Advertisement
ಇದೊಂಥರ ಹುಟ್ಟುಗುಣವಿದ್ದಂತೆ ! ಯಾವ ಬ್ರಾಂಡ್ ಸೋಪು ಹಾಕಿ ತೊಳೆದರೂ ಈ ಸೊಗಡು ವಾಸನೆ ಹೋಗುವುದಿಲ್ಲ. ಸೊಗಡು ಜಾಸ್ತಿ ಇದ್ದಷ್ಟೂ ಅವರೇಕಾಯಿಗೆ ರುಚಿ ಹೆಚ್ಚು, ನೀರು ಕಟ್ಟಿ ಬೆಳೆದರೆ ಕಾಲವಲ್ಲದ ಕಾಲದಲ್ಲಿ ಬೆಳೆದರೆ ಅವರೇಕಾಯಿಗೆ ಸೊಗಡಿರುವುದಿಲ್ಲ. ಈ ಸೊಗಡು ಈ ಮಣ್ಣಿನ ಜನರ ಸ್ವಭಾವದಂತೆಯೇ ವಿಶಿಷ್ಟ, ವಿಚಿತ್ರ ಕೂಡ !
Related Articles
Advertisement
ಅವರೇಕಾಳನ್ನು ಇಲ್ಲಿಯ ಜನ ಇಷ್ಟೊಂದು ಪ್ರೀತಿಸುವುದಕ್ಕೆ ಇದು ಬರೀ ತರಕಾರಿ ಎನ್ನುವುದೇ ಕಾರಣವಲ್ಲ. ಅವರೇಕಾಳನ್ನು ಬಿಡಿಸುವ ಸುಲಿಯುವ ಸವಿಯುವ ಪ್ರತಿಯೊಂದು ಹಂತವೂ ಇಲ್ಲಿಯ ಜನರ ಜೀವನದ ಅವಿಭಾಜ್ಯ ಅಂಗವೇ ಆಗಿದೆ. ಮೈ ಕೊರೆಯುವ ಚಳಿಯಲ್ಲಿ ಬೇಗ ಎದ್ದು ಹಲ್ಲು ಕಟಕಟ ಕಡಿಯುತ್ತಾ ಹೊಲಕ್ಕೆ ಹೋಗಿ ತಾಜಾ ತಾಜಾ ಕಾಯಿ ಬಿಡಿಸಿ ತರುವುದೇ ಒಂದು ಸಂಭ್ರಮ. ಹೊಲ ಇದ್ದವರು ತಮ್ಮ ಮನೆಗಾಗುವಷ್ಟನ್ನೇ ತರದೆ ಅಕ್ಕಪಕ್ಕದವರಿಗೂ ಹಂಚುವುದರಿಂದ ಅವರೇಕಾಯಿ ಸ್ನೇಹ ಬಾಂಧವ್ಯದ ಹರಿಕಾರ ಎಂದು ಹೇಳಬಹುದು. ಬೆಳಿಗ್ಗೆ ಅವರೇಕಾಯಿ ಸುಲಿದು ಸಾಂಬಾರ್ ಮಾಡುವ ಸಡಗರವಾದರೆ, ಸಂಜೆ ನೆನೆಸಿದ ಕಾಳನ್ನು ಹಿಸುಕುವ ಕಾರ್ಯಕ್ರಮ ಇನ್ನೂ ವೈಭವೋಪೇತ!
