುಂಡಪ್ಪನವರು ಹೇಳಿದಂತೆ “ಬದುಕು ಜಟಕಾ ಬಂಡಿ, ವಿಧಿ ಅದರ ಸಾಹೇಬ ಕುದುರೆ ನೀನ್‌ ಅವನು ಪೇಳªಂತೆ’ ಎಂಬಂತೆ ನಮ್ಮ ಬದುಕೇ ಬಂಗಾರವೆಂದೆಣಿಸಿ ಜೀವನ ನಡೆಸಿದರೆ ಬದುಕು ಬಂಗಾರವಾಗುವುದರಲ್ಲಿ ಸಂಶಯವಿಲ್ಲ.

ಸಾವಿತ್ರಿ ಶ್ಯಾನುಭಾಗ

Advertisement

Udayavani is now on Telegram. Click here to join our channel and stay updated with the latest news.

Next