Advertisement

“224 ಕ್ಷೇತ್ರಗಳಲ್ಲೂ ಪಕ್ಷದ ಕಚೇರಿ ಇರಬೇಕು:ಎಚ್‌.ಡಿ.ದೇವೇಗೌಡ 

06:40 AM Sep 11, 2017 | Team Udayavani |

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಪಕ್ಷದ ಕಚೇರಿಗಾಗಿ ಸುಸಜ್ಜಿತ “ಹೈಟೆಕ್‌’ ಭವನದ ನಂತರ ಇದೀಗ ರಾಜ್ಯದ 224 ವಿಧಾನಸಭೆ ಕ್ಷೇತ್ರಗಳಲ್ಲೂ ಪಕ್ಷದ ಕಚೇರಿ ತೆರೆಯುವತ್ತ ಜೆಡಿಎಸ್‌ ಗಮನ ಹರಿಸಿದೆ.

Advertisement

ತಿಂಗಳೊಳಗಾಗಿ ಯಾವ್ಯಾವ ವಿಧಾನಸಭೆ ಕ್ಷೇತ್ರದಲ್ಲಿ ಪಕ್ಷದ ಕಚೇರಿ ಇಲ್ಲವೋ ಅಲ್ಲಿ ಕಚೇರಿ ತೆರೆಯಬೇಕೆಂದು ಮಾಜಿ ಪ್ರಧಾನಿ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ “ಫ‌ರ್ಮಾನು’ ಹೊರಡಿಸಿದ್ದಾರೆ.

224 ಕ್ಷೇತ್ರಗಳ ಪೈಕಿ ಸುಮಾರು 100ಕ್ಕೂ ಹೆಚ್ಚು ಕಡೆ ಪಕ್ಷದ ಕಚೇರಿ ಇದ್ದು ಉಳಿದ ಕಡೆ ಇಲ್ಲ. ತಾಲೂಕು ಕಚೇರಿ, ಜಿಲ್ಲಾ ಕಚೇರಿಗಳಲ್ಲೇ ಸಭೆ ನಡೆಸುವಂತಾಗಿದೆ. ಹೀಗಾಗಿ, ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿ ಕಚೇರಿ ಸ್ಥಾಪನೆಗೆ ನಿರ್ದೇಶನ ನೀಡಿದ್ದಾರೆ.

ಸ್ವಂತ ಜಾಗದಲ್ಲಿ ಪಕ್ಷದ ಕಚೇರಿ ಸ್ಥಾಪಿಸಲು ಶಾಸಕರು ಅಥವಾ ಮಾಜಿ ಶಾಸಕರು ಮುಂದಾಗಬೇಕು. ಒಂದೊಮ್ಮೆ ಅದು ಸಾಧ್ಯವಾಗದಿದ್ದರೆ ತಕ್ಷಣಕ್ಕೆ ಬಾಡಿಗೆ ಸ್ಥಳದಲ್ಲಾದರೂ ಕಚೇರಿ ತೆರೆಯಬೇಕೆಂದು ಸೂಚಿಸಿದ್ದಾರೆ.

ಬಾಡಿಗೆ ಜಾಗದಲ್ಲಿ ಕಚೇರಿ ತೆರೆದರೆ ಚೆಕ್‌ ಮೂಲಕ ಪ್ರತಿ ತಿಂಗಳು ಬಾಡಿಗೆ ಕಳುಹಿಸಲಾಗುವುದು. ಅಗತ್ಯವಾದರೆ ನಿರ್ವಹಣೆ ವೆಚ್ಚವನ್ನೂ ಭರಿಸ‌ಲಾಗುವುದು ಎಂದು ಹೇಳಿದ್ದಾರೆ ಎಂದು ತಿಳಿದು ಬಂದಿದೆ.