ಅಕ್ಕಪಕ್ಕದ ನಾಲ್ಕಾರು ಮನೆಯ ಹೆಂಗಸರು ಸ್ಟೀಲ್ ಡಬರಿ ಹಿಡಿದು ಮನೆಯಿಂದ ಹೊರಗಡೆ ಬಂದರು ಎಂದರೆ ಹಿಸುಕಲು ಅವರೇಕಾಯಿ ತಂದರು ಎಂದೇ ಅರ್ಥ. ಹಿಸುಕಲು ತನ್ನ ಮನೆಯÇÉೇ ಅವರೇಕಾಯಿ ನೆನೆಸಿರಬೇಕು ಎಂದೇನೂ ಇಲ್ಲ. ಯಾರ ಡಬರಿಯೊಳಗೆ ಯಾರು ಬೇಕಾದರೂ ಕೈ ಹಾಕಿ ಬೇಳೆ ಮಾಡಿಕೊಡಬಹುದು, ಇಂದೊಂಥರ ಸಹಕಾರಿ ತತ್ವ ಆಧರಿಸಿದ ಕಾಯಕ. ನಾಲ್ಕು ಜನ ಒಟ್ಟಿಗೆ ಸೇರಿದರೆ ಕುಕ್ಕೆಗಟ್ಟಲೆ ಅವರೇಕಾಯಿ ಗಂಟೆಯೊಳಗೆ ಪೊರೆ ಕಳಚಿಕೊಂಡು ಹೊಸ ರೂಪ ತಳೆಯುತ್ತದೆ.
ಪ್ರತಿದಿನ ಅವರೇಕಾಯಿ ಹಿಸುಕುವ ಗುಂಪುಗಳು ಹರಟೆಯ ಕಟ್ಟೆಗಳಾಗುತ್ತವೆ, ಮನೆ ಮನೆಯ ಸುಖ, ದುಃಖ, ಅತ್ತೆ ಕಾಟ, ಸೊಸೆಯ ಬಿನ್ನಾಣ, ಮೊಮ್ಮಗನ ಕಪಿಚೇಷ್ಟೆ, ಮೊಮ್ಮಗಳ ಸ್ಕೂಲಿನ ಸಾಧನೆಗೆ ಅವರೇಕಾಯಿ ಮೂಕಸಾಕ್ಷಿಯಾಗುತ್ತದೆ. ಟಿವಿ ಧಾರಾವಾಹಿಗಳ ಪಾತ್ರಗಳ ವಸ್ತುನಿಷ್ಟ ವಿಮರ್ಶೆ ನಡೆಯಲು ಇದಕ್ಕಿಂತ ಸೂಕ್ತ ಸ್ಥಳ ಇನ್ನೊಂದಿಲ್ಲ, ಯಾವ ಥಿಯೇಟರ್‌ನಲ್ಲಿ ಯಾವ ಸಿನಿಮಾ ಇದೆ, ಯಾವ ಸಿನಿಮಾ ನಟನ ಜೀವನದಲ್ಲಿ ಬಿರುಗಾಳಿ ಎದ್ದಿದೆ, ಯಾವ ಸಿನಿಮಾ ಸೂಪರ್ ಹಿಟ್ ಆಗಿದೆ ಎನ್ನುವ ಇತ್ಯಾದಿ ವಿವರಗಳು ಗಾಂಧಿನಗರಕ್ಕಿಂತ ಬಿಸಿ ಬಿಸಿಯಾಗಿ ಅವರೆನಗರಿಯಲ್ಲಿ ಚರ್ಚೆಯಾಗುತ್ತವೆ. ಸ್ಥಳೀಯ ರಾಜಕೀಯದಿಂದ ಹಿಡಿದು ಮೋದಿಯ ನೋಟ್ ಬ್ಯಾನ್‌ವರೆಗೆ ಇಲ್ಲಿ ಮಂಡನೆಯಾಗದ ವಿಷಯವಿಲ್ಲ. “ಹೆಂಗಸರಿಗೆ ವ್ಯವಹಾರ ಜ್ಞಾನವಿಲ್ಲ’ ಎನ್ನುವ ಗಂಡಸರು ಒಮ್ಮೆ ಅವರೇಕಟ್ಟೆಯಲ್ಲಿ ಇಣುಕಿ ನೋಡಬೇಕು. ಹಾಗಂತ ಅವರೇಕಟ್ಟೆಯಲ್ಲಿ ನಡೆಯುವುದೆÇÉಾ ನಿರಪಾಯಕಾರಿ ಚರ್ಚೆಗಳೇನಲ್ಲ, ಕಂಡವರ ಮನೆಯ ದೋಸೆಯ ತೂತು ಎಣಿಸುವ ಪ್ರವೃತ್ತಿಯವರಿಗೆ ಇದಕ್ಕಿಂತ ಸೂಕ್ತ ವೇದಿಕೆ ಎಲ್ಲಿ ಸಿಗಬೇಕು? ಪಟೇಲರ ಮಗಳು ಜೀನ್ಸ್ ಬಿಟ್ಟು ಬೇರೆ ಡ್ರೆಸ್ ಹಾಕುವುದೇ ಇಲ್ಲ ಎನ್ನುವುದರಿಂದ ಹಿಡಿದು ಓಣಿ ಮನೆ ರಾಜಶೇಖರನಿಗೆ ದೊಡ್ಡ ಮಲ್ಟಿನ್ಯಾಶನಲ್ ಕಂಪೆನಿಯಲ್ಲಿ ಬರೀ 20 ಸಾವಿರ ಸಂಬಳವಂತೆ, ಸುಮ್ಮನೆ ಲಕ್ಷ ಅಂತ ಹೇಳಿಕೊಂಡು ತಿರುಗುತ್ತಾನೆ ಎನ್ನುವವರೆಗೆ ಖಾಸಾ ಖಾಸಾ ತಾಜಾ ಸುದ್ದಿಗಳೆÇÉಾ ಇಲ್ಲಿ ಕ್ಷಣಾರ್ಧದಲ್ಲಿ ವಿನಿಮಯವಾಗುತ್ತವೆ. ಹೀಗೆ, ಒಮ್ಮೆ ನಮ್ಮ ಊರಿನ ಓಲ್ಡ್ ಸುಂದರಿ ವನಜಾಳ ಮಗಳು ಹದಿನಾರಾದರೂ ಋತುಮತಿಯಾಗಿಲ್ಲ ಎನ್ನುವ ವಿಷಯ ಅವರೇಕಟ್ಟೆಯಲ್ಲಿ ಚರ್ಚೆಗೆ ಬಂದಿದ್ದು ಗೊತ್ತಾಗಿ ವನಜ ಬಿರುಗಾಳಿಯಂತೆ ಬಂದು ಕಟ್ಟೆಯಲ್ಲಿ ಕೂತಿದ್ದ ಹೆಂಗಸರ ಅವರೇ ಡಬರಿಗಳನ್ನೆÇÉಾ ಮೋರಿಗೆ ಸುರಿದು ರಂಪಾಟ ಮಾಡಿ ಒಂದಷ್ಟು ದಿನ ಅವರೇಕಟ್ಟೆ ಕಾನ್ಫರೆನ್ಸ್ ಬಂದ್ ಆಗುವ ಹಾಗೆ ಮಾಡಿದ್ದಳು. ಈ ಅವರೇಕಾಯಿ ಸುಲಿಯುವುದು ಬರೀ ಹೆಂಗಸರ ಕೆಲಸ ಮಾತ್ರನಾ ಎಂದು ಕೇಳಬೇಡಿ.
ಗಂಡಸರೂ ಸುಲಿಯುತ್ತಾರೆ. ಆದರೆ ಹೆಂಗಸರಂತೆ ರಾಜಾರೋಷವಾಗಿ ಕಟ್ಟೆಯಲ್ಲಿ ಕುಳಿತು ಸುಲಿಯಲು ಅವರ ಗಂಡಾಭಿಮಾನ ಆಸ್ಪದ ಕೊಡುವುದಿಲ್ಲ. ಕತ್ತಲಾದ ಮೇಲೆ ಬಾಗಿಲು ಬೋಲ್ಟ್ ಹಾಕಿ ಸೋಫಾ ಮೇಲೆ ಆಸೀನರಾದಾಗ ಹೆಂಡತಿ ಅವರೇಕಾಯಿ ತುಂಬಿದ ಪಾತ್ರೆಯನ್ನು ತಂದು ಎದುರಿಗೆ ಕುಕ್ಕುತ್ತಾಳೆ. ಆಗ “ಸುಲಿಯಲಾರೆ’ ಎನ್ನುವ ಭಂಡಧೈರ್ಯ ಯಾವ ಗಂಡು ಗುಂಡಿಗೆಗಿದೆ? ಟಿವಿ ನೋಡುತ್ತ ನೋಡುತ್ತ ಕೈಲಿರುವ ಅವರೇಕಾಯಿ ಖಾಲಿಯಾದ ಮೇಲೆಯೇ ಊಟದ ತಟ್ಟೆ ಡೈನಿಂಗ್ ಟೇಬಲ್ಲಿಗೆ ಬರುವುದು.
