ಲಾಕ್‌ಡೌನ್ ಅಂತಾದಾಗ ಅಕ್ಷರಶಃ ಚಿಂತೆಯಾಗಿತ್ತು. ಮಕ್ಕಳನ್ನ ಮನೇಲಿ ಹಿಡಿದು ಕೂರಿಸೋದು ಹೇಗೆ ಅಂತ! ಚಿಕ್ಕಮಕ್ಕಳಿಗೆ ಬೈದಾದರೂ ಬುದ್ಧಿ ಹೇಳಬಹುದು. ಕಾಲೇಜು ಓದುವ ಮಕ್ಕಳಿಗೆ ತಿಳಿ ಹೇಳ್ಳೋದು ಅಷ್ಟು ಸುಲಭವಲ್ಲ. ಅದರಲ್ಲೂ ಈ ಪಟ್ಟಣದ ಮಕ್ಕಳಿಗೆ, ಮಿತ್ರರೊಂದಿಗೆ ಹೊರಗೆ ಸುತ್ತಾಡುವುದು ಖುಷಿ. ಮನೆ ಊಟ ಎಂದರೆ ಅಲರ್ಜಿ. ಪಿಜ್ಜಾ, ಬರ್ಗರ್, ನೂಡಲ್ಸ, ಚಾಟ್ಸ ಇತ್ಯಾದಿಗಳು ಪರಮಪ್ರಿಯ.
ನಮ್ಮ ಉಪ್ಪಿಟ್ಟು, ಅವಲಕ್ಕಿ ಯಂತೂ ಕಸಕ್ಕೆ ಮಾನ. ಕೇಳಿದ ವಸ್ತುಗಳೆಲ್ಲ ತಕ್ಷಣಕ್ಕೆ ಸಿಕ್ಕಿಬಿಡಬೇಕು. ಕಾಯುವ ತಾಳ್ಮೆ ಇಲ್ಲ. ಇದಕ್ಕೆ ನನ್ನ ಮಗಳೂ ಹೊರತಲ್ಲ. ಎರಡು ವಾರ ಕಳೆಯುವ ಹೊತ್ತಿಗೆ ಪಕ್ಕದ ಬೀದಿಯಲ್ಲಿದ್ದ ಅಕ್ಕ ಫೋನ್ ಮಾಡಿದಳು. ಬೀದಿಯ ಕೊನೆಯಲ್ಲಿರುವ ಇನ್ನೊಬ್ಬ ಅಕ್ಕನ ಮನೆಗೆ ಕಾರಲ್ಲಿ ಒಂದು ರೌಂಡ್ ಹೋಗಿ ಬರ್ತೀವಿ. ಮಗಳಿಗೆ ಬೋರ್ ಆಗ್ತಿದ್ರೆ ಕಳಿಸು.. ಅಂತ. ನಾನು ನಿರಾಕರಿಸಿದೆ.
ಇನ್ನೆರಡು ವಾರ ಕಳೆಯುವ ಹೊತ್ತಿಗೆ ಇನ್ನೊಬ್ಬ ಅಕ್ಕನ ಕರೆ. ಈ ಬಡಾವಣೆಯಲ್ಲೇನೂ ತೊಂದರೆಯಿಲ್ಲವಲ್ಲ… ಮಕ್ಕಳ ಜೊತೆ ಇದ್ದು ಹೋಗಲಿ ಕಳಿಸು… ಅಂತ. ಮಗಳಿಗೆ ಹೇಳಲು ಅವಳ ರೂಮ್ ಬಾಗಿಲು ಬಡಿಯಲು ಹೊರಟಿದ್ದ ಅವಳ ಅಪ್ಪಯ್ಯನನ್ನು ದರ ದರ ಕೈ ಹಿಡಿದು ಎಳೆದು ತಂದೆ. ಬುದಿ ಎಲ್ಲಿಟ್ಟಿದ್ದೀರಿ. ಅವಳ ಕಿವಿಗೆ ಹಾಕೋದೇ ಬೇಡ. ಇವತ್ತು ಇಲ್ಲಿಗೆ ಹೋಗಲು ಬಿಟ್ಟರೆ. ನಾಳೆ ಹೊರಗೆ ಸುತ್ತಾಡೋಣ ಅನಿಸಿ ಹೊರಟರೆ ತಡೆಯೋದು ಕಷ್ಟ ಅಂತ.