Advertisement

ಶುಕ್ರವಾರ ಬೆಂಗಳೂರಿನಲ್ಲಿ ನಡೆದ ಬೂತ್‌ ಕಮಿಟಿ ಸಭೆಯಲ್ಲಿ ಈ ಕುರಿತು ನಿರ್ದೇಶನ ನೀಡಿರುವ ಅವರು, ಪಕ್ಷದ ಕಚೇರಿ ಪ್ರತಿ ವಿಧಾನಸಭೆ ಕ್ಷೇತ್ರಗಳಲ್ಲಿ ಕಡ್ಡಾಯ. ಶಾಸಕರು ಇರುವ ಕಡೆ ಶಾಸಕರು, ಇಲ್ಲದ ಕಡೆ ಮಾಜಿ ಶಾಸಕರು, ಇಲ್ಲವೇ ಆಯಾ ಕ್ಷೇತ್ರದ ಅಧ್ಯಕ್ಷರು  ಈ ಬಗ್ಗೆ ಗಮನಹರಿಸಬೇಕು. ಒಂದು ತಿಂಗಳಲ್ಲಿ ಎಲ್ಲ ಕಡೆ ಕಚೇರಿ ಇರಲೇಬೇಕೆಂದು ಕಟ್ಟಪ್ಪಣೆ ನೀಡಿದ್ದಾರೆ.

ಇತ್ತೀಚೆಗೆ ಸಿ ಫೋರ್‌ ಹಾಗೂ ಕಾಪ್ಸ್‌ ಸಂಸ್ಥೆಯ ಸಮೀಕ್ಷೆಗಳಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಮುನ್ನಡೆ ಸಾಧಿಸಲಿದೆ ಎಂದು ತಿಳಿಸಿರುವ ಬಗ್ಗೆ ಯಾರೂ ಆತಂಕಪಡಬೇಕಿಲ್ಲ. ಜನರ ಮನ ಗೆಲ್ಲುವುದು ಮುಖ್ಯ. ಸಮೀಕ್ಷೆಗಳ ಬಗ್ಗೆ ತಲೆಕೆಡಿಸಿಕೊಳ್ಳದೆ ಜನರ ಸಮಸ್ಯೆಗಳ ಬಗ್ಗೆ ಸ್ಪಂದಿಸಿ. ಜೆಡಿಎಸ್‌ನಿಂದ ಆಂತರಿಕವಾಗಿ ನಡೆಸಿರುವ ಸಮೀಕ್ಷೆಯಲ್ಲಿ 100 ಸ್ಥಾನ ದಾಟುತ್ತೇವೆ. ಅದರಲ್ಲಿ ಯಾವುದೇ ಅನುಮಾನವಿಲ್ಲ. ಹೀಗಾಗಿ, ನೀವು ನಿಮ್ಮ ಕೆಲಸ ಮಾಡಿ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.

ಮಹತ್ವದ ಸಭೆ ನಾಳೆ
ಈ ಮಧ್ಯೆ, ರಾಜ್ಯ ಪ್ರವಾಸ ಹಾಗೂ ಪಕ್ಷ ಸಂಘಟನೆಗಾಗಿ ಸೆ.12ರಂದು ಬೆಂಗಳೂರಿನಲ್ಲಿ ಶಾಸಕರು, ವಿಧಾನಪರಿಷತ್‌ ಸದಸ್ಯರು ಹಾಗೂ ಮಾಜಿ ಶಾಸಕರ ಸಭೆಯನ್ನೂ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರು ಕರೆದಿದ್ದಾರೆ. ಆ ಸಭೆಯಲ್ಲಿ ಕೆಲವೊಂದು ಮಹತ್ವದ ನಿರ್ಧಾರ ಕೈಗೊಳ್ಳುವ ಸಾಧ್ಯತೆಯೂ ಇದೆ ಎಂದು ಹೇಳಲಾಗಿದೆ. ಅಂದಿನ ಸಭೆಗೆ ಕಡ್ಡಾಯವಾಗಿ ಹಾಜರಾಗುವಂತೆ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರಿಗೂ ತಿಳಿಸಿದ್ದಾರೆ.

– ಎಸ್‌.ಲಕ್ಷ್ಮಿನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next