Advertisement

ಮೀನು ಹಿಡಿಯಲು ಥರ್ಮಾಕೋಲ್‌ ಬೋಟ್‌!

03:58 PM Oct 13, 2018 | |

ಬಾಗಲಕೋಟೆ: ಪ್ರತಿಯೊಬ್ಬರ ಬಳಿಯೂ ಒಂದೊಂದು ಕಲೆ ಕರಗತವಾಗಿರುತ್ತದೆ. ಉಳ್ಳವರು ಕಲಿತು ಕಲೆ ಕರಗತ ಮಾಡಿಕೊಂಡರೆ, ಗ್ರಾಮೀಣ ಜನರು ಪರಂಪರೆಯ ಕಲೆ ಮುಂದುವರೆಸುತ್ತಾರೆ. ಅಂತಹವೊಂದು ವಿಶಿಷ್ಟ ಪ್ರಯತ್ನ ಜಿಲ್ಲೆಯ ಮೀನುಗಾರರು ಮಾಡಿದ್ದಾರೆ.

Advertisement

ಮೀನುಗಾರರು ದುಬಾರಿ ವೆಚ್ಚದ ಬೋಟ್‌ ಖರೀದಿಸಿ ಮೀನು ಹಿಡಿಯಲು ಬಳಸುವ ಬದಲು ಮೀನಿನ ಬಾಕ್ಸ್‌ಗಳಲ್ಲಿ ಬಂದಿದ್ದ ಥರ್ಮಾಕೋಲ್‌ ಬಳಸಿ, ಬೋಟ್‌ ಮಾಡಿದ್ದಾರೆ. ತಮ್ಮದೇ ಹೊಲದಲ್ಲಿದ್ದ ತೆಂಗಿನ ಪೊರಕೆಯನ್ನೇ ನೀರು ಸರಿಸುವ ಹುಟ್‌ ಅನ್ನಾಗಿ ಮಾಡಿಕೊಂಡಿದ್ದಾರೆ. ಇಂತಹ ಪ್ರಯತ್ನ ನಡೆದಿರುವುದು ತಾಲೂಕಿನ ಹೊದ್ಲೂರ ಬಳಿ. ಹೊದ್ಲೂರ ಮತ್ತು ಆಲಮಟ್ಟಿಯ ಮೀನುಗಾರರು ಈ ವಿನೂತನ ಬೋಟ್‌ ತಯಾರಿಸಿದ್ದಾರೆ. ಇದಕ್ಕೆ ಇಂಧನ ಬೇಕಿಲ್ಲ. ಆದರೆ, ಇದನ್ನು ಎಲ್ಲಾ ಕಡೆಯೂ ಮೀನು ಹಿಡಿಯಲು ಬಳಸಲ್ಲ. ಅದು ಅಪಾಯಕಾರಿ ಎಂಬುದು ಮೀನುಗಾರರಿಗೂ ಗೊತ್ತು. ಹೀಗಾಗಿ ಹಿನ್ನೀರು ಪ್ರಮಾಣ ಕಡಿಮೆ ಇರುವ ಪ್ರದೇಶದಲ್ಲಿ ಮಾತ್ರ ಇದನ್ನು ಬಳಸುತ್ತಾರೆ.

ನಿರ್ಮಾಣ ಹೇಗೆ?: ಆಲಮಟ್ಟಿ ಸುತ್ತಮುತ್ತ ಹಿನ್ನೀರ ಪ್ರದೇಶದಲ್ಲಿ ಮೀನುಗಾರಿಕೆ ದೊಡ್ಡ ಪ್ರಮಾಣದಲ್ಲಿ ನಡೆಯುತ್ತದೆ. ಇಲ್ಲಿ ಬಾಂಗಡಾ ಮೀನು, ದೂರದ ಕೋಲ್ಕತಾವರೆಗೂ ಪೂರೈಕೆಯಾತ್ತದೆ. ಮೀನುಗಳನ್ನು ಬೇರೆ ಬೇರೆ ಜಿಲ್ಲೆ, ರಾಜ್ಯಗಳಿಗೆ ಪೂರೈಕೆ ಮಾಡಲು ದೊಡ್ಡ ದೊಡ್ಡ ಬಾಕ್ಸ್‌ ಬಳಸುತ್ತಿದ್ದು, ಅದಕ್ಕೆ ಕಡ್ಡಾಯವಾಗಿ ಥರ್ಮಾಕೋಲ್‌ ಬಳಸುವುದು ವಾಡಿಕೆ. ಅಂತಹ ಬಾಕ್ಸ್‌ಗಳಲ್ಲಿ ಅಳವಡಿಸಲು ಬಂದಿದ್ದ ನಿರುಪಯುಕ್ತ ಥರ್ಮಾಕೋಲ್‌ ಅನ್ನೇ ಮಿನಿ ಬೋಟ್‌ ನಿರ್ಮಾಣಕ್ಕಾಗಿ ಬಳಸಲಾಗಿದೆ. ಥರ್ಮಾಕೋಲ್‌ ಮೇಲ್ಭಾಗ ಮತ್ತು ಕೆಳಭಾಗದಲ್ಲಿ ತೆಂಗಿನ ಪೊರಕೆಯ ಕಟ್ಟಿಗೆ ಕಟ್ಟಲಾಗಿದೆ. ಇದರಿಂದ ಥರ್ಮಾಕೋಲ್‌ ಮುರಿಯುವ ಅಥವಾ ಒಡೆಯುವುದನ್ನು ತಡೆಯಲಾಗಿದೆ. ಬಳಿಕ ಅದೇ ತೆಂಗಿನ ಪೊರಕೆ ಮತ್ತು ನೀರು ಸರಿಸಲು ಹುಟ್‌ ಮಾಡಲಾಗಿದೆ. ಮೀನುಗಾರರು ನಿತ್ಯವೂ ಇದೇ ಕೃತಕ ಬೋಟ್‌ನಲ್ಲಿ ಸಾಗಿ, ಹಿನ್ನೀರ ವ್ಯಾಪ್ತಿ ಬಲೆ ಎಸೆದು ಮೀನು ಹಿಡಿಯುತ್ತಾರೆ. ಇದನ್ನು ನಿರ್ಮಾಣ ಮಾಡಿದವರು ಒಬ್ಬರೇ ಅಲ್ಲ. ಸುಮಾರು ನಾಲ್ಕೈದು ಜನ ಮೀನುಗಾರರು ಕೂಡಿ ಅದರನ್ನು ರೂಪಿಸಿದ್ದಾರೆ.

ಮೂವರು ಸಾಗಬಹುದು: ಈ ಥರ್ಮಾಕೋಲ್‌ ಕೃತಕ ಬೋಟ್‌ನಲ್ಲಿ ಗರಿಷ್ಠ ಮೂವರು (45ರಿಂದ 55 ಕೆಜಿ ಒಳಗಿನವರು) ಸಾಗಬಹುದು. ಹೆಚ್ಚಿನ ತೂಕದವರು ಕುಳಿತರೆ ಥರ್ಮಾಕೋಲ್‌ ಬೋಟ್‌ ಮುರಿಯುತ್ತದೆ ಎಂದು ಅದರಲ್ಲಿ ಹತ್ತುವುದಿಲ್ಲ. ಒಬ್ಬರು ಇಲ್ಲವೇ ಇಬ್ಬರು ಕೂಡಿಕೊಂಡು ಹಿನ್ನೀರ ವ್ಯಾಪ್ತಿಗೆ ಬಲೆ ಎಸೆಯಲು ಇದೇ ಬೋಟ್‌ ಬಳಕೆ ಮಾಡುತ್ತಿರುವುದು ವಿಶೇಷ. ಅಲ್ಲದೇ ತುರ್ತು ಸಂದರ್ಭದಲ್ಲಿ ಚಿಕ್ಕಹೊದ್ಲೂರದಿಂದ ಹೊಸ ಹೊದ್ಲೂರ ಗ್ರಾಮಕ್ಕೆ (ಸುಮಾರು 200 ಮೀಟರ್‌ ದೂರವಿದೆ. ಹಿನ್ನೀರಿನ ಆಳವೂ ಕಡಿಮೆ) ತೆರಳಲು ಇದೇ ಥರ್ಮಾಕೋಲ್‌ ಕೃತಕ ಬೋಟ್‌ ಬಳಕೆಯಾಗುತ್ತದೆ.

ಮೀನು ಹಿಡಿಯಲು ಕಡ್ಡಾಯವಾಗಿ ತೆಪ್ಪ ಇಲ್ಲವೇ ಬುಟ್ಟಿ ಬೇಕು. ಎಲ್ಲಾ ಮೀನುಗಾರರ ಬಳಿ ತೆಪ್ಪ ಇಲ್ಲ. ಹೀಗಾಗಿ ಮೀನಿನ ಬಾಕ್ಸ್‌ನಲ್ಲಿ ಬಂದಿದ್ದ ಈ ರಟ್ಟಿನಿಂದ ತೆಪ್ಪ ಮಾಡಿದ್ದೇವೆ. ಇದಕ್ಕೆ ಥರ್ಮಾಕೋಲ್‌ ಅಂತಾರೆ ಎಂಬುದು ನಮಗೆ ಗೊತ್ತಿಲ್ಲ. ಇದು ನೀರಿನಲ್ಲಿ ಮುಳುಗಲ್ಲ. ಹೀಗಾಗಿ, ಸುತ್ತಲೂ ತೆಂಗಿನ ಪೊರಕೆ ಕಟ್ಟಿ, ಅದನ್ನೇ ತೆಪ್ಪ ಮಾಡಿಕೊಂಡಿದ್ದೇವೆ.
 ಮೀನುಗಾರರು, ಹೊದ್ಲೂರ  

Advertisement
Advertisement

Udayavani is now on Telegram. Click here to join our channel and stay updated with the latest news.

Next