Advertisement

ನೈಟ್ ಕರ್ಫ್ಯೂ ಜಾರಿಯ ಹಿಂದೆ ವಿವೇಚನೆಯಿತ್ತು, ಅದೇನೂ ರಾಜಕೀಯ ನಿರ್ಧಾರ ಅಲ್ಲ: ಸುಧಾಕರ್

05:14 PM Dec 25, 2020 | Mithun PG |

ಬೆಂಗಳೂರು: ನೈಟ್ ಕರ್ಫ್ಯೂ ನಿರ್ಧಾರವನ್ನು ಬಹಳ ವಿವೇಚನೆಯಿಂದಲೇ‌ ಕೈಗೊಳ್ಳಲಾಗಿತ್ತು. ಅದೇನೂ ರಾಜಕೀಯ ನಿರ್ಧಾರ ಅಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ‌ ಅವರು,‌ ಮಾಧ್ಯಮಗಳಲ್ಲಿ ಎಡಬಿಡಂಗಿ ಸರ್ಕಾರ ಎನ್ನಲಾಗಿದೆ. ಆದರೆ ಇದೇ‌ ನಮ್ಮ ಸರ್ಕಾರ ಉತ್ತಮವಾದ ನಿರ್ಧಾರಗಳಿಂದ ಕೋವಿಡ್ ನಿಯಂತ್ರಣಕ್ಕೆ ತಂದಿದೆ. ರಾಜ್ಯ ಸರ್ಕಾರದ ಕ್ರಮಗಳಿಂದಾಗಿ ಕೋವಿಡ್ ಸೋಂಕಿಗೊಳಗಾದವರಲ್ಲಿ 97.5% ರಷ್ಟು ಮಂದಿ ಗುಣಮುಖರಾಗಿದ್ದಾರೆ. ಸಾವಿನ ಪ್ರಮಾಣ 1.22% ಗೆ ಇಳಿಕೆಯಾಗಿದೆ. ಯು.ಕೆ.ಯಲ್ಲಿ ಲಾಕ್ ಡೌನ್ ಆಗಿದೆ ಹಾಗೂ ಜರ್ಮನಿಯಲ್ಲಿ ರಾತ್ರಿ ಕರ್ಫ್ಯೂ ಆಗಿದೆ. ಹಾಗೆಂದು ಅಲ್ಲಿ ಇರುವವರಿಗೆ ಬುದ್ಧಿ ಇಲ್ಲ ಎಂದರ್ಥವಲ್ಲ.

ನಮ್ಮ ಸರ್ಕಾರ ಯಾವುದೇ ರಾಜಕೀಯ ತೀರ್ಮಾನ ಕೈಗೊಂಡಿಲ್ಲ. ಆರೋಗ್ಯ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿದವರ ಜೊತೆ ಕೂಲಕಂಷವಾಗಿ ಚರ್ಚಿಸಿ ಪ್ರತಿಯೊಂದು ತೀರ್ಮಾನ ತೆಗೆದುಕೊಳ್ಳಲಾಗಿದೆ. ರಾತ್ರಿ ಕರ್ಫ್ಯೂ ಕುರಿತು ಕೂಡ ಹಲವಾರು ಬಾರಿ ಚರ್ಚಿಸಿ, ಜನರ ಆರೋಗ್ಯದ ಹಿತದೃಷ್ಟಿಯಿಂದ ನಿರ್ಧಾರ ತೆಗೆದುಕೊಳ್ಳಲಾಗಿತ್ತು ಎಂದು ಸ್ಪಷ್ಟಪಡಿಸಿದರು.

ಆರ್ಥಿಕ ಚಟುವಟಿಕೆ ಬಂದ್ ಮಾಡಿದರೆ ಸರ್ಕಾರಕ್ಕೆ ನಷ್ಟವಾಗುತ್ತದೆ. ಆದರೂ ಜನರ ಆರೋಗ್ಯಕ್ಕಾಗಿ ಕೆಲ ತೀರ್ಮಾನಗಳನ್ನು ಕೈಗೊಳ್ಳಲಾಗುತ್ತದೆ. ಅನೇಕರು ಕೋವಿಡ್ ಬಗ್ಗೆ ಮುನ್ನೆಚ್ಚರಿಕೆ ಮರೆತಿದ್ದಾರೆ. ಇಂತಹ ಸಮಯದಲ್ಲಿ ಜನರನ್ನು ಎಚ್ಚರಿಸುವುದು ನಮ್ಮ ಕರ್ತವ್ಯ ಎಂದರು.

