Advertisement

ಇವರು ರೈತರಲ್ಲ ಗೂಂಡಾಗಳು

06:00 AM Nov 19, 2018 | Team Udayavani |

ಬೆಂಗಳೂರು:  ಬೆಳಗಾವಿಯಲ್ಲಿ ರೈತರ ಹೆಸರಿನಲ್ಲಿ ಪ್ರತಿಭಟನೆ ಮಾಡುವವರು ಗೂಂಡಾಗಳು ಎಂದು ಆಕ್ರೋಶ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಸುವರ್ಣಸೌಧ ಗೇಟಿನ ಬೀಗ ಒಡೆದವರು ರೈತರಲ್ಲ. ರೈತರು ಶಾಂತಿ ಪ್ರಿಯರು. ಅವರೆಂದೂ ಹಿಂಸೆಗೆ ಇಳಿಯುವುದಿಲ್ಲ ಎಂದಿದ್ದಾರೆ.

Advertisement

ಬೆಂಗಳೂರು ಕೃಷಿ ವಿವಿಯಲ್ಲಿ ಭಾನುವಾರ ಕೃಷಿ ಮೇಳದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಮೈತ್ರಿ ಸರ್ಕಾರ ರಚನೆಯಾಗಿ ಆರು ತಿಂಗಳೂ ಕಳೆದಿಲ್ಲ. ನಾಲ್ಕು ವರ್ಷದ ಹಿಂದಿನ ಸಮಸ್ಯೆಗೆ ಸರ್ಕಾರದ ವಿರುದ್ಧ ಹೋರಾಟ ಮಾಡುವುದೇಕೆ ಎಂದು ಪ್ರಶ್ನಿಸಿದರು.

ರೈತರು ಶಾಂತಿ ಪ್ರಿಯರು, ಹಳ್ಳಿಗಳಿಗೆ ಜನಪ್ರತಿನಿಧಿಗಳು ಭೇಟಿ ನೀಡಿದಾಗ ನೂರು ಮೀಟರ್‌ ದೂರದಲ್ಲಿ ತಮ್ಮ ಚಪ್ಪಲಿ ಕಳಚಿಟ್ಟು, ಹತ್ತಿರ ಬಂದು ನಮಸ್ಕರಿಸುವ ಔದಾರ್ಯ ರೈತರು ತೋರುತ್ತಾರೆ. ದರೋಡೆಕೋರ ಸಂಸ್ಕೃತಿ ಬೆಳೆಸಿಕೊಂಡವರು ಸುವರ್ಣ ಸೌಧದ ಗೇಟು ಒಡೆದಿದ್ದಾರೆ. ಇಂಥವರನ್ನು ರೈತ ಎಂದು ಕರೆಯಲು ಸಾಧ್ಯವಿಲ್ಲ. ನನ್ನ ತಾಳ್ಮೆಗೂ ಮಿತಿ ಇದೆ. ಇವರು ರೈತರ ಕುಲಕ್ಕೆ ಅವಮಾನ ಮಾಡುವ ಗೂಂಡಾಗಳು ಎಂದರು.

ರೈತರಿಗೆ ಹೊಸ ಬದುಕು ನೀಡಲು ಸರ್ಕಾರ ಇದೆಯೇ ಹೊರತು ಸಮಯ ವ್ಯರ್ಥ ಮಾಡಲು ವಿಧಾನಸೌಧದಲ್ಲಿ ಕುಳಿತಿಲ್ಲ. ಬೆಳಗಾವಿ ಪ್ರತಿಭಟನೆ ಸಂದರ್ಭದಲ್ಲಿ ಹಸಿರು ಶಾಲು ಹಾಕಿಕೊಂಡಿರುವ ಹೆಣ್ಣು ಮಗಳು ನನ್ನ ವಿರುದ್ಧ ಹೇಳಿಕೆ ನೀಡಿದ್ದಾಳೆ. ಅವಳು ಹೊಲಕ್ಕೆ ಹೋಗಿ ಕೆಲಸ ಮಾಡಿದ್ದಾಳ್ಳೋ ಗೊತ್ತಿಲ್ಲ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲು ನಾಲಾಯಕ್‌ ಎಂದಿದ್ದಾಳೆ. ನಾಲ್ಕು ವರ್ಷದ ಹಿಂದೆ ಹಣ ನೀಡಿದ ಕಾರ್ಖಾನೆ ಮಾಲೀಕರಿಗೆ ಚುನಾವಣೆ ಸಮಯದಲ್ಲಿ ಓಟು ಕೊಟ್ಟು ಈಗ ಕುಮಾರಸ್ವಾಮಿ ರೈತರಿಗೆ ಹಣ ಕೊಡಸಿಲ್ಲ ಎಂದು ಬೀದಿಗೆ ಬಂದಿದ್ದೀಯಲ್ಲ ತಾಯಿ, ನಾಲ್ಕು ವರ್ಷದಿಂದ ಎಲ್ಲಿ ಮಲಗಿದ್ದೆ ಎಂದು ಹೋರಾಟಗಾರ್ತಿಯನ್ನು ಸಭೆಯಲ್ಲಿ ಪ್ರಶ್ನಿಸಿದರು.

ಮಾತನಾಡುವ ಚಟ, ಬಾಯಿ ಚಪಲ ಇದ್ದರೆ ಮಾತನಾಡಿ. ಸುವರ್ಣ ಸೌಧ, ವಿಧಾನ ಸೌಧದ ಗೇಟು ಮುರಿದವರ ಮೇಲೆ ಕ್ರಮ ತೆಗದುಕೊಳ್ಳುತ್ತೇವೆ. ರೈತರ ಮೇಲೆ ಈ ಸರ್ಕಾರ ಗದಾಪ್ರಹಾರ ಮಾಡಲ್ಲ. ರೈತರಿಗೆ ಸಕಲ ಗೌರವ ನೀಡುತ್ತೇವೆ. ರೈತರ ಹೆಸರು ದುರುಪಯೋಗ ಮಾಡಿಕೊಳ್ಳುವವರಿಗೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದರು.

Advertisement

ಕಾರ್ಖಾನೆ ಮಾಲೀಕರು ಎಫ್ಆರ್‌ಪಿ ಹಣ ನೀಡಿಲ್ಲ ಎಂದು ನನ್ನ ವಿರುದ್ಧ ಪ್ರತಿಭಟನೆ ಮಾಡುವುದು ಏಕೆ? ನಾಲ್ಕು ವರ್ಷದಿಂದ ಮಾಲೀಕರ ವಿರುದ್ಧ ಯಾಕೆ ಪ್ರತಿಭಟನೆ ಮಾಡಿಲ್ಲ. ಇದರಲ್ಲಿ ರಾಜಕೀಯ ಇದೆಯಾ? ಬೆಳೆಗಾವಿ, ಬಾಗಲಕೋಟೆ ಭಾಗದಲ್ಲಿ ರಾಜಕೀಯ ವ್ಯಕ್ತಿಗಳನ್ನು ಶಾಸಕರು, ಮಂತ್ರಿಗಳನ್ನು ಮಾಡಿದ್ದು ನಿಮ್ಮ ತಪ್ಪು, ಇದರಲ್ಲಿ ಕುಮರಸ್ವಾಮಿ ತಪ್ಪು ಏನಿದೆ?  ದುಡ್ಡು ಕೊಡಿಸಿಲ್ಲ ಎಂದು ಈಗ ನಿಮಗೆ ಕುಮಾರಸ್ವಾಮಿ ಜ್ಞಾಪಕಕ್ಕೆ ಬರುತ್ತಿದ್ದಾರೆ ಎಂದು ಪ್ರತಿಭಟನಾಕಾರರ ವಿರುದ್ಧ ವಾಗ್ಧಾಳಿ ನಡೆಸಿದರು.

ಸರ್ಕಾರಕ್ಕೆ ರೈತರ ಬಗ್ಗೆ ಬದ್ಧತೆ ಇದೆ. ಕೋಲಾರದಲ್ಲಿ ಮಾವಿಗೆ ಬೆಲೆ ಸಿಗದೇ ಇದ್ದಾಗ 10 ನಿಮಿಷದಲ್ಲಿ ಸಮಸ್ಯೆ ಪರಿಹಾರ ಮಾಡಿದ್ದೇವೆ. ಬೆಂಬಲ ಬೆಲೆಗಾಗಿ 25 ಕೋಟಿ ರೂ. ತಕ್ಷಣ ಬಿಡುಗಡೆ ಮಾಡಿದ್ದೇವೆ. ರೇಷ್ಮೆ ಬೆಳೆಯುವ ರೈತರಿಗೆ ಅನ್ಯಾಯ ಆದಾಗ ಸಹಾಯಕ್ಕೆ ಬಂದಿದ್ದೇವೆ. ಬಾಗಲಕೋಟೆಯಲ್ಲಿ  ಈರುಳ್ಳಿ ಬೆಲೆಗೆ ಕುಸಿದಾಗ ರೈತರ ಸಂಕಷ್ಟಕ್ಕೆ ಬಂದಿದ್ದೇವೆ ಎಂದರು.