ಕರಾವಳಿಯ ಹಳ್ಳಿಯೊಂದರಿಂದ ಮದುವೆಯಾಗಿ ಬಯಲುಸೀಮೆಗೆ ಬಂದಾಗ ನನಗೆ ಈ ಅವರೇಕಾಯಿಯ ಪರಿಚಯವೇ ಇರಲಿಲ್ಲ. ಕೀರೆ, ಬದನೆ, ಸೌತೆ, ಸೊಪ್ಪು ಇಂಥವು ಮಾತ್ರ ತರಕಾರಿ ಎಂದುಕೊಂಡಿದ್ದ ನನಗೆ ಎಲ್ಲರೂ ಕೇಜಿಗಟ್ಟಲೆ ಅವರೇಕಾಯಿ ತಂದು ಸುಲಿದು ಪ್ರತಿದಿನ ಅದನ್ನೇ ತಿನ್ನುತ್ತಾರಲ್ಲ ಎಂದು ಸೋಜಿಗವಾಗಿತ್ತು. ನಮ್ಮ ಊರಿಂದ ಇಲ್ಲಿಗೆ ವರ್ಗವಾಗಿ ಬಂದ ಬ್ಯಾಂಕ್ ಮ್ಯಾನೇಜರ್ ಒಬ್ಬರು ಮದುವೆಯೊಂದರಲ್ಲಿ, “”ಅವರೇಕಾಳು ಸಾರು, ಅದರದ್ದೇ ಪಲ್ಯ, ಅದರದ್ದೇ ಪಲಾವ್, ಅದೇ ತೊವ್ವೆ ತಿಂದು ಸಾಕಾಗಿ ಹೋಯಿತು ಮಾರಾಯೆÅà! ಈ ರೀತಿ ಅವರೆಕಾಳು ತಿನ್ನುವುದಾ ಇಲ್ಲಿಯ ಜನ?” ಎಂದರು. ಅವರಿಗೆ ಅವರೇಕಾಯಿಯ ರುಚಿ ಹೊಸತು. ಬಹುಶಃ ಬಂದು ವರ್ಷವಾದ ಮೇಲೆ ಅವರಿಗೂ ಆ ರುಚಿ ಒಗ್ಗಿರಬಹುದು. ನನ್ನ ಸ್ನೇಹಿತೆಯ ಮಗ ಆಗಾಗ ಅವರ ಅಮ್ಮನನ್ನು ಆಡಿಕೊಳ್ಳುತ್ತಿರುತ್ತಾನೆ. “”ಅಮ್ಮ , ಅವರೇಕಾಯಿಯ ಚಿತ್ರಾನ್ನ, ಸಾರು, ಹುಳಿ, ಆಂಬೊಡೆ ಎÇÉಾ ಆಯಿತು, ಅವರೇಕಾಳಿನ ಪಾಯಸ, ಒಬ್ಬಟ್ಟು ಟ್ರೆç ಮಾಡಲ್ವಾ?” ಅಂತ. ಪ್ರೊಫೆಸರ್ ಬಿಜಿಎಲ್ ಸ್ವಾಮಿ ಅವರು ಅವರೇಕಾಯಿಯನ್ನು ಹೊಲದಲ್ಲಿ ಗುಂಡಿ ತೋಡಿ ಒಂದು ವಿಶಿಷ್ಟವಾದ ಸೊಪ್ಪಿನಿಂದ ಮುಚ್ಚಿ (ಬಹುಶಃ ಕಾಡು ತುಳಸಿ) ಸುಟ್ಟು ತಿನ್ನುವ ವಿಧಾನದ ಬಗ್ಗೆ ಬರೆದಿ¨ªಾರೆ.
