Advertisement

ಇವರದ್ದು ಪ್ರತಿ ರವಿವಾರ ನಗರದಲ್ಲಿ ಸ್ವಚ್ಛತೆ ಸೇವೆ 

06:10 AM Jun 28, 2018 | Team Udayavani |

ಉಡುಪಿ: ರವಿವಾರವೆಂದರೆ ಅನೇಕ ಮಂದಿ ಹೆಚ್ಚು ಹೊತ್ತು ನಿದ್ದೆ ಹೊಡೆಯುವ, ಹಾಯಾಗಿರುವ ದಿನ. ಆದರೆ ಇದಕ್ಕೆ ಅಪವಾದ ಈ ಸ್ವಚ್ಛತಾ ಸೇವಕರ ತಂಡ. ಇವರು ಪ್ರತಿ ರವಿವಾರ ಬೆಳಕು ಹರಿಯುತ್ತಿದ್ದಂತೆ ಪೊರಕೆ, ಬುಟ್ಟಿಗಳನ್ನು ಹಿಡಿದು ನಗರದಲ್ಲಿ ಕಸ ಹೆಕ್ಕಿ ಸ್ವಚ್ಛಮಾಡುವ ಕೆಲಸ ಆರಂಭಿಸುತ್ತಾರೆ.

Advertisement

ಒಂದೂವರೆ ವರ್ಷದಿಂದ ಕಾರ್ಯ 
ಉಡುಪಿ ಗಾಂಧಿ ಆಸ್ಪತ್ರೆಯ ನೇತೃತ್ವದಲ್ಲಿ ಆಸ್ಪತ್ರೆಯ ವೈದ್ಯರು, ಸಿಬಂದಿ ಆರಂಭಿಸಿರುವ ಸ್ವಚ್ಛತಾ ಕಾರ್ಯಕ್ಕೆ ಈಗ ಒಂದೂವರೆ ವರ್ಷ. ಈ ತಂಡದ ಜತೆಗೆ ಅನೇಕ ಮಂದಿ ಕೈಜೋಡಿಸಿ ಒಂದು ಮಾದರಿ ಅಭಿಯಾನವನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ| ಹರಿಶ್ಚಂದ್ರ ಮತ್ತು ವೈದ್ಯಕೀಯ ನಿರ್ದೇಶಕ ಡಾ| ವ್ಯಾಸರಾಜ ತಂತ್ರಿ ಅವರು ನಗರ ಸ್ವಚ್ಛಗೊಳಿಸುವ ಪರಿಕಲ್ಪನೆಯನ್ನು ಸಾಕಾರಗೊಳಿಸಲು  2017 ಜ.12ರ ವಿವೇಕಾನಂದ ಜಯಂತಿಯಂದು ತೀರ್ಮಾನಿಸಿದರು. ಪೊರಕೆ, ಬುಟ್ಟಿ ಹಿಡಿದುಕೊಂಡು ಸಿಟಿಬಸ್‌ನಿಲ್ದಾಣ, ಕಲ್ಸಂಕ ಪರಿಸರದಲ್ಲಿ ಸ್ವಚ್ಛತಾ ಕೆಲಸ ಆರಂಭಿಸಿಯೇ ಬಿಟ್ಟರು. ಇದಕ್ಕೆ ಯುವಜನತೆ ಕೂಡ ಸಾಥ್‌ ನೀಡಿದರು. 

ದಾರಿಹೋಕರಿಗಾಗಿ
ದಾರಿಯಲ್ಲಿ ಹೋಗುವವರು ರಸ್ತೆ, ಚರಂಡಿಗಳಿಗೆ ಕಸ ಎಸೆಯಬಾರದು ಎಂಬ ದೃಷ್ಟಿಯಿಂದ ಡಸ್ಟ್‌ ಬಿನ್‌ಗಳನ್ನು ಇಟ್ಟಿದ್ದೇವೆ. ಇಲ್ಲಿ ನಗ‌ರಸಭೆಯವರು ಸ್ವಚ್ಛತಾ ಕೆಲಸ ಮಾಡುತ್ತಾರೆ. ಆದರೆ ನಾವು ಅವರಿಗೆ ಪೂರಕವಾಗಿ ಹಾಗೂ ಇತರರಿಗೆ ಪ್ರೇರಣೆಯಾಗಬೇಕೆಂಬ ಉದ್ದೇಶದಿಂದ ಮಾಡುತ್ತಿದ್ದೇವೆ. ಇಂತಹ ಕಾರ್ಯಕ್ರಮ ಆರಂಭಿಸುವವರಿಗೆ ಕಸದ ಬುಟ್ಟಿ ಸೇರಿದಂತೆ ಸಹಕಾರ ನೀಡಲು ಸಿದ್ಧರಿದ್ದೇವೆ ಎನ್ನುತ್ತಾರೆ ಡಾ| ವ್ಯಾಸರಾಜ ತಂತ್ರಿ ಅವರು. 

