ಲಂಡನ್: ಟೀಂ ಇಂಡಿಯಾದ ಆರಂಭಿಕ ಆಟಗಾರ ರೋಹಿತ್ ಶರ್ಮಾ ಸದ್ಯ ಟೆಸ್ಟ್ ಕ್ರಿಕೆಟ್ ನಲ್ಲಿ ಉತ್ತಮ ಫಾರ್ಮ್ ನಲ್ಲಿದ್ದಾರೆ. ಲಾರ್ಡ್ಸ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ 84 ರನ್ ಗಳಿಸಿದ್ದಾರೆ. ಈ ಮಧ್ಯೆ ರೋಹಿತ್ ಶರ್ಮಾ ಅವರ ಸಂದರ್ಶನವೊಂದು ವೈರಲ್ ಆಗಿದೆ.
ಸ್ಕೈ ಸ್ಪೋರ್ಟ್ಸ್ ವಾಹಿನಿಗಾಗಿ ದಿನೇಶ್ ಕಾರ್ತಿಕ್ ಅವರು ರೋಹಿತ್ ಶರ್ಮಾರ ಸಂದರ್ಶನ ಮಾಡಿದ್ದಾರೆ. ಇದರಲ್ಲಿ ರೋಹಿತ್ ಬದುಕಿನ ಹಲವಾರು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.
ರೋಹಿತ್ ಸೋಮಾರಿತನದಿಂದ ಬ್ಯಾಟಿಂಗ್ ನಡೆಸುತ್ತಾರೆ ಎಂದು ಹಲವರು ಹೇಳುತ್ತಾರೆ ಎಂದು ದಿನೇಶ್ ಕೇಳಿದಾಗ ಉತ್ತರಿಸಿದ ರೋಹಿತ್, ಆಟದಲ್ಲಿ ನೀವು ಸೋಮಾರಿಯಾಗಲು ಸಾಧ್ಯವೇ ಇಲ್ಲ. ನಿಮಗೆ ಟಿವಿಯಲ್ಲಿ ನೋಡಿದಾಗ ಹಾಗೆ ಅನಿಸಬಹುದು. ಆದರೆ ನೀವು ಯಾವತ್ತೂ ಆಟದಲ್ಲಿ ಸೋಮಾರಿತನದಿಂದ ಇರಲು ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಒಂದು ಶತಕ- ಹಲವು ದಾಖಲೆಗಳು: ಹಲವು ದಾಖಲೆ ಬರೆದ ಕೆ.ಎಲ್.ರಾಹುಲ್
ಗಂಟೆಗೆ 145 ಕಿ.ಮೀ ವೇಗದಲ್ಲಿ ಬರುತ್ತಿರುವ ಚೆಂಡನ್ನು ಸೋಮಾರಿತನದಿಂದ ಪುಲ್ ಶಾಟ್ ಹೊಡೆಯಲು ಸಾಧ್ಯವಿಲ್ಲ. ಸೋಮಾರಿಯಾದರೆ ಚೆಂಡು ತಲೆಗೆ ಬಡಿಯುತ್ತದೆ ಎಂದು ರೋಹಿತ್ ಹೇಳಿದರು.
ಇಂಗ್ಲೆಂಡ್ ವಿರುದ್ಧ ದ್ವಿತೀಯ ಟೆಸ್ಟ್ ನ ಮೊದಲ ಇನ್ನಿಂಗ್ಸ್ ನಲ್ಲಿ ರೋಹಿತ್ ಶರ್ಮಾ ಮತ್ತು ಕೆ.ಎಲ್.ರಾಹುಲ್ ಮೊದಲ ವಿಕೆಟ್ ಗೆ ಶತಕದ ಜೊತೆಯಾಟ ನಡೆಸಿದರು. 2011ರ ಬಳಿಕ ಏಶ್ಯಾದಿಂದ ಹೊರಗೆ ಭಾರತೀಯ ಆರಂಭಿಕ ಜೋಡಿಯಿಂದ ಬಂದ ಮೊದಲ ಶತಕದ ಜೊತೆಯಾಟವಿದು. 2011ರ ಜನವರಿಯಲ್ಲಿ ವೀರೆಂದ್ರ ಸೆಹವಾಗ್ ಮತ್ತು ಗೌತಮ್ ಗಂಭೀರ್ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ವಿಕೆಟ್ ಗೆ 137 ರನ್ ಜೊತೆಯಾಟ ನಡೆಸಿದ್ದರು.