ಸಂಕ್ರಾಂತಿಯಲ್ಲಿ ಎಳ್ಳಿನ ಜೊತೆ ಪುಟ್ಟ ಕುಡಿಕೆಯಲ್ಲಿ ಅವರೇಕಾಯಿ ತುಂಬಿ ಹಂಚಿಕೊಳ್ಳುವ ಸಂಪ್ರದಾಯವಿದೆ. ಹೀಗೆ ಅವರೆ ಎಂದರೆ ಎರಡಿಂಚಿನ ಕಾಯೊಳಗೆ ಅವಿತಿರುವ ಪುಟ್ಟ ಕಾಳಲ್ಲ, ಇದೊಂದು ಸಂಸ್ಕƒತಿಯೇ ಆಗಿಬಿಟ್ಟಿದೆ ಎಂದರೆ ಅತಿಶಯೋಕ್ತಿಯಲ್ಲ. .
ಮೋದಿ ಅವರ ನೋಟ್‌ಬ್ಯಾನ್ ಬಿಸಿಗೆ ಚಿಕ್ಕ ಪುಟ್ಟ ವ್ಯಾಪಾರಿಗಳು ಕೆಲವು ದಿನ ತತ್ತರಿಸಿದ್ದು ಸುಳ್ಳಲ್ಲ. ಬಯಲುಸೀಮೆ ತೀವ್ರ ಬರದಿಂದ ಕಂಗೆಟ್ಟಿದೆ. ಅವರೇಕಾಯಿಗೆ ಬೇಕಾದ ಕೊರೆವ ಚಳಿಯ ಹನಿಹನಿ ಇಬ್ಬನಿ ಬೀಳುತ್ತಿದ್ದರೂ ರೈತರ ಹೊಲಗಳಲ್ಲಿ ಅವರೇಕಾಯಿಯೇ ಇಲ್ಲ. ನೀರಾವರಿಯಲ್ಲಿ ಬೆಳೆದಿರುವ ಕೆಲವೇ ಅನುಕೂಲಸ್ಥರಿಗೆ ಈ ಬಾರಿ ಅವರೇಕಾಯಿ ಭಾಗ್ಯ! ಅವರಿಂದ ಕೊಂಡು ತಂದು ಮನೆ ಮುಂದೆ ಸೈಕಲ್ ಬುಟ್ಟಿಯಲ್ಲಿ ಅವರೇಕಾಯಿ ಕಾಸು ಮಾಡಿಕೊಳ್ಳುತ್ತಿದ್ದ ರೈತರಿಗೆ ಚಿಲ್ಲರೆ ಸಮಸ್ಯೆಯಿಂದಾಗಿ ಸಾಕಷ್ಟು ನಷ್ಟವೂ ಆಯಿತು. ಇನ್ನು ಮಧ್ಯವರ್ತಿಗಳೂ ದೊಡ್ಡನೋಟು ಕೊಟ್ಟು ಬುಟ್ಟಿಗಟ್ಟಲೆ ಅವರೇಕಾಯಿ ಕೊಳ್ಳಬೇಕಾದ ಅನಿವಾರ್ಯತೆ ಎದುರಿಸಬೇಕಾಯಿತು. ಜನವರಿಯಲ್ಲಿ ಬೆಂಗಳೂರಿನಲ್ಲಿ ನಡೆಯುತ್ತಿರುವ ಅವರೇಕಾಯಿ ಮೇಳ ಅವರೇಕಾಯಿ ಅಡುಗೆಯಷ್ಟೇ ಪ್ರಸಿದ್ಧಿ. ಈ ವರ್ಷ ಬೆಂಗಳೂರಿನ ಹಲವೆಡೆ ಯಶಸ್ವಿಯಾಗಿ ಭರ್ಜರಿಯಾಗಿ ಅವರೇಮೇಳ ನಡೆಯುತ್ತಿದೆ. ಇದು ಜನವರಿ ಕೊನೆಯವರೆಗೆ ಮುಂದುವರೆಯಲಿದೆ. ಮೇಳದಲ್ಲಿ ರೈತರ ಹೊಲದಿಂದ ನೇರವಾಗಿ ಅವರೆಕಾಯಿ ಗ್ರಾಹಕರ ಕೈ ಸೇರುವುದರಿಂದ ರೈತರಿಗೂ ಲಾಭ. ಈ ಬಾರಿಯ ಮೇಳದ ವಿಶಿಷ್ಟವೆಂದರೆ ಇಡೀ ಮೇಳ ಹೆಚ್ಚುಕಮ್ಮಿ ನಗದು ರಹಿತವಾಗಿ ನಡೆಯುತ್ತಿರುವುದು. ಎಲ್ಲ ವ್ಯಾಪಾರಿಗಳೂ ಕಾರ್ಡ್ ಅಥವಾ ಇ-ವಾಲೆಟ್ ಬಳಸಿ ತಾವೂ ಡಿಜಿಟಲ್ ಇಂಡಿಯಾಗಿ ತೆರೆದುಕೊಳ್ಳುವ ಉತ್ಸಾಹ ತೋರುತ್ತಿ¨ªಾರೆ. ಈಚೆಗೆ ಅವರೇಕಾಯಿ ಡಬರಿ ಹಿಡಿದು ಹರಟೆಕಟ್ಟೆಗೋ, ಕಾಂಪೌಂಡ್ ಬಳಿಗೂ ಬರುವವರೇ ಕಮ್ಮಿ. ಎÇÉಾ ಟಿವಿ ಸೀರಿಯಲ್ ನೋಡುತ್ತಲೇ ಅವರೇಕಾಯಿ ಸುಲಿದೋ, ಹಿಸುಕಿಯೋ ಧನ್ಯರಾಗಿ ಬಿಡುತ್ತಾರೆ. ಆದರೆ ಇಂದ್ರಮ್ಮನ ಮನೆ ಮುಂದೆ ಮಾತ್ರ ಸೀನಿಯರ್ ಸಿಟಿಜನ್ ಎನಿಸಿದ ಇಂದ್ರಮ್ಮ, ಮಹೇಶ್ವರಿ, ಗಿರಿಜಾಬಾಯಿ ಮೊದಲಾದವರು ಅವರೇಕಾಯಿ ಸುಲಿಯಲೋ, ಹಿಸುಕಲೋ ಕೂರುತ್ತಾರೆ, ಅವರಿಗೆ ಇದೊಂದು ಟೈಂಪಾಸ್ ಕಾಯಕ! ಮನೆಯಲ್ಲಿ ಮಾತಾಡಲು ಇದ್ದರೂ ಯಾರಿಗೂ ಈ ವಯಸ್ಸಾದವರ ಜೊತೆ ಮಾತಾಡಲು ಪುರುಸೊತ್ತು, ಆಸಕ್ತಿ ಎರಡೂ ಇಲ್ಲ. ಆಚೆ ಏನು ಮಾತಾಡಿದರೂ, ದೂರಿದರು ಎನ್ನುವಂತಾಗುತ್ತದೆ ಎಂಬ ಹಿಂಜರಿಕೆ. ಯಾರನ್ನಾದರೂ ಕರೆದು ಮಾತಾಡಲು ಭಯ. ಅದಕ್ಕೇ ಅವರೇಕಾಯಿ ಸುಲಿಯುವ, ಹಿಸುಕುವ ನೆವದಲ್ಲಿ ಈ ಹಿರಿಯ ಜೀವಿಗಳು ಒಟ್ಟಿಗೆ ಕೂರುತ್ತವೆ. ಇವರಿಗೆ ಅವರೇಕಾಯಿ ಸುಲಿಯುವುದಷ್ಟೇ ಕೆಲಸ, ಅದರ ಸಾರನ್ನಾಗಲೀ, ಮೇಲೋಗರವನ್ನಾಗಲೀ ಇವರು ತಿನ್ನುವುದಿಲ್ಲ. ಒಬ್ಬರಿಗೆ ಗ್ಯಾಸ್ ಪ್ರಾಬ್ಲಿಮ್. ಇನ್ನೊಬ್ಬರಿಗೆ ಅವರೇಕಾಯಿ ತಿಂದರೆ ಮಂಡಿ ಹಿಡಿದುಕೊಳ್ಳುತ್ತದೆ. ಮತ್ತೂಬ್ಬರು