ತುಮಕೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ. ಯಡಿಯೂರಪ್ಪನವರು ಮುಖ್ಯಮಂತ್ರಿ ಯಾಗಿ ಕೆಲಸ ಮಾಡುತ್ತಿದ್ದಾರೆ. ಯತ್ನಾಳ್ ಮತ್ತು ನನಗೂ ಮುಖ್ಯಮಂತ್ರಿಯಾಗಲು ಇನ್ನೂ ಕಾಲಾವಕಾಶ ಇದೆ ಎಂದು ನೂತನ ಆಹಾರ ನಾಗರಿಕ ಸರಬರಾಜು ಸಚಿವ ಉಮೇಶ್ ಕತ್ತಿ ತಿಳಿಸಿದರು.
ನಗರದ ಶ್ರೀ ಕ್ಷೇತ್ರ ಸಿದ್ಧಗಂಗಾ ಮಠಕ್ಕೆ ಶುಕ್ರವಾರ ಭೇಟಿ ನೀಡಿ ಹಿರಿಯ ಶ್ರೀಗಳಾದ ಕರ್ನಾಟಕ ರತ್ನ ಲಿ. ಡಾ.ಶ್ರೀ ಶಿವಕುಮಾರ ಮಹಾಸ್ವಾಮೀಜಿಯವರ ಗದ್ದುಗೆಗೆ ಪೂಜೆ ಸಲ್ಲಿಸಿ ಸಿದ್ಧಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ಧಲಿಂಗಸ್ವಾಮೀಜಿಯವರ ಆಶೀರ್ವಾದ ಪಡೆದು ಮಾತನಾಡಿದರು.
ಬಿಜೆಪಿ ಪಕ್ಷದಲ್ಲಿ 75 ವರ್ಷದವರೆಗೂ ಮಂತ್ರಿಯಾಗಲು ಅವಕಾಶ ಇದೆ. ಆ ಸಮಯ ಬಂದಾಗ, ಮುಖ್ಯಮಂತ್ರಿ ಕುರ್ಚಿ ಖಾಲಿಯಾದಾಗ ನಾನೇ ಹೇಳುತ್ತೇನೆ. ಸದ್ಯಕ್ಕಂತೂ ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ ಎಂದು ಸ್ಪಷ್ಟನೆ ನೀಡಿದರು. ಬಸವನಗೌಡ ಪಾಟೀಲ್ ಯತ್ನಾಳ್ ನನ್ನ ಆತ್ಮೀಯ ಮಿತ್ರರು. ವಯಸ್ಸಿನಲ್ಲಿ ನಾನು ಯತ್ನಾಳ್‌ಗಿಂತಲೂ 3 ವರ್ಷ ದೊಡ್ಡವನು. ನನಗೆ 60 ವರ್ಷ, ಯತ್ನಾಳ್‌ಗೆ 57. ನಾವಿನ್ನೂ ಸಿಎಂ ಆಗಲು ಸಮಯವಿದೆ ಎಂದರು.
ನೂರಕ್ಕೆ ನೂರರಷ್ಟು ಸಂತಸ: ಮುಖ್ಯಮಂತ್ರಿ ಯಡಿಯೂರಪ್ಪನವರು ನನ್ನ ಮೇಲೆ ವಿಶ್ವಾಸವಿಟ್ಟು, ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ನೀಡಿದ್ದಾರೆ. ಅವರ ನಂಬಿಕೆ, ವಿಶ್ವಾಸಕ್ಕೆ ಚ್ಯುತಿ ಬಾರದಂತೆ ಕಾರ್ಯನಿರ್ವಹಿಸುತ್ತೇನೆ. ರಾಜ್ಯದ 4 ಕೋಟಿ 36 ಲಕ್ಷ ಜನತೆಗೆ ಆಹಾರ ಭದ್ರತೆ ಮತ್ತು ಆಹಾರ ವಿತರಣೆ ಮಾಡುವಂಥ ಖಾತೆ ನನ್ನದಾಗಿದೆ. ಈ ಖಾತೆ ಬೇರೆಯವರಿಗೆ ನೀಡದೆ ನನಗೆ ನೀಡಿರುವುದು ನೂರಕ್ಕೆ ನೂರರಷ್ಟು ಸಂತಸ ತಂದಿದೆ ಎಂದರು.
ಇದನ್ನೂ ಓದಿ:ನೂತನ ವಿಮಾನ ಖರೀದಿಸ್ತೀರಿ, ನೇತಾಜಿ ಸ್ಮಾರಕ ಯಾಕೆ ನಿರ್ಮಿಸಿಲ್ಲ: ಕೇಂದ್ರಕ್ಕೆ ಮಮತಾ
ರಾಜ್ಯದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು ಯಾವುದೇ ರೀತಿಯ ತೊಂದರೆ ಹಾಗೂ ಹಸಿವಿನಿಂದ ಬಳಲಬಾರದು ಎಂಬ ಉದ್ದೇಶ ಹೊಂದಿದ್ದು, ಇವರೆಲ್ಲರಿಗೂ ಸಮರ್ಪಕವಾಗಿ ಪಡಿತರ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು. ಆಹಾರಇಲಾಖೆಯಲ್ಲಿ ರಾಜ್ಯಕ್ಕೆ ಮತ್ತು ಸರ್ಕಾರಕ್ಕೆ ಒಳ್ಳೆಯ ಹೆಸರು ತರುವಂತಹ ಕಾರ್ಯಕ್ರಮವನ್ನು ರೂಪಿಸಲಾಗುವುದು ಎಂದರು