ಬೆಂಗಳೂರು: ರಾಜಕಾರಣಿಗಳು ಹಾಗೂ ಸರ್ಕಾರಿ ನೌಕರರು ಸಾರ್ವಜನಿಕರ ಹಣದಲ್ಲಿ ಐಷರಾಮಿ ಜೀವನ ನಡೆಸುತ್ತಿದ್ದು, ಜನರ ಸಮಸ್ಯೆಗಳಿಗೆ ಸ್ಪಂದಿಸುವವರೇ ಇಲ್ಲದಂತಾಗಿದೆ ಎಂದು ನಿವೃತ್ತ ಲೋಕಾಯುಕ್ತ ನ್ಯಾ.ಸಂತೋಷ್ ಹೆಗ್ಡೆ ವಿಷಾದಿಸಿದರು. ನಗರದ ಎನ್‌ಎಂಕೆಆರ್‌ವಿ ಕಾಲೇಜಿನ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಸಂಧ್ಯಾದೀಪ ಟ್ರಸ್ಟ್‌ನ ಬೆಳ್ಳಿಹಬ್ಬ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜನ ಸೇವಕರಾದ ರಾಜಕಾರಣಿಗಳು ಹಾಗೂ ಸಮಾಜ ಸೇವಕರಾದ ಸರ್ಕಾರಿ ನೌಕರರ ಬೇಜವಾಬ್ದಾರಿತನ ಹಾಗೂ ಅಸಭ್ಯ ನಡವಳಿಕೆಯಿಂದ ಸಮಾಜದ ಸ್ವಾಸ್ಥ್ಯ ಮತ್ತು ಬಡ ಕುಟುಂಬಗಳ ನೆಮ್ಮದಿ ಹಾಳಾಗಿದೆ. ಇಂತಹ ಸ್ಥಿತಿಯಲ್ಲಿ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ವಯೋವೃದ್ಧರ ಸೇವೆಯಲ್ಲಿ ತೊಡಗಿಸಿಕೊಂಡಿರುವ ಸಂಧ್ಯಾದೀಪ ಟ್ರಸ್ಟ್‌ನ ಕಾರ್ಯ ಇಡೀ ಸಮಾಜಕ್ಕೆ ಮಾದರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮನುಷ್ಯನ ಸ್ವಾರ್ಥ ಹಾಗೂ ದುರಾಸೆ ಇಂದು ಸಮಾಜದಲ್ಲಿ ಮಾನವೀಯ ಮೌಲ್ಯಗಳು ನೆಲಕಚ್ಚಲು ಕಾರಣವಾಗಿದೆ. ಲೌಕಿಕ ಲೋಭಗಳ ಮೋಹಕ್ಕೆ ಬಿದ್ದಿರುವ ಮನುಷ್ಯನಲ್ಲಿ ಸ್ವಾರ್ಥ ಮತ್ತು ದುರಾಸೆ ಮಿತಿಮೀರಿ ಬೆಳೆಯುತ್ತಿದೆ. ಇದರಿಂದಾಗಿ ಸಮಾಜದಲ್ಲಿ ಮಾನವೀಯ ಮೌಲ್ಯಗಳು ಗೌಣವಾಗುತ್ತಿವೆ ಎಂದರು. ಸ್ವಾರ್ಥ ಮತ್ತು ದುರಾಸೆಗೆ ಇಂದು ಅತಿಹೆಚ್ಚು ಬಲಿಯಾಗಿರುವುದು ರಾಜಕೀಯ ಕ್ಷೇತ್ರ.
ಒಂದು ಕಾಲದಲ್ಲಿ ಕೋಟಿ ರೂ.ಗಳಿಗಷ್ಟೇ ಸಿಮೀತವಾಗಿದ್ದ ರಾಜಕಾರಣಿಗಳ ಭ್ರಷ್ಟಾಚಾರ ಹಾಗೂ ಹಗರಣಗಳು ಇಂದು ಲಕ್ಷ ಕೋಟಿ ರೂ.ಗಳ ಮಟ್ಟಕ್ಕೆ ಬಂದು ನಿಂತಿವೆ. ಬೊಫೋರ್ಸ್ ಹಗರಣ 64 ಕೋಟಿ ರೂ., ಕಾಮೆನ್‌ವೆಲ್ತ್ ಹಗರಣ 70 ಸಾವಿರ ಕೋಟಿ, 2ಜಿ ಹಗರಣ 1.70 ಲಕ್ಷ ಕೋಟಿ, ಕೋಲ್ಗೇಟ್ ಹಗರಣ 1.86 ಲಕ್ಷ ಕೋಟಿ ರೂ…. ಈ ರೀತಿ ರಾಜಕೀಯ ಹಗರಣಗಳ ಮೊತ್ತದ ಪ್ರಮಾಣ ಏರುತ್ತಲೇ ಇದೇ ಎಂದು ಆತಂಕ ವ್ಯಕ್ತಪಡಿಸಿದರು.
ನಿವೃತ್ತ ಐಎಎಸ್ ಅಧಿಕಾರಿ ಡಾ.ಸಿ.ಸೋಮಶೇಖರ್ ಅವರು “ಸಮರ್ಪಣ’ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು. ಇದೇ ವೇಳೆ ನಿಘಂಟು ತಜ್ಞ ಪ್ರೊ.ಜಿ.ವೆಂಕಟಸುಬ್ಬಯ್ಯ ಹಾಗೂ ಸಂಧ್ಯಾದೀಪ ಟ್ರಸ್ಟ್‌ನ ಹಿರಿಯ ಸದಸ್ಯರಾದ ರುದ್ರಾಣಿ ಜಿ.ಎಸ್.ಶಿವರುದ್ರಪ್ಪ, ಸರೋಜ ಕೆ.ಎಂ.ನಂಜಪ್ಪ, ಶಾರದಾ ಭಾರತಿ, ಪ್ರಮೀಳಾ ಶಂಕರ್ ಅವರನ್ನು ಸನ್ಮಾನಿಸಲಾಯಿತು. ಬೇಲಿಮಠದ ಶಿವರುದ್ರ ಮಹಾಸ್ವಾಮಿ, ಮಾಜಿ ಸಚಿವೆ ಲೀಲಾದೇವಿ ಆರ್.ಪ್ರಸಾದ್, ಸಾಹಿತಿ ಮಾಲತಿ ಪಟ್ಟಣಶೆಟಿಇದ್ದರು.