ಮತ್ತೆ ನಾಲ್ಕಾರು ದಿನಗಳು ಆಗುವ ಹೊತ್ತಿಗೆ ಮಗಳೇ ಬಂದು ಹೇಳಿದಳು… “ಅನ್ನಾ ದೊಡ್ಡಮ್ಮನ ಮನೆಗೆ ಹೋಗೋಕೆ ಕರೀತಿದಾರೆ ಕಸಿನ್ಸ್. ನಂಗಿಷ್ಟ ಇಲ್ಲ. ನೀನೇ ಹೇಳಿಬಿಡು..’ ಅಂತ. ಅಚ್ಚರಿಯಾಯಿತು. ಕೇಳಿದೆ. “ಈ ವೈರಸ್ ಬಗ್ಗೆ ತುಂಬಾ ಓದಿಕೊಂಡಿದ್ದೇನೆ. ಸಾಮಾಜಿಕ ಅಂತರ ತುಂಬಾ ಮುಖ್ಯ. ಒಂದು ಪುಟುಗೋಸಿ ವೈರಸ್‌ಗೆ ಶರಣಾಗಿ ಸಾಯೋಕೆ ಇಷ್ಟವಿಲ್ಲ. ಈ ಹಿಂದೆಯೂ ಎರಡು ಸಲ ಮೆಸೇಜ್ ಮಾಡಿದ್ರು. ಓದೋದಿದೆ ಅಂತ ನೆಪ ಹೇಳಿದ್ದೆ…’ ಅಂದಳು.
ಹೌದಲ್ಲ..! ಮೊಬೈಲ್ ಮಾಧ್ಯಮ ಒಂದಿದೆ ಎಂಬುದನ್ನ ನಾನು ಮರೆತಿದ್ದೆ. ಸುದ್ದಿ ಗೊತ್ತಾಗಿಲ್ಲ ಇವಳಿಗೆ, ಸದ್ಯ ಅಂದುಕೊಂಡಿದ್ದೆ. ಅವರವರೇ ತಮಗೆ ನಿರ್ಬಂಧ ಹೇರಿಕೊಂಡರೆ ಈ ಹೆಮ್ಮಾರಿಯನ್ನು ಓಡಿಸುವುದು ಕಷ್ಟವೇನಲ್ಲ. ಕೊರೊನಾದಿಂದಾಗಿ ತೊಂದರೆಗಳಾಗಿವೆ… ನಿಜ. ಒಳ್ಳೆಯದೂ ಆಗಿವೆ…! ಮನೆಯಲ್ಲಿ ಸಂಭಾಷಣೆಗಳು ಈಗ ಹೀಗೂ ಇರುತ್ತವೆ.. ಮಗಳೇ ಇವತ್ತು ಉಪ್ಪಿಟ್ಟು.. ಪರವಾಗಿಲ್ಲ… ನನಗೆ ಓಕೆ ಅಮ್ಮ… ನೀನು ಕೇಳಿದ ವಸ್ತು ಸಿಗಲಿಲ್ಲ… ಮುಂದಿನ ಸಲ ತರ್ತಾರೆ ಅಪ್ಪ… ಪರವಾಗಿಲ್ಲಮ್ಮ… ಅರ್ಜೆಂಟಿಲ್ಲ… ಸಿಕ್ಕಾಗ ತರ್ಲಿ… ಏನಾದ್ರೂ ಫುಡ್ ಆರ್ಡರ್ ಮಾಡ್ಬೇಕಾ…
ಈಗ ಸಿಗುತ್ತೆ… ಪಿಜ್ಜಾ… ಇತ್ಯಾದಿ..? ಅಯ್ಯೋ ಬೇಡ.. ಡೆಲಿವರಿ ಹುಡುಗರು ಬರೋದೇ ಅಪಾಯ. ಅಪ್ಪಾ ಒಂದು ವಸ್ತುವಿಗಾಗಿ ಹೊರಗೆ ಹೋಗ್ಬೇಡಿ… ಇನ್ನೊಂದಿನ ತಂದ್ರಾಯ್ತು.. ಅಪ್ಪಾ.. ಹುಷಾರು.. ಇಂಥಾ ಬದಲಾವಣೆಗಳನ್ನು ಜೀವಮಾನದಲ್ಲಿ ನೋಡುತ್ತೇನೆ.. ಅಂದುಕೊಂಡಿರಲಿಲ್ಲ…! ಕೊರೊನಾ ಬಂದು ಸಾಯುತ್ತೇನೋ ಇಲ್ಲವೋ ಗೊತ್ತಿಲ್ಲ.. ಆದರೆ, ಇಂಥ ಬದಲಾವಣೆಯ ಖುಷಿ ತಾಳಲಾಗದೆ ಹೃದಯಾಘಾತವಾಗುತ್ತದಾ ಅಂತ ಗಾಬರಿಯಾಗುತ್ತಿದೆ!
* ಸುಮನಾ ಮಂಜುನಾಥ್