ಇದನ್ನೂ ಓದಿ: ಮೋದಿ ಪ್ರಧಾನಿಯಾಗಿರುವವರೆಗೂ ರೈತರ ಜಮೀನು ಸುರಕ್ಷಿತ: ಅಮಿತ್ ಶಾ

Advertisement

ಬ್ರಿಟನ್ ನಿಂದ ರಾಜ್ಯಕ್ಕೆ ಬಂದವರಲ್ಲಿ 10 ಜನರಿಗೆ ಕೋವಿಡ್ ಪಾಟಿಸಿವ್ ಆಗಿದೆ ಎಂದು ತಿಳಿದುಬಂದಿದ್ದು, ಹತ್ತು ಜನರ ಗಂಟಲು ದ್ರವ ಮಾದರಿಯನ್ನು ನಿಮ್ಹಾನ್ಸ್ ಗೆ ಕಳುಹಿಸಲಾಗಿದೆ. ಜೆನೆಟಿಕ್ ಸ್ವೀಕೆನ್ಸ್ ಮಾಡಲು 2-3 ದಿನ ಬೇಕಾಗುತ್ತದೆ. ಒಂದು ವೇಳೆ ಅವರಲ್ಲಿ ಹೊಸ ಪ್ರಭೇದದ ವೈರಸ್ ಇರುವುದು ಖಚಿತವಾದರೆ, ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ದಸರಾ, ದೀಪಾವಳಿ, ಗಣೇಶ ಚತುರ್ಥಿ ಹಬ್ಬವನ್ನು ಸರಳವಾಗಿ ಆಚರಿಸಲಾಗಿದೆ. ಆದರೆ ಹೊಸ ವರ್ಷದಂದು ಯುವಜನತೆ ಮೋಜು ಮಸ್ತಿ ಮಾಡಲೇಬೆಕೆನ್ನುವಂತೆ ಪ್ರತಿಪಕ್ಷಗಳವರು ವ್ಯಾಖ್ಯಾನ ಮಾಡಿದ್ದಾರೆ. ಜನರಿಗೆ ತೊಂದರೆಯಾದರೆ ಅವರೇ ಜವಾಬ್ದಾರಿ ಹೊರುತ್ತಾರೆಯೇ?  ಎಂದು ಇದೇ ವೇಳೆ ಕಿಡಿಕಾರಿದರು.

ಸಂಸದ ಡಿ.ಕೆ.ಸುರೇಶ್ ನೀಡುವ ಸರ್ಟಿಫಿಕೇಟ್ ಅಗತ್ಯವಿಲ್ಲ. ಜಾಮೀನಿನ ಮೇಲೆ ಹೊರಗೆ ಇರುವವರೇ ಆರೋಪ ಮಾಡುತ್ತಾರೆ. ಮೋಜು, ಮಸ್ತಿ, ಭ್ರಷ್ಟಾಚಾರದ ಆರೋಪ ಹೊತ್ತುಕೊಂಡು ಜಾಮೀನಿನ ಮೇಲೆ ಹೊರಗೆ ಇರುವವರು ಯಾರು ಎನ್ನುವುದು ರಾಜ್ಯದ ಜನತೆಗೆ ಗೊತ್ತಿದೆ ಎಂದು ಸುಧಾಕರ್ ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ಸಿಎಂ ಆಗಬೇಕೆಂದು ನನ್ನ ಹಣೆ ಬರಹದಲ್ಲಿ ಬರೆದಿದ್ದರೆ ತಪ್ಪಿಸುವವರು ಯಾರು: ಯತ್ನಾಳ್ ಹೊಸ ಬಾಂಬ್

Advertisement

Udayavani is now on Telegram. Click here to join our channel and stay updated with the latest news.

Next