ಮಾಧ್ಯಮದ ವಿರುದ್ಧ ಗರಂ
ಕೆಲವು ಮಾಧ್ಯಮ ಮಿತ್ರರ ಬಗ್ಗೆ ನೋವಿದೆ. ಈ ಸರ್ಕಾರ ಎಷ್ಟು ಬೇಗ ಬೀಳುತ್ತದೋ ಎಂದು ಕಾದು ಕುಳಿತಿದ್ದಾರೆ. 16 ಜನ ಈಗಾಗಲೇ ಹೊರಟಿದ್ದಾರೆ ಎಂದು ತೋರಿಸುತ್ತಿದ್ದಾರೆ. ಆದರೆ, ಆ ಶಾಸಕರ ಬಗ್ಗೆ ಜನರಿಗೆ ಏನು ಅಭಿಪ್ರಾಯ ಬರಬಹುದು. ಸರ್ಕಾರ ಇಳಿಸುವುದು ಬೇರೆ, ಶಾಸಕರು ಜನರ ಮುಂದೆ ಹೋಗದಂತೆ ಮಾಡುತ್ತಿದ್ದೀರಿ. ಹಳ್ಳಿಯ ರೈತರ ಜತೆ ಕೂತು ಅವರ ಸಮಸ್ಯೆ ಬಗೆಹರಿಸಲು ಹೊರಟಿರುವ ಸರ್ಕಾರ ಇದು. ನಾನೇ ಪ್ರತಿಭಟನಾಕಾರರಿಗೆ ದೂರವಾಣಿ ಕರೆ ಮಾಡಿದ್ದೆ, ಯಾರೋ 20-30 ಜನ ಪ್ರತಿಭಟನೆ ಮಾಡುತ್ತಿದ್ದಾರೆ. ಅವರಿಗೆ ಲಾರಿ ಕೆಳಗೆ ಮಲಗಿ ಎಂದು ಮಾಧ್ಯಮದವರೇ ಹೇಳಿ ಸರ್ಕಾರ ವಿರುದ್ಧ ಪ್ರಚಾರ ಮಾಡುತ್ತಿದ್ದಾರೆ. ಇದಕ್ಕೆ ಹೆದರುವುದಿಲ್ಲ. ಜನರ ವಿಶ್ವಾಸಕ್ಕಾಗಿ ರಾಜಕಾರಣ ಮಾಡುತ್ತೇವೆ ಎಂದು ಹೇಳಿದರು.

ಕೋಟ್‌ಗಳು ಎಲ್ಲದ್ದಕ್ಕೂ ಹೋಗಿ ಕುಮಾರಸ್ವಾಮಿ ಅವರನ್ನು ಹಿಡಿದುಕೊಂಡರೆ, ಅವರೇನು ಪ್ರಿಂಟ್‌ ಮಾಡುವ ಮೆಷಿನ್‌ ಇಟ್ಟು ಕೊಂಡಿಲ್ಲ. ಕಾರ್ಖಾನೆಗೆ ರೈತರು ತೆಗೆದುಕೊಂಡು ಹೋಗುವ ಕಬ್ಬನ್ನು ತಡೆಯುವುದು ಸರಿಯಲ್ಲ, ಕೇಂದ್ರ ಸರ್ಕಾರ ಮಧ್ಯೆ ಪ್ರವೇಶ ಮಾಡಿ ಬೆಂಬಲ ಬೆಲೆ ನೀಡಲಿ.  
– ಎಚ್‌.ಡಿ. ರೇವಣ್ಣ , ಲೋಕೋಪಯೋಗಿ ಸಚಿವ   

ಕಬ್ಬಿಗೆ ಬೆಂಬಲ ಬೆಲೆ ಬೇಡಿಕೆ ಇಟ್ಟು ಪ್ರತಿಭಟನೆ ಮಾಡಿದ ರೈತರ ಮೇಲೆ ದೌರ್ಜನ್ಯ ಎಸಗಿ, ಬಂಧಿಸಿ, ಜಾಮೀನು ರಹಿತ ಪ್ರಕರಣ ದಾಖಲಿಸುತ್ತಿರುವುದು ಖಂಡನೀಯ. ಕೂಡಲೇ ರೈತರ ಸಮಸ್ಯೆ ಬಗೆಹರಿಸದಿದ್ದರೆ ಬಿಜೆಪಿಯೂ ಬೀದಿಗಿಳಿದು ಹೋರಾಟ ಮಾಡಲಿದೆ.
– ಬಿ.ಎಸ್‌.ಯಡಿಯೂರಪ್ಪ, ಪ್ರತಿಪಕ್ಷ ನಾಯಕ 

ಕಬ್ಬು ಬೆಳೆಗಾರರ ಪ್ರತಿಭಟನೆ ಹಿನ್ನೆಲೆಯಲ್ಲಿ ಸಿಎಂ ಮಂಗಳವಾರ ಬೆಂಗಳೂರಿನಲ್ಲಿ ಸಭೆ ಕರೆದಿದ್ದಾರೆ. ಎಲ್ಲ ರೈತರ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸುವಂತೆ ಸಚಿವರು ಹಾಗೂ ಜಿÇÉಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ನಾವೇನು ಹಿಂದಿನ ಬಿಜೆಪಿ ಸರಕಾರದಂತೆ ರೈತರ ಮೇಲೆ ಗೋಲಿಬಾರ್‌ ಮಾಡಿಲ್ಲ.
-ಎಚ್‌.ಡಿ.ದೇವೇಗೌಡ, ಜೆಡಿಎಸ್‌ ವರಿಷ್ಠ

Advertisement

Udayavani is now on Telegram. Click here to join our channel and stay updated with the latest news.

Next