Advertisement

ವೀಸಾ ಮುಂದುವರಿಯಲಿ: ಟ್ರಂಪ್‌ ಸರಕಾರಕ್ಕೆ ಅಮೆರಿಕದ 130 ಸಂಸದರ ಒತ್ತಾಯ

09:20 AM May 18, 2018 | Karthik A |

ವಾಷಿಂಗ್ಟನ್‌ : ಅಮೆರಿಕದಲ್ಲಿ ಎಚ್‌1ಬಿ ವೀಸಾದಡಿ ಸೇವೆ ಸಲ್ಲಿಸುತ್ತಿರುವ ವಿದೇಶಿಗರಿಗೆ ವಿಶೇಷವಾಗಿ ಭಾರತೀಯ ಐಟಿ ಎಂಜಿನಿಯರ್‌ಗಳ ಸಂಗಾತಿಗಳಿಗೆ ನೀಡುವ ಎಚ್‌-4 ವೀಸಾ ಸೌಲಭ್ಯ ಮುಂದುವರಿಸಬೇಕು ಎಂದು ಅಮೆರಿಕ ಸಂಸತ್ತಿನ ವಿಪಕ್ಷ ನಾಯಕರು ಡೊನಾಲ್ಡ್‌ ಟ್ರಂಪ್‌ ಸರಕಾರವನ್ನು ಆಗ್ರಹಿಸಿದ್ದಾರೆ. ಭಾರತೀಯ ಮೂಲದ ಸಂಸದೆ ಪ್ರಮೀಳಾ ಜಯಪಾಲ್‌ ನೇತೃತ್ವದಲ್ಲಿ 130 ಸಂಸದರು ಈ ಬಗ್ಗೆ ಟ್ರಂಪ್‌ ಗೆ ಪತ್ರ ಬರೆದು ನಿರ್ಧಾರವನ್ನು ಮರುಪರಿಶೀಲಿಸುವಂತೆ ಒತ್ತಾಯಿಸಿದ್ದಾರೆ. ಈ ಕ್ರಮದಿಂದ ದೇಶದ ಅರ್ಥ ವ್ಯವಸ್ಥೆಗೆ ಹೆಚ್ಚಿನ ರೀತಿಯಲ್ಲಿ ನೆರವಾಗಿದೆ ಎಂದು ಸಂಸದರು ಪ್ರತಿಪಾದಿಸಿದ್ದಾರೆ. ಈ ಪೈಕಿ ಹೆಚ್ಚಿನವರು ಅಮೆರಿಕದಲ್ಲಿಯೇ ಪೌರತ್ವ ಸ್ವೀಕರಿಸುವ ಹಂತದಲ್ಲಿದ್ದಾರೆ. ಎಚ್‌-4 ವೀಸಾ ರದ್ದು ಪ್ರಸ್ತಾವ‌ ನಿಜಕ್ಕೂ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ಸಂಸದರು ಹೇಳಿದ್ದಾರೆ. ಮಾಜಿ ಅಧ್ಯಕ್ಷ ಬರಾಕ್‌ ಒಬಾಮಾ ಆಡಳಿತದ ಅವಧಿಯಲ್ಲಿ ಎಚ್‌-1ಬಿ ವೀಸಾ ಹೊಂದಿದ ಭಾರತ ಸೇರಿದಂತೆ ಇತರ ದೇಶಗಳ ಐಟಿ ಎಂಜಿನಿಯರ್‌ ಗಳ ಸಂಗಾತಿಗಳಿಗೆ ಎಚ್‌-4 ವೀಸಾ ನೀಡಲಾಗಿತ್ತು.

Advertisement

ಯು.ಕೆ. ವೀಸಾ ನೀತಿ: ಭಾರತೀಯರಿಗೆ ಸಮಸ್ಯೆ
ಲಂಡನ್‌: ಯುನೈಟೆಡ್‌ ಕಿಂಗ್‌ಡಮ್‌ನ ವಾರ್ಷಿಕ ವೀಸಾ ನೀತಿ ಪ್ರಕಟವಾಗಿದೆ. ಐರೋಪ್ಯ ಒಕ್ಕೂಟದ ಹೊರಗಿನ ರಾಷ್ಟ್ರದ ಪ್ರಜೆಗಳಿಗಾಗಿ ಪ್ರಕಟಿಸಿರುವ ನಿಯಮಗಳಿಂದಾಗಿ ಶೇ.57ರಷ್ಟು ಭಾರತೀಯರಿಗೆ ತೊಂದರೆಯಾಗಿದೆ. ದೇಶದ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಪರಿಣತರು, ವೈದ್ಯರು ಸೇರಿದಂತೆ ಹಲವು ಕ್ಷೇತ್ರಗಳ ಉದ್ಯೋಗಾಕಾಂಕ್ಷಿಗಳಿಗೆ ತೊಂದರೆಯಾಗಿದೆ. ಒಟ್ಟು 6,080 ವೃತ್ತಿ ಪರಿಣತರಿಗೆ ಸಮಸ್ಯೆಯಾಗಿದೆ. ಈ ಪೈಕಿ ಭಾರತೀಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. 2017ರ ಡಿಸೆಂಬರ್‌ನಿಂದ ಈ ಸಮಸ್ಯೆ ಕಾಡುತ್ತಿದೆ ಎಂದು ಶುಕ್ರವಾರ ಬಿಡುಗಡೆಯಾಗಿರುವ ಮಾಹಿತಿಯಲ್ಲಿ ಬಹಿರಂಗವಾಗಿದೆ. ಕೂಡಲೇ ನಿಯಮಗಳಲ್ಲಿ ಬದಲಾವಣೆ ಮಾಡಬೇಕೆಂದು ಸಂಸ್ಥೆಯೊಂದು ಮನವಿ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next