ಆಸ್ಪತ್ರೆಯ ದಾದಿಯರು, ಇತರ ಸಿಬಂದಿ ಮಾತ್ರವಲ್ಲದೆ ವೈದ್ಯರ ತಂಡವೂ ಪಾಲ್ಗೊಳ್ಳುತ್ತದೆ. ಆಡಳಿತ ನಿರ್ದೇಶಕ ಡಾ| ಹರಿಶ್ಚಂದ್ರ ಎಂ. ಅವರು ಇದುವರೆಗೆ ಒಂದೇ ಒಂದು ದಿನ ಕೂಡ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಳ್ಳುವುದನ್ನು ತಪ್ಪಿಸಿಲ್ಲ. ಈ ತಂಡದಲ್ಲಿ ಈಗ ಉಪನ್ಯಾಸಕರು, ನಿವೃತ್ತ ಬ್ಯಾಂಕ್‌ ಉದ್ಯೋಗಿಗಳು, ವಿದ್ಯಾರ್ಥಿಗಳೂ ಗುರುತಿಸಿಕೊಂಡಿದ್ದಾರೆ. ಸಾಮಾನ್ಯವಾಗಿ ತಂಡದ ಸಂಖ್ಯೆ 15ರಿಂದ 20 ಇರುತ್ತದೆ. ಮೊದಲ 25 ರವಿವಾರ “ನಮ್ಮ ಮನೆ ನಮ್ಮ ಮರ’ ತಂಡದ ಸದಸ್ಯರು ಕೂಡ ಪಾಲ್ಗೊಂಡಿದ್ದರು. 

ರವಿವಾರ ಒಂದು ಗಂಟೆ ಮೀಸಲು 
ಪ್ರತಿ ರವಿವಾರ ಬೆಳಗ್ಗೆ 6ರಿಂದ 7 ಗಂಟೆಯವರೆಗೆ ತಪ್ಪದೆ ಸ್ವಚ್ಛತಾ ಕಾರ್ಯ ನಡೆಸಲಾಗುತ್ತದೆ. ಬಸ್‌ನಿಲ್ದಾಣ ಪರಿಸರದಿಂದ ಕಲ್ಸಂಕದವರೆಗಿನ ಕಸವನ್ನು ಗುಡಿಸಿ ಸ್ವಚ್ಛಗೊಳಿಸಲಾಗುತ್ತದೆ. ಆಸ್ಪತ್ರೆಯ ವತಿಯಿಂದಲೇ ಕಸದ ಡಬ್ಬಗಳನ್ನು ಫ‌ುಟ್‌ಪಾತ್‌ ಪಕ್ಕದಲ್ಲಿ ಇಡಲಾಗಿದೆ. ನೀರು ನಿಲ್ಲದ ಈ ತೊಟ್ಟಿಗಳಲ್ಲಿ ಸಂಗ್ರಹವಾಗುವ ಕಸವನ್ನು ಸುಲಭವಾಗಿ ತೆಗೆಯಬಹುದು. ನಗರಸಭೆಯ ಪೌರಕಾರ್ಮಿಕರು ಕೂಡ ಆಗಾಗ್ಗೆ ಈ ಕಸದ ಡಬ್ಬಗಳನ್ನು ಖಾಲಿ ಮಾಡುತ್ತಾರೆ. 

Advertisement

ಸ್ವಚ್ಛತೆ ನಿರಂತರ 
ಸ್ವಚ್ಛಭಾರತವೆಂದರೆ ಅದು ಒಂದು ದಿನದ ಕೆಲಸವಲ್ಲ, ಸ್ವಚ್ಛತೆಯ ಜಾಗೃತಿ ನಮ್ಮಲ್ಲಿ ಸದಾ ಇರಬೇಕು. ನಾವು ಮಾಡುವುದನ್ನು ನೋಡಿ ಇತರರು ಮಾಡಬೇಕೆಂಬುದು ನಮ್ಮ ಇಚ್ಛೆ. ಜನರ ಮನಸ್ಥಿತಿ ಬದಲಾಯಿಸುವ ಆವಶ್ಯಕತೆ ಇದೆ. 
– ಡಾ| ವ್ಯಾಸರಾಜ ತಂತ್ರಿ, 
ವೈದ್ಯಕೀಯ ನಿರ್ದೇಶಕ

ಮಳೆಗಾಲಕ್ಕೂ ನಿಲ್ಲುವುದಿಲ್ಲ
ನಮ್ಮ ಸಿಬಂದಿ ಸಮಯ ಹೊಂದಾಣಿಕೆ ಮಾಡಿಕೊಂಡು ಸ್ವತ್ಛತಾ ಕಾರ್ಯದಲ್ಲಿ ಪಾಲ್ಗೊಳ್ಳುತ್ತಾರೆ. ಅವರ ಕೆಲಸದ ಅವಧಿಗೆ ತೊಂದರೆಯಾಗದಂತೆ ಸಮಯ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ. ಮಳೆಗಾಲದಲ್ಲಿ ಕೊಡೆ ಹಿಡಿದುಕೊಂಡು ಕೂಡ ಉತ್ಸಾಹದಿಂದ ಪಾಲ್ಗೊಳ್ಳುತ್ತಾರೆ. ನಮ್ಮ ಜತೆಗೆ ಹಲವು ಸಾರ್ವಜನಿಕರು ಕೂಡ ಕೈಜೋಡಿಸಿದ್ದಾರೆ. 
– ಇಸುಬು,ಮ್ಯಾನೇಜರ್‌ ಗಾಂಧಿ ಆಸ್ಪತ್ರೆ

Advertisement

Udayavani is now on Telegram. Click here to join our channel and stay updated with the latest news.

Next