ಅದನ್ನು ಕಾಶಿಯಲ್ಲಿ ಬಿಟ್ಟು ಬಂದಿ¨ªಾರೆ. ಆದರೂ ಮಗ, ಸೊಸೆ ಮೊಮ್ಮಕ್ಕಳಿಗಾಗಿ ಅವರೆಕಾಯಿ ಸುಲಿದು ಹಿಸುಕುತ್ತಾರೆ. ಈ ಹಿರಿಯ ಜೀವಗಳೂ ಚಲಾವಣೆಯಿಂದ ಹಿಂದೆ ತೆಗೆದ ನೋಟುಗಳಂತೆ ! ಹಿಸುಕಿ ಬಿಸಾಡಿದ ಅವರೆಕಾಯಿ ಸಿಪ್ಪೆಯಂತೆ ! ಮಹೇಶ್ವರಿ ವರುಷಗಳಿಂದ ಅಷ್ಟೋ ಇಷ್ಟೋ ಕೂಡಿಟ್ಟಿದ್ದ ಐನೂರು, ಸಾವಿರದ ನೋಟುಗಳನ್ನು ಮಗ ಬ್ಯಾಂಕಿಗೆ ಹಾಕ್ತೀನಿ ಅಂತ ತಗೊಂಡ್ ಹೋದ್ನಂತೆ. ಅದನ್ನ ವಾಪಸ್ ಕೇಳಿದ್ರೆ ಸೊಸೆ “ನಿಮಗ್ಯಾಕೆ ದುಡ್ಡು? ಬೇಕಾದಾಗ ಕೊಡ್ತೀವಿ ಕೇಳಿ ಅಂತಾಳಂತೆ. ಈಗ ಮಾತ್ರೆಗೂ ಅವರ ಮುಂದೆ ಕೈ ಚಾಚಬೇಕು, ಅದಕ್ಕೇ ಸುತಾರಾಂ ಅವರೇಕಾಯಿ ತಿನ್ನೋದೇ ಬಿಟ್ ಬಿಟ್ಟಿದೀನಿ’ ಅನ್ನೋದು ಮಹೇಶ್ವರಿ ಅಳಲು ! ಗಿರಿಜಾಬಾಯಿಗೆ ಕಾಲು ಆಗದಿದ್ದರೂ ಕುಂಟುತ್ತಾ ಹಿಸುಕಿದ ಅವರೇಬೇಳೇನಾ ಕರಿದು, ಖಾರ ಬಳಿದು ಪ್ಯಾಕೆಟ್ ಮಾಡಿ ಈ ವಯಸ್ಸಲ್ಲೂ ಅಂಗಡಿಗಳಿಗೆ ಕೊಟ್ ಬರ್ಬೇಕಲ್ಲ ಅನ್ನೋ ಸಂಕಟ ! ಇಂದ್ರಮ್ಮ ಮಾತ್ರ ಅವರೆಕಾಯಿ ಹಿಸುಕಿ ಅಕ್ಕಪಕ್ಕದೋರಿಗೆ ಕೊಟ್ ಬಿಡ್ತಾರೆ. ಅವರೂ ತಿನ್ನಲ್ಲ, ಮನೆಯೋರ್ ಯಾರಿಗೂ ಪಿಜ್ಜಾ, ಬರ್ಗರ್, ಪಪ್ಸ್ ಮೊದಲಾದ ಜಂಕ್ ಫುಡ್ ಬಿಟ್ರೆ ಈ ಕಾಳು, ಬೇಳೆ ಎಲ್ಲ ಬೇಕಾಗಿಲ್ಲ. ಇದೆÇÉಾ ಕೆಲಸದ ನಿಂಗಿ ನಮ್ಮನೇಲಿ ಅವರೇಕಾಯಿ ಸುಲೀತಾ ಹೇಳಿದ್ದು. ಹೀಗೇ ಅವರೇಕಾಯಿ ಸುಲೀತಾ ಸುಲೀತಾ ಎಷ್ಟು ಮನೆ ಕತೆ, ವ್ಯಥೆಗಳು ಬಿಚ್ಚಿಕೊಳ್ಳುತ್ತವೋ ಯಾರಿಗೆ ಗೊತ್ತು? – ರೇಖಾ ಕುಂದಾರು