ಬೆಂಗಳೂರು: “ಈ ನಾಡಿನ ಮುಖ್ಯಮಂತ್ರಿಯಾಗಿ, ಆರು ಕೋಟಿ ಕನ್ನಡಿಗರ ಪ್ರತಿನಿಧಿಯಾಗಿ ಹೇಳುತ್ತಿದ್ದೇನೆ. ಕನ್ನಡ ನಾಡಿಗೊಂದು ಬಾವುಟ ಇರಲೇಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಕರ್ನಾಟಕ ರಕ್ಷಣಾವೇದಿಕೆ ಶನಿವಾರ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿದ್ದ “ಕನ್ನಡಿಗರ ಸಮಾವೇಶ ಜಾನಪದ ಸಂಭ್ರಮ’ ಉದ್ಘಾಟಿಸಿ ಮಾತನಾಡಿ, ಪ್ರತ್ಯೇಕ ಬಾವುಟ ಇರುವಂತಿಲ್ಲ ಎಂದು ಸಂವಿಧಾನದಲ್ಲಿ ಹೇಳಿಲ್ಲ. ನಾಡಧ್ವಜ ಇದ್ದರೆ, ರಾಷ್ಟ್ರಧ್ವಜದ ಮೇಲಿನ ಗೌರವ ಕಡಿಮೆ ಆಗುವುದಿಲ್ಲ. ರಾಷ್ಟ್ರಧ್ವಜ ಎಂದೆಂದೂ ಮೇಲೆಯೇ ಹಾರುತ್ತದೆ ಎಂದರು.
“ನಮ್ಮ ಸರ್ಕಾರ ಕನ್ನಡದ ನೆಲ, ಜಲ, ಭಾಷೆ ಹಾಗೂ ಕನ್ನಡಿಗರ ರಕ್ಷಣೆಗೆ ಬದ್ಧವಾಗಿದೆ. ನಾಡಿನ ಹಿತದ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಕರ್ನಾಟಕದಲ್ಲಿ ವಾಸಿಸುತ್ತಿರುವ ಯಾವುದೇ ಭಾಷಿಗರು ಮೊದಲು ಕನ್ನಡಿಗರು. ಇಲ್ಲಿ ವಾಸಿಸುವ ಪ್ರತಿಯೊಬ್ಬರೂ ಕನ್ನಡ ಮಾತನಾಡಲೇಬೇಕು’ ಎಂದು ಸಿಎಂ ಹೇಳಿದರು.
ನೀರಿನಲ್ಲಿ ಅನ್ಯಾಯ: “ನಮ್ಮ ಮೆಟ್ರೋ ರೈಲಿನಲ್ಲಿ ಹಿಂದಿ ಬಳಕೆ ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರಕ್ಕೆ ಖಡಾ ಖಂಡಿತವಾಗಿ ಪತ್ರ ಬರೆದು ತಿಳಿಸಿದ್ದೇನೆ. ತಮಿಳುನಾಡು, ಕೇರಳದ ಮೆಟ್ರೋ ರೈಲಿನಲ್ಲಿ ಇಲ್ಲದ ಹಿಂದಿ ಇಲ್ಲ್ಯಾಕೆ ಬೇಕು? ಕೃಷ್ಣಾ, ಕಾವೇರಿ, ಮಹಾದಾಯಿ ನದಿ ನೀರು ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ. ನ್ಯಾಯಕ್ಕಾಗಿ ನಮ್ಮ ಸರ್ಕಾರ ಹೋರಾಡುತ್ತದೆ. ಎಂದರು.
ಪ್ರಶಸ್ತಿ ಪ್ರದಾನ: ವಿವಿಧ ಕ್ಷೇತ್ರಗಳ ಸಾಧಕರಿಗೆ ಬಸವೇಶ್ವರ ಪ್ರಶಸ್ತಿ, ರಾಷ್ಟ್ರಕವಿ ಕುವೆಂಪು ಪ್ರಶಸಿ, ಡಾ.ರಾಜ್‌ಕುಮಾರ್ ಪ್ರಶಸ್ತಿ, ಶಾಂತವೇರಿ ಗೋಪಾಲಗೌಡ ಪ್ರಶಸ್ತಿ, ಪ್ರೊ. ಎಂ.ಡಿ.ನಂಜುಂಡಸ್ವಾಮಿ ಪ್ರಶ ಸ್ತಿ, ಎಸ್.ಕೆ.ಕರೀಂಖಾನ್ ಪ್ರಶಸ್ತಿ, ಕೆ.ಶ್ಯಾಮರಾವ್ ಪ್ರಶಸ್ತಿ ಸೇರಿದಂತೆ ವಿವಿಧ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ಬಸವಜಯ ಮೃತ್ಯುಂಜಯಸ್ವಾಮೀಜಿ, ಬಸವ ಮೂರ್ತಿ ಮಾದರ ಚೆನ್ನಯ್ಯ ಸ್ವಾಮೀಜಿ, ಸಚಿವರಾದ ರಾಮಲಿಂಗರೆಡ್ಡಿ, ಡಿ.ಕೆ.ಶಿವಕುಮಾರ್, ಎಚ್.ಆಂಜನೇಯ, ಕರವೇ ಅಧ್ಯಕ್ಷ ಟಿ.ಎ.ನಾರಾಯಣ ಗೌಡ ಇತರರು ಇದ್ದರು.
ಕನ್ನಡದ ಪರ ಹೋರಾಟ ಸುಲಭವಲ್ಲ. ಈ ಹಾದಿಯಲ್ಲಿ ಕೇಸು ಜೈಲು ಸಾಮಾನ್ಯ. ಕನ್ನಡಕ್ಕಾಗಿ ಹೋರಾಡಿರುವ ಕನ್ನಡಿಗರ ವಿರುದ್ಧ ದಾಖಲಾಗಿರುವ ಕೇಸುಗಳನ್ನು ಸರ್ಕಾರ ವಾಪಸ್ ಪಡೆಯಲಿದೆ.
ಸಿದ್ದರಾಮಯ್ಯ, ಮುಖ್ಯಮಂತ್ರಿ